

ನಿರ್ದೇಶಕ ಕೆ.ಗಣೇಶ್ ಅವರ ಸಿನಿಮಾ ಇದು ಎನ್ನುವುದಕ್ಕಿಂತ ಇಳೆಯರಾಜ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಎನ್ನುವುದೇ ಸೂಕ್ತ. ಯಾಕೆಂದರೆ 'ಯಾರೇ ನೀ ಮೋಹಿನಿ' ಎನ್ನುವ ಸಿನಿಮಾ ನಿರ್ದೇಶಿಸಿದ ಗಣೇಶ್ ಯಾರಿಗೂ ಗೊತ್ತಿಲ್ಲ. ಆದರೆ, ಇಳೆಯರಾಜ ಗೊತ್ತಿಲ್ಲ ಎನ್ನುವವರು ಕಡಿಮೆ. ಹೀಗಾಗಿ ಮೊನ್ನೆ ಸೆಟ್ಟೇರಿದ ಗಣೇಶ್ರ 'ಯುದ್ಧ ಭೂಮಿಯಲ್ಲೊಂದು ಹೂವು' ಚಿತ್ರವನ್ನು ಇಳೆಯ ರಾಜ ಅವರ ಹೆಸರಿನಿಂದಲೇ ಗುರುತಿಸುವುದು ಒಳಿತು. ಅದೂ ಅಲ್ಲದೆ ಇಡೀ ಚಿತ್ರತಂಡದಲ್ಲಿ ಎಲ್ಲರಿಗೂ ಗೊತ್ತಿರುವ ಸ್ಟಾರ್ ಎಂದರೆ ಸಂಗೀತ ಮಾಂತ್ರಿಕ ಮಾತ್ರ.
ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಹಾಡುಗಳ ರೆಕಾರ್ಡಿಂಗ್ಗೆ ಸ್ವತಃ ಇಳೆಯರಾಜ ಅವರೇ ಬಂದಿದ್ದರು. ಹೀಗಾಗಿ ಚಾಮುಂಡೇಶ್ವರಿ ಸ್ಟುಡಿಯೋ ಅಂದು ಮಾಧ್ಯಮಗಳ ಅಡ್ಡೆಯಾಗಿತ್ತು.
ಗಣೇಶ್ ನಿರ್ದೇಶನದ ಈ ಚಿತ್ರಕ್ಕೆ ಗುರುದತ್ತ ಚಲಾನಿ ನಿರ್ಮಾಪಕರು. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ, ಕೋಲಾರ, ಮುಳಬಾಗಿಲು, ಕೆಜಿಎಫ್ನಲ್ಲಿ ಚಿತ್ರೀಕರಣ ನಡೆಯಲಿದೆ. 'ನಾನು ಸಾಮಾನ್ಯವಾಗಿ ಕಥೆ ಕೇಳುವುದಕ್ಕೆ ಹೋಗಲ್ಲ. ಕಥೆ ಕೇಳುವುದೇ ದೊಡ್ಡ ಕಿರಿಕಿರಿ. ನಿರ್ದೇಶಕ ಗಣೇಶ್ ತುಂಬಾ ಒತ್ತಾಯ ಮಾಡಿದರು. ಹೀಗಾಗಿ ಕಥೆ ಕೇಳಿದೆ. ತುಂಬಾ ಚೆನ್ನಾಗಿತ್ತು. ಕಥೆಯಲ್ಲಿ ಒಂದು ಮಾನವೀಯತೆ ಇದೆ. ನನ್ನಂಥವನು ಸಂಗೀತ ಮಾಡಬೇಕಾದ ಸಿನಿಮಾ ಇದು ಅನಿಸಿತು. ಹೀಗಾಗಿ ಬೇರೆ ಏನೂ ಹೇಳದೆ ಸಂಗೀತ ಮಾಡಲು ಒಪ್ಪಿಕೊಂಡೆ. ಚಿತ್ರದಲ್ಲಿ ಐದು ಹಾಡುಗಳಿವೆ. ಒಂದು ಹಾಡನ್ನು ನಾನೇ ಹಾಡಿದ್ದೇನೆ' ಎಂದರು ಇಳೆಯರಾಜ.
ಗಣೇಶ್ ಈ ಹಿಂದೆ 'ಯಾರೇ ನೀ ಮೋಹಿನಿ' ಎನ್ನುವ ಸಿನಿಮಾ ಮಾಡಿದ್ದರು. ಈಗ 'ಯದ್ಧ ಭೂಮಿಯಲ್ಲೊಂದು ಹೂವು' ಚಿತ್ರಕ್ಕೆ ಇಳೆಯರಾಜ ಅವರನ್ನು ಕರೆತರುವ ಮೂಲಕ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಸದ್ದು ಮಾಡಲು ಹೊರಟಿದ್ದಾರೆ.
'ಇದೊಂದು ನೈಜ ಕಥೆ. ತುಂಬಾ ಚೆನ್ನಾಗಿದೆ. ಸೈನಿಕರು ಟಿವಿ ಪತ್ರಕರ್ತೆಯೊಬ್ಬಳನ್ನು ಅಮಾನುಷವಾಗಿ ಅತ್ಯಾಚಾರ ಮಾಡಿದ ಘಟನೆ ಸುತ್ತ ಕಥೆ ಮಾಡಿದ್ದೇನೆ. ಈ ನೈಜ ಘಟನೆಯ ವಿಡಿಯೋ ಕ್ಲಿಪ್ಗಳು ಟಿವಿಗಳಲ್ಲೂ ಪ್ರಸಾರವಾಗಿವೆ. ಈ ಅಘತಕಾರಿ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಚಿತ್ರಕ್ಕೆ ಇಳೆಯರಾಜ ಅವರು ಸಂಗೀತ ನೀಡಲು ಒಪ್ಪಿಕೊಂಡಿದ್ದು ನನ್ನ ಪುಣ್ಯ. ಎಲ್ಲ ಹೊಸ ಕಲಾವಿದರೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ' ಎಂಬುದು ನಿರ್ದೇಶಕ ಗಣೇಶ್ರ ವಿವರಣೆ.
ಪ್ರಿಯಾ ಎನ್ನುವ ಹುಡುಗಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. 1982ರಲ್ಲಿ ಶ್ರೀಲಂಕಾದಲ್ಲಿ ಪತ್ರಕರ್ತೆ ಮೇಲೆ ಸೈನಿಕರು ಅತ್ಯಾಚಾರ ಮಾಡಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ನಂತರ ಇತ್ತೀಚೆಗೆ ಅತ್ಯಾಚಾರ ಮಾಡಿರುವ ದೃಶ್ಯಗಳು ಖಾಸಗಿ ವಾಹಿನಿಗಳಲ್ಲಿ ಪ್ರಸಾರಗೊಂಡಿವೆ. ಇದೇ ಘಟನೆ ಈಗ ಚಿತ್ರವಾಗುತ್ತಿದೆ.
ನಾನೇಕೆ ಸಂಗೀತ ಮಾಡಬೇಕು?
ಈ ಪ್ರಶ್ನೆಯನ್ನು ಹಾಕಿದ್ದು ಬೇರ್ಯೂರು ಅಲ್ಲ ಸಂಗೀತ ಮಾಂತ್ರಿಕ
ಇಳೆಯರಾಜ. 'ನೀವು ಎಲ್ಲ ಚಿತ್ರಗಳಿಗೂ ಯಾಕೆ ಸಂಗೀತ ಮಾಡಲ್ಲ?' ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, 'ನಾನೇಕೆ ಬಂದ ಎಲ್ಲ ಚಿತ್ರಗಳಿಗೂ ಸಂಗೀತ ಮಾಡಬೇಕು?' ಎಂದು ಮರು ಪ್ರಶ್ನೆ ಹಾಕಿದರು. ಇಲ್ಲಿವರೆಗೂ 920ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಸಾಕಷ್ಟು ಹೆಸರು ಬಂದಿದೆ. ಸಿನಿ ಪ್ರೇಮಿಗಳು ನನ್ನ ಹಾಡುಗಳನ್ನು ಮೆಚ್ಚಿಕೊಂಡಿದ್ದಾರೆ. ಒಂದು ಹಂತ ದಾಟಿದ್ದೇನೆ. ಈಗಲೂ ನಾನು ಕಾಸಿಗಾಗಿ ಬಂದ ಚಿತ್ರಗಳನ್ನು ಒಪ್ಪಿಕೊಳ್ಳಬೇಕೆ? ಕಾಸಿಗಾಗಿ ಸಂಗೀತ ಮಾಡುವುದಾದರೇ ಇಳೆಯರಾಜನೇ ಯಾಕೆ ಬೇಕು? ಮೊದಲು ನನಗೆ ಕಥೆ ಇಷ್ಟವಾಗಬೇಕು. ಯಾತಕ್ಕೆ ನನ್ನ ಸಂಗೀತ ಚಿತ್ರಕ್ಕೆ ಬೇಕು ಎಂಬುದು ನನಗೆ ಅರ್ಥ ಮಾಡಿಸಬೇಕು. ಅದು ಬಿಟ್ಟು ಕಥೆ, ಚಿತ್ರ ಹೇಗಿದ್ದರೂ ಪರ್ವಾಗಿಲ್ಲ ಸಂಗೀತ ಮಾಡಿ ಅಂದರೆ ನಾನು ಒಪ್ಪಲ್ಲ. ನಾನು ಬಹಳಷ್ಟು ನಿರ್ದೇಶಕರ ಬಳಿ ಕಥೆ ಕೇಳಕ್ಕೆ ಹೋಗಲ್ಲ.
ಆದರೆ, ಹೊಸ ನಿರ್ದೇಶಕರು ಬಂದರೆ ಖಂಡಿತ ಪ್ರೋತ್ಸಾಹಿಸುತ್ತೇನೆ. ಅವರಲ್ಲಿ ಹೊಸ ಯೋಚನೆಗಳು ಇರುತ್ತವೆ. ಬಹಳಷ್ಟು ನಿರ್ದೇಶಕರ ಮೊದಲ ಚಿತ್ರದಲ್ಲಿ ನನ್ನ ಹೆಸರು ಇರುತ್ತದೆ. ಹೀಗಾಗಿ ಇಂಥ ಚಿತ್ರಕ್ಕೇ ಸಂಗೀತ ಮಾಡಬೇಕು ಎನ್ನುವುದು ನನ್ನ ನಿರ್ಧಾರ. ಸಂಗೀತ ಲೋಕದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಾನು ಏನೂ ಹೇಳಲಾರೆ. ಅದಕ್ಕೆ ಕಾಲವೇ ಉತ್ತರಿಸುತ್ತದೆ. ಯುವ ನಿರ್ದೇಶಕರಿಗೆ ನಾನು ಕಿವಿ ಮಾತು ಹೇಳಕ್ಕಾಗಲ್ಲ. ಯಾಕೆಂದರೆ ಅವರು ಈಗಾಗಲೇ ಚಿತ್ರಕ್ಕೆ ಬಂದು ಬಿಟ್ಟಿದ್ದಾರೆ. ಅಂಥವರಿಗೆ ಕಿವಿ ಮಾತು ಹೇಳಲು ನಾನು ಯಾರು? ಲೈವ್ ರೆಕಾರ್ಡಿಂಗ್ ಅಥವಾ ರೆಕಾರ್ಡಿಂಗ್ ಹಾಡಾ ಎನ್ನುವುದು ಮುಖ್ಯವಲ್ಲ. ಹಾಡು ಇಷ್ಟವಾಯಿತೆ ಎಂಬುದು ಮುಖ್ಯ.
ಹೀಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತ ಹೋದ ಇಳೆಯರಾಜರಂಥ ಸ್ಟಾರ್ ಸಂಗೀತ ನಿರ್ದೇಶಕರು ತುಂಬಾ ಬ್ಯುಸಿಯಾಗಿರುತ್ತಾರೆ ಎಂಬುದು ಎಲ್ಲರ ನಿರೀಕ್ಷೆ. ಆದರೆ, ನಮ್ಮ ನಿರೀಕ್ಷೆಯಂತೆ ಅವರು ಬ್ಯುಸಿಯೇನೂ ಅಲ್ಲ. ಹಾಗಾದರೆ ಅವರಿಗೆ ಅವಕಾಶಗಳೇ ಇಲ್ಲವೇ? ಎಂದು ಕೇಳುವ ಹಾಗಿಲ್ಲ. ಯಾಕೆಂದರೆ ಇಳೆಯರಾಜ ಸಿಕ್ಕಸಿಕ್ಕ ಸಿನಿಮಾಗಳಿಗೆ ದುಡ್ಡಿಗಾಗಿ ಸಂಗೀತ ಮಾಡುವ ಮನಸ್ಥಿತಿಯನ್ನು ದಾಟಿದ್ದಾರೆ.
- ಆರ್. ಕೇಶವಮೂರ್ತಿ