ಮತ್ತೆ ಬಂದ ಕನ್ನಡದ ಕಂದ

ಈ ಹುಡುಗನಿಗೆ ಧಾರಾವಾಹಿಗಳ ನಂತರ ಸಿನಿಮಾದಲ್ಲಿ ನಟಿಸುವ ಆಸೆ. ಆದರೆ ಗಾಂಧಿನಗರದಲ್ಲಿ ಈ ಹುಡುಗ ಯಾರ ಗಮನಕ್ಕೂ...
ಮತ್ತೆ ಬಂದ ಕನ್ನಡದ ಕಂದ
Updated on: 

ಅದು ಈ ಟೀವಿ ವಾಹಿನಿ ಶುರುವಾದ ಸಮಯ. ಕಥಾ ಸಮಯ ಮುಸ್ಸಂಜೆಯದ್ದೇ. ಹೊಸದಾಗಿ ಶುರುವಾಗಿದ್ದ ಮುಸ್ಸಂಜೆಯ ಕಥಾ ಪ್ರಸಂಗ, ನಂತರದ ಸೂರ್ಯಶಿಕಾರಿ ಧಾರಾವಾಹಿಗಳಲ್ಲಿ ಆದಿತ್ಯ ಎಂಬ ಹೊಸ ಮುಖ ಕಾಣಿಸಿಕೊಂಡಿತ್ತು. ಈ ಹುಡುಗನಿಗೆ ಧಾರಾವಾಹಿಗಳ ನಂತರ ಸಿನಿಮಾದಲ್ಲಿ ನಟಿಸುವ ಆಸೆ. ಆದರೆ ಗಾಂಧಿನಗರದಲ್ಲಿ ಈ ಹುಡುಗ ಯಾರ ಗಮನಕ್ಕೂ ಬರಲಿಲ್ಲ.

ಇದು ನಡೆದಿದ್ದು 2003ರಲ್ಲಿ. ಈಗ 2013ರಲ್ಲಿ ರಾಮು ಎಂಟರ್‌ಪ್ರೈಸಸ್‌ನ, ಅದ್ದೂರಿ ಚಿತ್ರವೊಂದರಲ್ಲಿ ದುನಿಯಾ ವಿಜಯ್ ಅವರ ಮುಂದೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕೋರಿಕೆ ಅದೇ ಹುಡುಗನನ್ನು ಅರಸಿ ಹೋಯಿತು. ಅದಕ್ಕೆ ಕಾರಣ ಆದಿತ್ಯ ಮೆನನ್ ಈ ಹತ್ತು ವರ್ಷಗಳಲ್ಲಿ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲಿ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಬೇಡಿಕೆಯಲ್ಲಿರುವ ನಟ. ಅವಕಾಶಗಳು ಸಿಗದೆ, ಹಿತ್ತಲ ಗಿಡ ಮದ್ದಲ್ಲ ಎಂಬ ಮಾತು ನಿಜವಾದಾಗ ಆದಿತ್ಯ, ಸುತ್ತಮುತ್ತಲ ಚಿತ್ರರಂಗಗಳನ್ನು ಅರಸಿ ಹೋಗಿದ್ದರು ಎಂಬುದು ಈಗ ಇತಿಹಾಸ.

ಅಂದು ನಿರಾಶರಾದ ಆದಿತ್ಯ, ಬರ್ಲಾ ಎಂದು ಟಾಟಾ ಮಾಡಿ ಹೊರಟಿದ್ದು ತಮಿಳು, ಮಲಯಾಳಂ ಚಿತ್ರರಂಗಕ್ಕೆ. ತಮಿಳಿನಲ್ಲೂ ಕೆ.ಬಾಲಚಂದರ್ ಅವರ ಟಿವಿ ಧಾರಾವಾಹಿಗಳಿಂದ ಶುರುಮಾಡಿದ ಆದಿತ್ಯ ಅಭಿನಯಿಸಿದ ಮೊದಲ ಚಿತ್ರ ಆಂಜನೇಯ. ಈಗ, ಬಿಲ್ಲಾ, ದೂಕುಡು, ಸಿಂಹ, ವಿಲ್ಲು, ದೂಕುಡು, ಮಿರ್ಚಿ, ಬಲುಪು, ಬಾದ್‌ಶಾ, ಈಗ ಮುಂತಾದ ಸೂಪರ್‌ಸ್ಟಾರ್ ಹೀರೋಗಳ ಚಿತ್ರಗಳು ಆದಿತ್ಯ ಅವರ ಕ್ರೆಡಿಟ್‌ನಲ್ಲಿವೆ. ಹತ್ತು ವರುಷದ ಹಿಂದೆ, ಕನ್ನಡ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾದು ಕೂತಿದ್ದವರು ಈಗ ಪರಭಾಷೆಯ ಚಿತ್ರರಂಗದಲ್ಲಿ ಎದ್ದು ನಿಂತಿದ್ದಾರೆ. ಅಲ್ಲಿಂದ ಇಲ್ಲಿಗೂ ಬಂದಿದ್ದಾರೆ. ವಿಜಯ್ ಅಭಿನಯದ ಶಿವಾಜಿನಗರ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಆದಿತ್ಯ, ಈ ಬಗ್ಗೆ ಸಖತ್ ಖುಷಿಯಲ್ಲಿದ್ದಾರೆ. ಬೇರೆ ಭಾಷೆಗಳಲ್ಲಿ  ಎಷ್ಟೇ ಅವಕಾಶಗಳಿರಬಹುದು, ಆದರೆ ನಮ್ಮ ಕನ್ನಡ ಚಿತ್ರಗಳಲ್ಲಿ ಸಿಕ್ಕಿರುವ ಮೊದಲ ಅವಕಾಶ ನನಗೆ ಎಲ್ಲಕ್ಕಿಂತ ಹೆಚ್ಚಿನ ಥ್ರಿಲ್ ಕೊಡುತ್ತದೆ ಎನ್ನುತ್ತಾರೆ ಅವರು. ಹೀಗಾಗಿ, ಅಂದು ಅವರನ್ನು ಗಾಂಧಿನಗರ ಹೋಗು ಅಂದಿತ್ತು, ಈಗ ಶಿವಾಜಿನಗರ ಬಾ ಅಂದಿದೆ.

ಇಲ್ಲಿದೆ ನಮ್ಮನೆ ಅಲ್ಲಿ ಹೋಗಿದ್ದು ಸುಮ್ಮನೆ ಎಂಬಂತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಆದಿತ್ಯ ಮೆನನ್ ಅವರನ್ನು ಶಿವಾಜಿನಗರ ಚಿತ್ರದ ನಿರ್ದೇಶಕ ಪಿ.ಎನ್.ಸತ್ಯ ಎರಡು ಮೂರು ವರ್ಷಗಳಿಂದ ಸಂಪರ್ಕಿಸುತ್ತಲೇ ಇದ್ದರಂತೆ. ಆದರೆ ಕೆಲವೊಮ್ಮೆ ಡೇಟ್ಸ್ ಇಲ್ಲ ಎಂದರೆ ಕೆಲವು ಬಾರಿ ಅವರಿಗೆ ಸತ್ಯ ಕೊಟ್ಟ ಪಾತ್ರ ಇಷ್ಟವಾಗಿರಲಿಲ್ಲ.

ಇದರ ಜೊತೆ, ಪುನೀತ್, ದರ್ಶನ್ ಚಿತ್ರಗಳಲ್ಲೂ ಅಭಿನಯಿಸುವ ಅವಕಾಶ  ಆದಿತ್ಯ ಅವರಿಗೆ ಬಂದಿತ್ತಂತೆ. ಆದರೆ ಆಗ ಸಾಧ್ಯವಾಗದ್ದು ಈಗ ಆಗಿದೆ.

ಅದೇನೋ ದೊಡ್ಡವರು ಹೇಳ್ತಾರಲ್ಲ ಆಗುವುದೆಲ್ಲ ಒಳ್ಳೆಯದಕ್ಕೆ ಅಂತ, ಅದಕ್ಕೇ ಇರಬೇಕು ನನಗೆ ಆಗ ಎಷ್ಟು ಕಷ್ಟಪಟ್ಟರೂ ಒಂದು ಅವಕಾಶ ಸಿಗಲಿಲ್ಲ, ಆದರೆ, ಈಗ ನಾನೇ ಬೇಕು ಎಂದು ನನ್ನನ್ನು ಕರೆಸಿರುವುದು ನನಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದು ಒಂಥರಾ ಒಳ್ಳೆಯದೇ. ಈಗ ಕನ್ನಡ ಚಿತ್ರದಲ್ಲಿ ಪ್ರೇಕ್ಷಕರು ನನ್ನನ್ನು ನೋಡುತ್ತಾರೆ ಎಂಬುದೇ ನನ್ನ ತೃಪ್ತಿ. ಇನ್ನು ಮುಂದೆ ಕನ್ನಡ ಚಿತ್ರಗಳಲ್ಲಿ ನಟಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ನಾನು ಮೂಲತಃ ಮಲಯಾಳಿಯಾದರೂ, ಬೆಂಗಳೂರು ನನ್ನೂರು, ಇಲ್ಲಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವಾಗಿನ ದಿನಗಳು ಇನ್ನೂ ನನ್ನ ಮನಸ್ಸಿನಲ್ಲಿವೆ. ಬೆಂಗಳೂರಿಗೆ ಬಂದಾಕ್ಷಣ ನನ್ನ ಮನಸ್ಸು ಮುದ್ದೆ ಊಟವನ್ನೇ ಹುಡುಕುತ್ತದೆ ಎನ್ನುತ್ತಾ ತಮ್ಮ ಹಳೆಯ ನೆನಪುಗಳನ್ನು ನೆಪಿಸಿಕೊಳ್ಳುತ್ತಾರೆ ಆದಿತ್ಯ ಮೆನನ್.

ಶಿವಾಜಿ ನಗರ ಚಿತ್ರದಲ್ಲಿ ನನಗೊಂದು ವಿಶೇಷವಾದ ಪಾತ್ರವಿದೆ. ಚಿತ್ರದುದ್ದಕ್ಕೂ ಕಾಣುವ ನನಗೂ, ಕ್ಲೈಮ್ಯಾಕ್ಸ್‌ನಲ್ಲಿ ಕಾಣುವ ನನಗೂ ಅಜಗಜಾಂತರ ವ್ಯತ್ಯಾಸ ಇರುವ ಈ ಪಾತ್ರ ಪ್ರೇಕ್ಷಕರಿಗೆ ಸರ್‌ಪ್ರೈಸ್ ಕೊಡುತ್ತದೆ ಎನ್ನುವುದು ಆದಿತ್ಯ ಕೊಡುವ ಶಿವಾಜಿನಗರದ ಚಿತ್ರಣ.
ಅಂತೂ, ಒಂದು ಕಾಲದಲ್ಲಿ  ಅವಕಾಶಕ್ಕಾಗಿ ಅಲೆದ ಕನ್ನಡದ ಕೂಸೊಂದು, ಈಗ, ಬಹಳ ದಿನಗಳ ನಂತರ ತನ್ನ ಗಾಂಧಿನಗರದ ಕನಸನ್ನು ನನಸು ಮಾಡಿಕೊಂಡಿರುವ ವಿಷಯ ಮಾತ್ರ ವೆರಿ ಫಿಲ್ಮೀ.

- ಲಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com