ಹಾಡು ಕೇಳಿ

ಇಲ್ಲಿ ಇಬ್ಬರು ಸ್ಟಾರ್ ನಟರಿದ್ದಾರೆ. ಇವರಲ್ಲಿ ನಿಜವಾಗಲೂ 'ಅಗ್ರಜ' ಯಾರು? ಚಿತ್ರ ಆರಂಭವಾದಾಗಿನಿಂದಲೂ ಇದೇ ಪ್ರಶ್ನೆ. ಆದರೆ ಉತ್ತರ ಮಾತ್ರ 'ಚಿತ್ರ...
ಹಾಡು ಕೇಳಿ
Updated on: 

ಇಲ್ಲಿ ಇಬ್ಬರು ಸ್ಟಾರ್ ನಟರಿದ್ದಾರೆ. ಇವರಲ್ಲಿ ನಿಜವಾಗಲೂ 'ಅಗ್ರಜ' ಯಾರು? ಚಿತ್ರ ಆರಂಭವಾದಾಗಿನಿಂದಲೂ ಇದೇ ಪ್ರಶ್ನೆ. ಆದರೆ ಉತ್ತರ ಮಾತ್ರ 'ಚಿತ್ರ ನೋಡಿ. ನಿಮಗೆ ಗೊತ್ತಾಗುತ್ತದೆ' ಎಂಬುದು. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇಲ್ಲೂ ಕೂಡ ಅದೇ ಪ್ರಶ್ನೆ. ಒಂದು ಸಿಂಹಾಸನ, ಅದರಲ್ಲಿ ಒಂದು ಮನುಷ್ಯನ ಆಕೃತಿ. ಕಂಡು ಕಾಣದಂತಿರುವ ಈ ಆಕೃತಿಯೇ 'ಅಗ್ರಜ'ನಿರಬಹುದೇ? ಗೊತ್ತಿಲ್ಲ. ಆದರೆ, ಇಂಥ ಸಸ್ಪೆನ್ಸ್‌ನಲ್ಲೇ ನೋಡಬಹುದಾದ ಸಿನಿಮಾ ಇದು ಎಂಬುದು ಮಾತ್ರ ಸತ್ಯ. ಚಿತ್ರದ ನಾಯಕ ನವರಸ ನಾಯಕ ಜಗ್ಗೇಶ್. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಿ. ಗೋವರ್ಧನ್ ನಿರ್ಮಾಪಕರು. ನಂದನ್‌ರಾಜ್ ಸಂಗೀತ. ಚಿತ್ರಕಥೆ ಮತ್ತು ನಿರ್ದೇಶನ ಹೆಚ್.ಎಂ. ಶ್ರೀನಂದನ್. ಅಧ್ಯಾ ಗೌಡ ಹಾಗೂ ಕಾಮನಾ ಜೇಠ್ಮಲಾನಿ ನಾಯಕಿಯರು. ಮತ್ತೊಬ್ಬ ನಟಿ ಅರುಂಧತಿ, ದರ್ಶನ್‌ರಿಗೆ ಜೋಡಿಯಾಗಿ ನಟಿಸಿದ್ದಾರೆ. ಹಾಡು, ಸಂಗೀತ, ಕುಣಿತ, ಒಂದಿಷ್ಟು ತಮಾಷೆಗಳ ನಡುವೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು.
 ಅಂದಹಾಗೆ ತೆಲುಗಿನ 'ಬ್ರೋಕರ್‌' ಚಿತ್ರ 'ಅಗ್ರಜ'ನ ಮೂಲ ಪ್ರತಿ. ಅಲ್ಲಿ ಆರ್.ಪಿ. ಪಟ್ನಾಯಕ್ ಅವರೇ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿ, ಅಭಿನಯಿಸಿದ ಚಿತ್ರವನ್ನು ಶ್ರೀನಂದನ್ ಕನ್ನಡಕ್ಕೆ ತಂದಿದ್ದಾರೆ. ಈ ಚಿತ್ರ ಬಿಡುಗಡೆಯಾದಾಗ ಸಾಕಷ್ಟು ಸದ್ದು ಮಾಡಿತು. ಆಂಧ್ರದ ರಾಜ್ಯ ಪ್ರಶಸ್ತಿ ಸೇರಿದಂತೆ ರಾಷ್ಟ್ರ ಪ್ರಶಸ್ತಿಯನ್ನೂ  ಮುಡಿಗೇರಿಸಿಕೊಂಡ ಚಿತ್ರವಿದು. 'ನಾನು ಕೇವಲ ಶೇ.25 ಭಾಗ ಮಾತ್ರ ಕಥೆಗೆ ನ್ಯಾಯ ಒದಗಿಸಿದೆ. ಆದರೆ ಜಗ್ಗೇಶ್ ಅವರು ಶೇ.100 ಭಾಗ ನ್ಯಾಯ ಸಲ್ಲಿಸಿದ್ದಾರೆಂಬ ನಂಬಿಕೆ ಇದೆ. ಅವರ ಅಭಿನಯದಲ್ಲಿ ತುಂಬಾ ವರ್ಷಗಳ ನಂತರ ನನ್ನದೇ ಕಥೆ ಚಿತ್ರವಾಗುತ್ತಿದೆ' ಎಂಬುದು ಆರ್.ಪಿ. ಪಟ್ನಾಯಕ್‌ರ ಮಾತು.
'ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದೇವೆ. ನಾನು ಚಿತ್ರರಂಗಕ್ಕೆ ಬಂದಾಗ ಸಂಕಲಕಾರನಾಗಿದ್ದವನು ಈಗ ನನ್ನದೇ ಚಿತ್ರಕ್ಕೆ ನಿರ್ಮಾಪಕ. ಖುಷಿಯಾಗುತ್ತಿದೆ. ಶ್ರೀನಂದನ್ ತುಂಬಾ ಚೆನ್ನಾಗಿ ಚಿತ್ರಕಥೆ ಮಾಡಿಕೊಂಡಿದ್ದಾನೆ. ಚಿತ್ರದಲ್ಲಿ ಬಹಳಷ್ಟು ತಿರುವು, ಅಚ್ಚರಿಗಳಿವೆ. ಇಲ್ಲಿ ನಿಜವಾಗಲೂ ಅಗ್ರಜ ಯಾರು? ಎನ್ನುವುದಕ್ಕೆ ಅತ್ಯಂತ ಸೂಕ್ಷ್ಮವಾಗಿ ನಿರ್ದೇಶಕರು ನಿರೂಪಣೆ ಮಾಡಿದ್ದಾರೆ. ನನ್ನ ಚಿತ್ರದಲ್ಲಿ ದರ್ಶನ್ ಅಭಿನಯಿಸಿದ್ದು ಸಂತೋಷತಂದಿದೆ. ಹಾಸ್ಯವನ್ನು ಗಂಭೀರವಾಗಿ, ಹಾಗೆ ತುಂಬಾ ಗಂಭೀರವಾದ ವಿಷಯಗಳನ್ನು ಹಾಸ್ಯವಾಗಿಯೇ ಕಟ್ಟಿಕೊಡುವ ಈ ಚಿತ್ರ, ಎಲ್ಲವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ಈ ದಿನದ ವಿಶೇಷ ಎಂದರೆ ಆರ್.ಪಿ. ಪಟ್ನಾಯಕ್ ಬಂದಿರುವುದು. ಅವರದ್ದೇ ಕಥೆ ಇದು' ಎಂದರು ಜಗ್ಗೇಶ್. 'ಸಿನಿಮಾ ಆ ಮೇಲೆ ನೋಡಿ. ಈಗ ಹಾಡು ಕೇಳಿ' ಎಂದು ತಮ್ಮದೇ ದಾಟಿಯಲ್ಲಿ ಡೈಲಾಗ್ ಬಿಟ್ಟು ಸುಮ್ಮನಾದರು ಜಗ್ಗೇಶ್.
 ನಿರ್ದೇಶಕ ಶ್ರೀನಂದನ್‌ರಿಗೆ ಇದು ಮೊದಲ ಚಿತ್ರ. 'ಜಗ್ಗೇಶ್ ಮತ್ತು ದರ್ಶನ್ ಸಾರ್ ಅವರು ನನ್ನ ಚಿತ್ರದಲ್ಲಿ ಅಭಿನಯಿಸಿದ್ದು ನನ್ನ ಪುಣ್ಯ. ನಂದನ್‌ರಾಜ್‌ರ ಸಂಗೀತ ಚಿತ್ರಕ್ಕೆ ಬೆನ್ನೆಲುಬು. ಕಥೆಗೆ ಮಾನವೀಯತೆಯ ಸ್ಪರ್ಶ ಇದೆ' ಎಂಬುದು ನಿರ್ದೇಶಕರ ಮಾತು. 'ತುಂಬಾ ಎಂಜಾಯ್ ಮಾಡಿಕೊಂಡು ಚಿತ್ರದಲ್ಲಿ ಅಭಿನಯಿಸಿದ್ದೇವೆ. ಪ್ರತಿ ದಿನ ಜಗ್ಗೇಶ್ ಸಾರ್ ನಗಿಸುತ್ತಲೇ ಇರುತ್ತಾರೆ. ಅವರು ಒಳ್ಳೆಯ ನಟ' ಎಂದರು ಕಾಮನಾ. ನಟಿ ಅಧ್ಯಾ ಗೌಡ ಚಿತ್ರದಲ್ಲಿ ಜಗ್ಗೇಶ್ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

- ಕೇಶು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com