

ಸಾಮಾನ್ಯವಾಗಿ ಆಹ್ವಾನಿತ ಗಣ್ಯ ಅಥಿತಿಗಳಿಂದ ಚಿತ್ರದ ಆಡಿಯೋ ಬಿಡುಗಡೆಯಾಗುವುದು ಮಾಮೂಲಿ. ಚಿತ್ರದ ಪತ್ರಿಕಾಗೋಷ್ಠಿ ಅಥವಾ ಕಾರ್ಯಕ್ರಮಗಳಲ್ಲಿ ತಂಡದ ಹೊರತಾದವರೆ ಕೇಂದ್ರುಬಿಂದುಗಳಾಗಿದ್ದು ಹೆಚ್ಚು. ಆದರೆ ಇತ್ತೀಚೆಗೆ ಚಿತ್ರವೊಂದರ ಆಡಿಯೋವನ್ನು ಆ ಚಿತ್ರದ ಗಾಯಕ, ಗಾಯಕಿಯರೇ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಅನೂಪ್ ಸೀಲಿನ್ ಸಂಗೀತ ಸಂಯೋಜಿಸಿರುವ 'ಬಿ3' ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಹಾಡುಗಾರರಾದ ಅನುರಾಧ ಭಟ್, ಎಲ್.ಎನ್. ಶಾಸ್ತ್ರಿ, ರಿತೀಶ್ ಆಡಿಯೋ ಬಿಡುಗೆ ಮಾಡಿದರು. ಇವರೊಂದಿಗೆ ಸಂಗೀತ ನಿರ್ದೇಶಕ ಅನೂಪ್, ನಿರ್ದೇಶಕ ಘನಶ್ಯಾಮ್, ನಾಯಕ ಶ್ರೀಕಿ, ನಾಯಕಿ ಹರ್ಷಿಕಾ ಪೂಣಚ್ಚ, ನಿರ್ಮಾಪಕರಾದ ಬಸವರಾಜ್, ಗೋವಿಂದರಾಜು ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ಆರಂಭದಲ್ಲೇ ಹಿರಿಯ ಸಂಗೀತಗಾರ ಸುಂದರಾಂಮೂರ್ತಿ ಅವರನ್ನು ಚಿತ್ರತಂಡ ಸನ್ಮಾನಿಸಿ ಗೌರವಿಸಿತು.
ಅನೂಪ್ ತುಂಬಾ ಜೋಶ್ನಲ್ಲಿದ್ದರು. 'ಸಿದ್ಲಿಂಗು' ಚಿತ್ರದ ನಂತರ ತಮ್ಮ ಸಕ್ಸಸ್ ರೇಟ್ ಹೆಚ್ಚಿಸಿಕೊಂಡಿರುವ ಅವರು, ಗಮನಾರ್ಹ ಹಾಡುಗಳನ್ನೇ ಕೊಡುತ್ತ ಬಂದಿದ್ದಾರೆ. ಅನೂಪ್ರ ಹಾಡುಗಳ ಬಗ್ಗೆ 'ಸ್ವಲ್ಪ ಸೌಂಡು ಜಾಸ್ತಿ ಮಾಡು ತುಂಬಾ ಒಳ್ಳೆ ಹಾಡಿದು' ಎನ್ನುವ ಅಭಿಪ್ರಾಯ ಇದೆ. 'ಬಿ3' ಚಿತ್ರದ ಹಾಡುಗಳು ಕೂಡ ಕೇಳುಗರಿಗೆ ಮೆಚ್ಚುಗೆಯಾಗುತ್ತವೆಂಬ ಭರವಸೆ ಅನೂಪ್ ಅವರದ್ದು. ಮಾಸ್, ಮೆಲೋಡಿ, ಎಮೋಷನಲ್ ಹೀಗೆ ಎಲ್ಲ ರೀತಿಯ ಹಾಡುಗಳಿವೆ. ಒಳ್ಳೆಯ ಹಾಡು, ಸಂಗೀತಕ್ಕೆ ಕನ್ನಡ ಸಿನಿ ಪ್ರೇಕ್ಷಕರು ಕಿವಿ ಕೊಡುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿದರು ಅನೂಪ್. ನಿರ್ದೇಶಕ ಘನಶ್ಯಾಮ್ ಪ್ರಕಾರ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾಯಕ ಶ್ರೀಕಿ, ನಾಯಕಿ ಹರ್ಷಿಕಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹೊಸ ರೀತಿಯ ಕಥೆಯನ್ನು ಒಳಗೊಂಡಿದ್ದು ಯುವಕನ ಹುಚ್ಚು ಪ್ರೀತಿಯಲ್ಲಿ ಹೇಳಲಾಗಿದೆ.
ನಾಯಕ ಶ್ರೀಕಿಗೆ ಮರು ಜನ್ಮ ಕೊಡುವ ಚಿತ್ರವಂತೆ. ಕಥೆ ಕೇಳಿದ ಕೂಡಲೇ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದು, ಹರ್ಷಿಕಾ ಅವರೇ ಈ ಕಥೆಯನ್ನು ಕೇಳುವುದಕ್ಕೆ ಸಲಹೆ ನೀಡಿದ್ದಾಗಿ ಶ್ರೀಕಿ ಹೇಳಿಕೊಂಡರು
- ಕೇಶು