

ವ್ಯವಸ್ಥೆಯ ವಿರುದ್ಧ ಹೋರಾಡುವ ಹೀರೋ ನಮ್ಮ ಕಮರ್ಷಿಯಲ್ ಚಿತ್ರಗಳ ಅವಿಭಾಜ್ಯ ಅಂಗ. ಲಾ ಮೀನ್ಸ್ ಲಾಜಿಕಲಿ ಅಡಲ್ಟ್ರೇಟೆಡ್ ವೈನ್ ಎನ್ನುವ ಅನಾಮಿಕನ ದನಿಯನ್ನು ಕೇಳಿಸುತ್ತ ಅವ್ಯವಸ್ಥೆಯ ವಿರುದ್ಧ ತಣ್ಣನೆಯ ರೆಸಿಸ್ಟೆನ್ಸ್ ಅನ್ನು ಪರಿಣಾಮಕಾರಿಯಾಗಿ ತೋರಿಸುವಂಥ ತಾಕತ್ತಿದ್ದ ನಿರ್ದೇಶಕ ಕೆ.ವಿ.ರಾಜು. ನವಭಾರತ, ಸಂಗ್ರಾಮ, ಇಂದ್ರಜಿತ್, ಕದನ, ನಂ.1, ಹುಲಿಯಾ, ಯುದ್ಧ, ಯುದ್ಧಕಾಂಡ, ಓ ಗಂಡಸರೇ ನೀವೆಷ್ಟು ಒಳ್ಳೆಯವರು, ರಾಷ್ಟ್ರಗೀತೆ ಮುಂತಾದ ಅನೇಕ ಚಿತ್ರಗಳ ಮೂಲಕ ರಾಜು ಕನ್ನಡ ಸಿನಿಮಾಪ್ರೇಮಿಗಳಿಗೆ ಗೊತ್ತು.
ಮುಲಾಜಿಲ್ಲದೆ ಮುಂದೆ ನುಗ್ಗಿ ಇಕ್ಕು ಮರಿ ದಂಡಂ ದಶಗುಣಂ ಎನ್ನುವ ರಾಜು ಶೈಲಿ ಅಂದಿನ ಯುವಕರನ್ನು ಕೆರಳಿಸುತ್ತಿತ್ತು. ಒಂದರ್ಥದಲ್ಲಿ ಕೆ.ವಿ.ರಾಜು ಕೂಡಾ ರೆಬೆಲ್ಸ್ಟಾರ್ ಆಗಿದ್ದವರು. ಈ ಮಧ್ಯೆ ಬೆಳ್ಳಿ ಮೋಡಗಳು, ಬೆಳ್ಳಿಕಾಲುಂಗುರ, ಬೊಂಬಾಟ್ ಹುಡ್ಗದಂಥ ತಮ್ಮ ಶೈಲಿಗೆ ವಿರುದ್ಧವಾದ ಕೆಲವು ಚಿತ್ರಗಳನ್ನು ಮಾಡಿದರೂ ಅಲ್ಲಿ ರಾಜು ಟಚ್ ಇದ್ದೇ ಇತ್ತು. ಒಂದು ಕಾಲದಲ್ಲಿ ಕನ್ನಡದ ಹೆಮ್ಮೆಯ ನಿರ್ದೇಶಕರ ಪಟ್ಟಿಯಲ್ಲಿ ನಂ.1 ಅಲ್ಲದಿದ್ದರೂ ತಮ್ಮದೇ ಆದ ಸ್ಪೆಷಲ್ ನಂಬರ್ ಹೊಂದಿದ್ದ ಕೆ.ವಿ.ರಾಜು ಇಂದು ಕೇವಲ ಸಿನಿಮಾ ಸಂಭಾಷಣೆ ಬರೆಯುತ್ತಿರುವುದು ಅವರ ಅಪ್ಪಟ ಅಭಿಮಾನಿಗಳಿಗಂತೂ ಬೇಸರದ ಸಂಗತಿ. ಆದರೆ, ಜೊತೆ ಜೊತೆಗೇ, ಕನಿಷ್ಠ ಆ ವಿಷಯದಲ್ಲಾದರೂ ರಾಜು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರಲ್ಲ ಎಂಬ ಸಣ್ಣ ಸಮಾಧಾನ. ಮತ್ತೆ ರಾಜು ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬ ಸಣ್ಣ ಆಶಾಕಿರಣ. ಇತ್ತೀ ಚೆಗೆ ರಾಜಧಾನಿ ಎಂಬ ಚಿತ್ರಕ್ಕೆ ನಿರ್ದೇಶಕರು ಬದಲಾಗಿ ಅನಿವಾರ್ಯವಾಗಿ ರಾಜು ಆ ಚಿತ್ರವನ್ನು ಪೂರೈಸಬೇಕಾಯ್ತು. ಅದನ್ನು ಯಶಸ್ವಿಯಾಗಿ ಮಾಡಿದ ಅವರು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ನಿರ್ದೇಶಕ ಕೆ.ವಿ.ರಾಜು ಅವರು ವೇದಿಕೆಯ ಮೇಲೆ ಬರಬೇಕು ಎಂದಾಗ ಒಪ್ಪಲಿಲ್ಲ. ನಾನು ಆ ಚಿತ್ರದ ನಿರ್ದೇಶಕ ಅಲ್ಲ, ಇನ್ಯಾರೋ ಮಾಡಿ ಉಳಿಸಿದ್ದ ಕೆಲಸವನ್ನು ಮುಗಿಸಿಕೊಟ್ಟಿದ್ದೇನೆ ಅಷ್ಟೆ ಎನ್ನುತ್ತ ಕೊನೆಯ ಸಾಲಿನಲ್ಲೇ ಕುಳಿತಾಗ ರಾಜು ಬನ್ಗಯಾ ಜೆಂಟಲ್ಮನ್ ಎಂದುಕೊಂಡವರು ಎಷ್ಟೋ ಜನ. ಇಂಥ ಕೆ.ರಾಜು ಅವರ ವೃತ್ತಿ ಜೀವನದಲ್ಲಿ ಹುಲಿಯಾ ಒಂದು ವಿಶೇಷ ಚಿತ್ರ. ಚಿತ್ರದ ನಾಯಕ ಡೈನಮಿಕ್ ಸ್ಟಾರ್ ದೇವರಾಜ್ ಅವರಿಗೂ ಕೂಡ. ಹಾಗೆ ನೋಡಿದರೆ ರಾಜು, ದೇವರಾಜ್ ಅವರ ವೃತ್ತಿಜೀವನದ ಮಿತಿಯನ್ನು ಮೀರಿ ನೋಡಿದರೂ ಹುಲಿಯಾ ಕನ್ನಡ ಚಿತ್ರರಂಗದಲ್ಲೇ ಒಂದು ವಿಶೇಷ ಚಿತ್ರ. ಅದು ಸುಮಾರು ಹದಿನೆಂಟು ವರ್ಷಗಳ ಹಿಂದೆ ನಡೆದ ಕುರುಕ್ಷೇತ್ರ. ಆದರೆ ಬಾಕ್ಸ್ ಆಫೀಸ್ನಲ್ಲಿ ಚಿತ್ರ ವಿಶೇಷವಾದ ಸಾಧನೆ ಮಾಡಲಿಲ್ಲ ಎಂಬುದು ಚಿತ್ರದ ನಟ, ನಿರ್ದೇಶಕ, ನಿರ್ಮಾಪಕರ ಹೊರತಾದ ಅಪ್ಪಟ ಸಿನಿಮಾ ಪ್ರೇಮಿಗಳ ಕೊರಗು ಕೂಡ. ಎಲ್ಲರ ಬಾಯಲ್ಲು ಅದ್ಭುತ ಎನಿಸಿಕೊಂಡ ಹುಲಿಯಾ ಚಿತ್ರದ ಬಗ್ಗೆ, ಕೆ.ವಿ.ರಾಜು ಅವರ ಬಗ್ಗೆ ಇಲ್ಲಿ ಹುಲಿಯಾ ಚಿತ್ರದ ನಿರ್ಮಾಪಕ ಗೋವಿಂದು, ಚಿತ್ರದ ನಾಯಕ ದೇವರಾಜ್, ನಟರಾದ ಅವಿನಾಶ್ ಮತ್ತು ನಾಗೇಶ್ ಮಾತನಾಡಿದ್ದಾರೆ.
ಹುಲಿಯಾ ಹಾಲಿನ ಮೇವು
ರಾಜು ರಾಜಿಯಾಗೋದಿಲ್ಲ
- ಗೋವಿಂದು
ಅವತ್ತು ನನ್ನ ಸೈಟು, ಆಸ್ತಿ ಮಾರದಿದ್ದರೆ ಇವತ್ತು ಕನಿಷ್ಠ ಅಂದ್ರೂ 10 ಕೋಟಿ ಇರ್ತಿತ್ತು. ಯಾರೂ ನನ್ನ ಕುತ್ತಿಗೆ ಮೇಲೆ ಕೂಡಲಿಲ್ಲ. ಆದರೂ ಮಾಡಿದ ಸಾಲದ ಹೊರೆಯಿಂದ ನನಗೆ ಮುಕ್ತಿ ಬೇಕಿತ್ತು. ಆಸ್ತಿ ಮಾರಿ ಸಾಲ ತೀರಿಸಿದೆ. 18 ವರ್ಷಗಳ ಹಿಂದೆ, ಚಿತ್ರದ ಒಟ್ಟು ಬಜೆಟ್ 97 ಲಕ್ಷ. ಬಂದಿದ್ದು 30 ಲಕ್ಷ. ಒಟ್ಟು 67 ಲಕ್ಷ ಲಾಸು. ಆಗ ಟಿವಿ ಚಾನೆಲ್ ಹಕ್ಕುಗಳಿಂದ ದುಡ್ಡು ಬರೋ ದಾರಿನೂ ಇರಲಿಲ್ಲ ಎನ್ನುತ್ತಾ ತಮ್ಮ ಹಳೆಯ 'ಹುಲಿಯಾ'ನನ್ನು ನೆನಪಿಸಿಕೊಂಡರು ನಿರ್ಮಾಪಕ ಗೋವಿಂದರಾಜು.
'ಅದೊಂದು ಅದ್ಭುತ ಸಿನಿಮಾ ಆದ್ರೆ ಬಾಕ್ಸ್ ಆಫೀಸಲ್ಲಿ ದಯನೀಯ ಸೋಲು, ಅಂಥ ಚಿತ್ರವನ್ನು ಕನ್ನಡ ಪ್ರೇಕ್ಷಕ ನೋಡಲಿಲ್ಲ' ಎಂಬ ಕಾಮೆಂಟ್ಗಳನ್ನು ಗಾಂಧಿನಗರದಲ್ಲಿ ಆಗಾಗ ಕೇಳಬಹುದು. ಕನ್ನಡ ಚಿತ್ರಗಳ ಗುಣಮಟ್ಟ ಸರಿಯಿಲ್ಲ ಎಂಬ ಮಾತಿನ ನಡುವೆಯೂ ಇರುವ 'ಕನ್ನಡ ಪ್ರೇಕ್ಷಕ ಕೆಲವು ಒಳ್ಳೆಯ ಚಿತ್ರಗಳನ್ನು ನೋಡಲಿಲ್ಲ' ಎಂಬ ಅಪವಾದವೂ ಇದಕ್ಕೆ ಕಾರಣ.
ಹಣ ಮಾಡದೇ ಸೋತಿದ್ದರೂ, ಅಂಥಹ ಚಿತ್ರಗಳ ಪಟ್ಟಿಯಲ್ಲಿ ಬರುವ, ಕನ್ನಡ ಚಿತ್ರರಂಗದ ಮೈಲಿಗಲ್ಲು ಎನ್ನಬಹುದಾದಂಥ ಚಿತ್ರಗಳ ಸಾಲಿನಲ್ಲಿ ಕೆ. ವಿ.ರಾಜು ನಿರ್ದೇಶನದ ದೇವರಾಜ್, ಅರ್ಚನಾ, ಅವಿನಾಶ್ ಅಭಿನಯದ 'ಹುಲಿಯಾ' ಕೂಡ ಒಂದು. ಆದರೆ ಎಲ್ಲರೂ ಹೊಗಳುವ ಅಂಥಹ ಚಿತ್ರಗಳು ಸೋಲುವುದೇಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಸುಮಾರು ಹದಿನೆಂಟು ವರ್ಷಗಳ ಹಿಂದೆ 'ಹುಲಿಯಾ' ಚಿತ್ರ ನಿರ್ಮಿಸಿದ ಗೋವಿಂದರಾಜು ಅವರಿಗೆ ಆ ಪ್ರಶ್ನೆಗೆ ಉತ್ತರ ಗೊತ್ತೇ? ಅವರು ಅಷ್ಟು ಆಸ್ಥೆಯಿಂದ ನಿರ್ಮಿಸಿದ ಚಿತ್ರ ತಯಾರಾದ, ಬಿಡುಗಡೆಯಾದ ದಿನಗಳಲ್ಲಿ ಏನಾಯಿತು ಎಂಬುದನ್ನು ಕೇಳಿದಾಗ ಗೋವಿಂದು ಹೇಳಿದ ಮಾತಿದು.
-ಕೆ.ವಿ.ರಾಜು ನಿರ್ದೇಶನದಲ್ಲಿ ಶಿವರಾಜ್ಕುಮಾರ್ ನಾಯಕತ್ವದಲ್ಲಿ 'ಖೆಡ್ಡಾ' ಎಂಬ ಚಿತ್ರ ಮಾಡಬೇಕಿತ್ತು. ಆಗ ಶಿವಣ್ಣರ 'ಓಂ' ಪ್ಲಾನ್ ಶುರುವಾಯ್ತು. ಶಿವಣ್ಣರ ಬ್ಯಾನರ್ ಚಿತ್ರ. ಹಾಗಾಗಿ, ಇದರ ನಂತರ ಖೆಡ್ಡಾ ಮಾಡೋಣ ಅಂದ್ರು. ಓಕೆ ಅಂದ್ವಿ. ಆ ಗ್ಯಾಪ್ನಲ್ಲಿ ತಯಾರಾದ ಚಿತ್ರವೇ 'ಹುಲಿಯಾ'. 'ಓಂ' ಹಿಟ್ ಆಯ್ತು. ಆದರೆ, ಓಂನ ನಂತರ ಕೆ.ವಿ.ರಾಜು ಜೊತೆ 'ಖೆಡ್ಡಾ' ಮಾಡೋಕೆ ಆಗಲೇ ಇಲ್ಲ. ಅದನ್ನಾದ್ರೂ ಮಾಡಿದ್ರೆ ಸಿನಿಮಾ ಹೇಗಿದ್ರೂ ವಿತರಕರು ನಾನು ಕೇಳಿದಷ್ಟು ಕೊಟ್ಟು ನನ್ನ ಸಿನಿಮಾ ಖರೀದಿಸ್ತಿದ್ರು.
- ಒಂದು ಚಿತ್ರದಲ್ಲಿ ಒಳ್ಳೆಯ ಕಥೆ, ಒಳ್ಳೆ ಪರ್ಫಾಮೆನ್ಸ್ ಎಲ್ಲಾ ಸಿಗೋದು ಅಪರೂಪ. 'ಹುಲಿಯಾ'ದಲ್ಲಿ ಅದು ಆಗಿತ್ತು. ಒಳ್ಳೆಯ ಸಿನಿಮಾ ಮಾಡಿದೆ ಅಂತ ಖುಷಿ ಇತ್ತು. ದೇವರಾಜ್, ಅವಿನಾಶ್ರಂಥ ಕಲಾವಿದರಿಗೆಲ್ಲಾ ಆ ಚಿತ್ರದಿಂದ ಒಳ್ಳೆ ಹೆಸರು ಬಂತು. ಆದರೆ ನಿರ್ಮಾಪಕನಾಗಿ ನಾನೂ ಉಳಿದುಕೊಂಡಿದ್ರೆ ಎಲ್ಲ ಸಾರ್ಥಕ ಆಗ್ತಿತ್ತು. ಅದು ಸಾಧ್ಯವೂ ಇತ್ತು. ನಿರ್ದೇಶಕ ಕೆ.ವಿ. ರಾಜು ಅವರ ಸಹಕಾರ ಇದ್ದಿದ್ದರೆ.
- ರಾಜು ಅದ್ಭುತ ನಿರ್ದೇಶಕ. ತಂತ್ರಜ್ಞ. ಸಿಕ್ಕಾಪಟ್ಟೆ ಬುಧ್ಧಿವಂತ. ಅವರದ್ದೇ 'ಬೆಳ್ಳಿಮೋಡಗಳು' ಚಿತ್ರದಿಂದ ನಾನು ಲಾಭ ಮಾಡಿದ್ದೆ. ರಿಮೇಕ್ ಆದ್ರೂ ಒರಿಜಿನಲ್ಗಿಂತ ಚೆನ್ನಾಗಿ ಮಾಡಿದ್ರು. ಆದ್ರೆ ಕೆಲವು ವಿಚಾರಗಳಲ್ಲಿ ಇತರರ ಮಾತನ್ನೂ ಕೇಳಬೇಕು ಅನ್ನೋ ಮನಸ್ಸು ಅವರಿಗಿಲ್ಲ, ನನಗನ್ನಿಸಿದ್ದೇ ಆಗಬೇಕು ಅನ್ನೋ ಹಠ. ಅದೊಂದೇ ಬೇಜಾರು.
-'ಹುಲಿಯಾ' ಸಿನಿಮಾದಲ್ಲಿ ಸಿಕ್ಕಾಪಟ್ಟೆ ಗೋಳು ತುಂಬಿತ್ತು. ಕಥೆ ಅಷ್ಟೊಂದು ಟ್ರಾಜಿಡಿ ಆದ್ರೆ, ಎಷ್ಟೇ ಕ್ವಾಲಿಟಿ ಇದ್ರು ಜನ ಸಿನಿಮಾ ನೋಡಲ್ಲ. ಚಿತ್ರ ನೋಡಿದ ವಿತರಕರು ಕ್ಲೈಮ್ಯಾಕ್ಸ್ ಬದಲಾಯಿಸಿ ಅದರ ಖರ್ಚು ನಾವು ಕೊಡ್ತೀವಿ ಅಂದ್ರು. ರಾಜು ಕೇಳಲಿಲ್ಲ. ಒಂದೇ ಹಠ. 'ಆಗಲ್ಲ, ನಾನು ಹೇಳಿದ್ದೇ ಆಗಬೇಕು' ಅಂದ್ರು. ಚಿತ್ರದಲ್ಲಿ ದೇವರಾಜ್ ಮಗನ ಕಣ್ಣು ಕೀಳೋ ದೃಶ್ಯ ಬೇಡ ಅಂದ್ರು ಎಲ್ಲರೂ. ಬದಲಾಯಿಸಿ ಅಂದ್ರೆ, 'ಕಥೆ ಇರೋದೇ ಹಾಗೆ, ನಾನೇನು ಮಾಡಕಾಗುತ್ತೆ' ಅಂದ್ರು. ಅದು ಅವರೇ ಬರೆದ ಕಥೆ ಅಲ್ವಾ?. ಚಿತ್ರದ ಸೋಲಿಗೆ ಕ್ಲೈಮ್ಯಾಕ್ಸ್ ಮುಖ್ಯ ಕಾರಣ. 'ಹುಲಿಯಾ' ಅಂತ ಹೆಸರಿಟ್ಟು ಕೊನೆಗೆ, ಅವನನ್ನ ರಸ್ತೆ ಮೇಲೆ ಇಲಿ ಥರಾ ಹೊಡೆದು ಬಿಸಾಕಿ ಬಿಟ್ರೆ ಹೇಗೆ ಒಪ್ಕೋತಾರೆ ಜನ. ನಿಜಜೀವನ ಬೇರೆ, ಸಿನಿಮಾ ಬೇರೆ.
- ಕೆ.ವಿ. ರಾಜು ಚಿತ್ರದ ನಿರ್ದೇಶಕರು. ಸರಿ. ಅವರಿಗೆ ಎಲ್ಲಾ ಹಕ್ಕಿದೆ. ಬುದ್ಧಿವಂತಿಕೆನೂ ಇದೆ. ಆದರೆ ನೂರು ಜನ ಹೇಳಿದ ಮಾತಿಗಿಂತ ನನ್ನ ಅನಿಸಿಕೇನೇ ದೊಡ್ಡದು ಅಂತ ಹಠ ಮಾಡಿದ್ರೆ ಹೆಂಗೆ. ಹುಬ್ಬಳ್ಳಿ ಭಾಷೆ ಬೇಡ, ಮೈಸೂರು ಮಂಡ್ಯ ಭಾಷೆಯಲ್ಲಿ ಮಾಡೋಣ ಅಂದೆ. ಓಕೆ ಅಂದು, ಮತ್ತೆ ಶೂಟಿಂಗ್ಗೆ ಹೋದಾಗ, ಹೇಳದೇ ಕೇಳದೆ ಹುಬ್ಬಳ್ಳಿ ಭಾಷೇನೇ ಉಪಯೋಗಿಸೋಕೆ ಶುರುಮಾಡಿದ್ರು. ಎಷ್ಟೋ ದಿನ ಶೂಟಿಂಗ್ ಕ್ಯಾನ್ಸಲ್. ಭಾನುವಾರದ ಹೆಚ್ಚಿನ ಬಾಟಾ ಕೊಟ್ಟು ಎಲ್ಲರನ್ನೂ ಕರೆಸಿದ್ರೆ, ಸಣ್ಣ ಮಳೆ ಬಂತು ಅಂತ ಶೂಟಿಂಗ್ ಕ್ಯಾನ್ಸಲ್. 'ಗ್ರೌಂಡ್ ಸೀನ್ ಇನ್ನೊಂದ್ ದಿನ ಮಾಡೋಣ, ಈವತ್ತು ಗ್ರೌಂಡ್ ಕವರ್ ಮಾಡದೇ ಶೂಟಿಂಗ್ ಮಾಡಿ' ಅಂದ್ರೆ 'ಇಲ್ಲ ಆಗಲ್ಲ ಪ್ಯಾಕಪ್' ಅನ್ನುತ್ತಿದ್ದರು. ಕ್ಲೈಮ್ಯಾಕ್ಸ್ನಲ್ಲಿ ಸುಮಾರು 5 ಲಕ್ಷದ ಸೆಟ್ ಹಾಕಿಸಿ ಬೇಡ ಅಂತ ಕೆಡವಿದರು. ಸೆನ್ಸಾರ್ನಲ್ಲಿ ಒಂದು ಹಾಡು ಅಶ್ಲೀಲ ಅನ್ನೋ ಕಾರಣಕ್ಕೆ ಪೂರ್ತಿ ಕಟ್ ಆಯ್ತು. ಅದಕ್ಕೆ ಹಾಕಿದ ದುಡ್ಡು ಲಾಸು. ಇಂಥಾ ಖರ್ಚುಗಳು ಸೇರಿಯೇ ಸುಮಾರು 30 ಲಕ್ಷ ಕೇವಲ ವೇಸ್ಟೇಜ್ ಲೆಕ್ಕದಲ್ಲಿ ಹೋಯ್ತು.
-ಇಷ್ಟೆಲ್ಲಾ ಆದ್ರೂ, ಆ ಸಿನಿಮಾ ಎಲ್ಲರಿಗೂ ಎಷ್ಟು ಇಷ್ಟ ಆಗಿತ್ತು ಅಂದ್ರೆ, ಸಿನಿಮಾಗೆ ಸೆನ್ಸಾರ್ನಿಂದ ತೊಂದರೆ ಆದಾಗ ನಾಗಾಭರಣ, ಜಯರಾಂರಂಥ ನಿರ್ದೇಶಕರು, ಪತ್ರಕರ್ತರು ಧರಣಿ ಕೂತ್ರು, ಇಂಥ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಬೇಡ ಅಂತ. ಸೆನ್ಸಾರ್ನವ್ರು ಬಾಂಬೆಗೆ ಕಳಿಸಿ ್ತವೀ ಅಂದ್ರು. ಕೊನೆಗೆ ಒಂದೆರಡು ಕಟ್ಗಳ ನಂತರ 'ಯು' ಸರ್ಟಿಫಿಕೇಟ್ ಸಿಕ್ತು. ಆದರೆ ಚಿತ್ರ ಬಿಡುಗಡೆಯಾದ ಮೇಲೆ 67 ಲಕ್ಷ ಸಾಲ ಬೆನ್ನಿಗೆ ಬಿತ್ತು. 'ನಾನೇನ್ ಮಾಡ್ಲಿ, ಒಳ್ಳೆ ಸಿನಿಮಾ ಮಾಡಿದೆ, ಜನ ನೋಡ್ಲಿಲ್ಲ' ಅಂದು ಸುಮ್ಮನಾದರು ರಾಜು.
ಹೀಗೆ, 15 ವರ್ಷಗಳ ಹಿಂದಿನ ಹುಲಿಯಾ 'ಚಿತ್ರಕಥೆ' ಹೇಳಿದ ಗೋವಿಂದರಾಜು, ಸದ್ಯಕ್ಕೆ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಸಿನಿಮಾ ಮಾಡುವ ಆಸೆ ಅಲ್ಪಸ್ವಲ್ಪ ಉಳಿದುಕೊಂಡಿದೆ. ಹುಲಿ ಮತ್ತೆ ಅಖಾಡಕ್ಕಿಳಿಯುವ ಉತ್ಸಾಹ ತೋರಿಸುತ್ತಿದೆ. ಆದರೆ, ಇಂಟರೆಸ್ಟಿಂಗ್ ವಿಷಯ ಎಂದರೆ, 'ಹುಲಿಯಾ' ಚಿತ್ರದ ಬಗ್ಗೆ ಇಷ್ಟೆಲ್ಲಾ ಅಸಮಾಧಾನವಿರುವ ಗೋವಿಂದರಾಜು ಅವರನ್ನು ಯಾರಾದರೂ ಅಪರಿಚಿತರು ನಿಮ್ಮ ಹೆಸರೇನು ಎಂದು ಕೇಳಿದರೆ ಅವರ ಉತ್ತರ ಫಟ್ಟಂತ ಬರುತ್ತದೆ... 'ಗೋವಿಂದು, ಹುಲಿಯಾ ಗೋವಿಂದು'. ಅದು ಕೆ.ವಿ.ರಾಜು ಮತ್ತು 'ಹುಲಿಯಾ' ಚಿತ್ರದ ತಾಕತ್ತು.
ಹುಲಿಯಾ ಸೋಲಿಗೆ ನಿರ್ಮಾಪಕರೇ ಕಾರಣ
- ದೇವರಾಜ್
ಆ್ಯಕ್ಷನ್ ಚಿತ್ರಗಳಿಗೆ ಹೊಸರೂಪ ಕೊಟ್ಟ ನಿರ್ದೇಶಕ ಕೆ.ವಿ.ರಾಜು. ನನ್ನ ಜೀವನದಲ್ಲಿ ಸಾಕಷ್ಟು ಪ್ರಮುಖವಾದ ಮತ್ತು ನನ್ನ ಬೆಳವಣಿಗೆಗೆ ಕಾರಣವಾದ ನಿರ್ದೇಶಕರು ಅವರು. ನಿರ್ದೇಶನದ ಜೊತೆ ಅವರೊಬ್ಬ ಅತ್ಯುತ್ತಮ ಚಿತ್ರಕಥೆ ಮತ್ತು ಸಂಭಾಷಣಾಕಾರರು. ನಾನಾಗ ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದೆ. ನಾನು ರಾಜು ಜೊತೆ ಆತ್ಮೀಯವಾಗಿದ್ದುದು ಗೊತ್ತಿದ್ದ ತೆಲುಗು ಚಿತ್ರರಂಗದ ಅನೇಕರು ರಾಜು ಅವರಿಂದ ನಮಗೆ ಸ್ಕ್ರಿಪ್ಟ್ ಮಾಡಿಸಿಕೊಡಿ ಎಂದು ದುಂಬಾಲು ಬೀಳುತ್ತಿದ್ದರು. ರಾಜು ಸಾಕಷ್ಟು ಓದಿಕೊಂಡಿದ್ದ ವಿದ್ಯಾವಂತ ತಂತ್ರಜ್ಞ. ಸಿನಿಮಾಗಳ ವಿಷಯದಲ್ಲಿ ಅವರು ಜನರ ತಿಳುವಳಿಕೆಗಿಂತ ಸಾಕಷ್ಟು ವರ್ಷ ಮುಂದಿದ್ದವರು.
ಹುಲಿಯಾ ಚಿತ್ರದ ಸೋಲಿಗೆ ಖಂಡಿತವಾಗಿಯೂ ನಿರ್ಮಾಪಕರೇ ಕಾರಣ. ಕೆ. ವಿ.ರಾಜು ಆಗಲೀ, ಚಿತ್ರದ ಕಲಾವಿದರಾಗಲೀ ಅಲ್ಲವೇ ಅಲ್ಲ. ಅಂಥ ಚಿತ್ರವನ್ನು ಜನರಿಗೆ ತಲುಪಿಸೋಕೆ ಅವರಿಂದ ಆಗಲಿಲ್ಲ. ಇದಕ್ಕೆ ಒಂದೇ ಒಂದು ಉದಾಹರಣೆ ಕೊಡ್ತೀನಿ. ನಾಳೆ ಬೆಳಿಗ್ಗೆ ಹುಲಿಯಾ ಚಿತ್ರ ಬಿಡುಗಡೆ ಆಗುತ್ತೆ ಅನ್ನೋದು ಹಿಂದಿನ ದಿನ ರಾತ್ರಿ ಕೂಡಾ ಯಾರಿಗೂ ಗೊತ್ತಿರಲಿಲ್ಲ. ಚಿತ್ರ ಬಿಡುಗಡೆಯಾಗಿದ್ದ ಅಭಿನಯ ಚಿತ್ರಮಂದಿರದ ಮುಂದೆ ಚಿತ್ರದ ಒಂದು ಸಣ್ಣ ಪೋಸ್ಟರ್ ಕೂಡಾ ಇರಲಿಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಸರಿ ಇಲ್ಲ. ನಾಯಕ ಗೆಲ್ಲಬೇಕಿತ್ತು ಅನ್ನೋದು ಕೆಲವರ ವಾದ. ಆದರೆ ನಾನು ಅದನ್ನು ಒಪ್ಪೋದಿಲ್ಲ. ದುಷ್ಟಶಕ್ತಿಗಳ ಮುಂದೆ ಸಾಮಾನ್ಯ ಮನುಷ್ಯ ಏನೂ ಮಾಡೋಕೆ ಸಾಧ್ಯವಿಲ್ಲ ಎಂಬ ವಾಸ್ತವವನ್ನು ರಾಜು ಪರಿಣಾಮಕಾರಿಯಾಗಿಯೇ ತೋರಿಸಿದ್ದರು. ಅದನ್ನು ಅರಗಿಸಿಕೊಳ್ಳೋಕೆ ಜನಕ್ಕೆ ಒಂದಿಷ್ಟು ಸಮಯ ಕೊಡಬೇಕಿತ್ತು. ಆ ಸಾಮರ್ಥ್ಯ ಚಿತ್ರದ ನಿರ್ಮಾಪಕರಿಗೆ ಇರಲಿಲ್ಲ ಎಂಬುದೇ ಹುಲಿಯಾ ಚಿತ್ರದ ಸೋಲಿಗೆ ಕಾರಣವಾಯ್ತು.
ರಾಜು ಅಂದ್ರೆ ಟೈಗರ್
- ಲಂಬೂ ನಾಗೇಶ್
ನಾವೆಲ್ಲ ಕೆ.ವಿ.ರಾಜು ಅವರನ್ನ ಟೈಗರ್ ಅಂತ ಕರೀತಿದ್ವಿ. ಅವರ ಅನೇಕ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಸಿನಿಮಾದ ನಾಯಕ ಅಂಬರೀಶ್ ಇರಲಿ, ಅಮಿತಾಬ್ ಬಚ್ಚನ್ ಇರಲಿ. ರಾಜು ಯಾವತ್ತೂ ಟೈಗರ್ ಥರಾನೇ ಇದ್ದವರು. ಅವರಿಂದಾಗಿ ನನಗೆ ಅಮಿತಾಬ್ ಬಚ್ಚನ್ರ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಅವರು ತುಂಬಾ ಲೆವೆಲ್ ಹೆಡೆಡ್ ಮನುಷ್ಯ. ಅಮಿತಾಬ್ ಅವರ ಮುಂದೆ ಅಭಿನಯಿಸುವ ಸೀನ್ನಲ್ಲಿ ಅಮಿತಾಬ್ರನ್ನು ನೋಡಿಯೇ ನಾನು ಗಲಿಬಿಲಿಗೊಳಗಾಗಿದ್ದೆ. ಅವರನ್ನು ನೋಡುವ ಖುಷಿಯಲ್ಲೇ ಕಳೆದುಹೋಗಿದ್ದೆ. ಆಗ ನಿರ್ದೇಶಕರಾಗಿದ್ದ ರಾಜು 'ಆಯ್ತಾ ಎಮೋಷನಲ್ ಆಗಿದ್ದು? ಇನ್ಮೇಲೆ ಶೂಟಿಂಗ್ ಮಾಡೋಣ್ವಾ?' ಎನ್ನುತ್ತಾ ಕ್ಯಾಷುವಲ್ ಆಗಿ ಹೇಳಿ ನನ್ನನ್ನು ಶೂಟಿಂಗಿಗೆ ತಯಾರು ಮಾಡಿದರು. ಹುಲಿಯಾ ಚಿತ್ರ ರಾಜು ಅವರ ನಿರ್ದೇಶನದ ತಾಕತ್ತಿಗೆ ಸಾಕ್ಷಿ. ಅಂಥ ಚಿತ್ರ ಸೋತಿದ್ದು ದುರದೃಷ್ಠಕರ. ಕೆ.ವಿ.ರಾಜು ಅವರಂಥ ನಿರ್ದೇಶಕರು ಇನ್ನೂ ಹೆಚ್ಚು ಸಿನಿಮಾಗಳನ್ನು ಮಾಡಬೇಕಿತ್ತು. ಈಗಲೂ ಅವರು ನಿರ್ದೇಶನಕ್ಕೆ ಮನಸ್ಸು ಮಾಡಲಿ ಎಂಬುದು ನನ್ನಂಥ ಅನೇಕರ ಆಸೆ.
2 ವಾರ ಸಿನಿಮಾ ಬಿಡುಗಡೆ ಆಗಿದ್ದೇ ಗೊತ್ತಾಗಿರ್ಲಿಲ್ಲ.
- ಅವಿನಾಶ್
ನಾನು ಇವತ್ತು ನಟ ಅಂತ ಅನ್ನಿಸಿಕೊಂಡಿದ್ದರೆ, ಹೆಸರು ಮಾಡಿದ್ದರೆ ಅದಕ್ಕೆ ಕಾರಣ ಕೆ.ವಿ.ರಾಜು ಅವರು. ನನ್ನಿಂದ ಎಂತೆಂಥ ಪಾತ್ರಗಳನ್ನು ಮಾಡೋಕೆ ಸಾಧ್ಯ ಎಂದು ತೋರಿಸಿಕೊಟ್ಟವರು ಅವರು. ಅವರ ಜೊತೆಗೆ ಕೆಲಸ ಮಾಡಿದರೆ ಶಾಲೆಯೊಂದರಲ್ಲಿ ಕಲಿತಂತೆ. ಅವರ ಜೊತೆ ಕೆಲಸ ಮಾಡಿದ ಮೇಲೆ ಇನ್ಯಾರ ಜೊತೆ ಕೆಲಸ ಮಾಡಲೂ ಯಾವ ಹಿಂಜರಿಕೆಯೂ ಇರೋದಿಲ್ಲ. ರಾಜು ಒಬ್ಬ ಅತ್ಯುತ್ತಮ ತಂತ್ರಜ್ಞರು. ಅವರ ಶಾಟ್ ಕಂಪೋಸಿಷನ್ ಶೈಲಿಯೇ ಅದ್ಭುತ. ಹುಲಿಯಾ ನನ್ನ ಪ್ರಕಾರ ಕನಿಷ್ಟ ಪಕ್ಷ ಆ ಕಾಲಕ್ಕೆ ಅದ್ಭುತವಾದ ಕಾನ್ಸೆಪ್ಟ್. ಇಷ್ಟು ವರ್ಷ ಆದರೂ ನಾನು ಉತ್ತರ ಕರ್ನಾಟಕಕ್ಕೆ ಹೋದರೆ ಜನ ಈಗಲೂ ಹುಲಿಯನನ್ನು ನೆನಪಿಸಿಕೊಳ್ಳುತ್ತಾರೆ. ನನಗೂ ಈಗಲೂ ಎಲ್ಲವೂ ನೆನಪಿದೆ. ಈ ಚಿತ್ರಕ್ಕಾಗಿ ರಾಜು ನನ್ನನ್ನು 'ತಲೆ ಬೋಳಿಸ್ಕೊತೀಯಾ?' ಅಂತ ಕೇಳಿದ್ರು. ಒಂಚೂರೂ ತಲೆಕೆರೆದುಕೊಳ್ಳದೆ 'ನೀವು ಹೇಳಿದ್ರೆ ಏನ್ ಬೇಕಾದ್ರೂ ಮಾಡ್ತೀನಿ' ಅಂದೆ. ಚಿತ್ರೀಕರಣ ಮಾಡುತ್ತಿದ್ದ ಆ ಹಳ್ಳಿಯ ಗುಡಿಸಲಿನಂಥ ಮನೆಯಲ್ಲಿ ಮೊಂಬತ್ತಿ ಬೆಳಕಿನಲ್ಲಿ ತಲೆಕೆರೆಸಿಕೊಂಡೆ. ಈಗ ನಿರ್ದೇಶಕರಾಗಿರುವ ಮಾದೇಶ್ ಆಗ ನನ್ನ ಜೊತೆ ಇದ್ದರು. ಹೆಚ್ಚು ಕೂಗಾಡದೆ, ಕಿರುಚಾಡದೆ ಕ್ರೌರ್ಯ ಮೆರೆಯುವ ವಿಲನ್ ಪಾತ್ರ ಅದು. ಆ ಚಿತ್ರದ ನನ್ನ ಅಭಿನಯಕ್ಕೆ ಏನೇ ಹೊಗಳಿಕೆ ಬಂದಿದ್ದರೂ ಅದಕ್ಕೆ ಕಾರಣ ರಾಜು. ಹುಲಿಯಾ ಚಿತ್ರ ಒಂದು ವಂಡರ್ಫುಲ್ ಟೀಮ್ವರ್ಕ್. ಸಿನಿಮಾ ಸೋಲೋಕೆ ಕ್ಲೈಮ್ಯಾಕ್ಸ್ ಕಾರಣ ಅಂತಾರೆ ಕೆಲವರು. ಆದರೆ ನಾವು ಹಾಗೆ ಕೇಳಿದಾಗ ರಾಜು ಹೇಳಿದ್ರು 'ಹಳ್ಳಿಯಿಂದ ಬಂದ ಒಬ್ಬ ಅಮಾಯಕ ಮನುಷ್ಯ, ನಗರದ ಅಂಥ ಪ್ರಭಾವಿ ದುಷ್ಟ ವ್ಯಕ್ತಿಗಳ ವಿರುದ್ಧ ಗೆಲುವು ಸಾಧಿಸೋಕೆ ಹೇಗೆ ಸಾಧ್ಯ. ಅದು ವಾಸ್ತವ. ಅದನ್ಯಾಕೆ ತೋರಿಸಬಾರದು'. ಅವರ ಮಾತು ನಿಜ. ಸಿನಿಮಾ ಸೋಲಲು ನಿಜವಾದ ಕಾರಣ ಅದನ್ನು ಕೆಟ್ಟದಾಗಿ ಬಿಡುಗಡೆ ಮಾಡಿದ್ದು. ತ್ರಿವೇಣಿ ಚಿತ್ರಮಂದಿರದಲ್ಲಿ ಅನೌನ್ಸ್ ಮಾಡಿ ಅಲ್ಲೆಲ್ಲೋ ಅಭಿನಯ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ರು. ಎರಡು ವಾರ ಜನಕ್ಕೆ ಸಿನಿಮಾ ಬಿಡುಗಡೆ ಆಗಿದ್ದೇ ಗೊತ್ತಾಗಿರಲಿಲ್ಲ.
- ಹರಿ