ವಿಶಿಷ್ಟಾದ್ವೈತ

ವಿಶಿಷ್ಟಾದ್ವೈತ
Updated on: 

ಚಿತ್ರ ಮೂರುವರ್ಷ ತಡವಾಗಿದ್ದು ಹೌದಾದರೂ ಪತ್ರಿಕಾಗೋಷ್ಠಿ ಮಾತ್ರ ಸರಿಯಾದ ಸಮಯಕ್ಕೇ ಶುರುವಾಗಿದ್ದು ಅದ್ವೈತದ ವಿಶೇಷ. ಇದಷ್ಟೇ ಅಲ್ಲ ವಿಶೇಷ, ಅದ್ವೈತ ಇನ್ನೂ ಹಲವು ಕಾರಣಗಳಿಂದ ವಿಶೇಷ ಎನಿಸಿಕೊಳ್ಳುತ್ತಿದೆ.
ಅದ್ವೈತದ ನಂತರ ತಯಾರಾದರೂ ಮೊದಲು ಬಿಡುಗಡೆ ಭಾಗ್ಯ ಕಂಡ 'ಜಟ್ಟ' ಚಿತ್ರದ ಅನಿರೀಕ್ಷಿತ ಕಮರ್ಷಿಯಲ್ ಯಶಸ್ಸು, ಈಗ ಅದ್ವೈತದ ಬಗ್ಗೆ 'ಇದು ಗಿರಿರಾಜ್ ಚಿತ್ರ' ಎಂದು ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸುವಂತೆ ಮಾಡಿದೆ.
'ಎಕ್ಸ್‌ಕ್ಯೂಸ್‌ಮಿ' ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟ ಅಜಯ್‌ರಾವ್ ಮತ್ತು ನಿರ್ಮಾಪಕರಾಗಿ ಎಂಟ್ರಿ ಕೊಟ್ಟ ಎನ್.ಎಂ.ಸುರೇಶ್ ಕಾಂಬಿನೇಷನ್‌ನ ಎರಡನೇ ಚಿತ್ರ 'ಅದ್ವೈತ'. ಎಕ್ಸ್‌ಕ್ಯೂಸ್‌ಮಿ ರಿಲೀಸಾಗಿ ಕರಕ್ಟು ಹತ್ತು ವರ್ಷಕ್ಕೆ ಅದ್ವೈತ ರಿಲೀಸಾಗ್ತಾ ಇರೋದು ಕಾಕತಾಳೀಯವಾದರೂ ಅಂಕಿಅಂಶಗಳ ದಿಸೆಯಿಂದ ಇದೂ ಒಂದು ವಿಶೇಷವೇ. ಈ ವಿವರ ಕೊಟ್ಟಿದ್ದು ಸ್ವತಃ ನಿರ್ಮಾಪಕ ಸುರೇಶ್. ತಮ್ಮ ಬ್ಯಾನರ್ರಲ್ಲಿ ಹೊಸಬರಿಗೆ ಆದ್ಯತೆ ಅಂತಲೇ ಮೊದಲಿಂದಲೂ ಹೊಸಬರನ್ನು ಪ್ರೋತ್ಸಾಹಿಸುತ್ತ ಬಂದಿರುವ ಸುರೇಶ್ ಅದರಿಂದ ಗಳಿಸಿದ್ದಕ್ಕಿಂತ ಕಳಕೊಂಡಿದ್ದೇ ಹೆಚ್ಚಂತೆ. ಆದರೂ ಅವರಿಗೆ ಬೇಸರವಿಲ್ಲ. ತಾವು ಪರಿಚಯಿಸಿದ ಪ್ರತಿಭೆಗಳೆಲ್ಲವೂ ಯಶಸ್ಸು ಕಂಡಿರುವುದು ಅವರಿಗೆ ಸಂತಸ ತಂದಿದೆ. ಇನ್ಮುಂದೆ ಹೊಸಬರನ್ನು ಪ್ರೋತ್ಸಾಹಿಸುವುದರ ಜೊತೆಗೆ ಸ್ವಹಿತದ ದೃಷ್ಟಿಯಿಂದ ಅನುಭವಿ ಹಾಗೂ ಯಶಸ್ವೀ ನಿರ್ದೇಶಕರಿಂದಲೂ ಚಿತ್ರ ನಿರ್ಮಿಸೋ ಉದ್ದೇಶ ಇದೆಯಂತೆ. "ಆದರೆ ಅದ್ವೈತ ಮಾತ್ರ ಹೊಸಬರ ಚಿತ್ರದಂತೆ ಅನಿಸುವುದೇ ಇಲ್ಲ. ಇಂಥ ಹೊಸತನದ ಗಟ್ಟಿ ಕಥೆ ಇಟ್ಟುಕೊಂಡು ಸೋಲಲು ಸಾಧ್ಯವೇ ಇಲ್ಲ. ಚಿತ್ರ ಬಿಡುಗಡೆ ತುಂಬಾನೇ ತಡವಾಗಿರೋದು ಹೌದಾದರೂ, ನಿರ್ದೇಶಕರ ಬಗ್ಗೆ ಹಾಗೂ ಗೆಲುವಿನ ಬಗ್ಗೆ ಸಂಶಯವಿಲ್ಲ" ಎಂದು ಸುರೇಶ್ ಆತ್ಮವಿಶ್ವಾಸ ಮೆರೆದರು.
     ವಿದೇಶದಲ್ಲಿ ಶೂಟಿಂಗಲ್ಲಿರುವ ಅಜಯ್‌ರಾವ್ ಮತ್ತು ಹೈದರಾಬಾದಲ್ಲಿರುವ ಹರ್ಷಿಕಾ ಅವರು ಗೋಷ್ಠಿಗೆ ಗೈರುಹಾಜರಾಗಿರುವುದು ಎದ್ದು ತೋರುತ್ತಿತ್ತು. ಸಂಗೀತ ನಿರ್ದೇಶಕ ವೀರ್ ಸಮರ್ಥ್‌ಗೆ ಒಂದೇ ದಿನ ತಮ್ಮ ಎರಡು ಚಿತ್ರಗಳು (ದ್ಯಾವ್ರೇ ಮತ್ತು ಅದ್ವೈತ) ಬಿಡುಗಡೆ ಕಾಣುತ್ತಿರುವ ಸಂತಸವಾದರೆ, ಹರ್ಷಿಕಾಗೂ ಡಬಲ್ ಧಮಾಕಾ. ಅತ್ತ 'ಬಿ3' ಇತ್ತ 'ಅದ್ವೈತ' ರಿಲೀಸಾಗುತ್ತಿದೆ. ಗೊಂಬೆಗಳ ಲವ್ ಚಿತ್ರದಿಂದ ಭರವಸೆ ಮೂಡಿಸಿದ್ದ ಛಾಯಾಗ್ರಾಹಕ ಕಿರಣ್ ಹಂಪಾಪುರ ಮೊದಲು ಕೆಮೆರಾ ಹಿಡಿದದ್ದು ಅದ್ವೈತಕ್ಕೇ.
ಅಲ್ಲಿಗೆ 'ಅಂದಿನ ಹೊಸಬರ' ಹೊಸ ಚಿತ್ರ 'ಅದ್ವೈತ' ಇಂದು ಈ ಎಲ್ಲಾ ಕಾರಣಗಳಿಂದ 'ವಿಶಿಷ್ಟಾದ್ವೈತ'ವಾಗಿದೆ ಎಂದರೆ ಚಿತ್ರಕ್ಕೆ ಶಂಕರತತ್ವದ ಶೀರ್ಷಿಕೆ ಇಟ್ಟ ಗಿರಿರಾಜ್ ಖುಷಿಯಿಂದಲೇ ಇಲ್ಲಿ ತಮ್ಮ ಹೊಸ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಜಟ್ಟ, ನವಿಲಾದವರು, ಅದ್ವೈತ... ಯಾಕೆ ಇಂಥಾ ಟೈಟಲ್ಗಳು?
ಗೊತ್ತಿಲ್ಲ.. ನಂಗೆ ಬಹುಶಃ ಕಮರ್ಷಿಯಲ್ ಟೈಟಲ್ ಇಡೋಕೆ ಬರಲ್ಲ ಅನ್ಸತ್ತೆ. ಅಥವಾ ಬರ್ತಾ ಬರ್ತಾ ಇಂಥಾ ಟೈಟಲ್‌ಗಳೇ ನನ್ನ ಐಡೆಂಟಿಟಿ ಆಗಿ, ಮುಂದೊಮ್ಮೆ ಪಕ್ಕಾ ಕಮರ್ಷಿಯಲ್ ಟೈಟಲ್ ಇಟ್ರೆ ಇದು ಗಿರಿ ಸಿನಿಮಾ ಅಂತ ಜನಕ್ಕೆ ಗುರುತೇ ಸಿಗ್ದೇ ಹೋಗಬಹುದು. ಅಥವಾ ಅವರಿಗೆ ಇಷ್ಟ ಆಗದೆಯೂ ಹೋಗಬಹುದು.

ಜಟ್ಟ ಬರದೇ ಹೋಗಿದ್ರೆ  'ಇಷ್ಟು ಬೇಗ' ಅದ್ವೈತ ರಿಲೀಸಾಗ್ತಿತ್ತಾ?
ರಿಲೀಸಾಗೋಕೆ ನಿರ್ಮಾಪಕರು ಕಾರಣ. ಆದರೆ ಚಿತ್ರದ ಮೇಲೆ ಪ್ರೇಕ್ಷಕರಿಗೆ ಭರವಸೆ ಹುಟ್ಟೋಕೆ ಖಂಡಿತವಾಗಿಯೂ ಜಟ್ಟ ಕಾರಣ ಅಂತ ಹೇಳಬಲ್ಲೆ.

ಅದೇನು ಹುಡುಕ್ಕಂಡ್ ಹೋಗಿ ಮೇನಕಾ ಥೇಟರಲ್ಲಿ ರಿಲೀಸ್ ಮಾಡಿದೀರಾ?
ನಮಗಿದ್ದದ್ದು ಅದೊಂದೇ ಆಯ್ಕೆ. ಸಿನಿಮಾ ಚೆನ್ನಾಗಿದ್ರೆ ಯಾವ ಮೂಲೇಲಿ ಬಿಡುಗಡೆ ಆದ್ರೂ ಗೆಲ್ಲುತ್ತೆ. ಆಕಾಶ್, ಹುಚ್ಚ ಇವೆಲ್ಲ ಹಂಡ್ರೆಡ್ ಡೇಸ್ ಅಲ್ಲೇ ಓಡಿರೋದಲ್ವಾ? ಅದನ್ನ ನೆನಪಿಸ್ಕೊಂಡು ಆತ್ಮವಿಶ್ವಾಸ ಹುಟ್ಟಿಸ್ಕೊಳೋದು!

ಟೈಟಲ್ ಜೊತೆಗೆ 'ಕನ್ನಡದ ಪಲ್ಪ್ ಫಿಕ್ಷನ್ ರೈಟರ್ಸ್‌ಗೆ ಅರ್ಪಣೆ' ಅಂತೇನೋ ಟ್ಯಾಗ್ ಲೈನ್ ಇದ್ಯಲ್ಲ. ಸಿಂಪಲ್ಲಾಗಿ ವಿವರಿಸ್ತೀರಾ?
ಹೌದು. ನಾನು ಓದಿದ ಕ್ರೈಮ್, ಸೆಕ್ಸ್, ಫಿಕ್ಷನ್, ಹೀಗೆ ಎಲ್ಲ ಪುಸ್ತಕಗಳು ನನಗೆ ಸಿನಿಮಾ ಮೇಕಿಂಗಲ್ಲಿ, ಬರವಣಿಗೆಯಲ್ಲಿ ಪರಿಣಾಮ ಬೀರಿದೆ. ಅವೆಲ್ಲವೂ ಮಹಾನ್ ಬರಹಗಳಲ್ಲದೇ ಇರಬಹುದು. ಆದರೆ ತುಂಬ ರುಚಿಕಟ್ಟು. ನನ್ನಲ್ಲಿ ಮತ್ತು ಓದುಗರಲ್ಲಿ ರೋಮಾಂಚನ ಮೂಡಿಸಿದ ಆ ತರಹದ ಬರಹಗಳನ್ನು ನೀಡಿದ ಎಲ್ಲ ಹಳೆಯ ಹಾಗೂ ಹೊಸ ಬರಹಗಾರರಿಗೆ ಈ ಚಿತ್ರ ಅರ್ಪಿಸುತ್ತೇನೆ. ಈ ಚಿತ್ರದ ನಾಯಕನದೂ ಕೂಡ ಒಬ್ಬ ಬರಹಗಾರನ ಪಾತ್ರವೇ!

ಹರ್ಷಿಕಾ ಹೀರೋಯಿನ್ ಅಂತ ಗೊತ್ತಾಯ್ತು. ಪಾವನಾ ಅವರ ಬದಲು ಹರ್ಷಿಕಾ ಆಯ್ಕೆಯಾಗಿದ್ದಾ?
ಇಲ್ಲ ಇಲ್ಲ. ಪಾವನಾ ಈ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್. ಆಕೆಯದ್ದೂ ತುಂಬ ಮುಖ್ಯ ಪಾತ್ರವೇ. ಅವರೂ ಈ ಸಿನಿಮಾದಿಂದಲೇ ಪರಿಚಯವಾಗಬೇಕಾದದ್ದು. ಆದರೆ ಗೊಂಬೆಗಳ ಲವ್ ಮತ್ತು ಜಟ್ಟ ಮೊದಲು ಬರೋ ಹಾಗಾಯ್ತು ಅಷ್ಟೇ.

ಜಟ್ಟ ನಂತರದ ನಿಮ್ ಲೈಫ್ ಬಗ್ಗೆ ಹೇಳಿ.
ಬದಲಾವಣೆ ಏನಿಲ್ಲ. ಆತ್ಮವಿಶ್ವಾಸ ಹೆಚ್ಚಿದೆ. ಜಟ್ಟ ಸಪ್ನಾದಲ್ಲಿ ರಿಲೀಸಾಗಿದ್ದಕ್ಕೆ ಹಾಗೂ ಭಾಷಾ ಅವರೇ  ವಿತರಕರಾಗಿದ್ದಕ್ಕೆ ನಾವು ತುಂಬ ಬೇಗ ಲಾಭ ಗಳಿಸಿದ್ವಿ. ಬೇರೆ ಟಾಕೀಸಾಗಿದ್ರೆ ಬಾಡಿಗೆಗೇ ಸರಿ ಹೋಗ್ತಿತ್ತೋ  ಏನೋ. ಟೀವಿ ರೈಟ್ಸ್ ಕೂಡ ಉದಯ ಟಿವಿ ಒಳ್ಳೇ ಬೆಲೆಗೆ ತಗೊಂಡಿದೆ.

- ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com