ಸ್ವರಾಜ್

ಸ್ವರಾಜ್
Updated on: 

ನಟ ಗಣೇಶ್ ಬಹುದಿನಗಳ ಬಳಿಕ ನಿಧಾನಕ್ಕೆ ಸೌಂಡು ಮಾಡುತ್ತಿದ್ದಾರೆ. ಇವರ ಸೌಂಡಿಗೆ ಎಫೆಕ್ಟ್ ಕೊಡುತ್ತಿರುವುದು ಹಾಸ್ಯ ಸಾಹಿತಿ ಪ್ರೊ. ಕೃಷ್ಣೇಗೌಡ ಬರೆದಿರುವ ಹಾಡು, ಗಾಯಕಿ ಮಂಜುಳಾ ಗುರುರಾಜ್‌ರ ಸ್ವರ ಮತ್ತು ಪರೂಲ್ ಯಾದವ್‌ರ ಸ್ಟೆಪ್ಸ್. ಕೃಷ್ಣೇಗೌಡ ಕೇವಲ ಹಾಸ್ಯದ ಮಾತುಗಳನ್ನು ಪಟಪಟನೆ ಹೇಳುವುದಕ್ಕೆ ಮಾತ್ರ ಸೀಮಿತ  ಎಂದುಕೊಳ್ಳುವವರಿಗೆ ಅವರಲ್ಲೊಬ್ಬ ಅದ್ಭುತ ಗೀತ ರಚನೆಕಾರ ಕೂಡ ಇದ್ದಾನೆ. ಜೊತೆಗೆ ಆ ಗೀತೆ ಅವರ ಮಾತಿನಷ್ಟೇ ಕಚಗುಳಿ ಇಡುತ್ತದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಆ ಹಾಡು ತನ್ನ ಮಾರುಕಟ್ಟೆ ರೇಟು ಹೆಚ್ಚಿಸುತ್ತದೆ ಎಂದು ಗೋಲ್ಡನ್ ಸ್ಟಾರ್ ಬಲವಾಗಿ ನಂಬಿಕೊಂಡಿದ್ದಾರೆ. ಅದಕ್ಕೆ 'ಶ್ರಾವಣಿ ಸುಬ್ರಮಣ್ಯ' ಚಿತ್ರದ ಪರೂಲ್ ಯಾದವ್‌ರ ಸ್ಪೆಷಲ್ ಫೋಕ್ ಸಾಂಗ್ ಕೂಡ ಕಾರಣ. 'ಗೋವಿಂದಾಯನಮಃ' ಚಿತ್ರದಲ್ಲಿ 'ಪ್ಯಾರ್ಗೆ ಆಗ್ಬುಟೈತೆ' ಹಾಡಿನ ಮೂಲಕ ಜೇಬು ತುಂಬಿಸಿಕೊಂಡ ನಿರ್ಮಾಪಕ ಸುರೇಶ್, ಈ ಚಿತ್ರದಲ್ಲೂ ಕೃಷ್ಣೇಗೌಡರ ಹಾಡಿನಿಂದ ಲಾಭ ಮಾಡಿಕೊಳ್ಳುವ ತುಂಬು ಭರವಸೆಯಲ್ಲಿದ್ದಾರೆ.
ಮಂಜುಳಾ ಗುರುರಾಜ್‌ರ ಧ್ವನಿಯಲ್ಲಿ ಮಾದಕವಾಗಿ ಮೂಡಿ ಬಂದಿರುವ 'ಆಕಳ ಬೆಣ್ಣೆ...' ಹಾಡಿಗೆ ಅಷ್ಟೇ ಮಾದಕವಾಗಿ ಹೆಜ್ಜೆ ಹಾಕಿದ್ದು ಅದೇ 'ಪ್ಯಾರ್ಗೆ ಆಗ್ಬುಟೈತೆ' ಖ್ಯಾತಿಯ ಪರೂಲ್. ಈ ಹಾಡು ಚಿತ್ರವನ್ನು ಸಿಕ್ಕಾಪಟ್ಟೆ ಎತ್ತರಕ್ಕೆ ಲಿಫ್ಟ್ ಮಾಡಿದೆಯಂತೆ. ಹೀಗಾಗಿ ಟಿವಿ ರೈಟ್ಸ್‌ನಲ್ಲೇ ಗಣೇಶ್ ಮೂರು ಕೋಟಿ ದಾಟಿದ್ದಾರೆ ಎನ್ನುವುದು ಚಿತ್ರ ತಂಡ ಸಂಭ್ರಮದ ಮಾತು. ಅದನ್ನು ಹೇಳಿಕೊಳ್ಳಲೆಂದೇ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಸುರೇಶ್ ಸೇರಿದಂತೆ ಎಲ್ಲರೂ ಖುಷಿಯಲ್ಲಿದ್ದರು.
ಇಲ್ಲಿವರೆಗೂ ಸೈಲೆಂಟ್ ಆಗಿಯೇ ಇದ್ದ 'ಶ್ರಾವಣಿ ಸುಬ್ರಮಣ್ಯ' ಚಿತ್ರ ಈಗ ಸದ್ದು ಮಾಡಲು ಆರಂಭಿಸಿದೆ.
ನಟ ಯಶಸ್ ಅಭಿನಯದ 'ಶಿಶಿರ' ಚಿತ್ರದ ನಂತರ ನಿರ್ದೇಶಕ ಮಂಜು ಸ್ವರಾಜ್ 'ಶ್ರಾವಣಿ...'ಯಲ್ಲಿ ಗೆಲ್ಲುವ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರ ಗೆಲ್ಲುವ ಭರವಸೆ ಮೂಡಿಸುತ್ತಿದಂತೆಯೇ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನೂ ತುಂಬಾ ಭಿನ್ನವಾಗಿ ಆಯೋಜಿಸುವ ಯೋಜನೆ ನಿರ್ಮಾಪಕ ಸುರೇಶ್  ಅವರದ್ದು. ನಿರ್ಮಾಪಕರ ಈ ಯೋಚನೆಗೆ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಸಾಥ್ ನೀಡಿದ್ದು, 'ಹರಿಕೃಷ್ಣ ಮ್ಯೂಜಿಕಲ್ ನೈಟ್‌' ಆಯೋಜಿಸಲಾಗಿದೆ. ಆ ಮೂಲಕ ಚಿತ್ರತಂಡ ಮತ್ತೊಂದು ಸಂಭ್ರಮಕ್ಕೆ ವೇದಿಕೆ ಸಿದ್ಧ ಮಾಡಿಕೊಂಡಿದೆ. ಈಗಾಗಲೇ ಮ್ಯೂಜಿಕಲ್ ನೈಟ್ ಕಾರ್ಯಕ್ರಮಕ್ಕೆ ಸಾವಿರಾರು ಜನ ತಮ್ಮ ಹೆಸರುಗಳನ್ನು  ನೋಂದಾಯಿಸಿಕೊಂಡಿದ್ದಾರಂತೆ. ಚಿತ್ರದ ಈ ಮೊದಲ ಗೆಲುವಿಗೆ ಕಾರಣವಾಗಿದ್ದು ಮಾತ್ರ ಗೌಡರ ಹಾಡಿನ ಗಮ್ಮತ್ತು ಎಂಬುದು ತಂಡದ ಅಭಿಪ್ರಾಯ. ಹೀಗಾಗಿ ಪ್ರೊ. ಕೃಷ್ಣೇಗೌಡರೇ ಶುರುವಿನಲ್ಲಿ ಮಾತಿಗೆ ನಿಂತರು.
'ನೂರಾರು ಹಾಡುಗಳನ್ನು ಕೇಳಿದ್ದೇನೆ. ಜಾನಪದ ಸೇರಿದಂತೆ ಹತ್ತಾರು ಹಾಡುಗಳ ಬಗ್ಗೆ ವಿಮರ್ಶೆ ಬರೆದಿದ್ದೇನೆ. ಸಾವಿರಾರು ಪದ್ಯಗಳ ಬಗ್ಗೆ ಸೆಮಿನಾರ್ ಮಾಡಿದ್ದೇನೆ. ಆದರೂ ಸಿನಿಮಾಗಳಿಗೆ ಹಾಡು ಬರೆಯುವುದು ನನ್ನ ವೃತ್ತಿಯೂ ಅಲ್ಲ, ಹವ್ಯಾಸವೂ ಅಲ್ಲ. ಆದರೆ, 'ಚೆಲುವಿನ ಚಿತ್ತಾರ' ಸಿನಿಮಾವನ್ನು ಬೇಡ ಬೇಡ ಅಂದುಕೊಂಡೇ ನೋಡಿದೆ. ತುಂಬಾ ಚೆನ್ನಾಗಿತ್ತು. ಈಗ ಅದೇ ಜೋಡಿ ಮೆಚೂರ್ಡ್ ಆಗಿದೆ. ಪ್ರೇಮಕಥೆಯನ್ನು ಹೇಳುವುದಕ್ಕೆ ಹೊರಟಿದೆ. ಪ್ರತಿಯೊಬ್ಬ ಸಾಹಿತಿಗೂ ಅವರದ್ದೇ ಆದ ಭಾಷೆ ಇರುತ್ತದೆ. ವಿ. ನಾಗೇಂದ್ರ ಪ್ರಸಾದ್ ಬಳಸುವ ಪದಗಳು ನಮಗೆ ಬರಲ್ಲ. ನನಗೆ ನನ್ನದೇ ಆದ ಭಾಷೆ ಇದೆ. ಅದನ್ನ  ಬಳಸಿಕೊಂಡು ಈ ಚಿತ್ರಕ್ಕೆ ಹಾಡು ಬರೆದಿದ್ದೇನೆ. ಎಲ್ಲರೂ ತುಂಬಾ ಚೆನ್ನಾಗಿದೆ ಅಂತಿದ್ದಾರೆ. ನನಗೂ ಇಷ್ಟವಾಗಿದೆ' ಎಂದರು ಕೃಷ್ಣೇಗೌಡ.
ಚಿತ್ರದ ನಾಯಕ ಗಣೇಶ್ ಅವರಿಗೂ ಹಾಡು ತುಂಬಾ ಇಷ್ಟವಾಗಿದ್ದು, 'ಶ್ರಾವಣಿ ಸುಬ್ರಮಣ್ಯ' ಚಿತ್ರದ  ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಕೃಷ್ಣೇಗೌಡರು ಬರೆದಿರುವ ಹಾಡು ತುಂಬಾ ಚೆನ್ನಾಗಿದೆ. ಜಾಲಿ ಮರ, ಬೆವರು... ಮುಂತಾದ ಪದಗಳನ್ನು ಬಳಸಿ ಅದ್ಭುತವಾಗಿ ಹಾಡು ಬರೆದಿದ್ದಾರೆ. ಹರಿಕೃಷ್ಣ ಅವರ ಸಂಗೀತ ಚೆನ್ನಾಗಿದೆ. 'ಚೆಲುವಿನ ಚಿತ್ತಾರ' ಚಿತ್ರದ ನಂತರ ಮತ್ತೆ ನಮ್ಮ ಜೋಡಿ ಬರುತ್ತಿದೆ. ಹೀಗಾಗಿ ಪ್ರೇಕ್ಷಕರಿಗೂ ನಿರೀಕ್ಷೆ ಇರುತ್ತದೆ. ನನಗೂ ಅದೇ ಭರವಸೆ ಇದೆ. ಕಥೆ  ಕೇಳಿದಾಗಲೇ ಈ ಚಿತ್ರ ಸೌಂಡು ಮಾಡುತ್ತದೆ ಅಂದುಕೊಂಡಿದ್ದೆ. ಅದು ಈಗ ನಿಜವಾಗುತ್ತಿದೆ' ಎಂದರು ನಟ ಗಣೇಶ್.
'ಹರಿಕೃಷ್ಣ ಮ್ಯೂಜಿಕಲ್ ನೈಟ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುತ್ತಿದ್ದೇವೆ. ಅಂದಿನ ಕಾರ್ಯಕ್ರಮದಲ್ಲಿ ಗಣೇಶ್ ಮತ್ತು ಅಮೂಲ್ಯ ಜೋಡಿ ಡ್ಯಾನ್ಸ್ ಮಾಡಲಿದೆ. ಹಾಡುಗಳ ಮೂಲಕ ಈಗಾಗಲೇ ಚಿತ್ರ ಪ್ರೇಕ್ಷಕರ ಬಳಿ ತಲುಪಿದೆ' ಎನ್ನುವುದು ನಿರ್ಮಾಪಕ ಸುರೇಶ್‌ರ ಮಾತು. 'ಗಣೇಶ್ ಸಿನಿಮಾ ಅಂದರೆ ಹಾಡುಗಳು ತುಂಬಾ ಚೆನ್ನಾಗಿರುತ್ತವೆ ಎನ್ನುವ ನಿರೀಕ್ಷೆ ಇರುತ್ತದೆ. ಪ್ರೇಕ್ಷಕರಿಗೆ ಮೋಸ ಮಾಡದಂತೆ ಈ ಚಿತ್ರ ಮಾಡಿದ್ದೇವೆ. ಇಡೀ ತಂಡ ಈ ಚಿತ್ರಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ' ಎನ್ನುವುದು ನಿರ್ದೇಶಕ ಮಂಜು ಸ್ವರಾಜ್‌ರ ಮಾತು. 'ಪ್ರೇಕ್ಷಕರಿಗೆ ಇಷ್ಟವಾಗುವಂಥ ಸಿನಿಮಾ ಇದು. ತುಂಬಾ ಚೆನ್ನಾಗಿದೆ ಕಥೆ' ಎಂದರು ಅಮೂಲ್ಯ.
ವಿ.ಹರಿಕೃಷ್ಣ, ಸಂಕಲಕಾರ ಬಸವರಾಜ್, ಛಾಯಾಗ್ರಹಕ ಸುರೇಶ್, ವಿ. ನಾಗೇಂದ್ರ ಪ್ರಸಾದ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com