ಸಾಂಗ್ಲಿಯಾನಾ ಆಗಲು ನಾನ್ ರೆಡಿ

ಸಾಂಗ್ಲಿಯಾನಾ ಆಗಲು ನಾನ್ ರೆಡಿ
Updated on: 

ಕೋಬ್ರಾ ಅನ್ನೋ ಟೈಟಲ್ ಕೇಳಿದ್ರೆ ಅದು ದುನಿಯಾ ವಿಜಿಯದ್ದೇ ಸಿನಿಮಾ ಅಂತ ಕಣ್ಮುಚ್ಚಿ ಹೇಳಬಹುದು. ಅಷ್ಟೊಂದು ಪರಿಚಿತ ಬಿರುದು ಬ್ಲಾಕ್ ಕೋಬ್ರಾ! 'ಒಲಿದರೆ ಕೊಬ್ರಿ ಮಿಠಾಯಿ ಮುನಿದರೆ ಕೋಬ್ರಾ' ಎಂಬಂತಿರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವಿಜಿ ಶಾರ್ಟ್ ಹೇರ್‌ಕಟಿಂಗ್ ಮಾಡಿಸಿ ಹೊಸ ಲುಕ್ಕಿನಲ್ಲಿ ಮಿಂಚುತ್ತಿದ್ದರು.
ಅದು ಹೆಚ್.ವಾಸು ಪುಂಗಿಯೂದುತ್ತಿರುವ ಕೋಬ್ರಾಗೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಭರ್ಜರಿ ಮುಹೂರ್ತ ಸಮಾರಂಭ.  ಅಲ್ಲಿ ಕೋಬ್ರಾ ನೋಡಲು ಸರ್ವಧರ್ಮದವರೂ ಜಮಾಯಿಸಿದ್ದರು. ನಿಮಗೆ ನಿರ್ಮಾಪಕ ಮಾಹಿನ್ ನೆನಪಿರಬಹುದು. ಶಿವಣ್ಣ ಅಭಿನಯದ 'ನಂದಾ' ಚಿತ್ರವನ್ನು ನಿರ್ಮಿಸಿ ಅದರಲ್ಲಿ ಖಳನಟನಾಗಿ ಅಭಿನಯಿಸಿದ್ದ ಮಾಹಿನ್ ಸುಮಾರು ನಾಲ್ಕು ವರ್ಷಗಳ ನಂತರ ಮತ್ತೆ  ಸಿನಿಮಾದಲ್ಲಿ ಸಕ್ರಿಯರಾಗಲು ವಾಪಸಾಗಿದ್ದಾರೆ.

ಅಂದಿನ ಮುಹೂರ್ತದಲ್ಲಿ ಪ್ರಮುಖ ಆಕರ್ಷಣೆಯಾಗಿ ಇದ್ದ ಹೆಚ್‌ಟಿ ಸಾಂಗ್ಲಿಯಾನಾ, ಕನ್ನಡ ಚಿತ್ರರಂಗ ಬಯಸಿದರೆ, ತಮ್ಮ ವೃತ್ತಿ ಜೀವನದ ಘಟನೆಗಳನ್ನು ಸಿನಿಮಾ ಮಾಡಲು ಕೊಡಲು ರೆಡಿಯಂತೆ. ಐದಾರು ಚಿತ್ರಗಳಿಗೆ ಆಗುವಷ್ಟು ಇಂಟರೆಸ್ಟಿಂಗ್ ಘಟನೆಗಳು ತಮ್ಮ ಬದುಕಿನಲ್ಲಿ ಆಗಿವೆ. ಹಾಡುಗಳು, ಅತಿರಂಜಿತ ಫೈಟುಗಳು ಇಲ್ಲದೆಯೇ ಇಂಗ್ಲೀಷ್ ಸಿನಿಮಾ ಮಾದರಿಯಲ್ಲಿ ಚಿತ್ರ ಮಾಡಿದರೆ ಜನರಿಗೂ ಇಷ್ಟವಾಗುತ್ತದೆ ಎಂದು ಸಾಂಗ್ಲಿಯಾನಾ ಅಭಿಪ್ರಾಯ ಪಟ್ಟರು.
ವಿಜಿ, ಸಾಂಗ್ಲಿಯಾನಾ ಬಗ್ಗೆ ತಮ್ಮ ಅಭಿಮಾನದ ಮಾತುಗಳನ್ನಾಡಿ, ಸಾಂಗ್ಲಿಯಾನಾ ಅವರ ಬದುಕನ್ನು ಆಧರಿಸಿದ ಕತೆಗಳು ಸಿನಿಮಾ ಆಗುವುದಾದರೆ ಅದರಲ್ಲಿ ನಾನೇ ಅವರ ಪಾತ್ರ ಮಾಡುವ ಕನಸಿದೆ ಅಂದರು.

ದರ್ಶನ್ ಅಭಿನಯದ ವಿರಾಟ್ ಚಿತ್ರವನ್ನು ಸದ್ಯಕ್ಕೆ ಬದಿಗಿಟ್ಟು ಕೋಬ್ರಾ ನಿರ್ದೇಶನಕ್ಕೆ ಇಳಿದಿರುವ ವಾಸು,  ಮಾಹಿನ್ ಬರೆದ ಕತೆಗೆ ಆಕ್ಷನ್ ಕಟ್ ಹೇಳಲಿದ್ದಾರೆ. ರೌಡಿಸಂ ಕತೆಯಿದ್ದರೂ ಶಿಕ್ಷೆಗಿಂತ ಶಿಕ್ಷಣ ಮುಖ್ಯ ಎಂಬ ಸಂದೇಶ ಸಾರುವ ಚಿತ್ರ ಇದಾಗಿದ್ದು ಚಿತ್ರದಲ್ಲಿ ವಿಜಿಯಷ್ಟೇ ಮುಖ್ಯ ಪಾತ್ರ  ಮಾಹಿನ್‌ಗೂ ಇದೆಯಂತೆ. ಶೋಭರಾಜ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಲಡಾಕ್ ಹಾಗೂ ಗೋವಾದಲ್ಲ್ಲಿ ಶೂಟಿಂಗ್ ನಡೆಯಲಿದೆಯಂತೆ. ಹೀರೋಯಿನ್ ಹುಡುಕಾಟ ಇನ್ನೇನು ಅಂತಿಮ ರೂಪ ಪಡೆಯುತ್ತಿದ್ದು ಸದ್ಯದಲ್ಲೇ ಲೇಡಿ ಕೋಬ್ರಾ ಯಾರೆಂದು ತಿಳಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com