

ಕೇವಲ ಮಹಿಳೆಯರಿಗಾಗಿ ಎನ್ನುವ ಇಂದಿನ ಟಿವಿ ಧಾರಾವಾಹಿಗಳ ನಡುವೆ ಪುರುಷೋತ್ತಮ ಎಂಬ ಪುರುಷಪ್ರಧಾನ ಧಾರಾವಾಹಿ ಶುರುವಾಗಿದೆ. ದಿಲೀಪ್ರಾಜ್, ಮೇಘನಾ ಅಭಿನಯದ ಈ ಧಾರಾವಾಹಿ ಝೀ ಕನ್ನಡ ವಾಹಿನಿಯಲ್ಲಿ ಸೆಪ್ಟೆಂಬರ್ 2ರಿಂದ ರಾತ್ರಿ 8.30ಕ್ಕೆ ಪ್ರಸಾರವಾಗಲಿದ್ದು, ಇದು ಸೋದರಿಯರನ್ನು ಒಂದು ದಡ ಸೇರಿಸಲು ಪ್ರಯತ್ನ ಪಡುವ ಅಣ್ಣನೊಬ್ಬನ ಕಥೆ ಹೊಂದಿದೆ. ಪುರುಷೋತ್ತಮ ಧಾರಾವಾಹಿಯನ್ನು ಆದರ್ಶ ಹೆಗಡೆ ನಿರ್ದೇಶಿಸುತ್ತಿದ್ದು, ಹರೀಶ್ ಕೊಡ್ಬಾಡಿ ಇದನ್ನು ನಿರ್ಮಿಸುತ್ತಿದ್ದಾರೆ. ಈಗಿನ ಕಾಲದ ಗಂಡಸರಿಗೆ ಮಾದರಿಯಾಗಿ ನಿಲ್ಲುವ ಪುರುಷೋತ್ತಮ ಈ ಕಥೆಯ ಕೇಂದ್ರಬಿಂದು. ಹೊಸತನವಿರುವ ಧಾರಾವಾಹಿಯನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ ಎನ್ನುತ್ತಾರೆ ಆದರ್ಶ ಹೆಗಡೆ. ಬಹಳ ದಿನಗಳ ನಂತರ ಲೀಡ್ ರೋಲ್ ಮಾಡುತ್ತಿದ್ದೇನೆ. ನಮಗೆ ಕೇವಲ ಟಿಆರ್ಪಿ ಒಂದೇ ಗುರಿ ಅಲ್ಲ ಎಂದರು ದಿಲೀಪ್ರಾಜ್. ಇದು ಮಹಿಳಾ ವಿರೋಧಿ ಕಥೆ ಅಲ್ಲ ಎಂಬುದು ಈ ತಂಡದ ಒಕ್ಕೊರಲಿನ ಮಾತು. ಧಾರಾವಾಹಿಯ ಉಳಿದ ತಾರಾಗಣದಲ್ಲಿ ರಾಕೇಶ್, ಪ್ರೇಮ್ರಾಜ್, ಸ್ವಪ್ನಾ ರಾಜ್, ಲಕ್ಷ್ಮೀಗೌಡ, ದೀಪ್ತಿ, ಐಶ್ವರ್ಯಾ ಮುಂತಾದವರಿದ್ದಾರೆ.