

ಅಂದು ವಿಜಯ್ ರಾಘವೇಂದ್ರ ಬಿಗ್‌ಬಾಸ್ ಗೆದ್ದ ಸಂಭ್ರಮ ಹಂಚಿಕೊಳ್ಳಲು ಚಿನ್ನೇಗೌಡ ಅವರ ಕೌಟುಂಬಿಕ ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಅವರ ಸ್ಮಾಲ್ ಬಾಸ್ ಮುರಳಿ ಅವರದ್ದೇ ಕಾರುಬಾರು. ಬಿಗ್‌ಬಾಸ್ ಗೆದ್ದಿದ್ದು ನನ್ನ ಬಿಗ್ ಬ್ರದರ್ ಎಂಬ ಖುಷಿ ಮುರಳಿ ಅವರದ್ದು. ಆದರೂ ಅಣ್ಣನಿಗೆ ಸಿಕ್ಕ ಈ ಯಶಸ್ಸು 'ನಂದೇ' ಎನ್ನುವಷ್ಟು ಹುರುಪು. ಅದು ನಿಜವಾದ ಫ್ಯಾಮಿಲಿ ಅಫೇರ್. ಪತ್ರಿಕಾಗೋಷ್ಠಿಯ ನಂತರ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ಮುರಳಿ ಕೇಳಿದ ಮೊದಲ ಪ್ರಶ್ನೆ, ನಮ್ಮ ಕುಟುಂಬದ ಬಗ್ಗೆ ಚಿತ್ರೋದ್ಯಮದಲ್ಲಿ ಯಾರಿಗೂ ಯಾವ ಅಸಮಾಧಾನವಿಲ್ಲ ತಾನೇ, ಯಾರಾದರೂ ನಮ್ಮ ಬಗ್ಗೆ ನೆಗೆಟಿವ್ ಮಾತುಗಳನ್ನಾಡುತ್ತಾರೆಯೇ? ಎಂಬುದಾಗಿತ್ತು. ಆನಂತರವೇ ಅವರು ತಮ್ಮ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದ್ದು. ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲ ಯಶಸ್ಸಿಗೂ ನಮ್ಮ ತಂದೆ ಹೇಳಿಕೊಟ್ಟ ಹಿತವಚನಗಳು, ಅವರು ನಮ್ಮನ್ನು ಬೆಳೆಸಿದ ರೀತಿಯೇ ಕಾರಣ ಎಂದು ವಿಜಯ್ ರಾಘವೇಂದ್ರ ಹೇಳಿದ್ದು, ಮುರಳಿ ಅವರ ಈ ಮಾತುಗಳಲ್ಲೂ ಪ್ರತಿಧ್ವನಿಸುತ್ತಿದ್ದುದು ಅಂದಿನ ವಿಶೇಷ. ಸಿನಿಮಾದ ಸಕ್ಸಸ್ ಮುಂದಿನದ್ದು, ಆದರೆ ವೈಯಕ್ತಿಕವಾಗಿ ನಾನು ಮತ್ತು ನನ್ನ ಕುಟುಂಬದ ಗೌರವ ಮುಖ್ಯ ಎನ್ನುವ ಕಳಕಳಿ ಮುರಳಿ ಅವರಲ್ಲಿ ಎದ್ದು ಕಾಣುತ್ತಿತ್ತು.
ತೆರೆಯ ಮೇಲೆ ಮುರಳಿ ನಾಯಕರಾಗಿ ಇತ್ತೀಚೆಗೆ ಅಷ್ಟು ಯಶಸ್ಸು ಕಂಡಿಲ್ಲ. ಮುರಳಿ ಮರೆಯಾಗಿ ಕೆಲವು ದಿನಗಳೇ ಆಗಿವೆ ನಿಜ. ಆದರೂ ಚಂದ್ರ ಚಕೋರಿ, ಕಂಠಿ, ಮಿಂಚಿನ ಓಟ ಮುಂತಾದ ಚಿತ್ರಗಳ ಸಿಹಿನೆನಪುಗಳು ಅವರಿಗೆ ಇನ್ನೂ ಉತ್ಸಾಹ ತುಂಬುತ್ತಿವೆ ಎಂಬುದು ಅವರ ಮಾತುಗಳಲ್ಲಿ ಕಂಡ ಸತ್ಯ.
ಒಂದು ಒಳ್ಳೆಯ ಸಿನಿಮಾ ಮಾಡುವವರಿಗೆ, ಒಳ್ಳೆಯ ಹೈಟು, ವೇಯ್ಟು, ಡ್ಯಾನ್ಸು, ಫೈಟು ಎಲ್ಲವೂ ಇರುವ ಹ್ಯಾಂಡ್‌ಸಮ್ ಹೀರೋ ಮುರಳಿಗಿಂತ ಬೆಟರ್ ಆಯ್ಕೆ ಸಿಗುವುದು ಕಷ್ಟ. ಎಲ್ಲಕ್ಕಿಂತ ಹೆಚ್ಚಾಗಿ ಅತಿ ಸ್ಪಷ್ಟ ಕನ್ನಡ ಮಾತನಾಡುವ ಅಪರೂಪದ ನಟ ಮುರಳಿ. ಜೊತೆಗೆ ಲವರ್ ಬಾಯ್ ಆಗಲೂ ಸೈ, ಆ್ಯಕ್ಷನ್ ಹೀರೋ ಆಗಲೂ ಸೈ. ಮತ್ಯಾಕೆ ನಿಮ್ಮ ಕೆರಿಯರ್ ನಿಧಾನವಾಗಿದೆ ಎಂದರೆ ಮುರಳಿ ಕೆಲವು ಕಾರಣಗಳನ್ನು ಹೇಳುತ್ತಾರೆ.
ಕಥೆ ಹೇಳುವಾಗ ಚೆನ್ನಾಗಿಯೇ ಇರುತ್ತೆ. ಆದರೆ ಸಿನಿಮಾ ಮುಗಿಯುವ ಹೊತ್ತಿಗೆ ಅದು ಬೇರೆಯದ್ದೇ ಆಗಿರುತ್ತೆ. ಇದರ ವಿರುದ್ಧ ಏನಾದರೂ ಮಾತನಾಡಿದರೆ, ಮುರಳಿ ಎಲ್ಲದರಲ್ಲೂ ಮೂಗು ತೂರಿಸುತ್ತಾನೆ, ಆ್ಯಟಿಟ್ಯೂಡ್ ತೋರಿಸ್ತಾನೆ ಎಂಬ ಅಪವಾದ. ಇತ್ತೀಚಿನ ಲೂಸ್‌ಗಳು ಚಿತ್ರ ಕೂಡ ಹಾಗೇ ಆಯಿತಂತೆ. ಹೇಳುವುದು ಒಂದು, ತೋರಿಸುವುದು ಇನ್ನೊಂದು ಎಂಬಂತೆ. ಹಾಗಾಗಿ ಮುರಳಿ ಇದಕ್ಕೆಲ್ಲ ಇತಿಶ್ರೀ ಹಾಡಲು ನಿರ್ಧರಿಸಿದ್ದಾರೆ. ಇನ್ನುಮುಂದೆ ಸ್ಕ್ರಿಪ್ಟ್ ಜೊತೆಗೆ ಅದನ್ನು ಮಾಡುವವರನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳುವ ನಿರ್ಧಾರ ಅವರದ್ದು.
ಸಿನಿಮಾದಲ್ಲಿ ನಾಯಕನ ಇನ್‌ವಾಲ್ವ್‌ಮೆಂಟ್ ಬಗ್ಗೆ ಮಾತನಾಡುತ್ತಾ, ನನ್ನ ಚಿತ್ರದ ಬಗ್ಗೆ ನಾನು ಆಸಕ್ತಿ ತೋರಿಸುವುದು ತಪ್ಪೇ ಎನ್ನುವ ಮುರಳಿ ಅದಕ್ಕೆ ಕಾರಣವನ್ನೂ ಕೊಡುವಷ್ಟು ಸ್ಮಾರ್ಟ್‌ನೆಸ್ ಅನ್ನೂ ತೋರಿಸುತ್ತಾರೆ. ಬಹುಶಃ ನಮ್ಮಣ್ಣ ತುಂಬಾ ಸಾಫ್ಟ್ ಎಂಬ ಕಾರಣಕ್ಕೆ, ಎಲ್ಲರೂ ನಾನೂ ಹಾಗೇ ಇರಬೇಕೆಂದು ಬಯಸುತ್ತಾರೆ ಅನ್ಸುತ್ತೆ. ಆದ್ರೆ ಸಾರಿ, ನಾನು ವಿಜಯ್ ರಾಘವೇಂದ್ರ ಅಲ್ಲ ಎಂಬುದು ಮುರಳಿ ನೀಡುವ ವಿವರಣೆ.
ಸದ್ಯದಲ್ಲೇ ಮುರಳಿ ಬ್ಯಾಂಗ್ ಬ್ಯಾಂಗ್ ಸುದ್ದಿಯೊಂದಿಗೆ ಬರಲಿದ್ದಾರಂತೆ. ಆದರೆ, ಅದಕ್ಕೆ ಮುಂಚಿನ ಇನ್ನೊಂದು ಸುದ್ದಿ ಎಂದರೆ ಅದು ಅವರ ನಂದೇ ಚಿತ್ರಕ್ಕೆ ಸಂಬಂಧಪಟ್ಟಿದ್ದು. ನಂದೇ ಈಗ ಹೆಸರು ಬದಲಾಯಿಸಿಕೊಂಡು ಉಗ್ರಂ ಆಗಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದೇನು ತೆಲುಗು ಚಿತ್ರದ ಟೈಟಲ್ ಇದ್ದಂಗಿದೆ ಎಂದರೆ ಅಲ್ಲ, ಅದು ಸಂಸ್ಕೃತ ಎನ್ನುತ್ತಾರೆ ಮುರಳಿ. ಸಿನಿಮಾ ನೋಡಿದ ಎಲ್ಲರಿಗೂ ಈ ಕಥೆಗೆ ಖಂಡಿತಾ ಇದೇ ಸೂಕ್ತ ಶೀರ್ಷಿಕೆ ಎನಿಸುತ್ತದೆ ಎನ್ನುವುದು ಅವರ ನಂಬಿಕೆ.
- ಹರಿ