ಬಾಲಿವುಡ್ ಬಾಬು

ಬಾಲಿವುಡ್ ಬಾಬು
Updated on: 

ಕನ್ನಡ ಚಿತ್ರಕ್ಕೆ ಸಲ್ಮಾನ್ ಖಾನ್ ಬಂದು ಡ್ಯಾನ್ಸ್ ಮಾಡಿ ಹೋಗಿದ್ದಾರೆ!
ಈ ಒಂದು ಸಾಲಿನ ಸುದ್ದಿ ನೋಡಿ ಅಚ್ಚರಿಗೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ಬಂದಿದ್ದು ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಅಲ್ಲ. ನೃತ್ಯ ನಿರ್ದೇಶಕ ಸಲ್ಮಾನ್ ಖಾನ್. ಇವರ ಪೂರ್ತಿ ಹೆಸರು ಸಲ್ಮಾನ್ ಯೂಸುಫ್ ಖಾನ್. ಪ್ರಸಿದ್ಧ ಕೊರಿಯೊಗ್ರಾಫರ್. ಈ ಬಾಲಿವುಡ್ ಬಾಬುಗೆ ಹಿಂದಿ ಚಿತ್ರರಂಗದಲ್ಲಿ ಬಹು ಬೇಡಿಕೆ ಇದೆ. ಆದರೂ ಯೋಗಿ ಅಭಿನಯದ 'ಡಾರ್ಲಿಂಗ್‌' ಚಿತ್ರದಲ್ಲಿ ಒಂದು ಹಾಡಿಗೆ ನೃತ್ಯ ನಿರ್ದೇಶನ ಮಾಡಿ ಹೋಗಿದ್ದಾರೆ. 'ಇದು ನಮ್ಮ ಅದೃಷ್ಟ' ಎನ್ನುತ್ತಾರೆ ಸಂತು.

ಅಂದಹಾಗೆ 'ಡಾರ್ಲಿಂಗ್‌' ಚಿತ್ರಕ್ಕೆ ಚಿತ್ರೀಕರಣ ಮುಕ್ತಾಯಗೊಂಡಿದೆ. ಹಳೇ ಸೆಂಟ್ರಲ್ ಜೈಲಿನ ಫ್ರೀಡಮ್ ಪಾರ್ಕ್‌ನಲ್ಲಿ ಮೊನ್ನೆ ಕುಂಬಳಕಾಯಿ ಹೊಡೆದಿದ್ದಾರೆ. ಅಲ್ಲಿಗೆ 'ಎಸ್ ಟೀಮ್‌' ಸಿನಿಮಾ ಫಿನಿಶ್. 'ಅಂದುಕೊಂಡಂತೆ 42 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿದ್ದೇವೆ. ಇಡೀ ತಂಡದ ನೆರವಿನಿಂದ ಚಿತ್ರವನ್ನು ಇಷ್ಟು ಬೇಗ ಮಾಡಲಿಕ್ಕೆ ಸಾಧ್ಯವಾಯಿತು. ನಟ ಯೋಗೀಶ್ ಅವರು ಎಲ್ಲೂ ಡ್ಯೂಪ್ ಬಳಸದೆ ಫೈಟ್ ಮಾಡಿದ್ದಾರೆ. ತುಂಬಾ ಕಷ್ಟಕರವಾದ ಸಲ್ಮಾನ್‌ರ ಸ್ಟೆಪ್‌ಗಳಿಗೆ ಹೆಜ್ಜೆ ಹಾಕಿರುವುದು ಚಿತ್ರದ ಹೈಲೈಟ್. 'ವಿಶೇಷ ಅಂದರೆ ಚಿತ್ರಕ್ಕಾಗಿ ಒಂದು ಡಬ್ಬಾ ಹಾಡು ಮಾಡಿದ್ದೇವೆ. ಅಂದರೆ ತುಂಬಾ ಕಳಪೆ ಹಾಡು ಎಂದರ್ಥ. ಕನ್ನಡದಲ್ಲಿ ಇದೇ ಮೊದಲ ಪ್ರಯತ್ನ. ಕಲಾವಿದರು ಮತ್ತು ತಂತ್ರಜ್ಞರು ಎಲ್ಲರ ಶ್ರಮದಿಂದ ಇಡೀ ಚಿತ್ರ ತುಂಬಾ ಚೆನ್ನಾಗಿ ಮೂಡಿ  ಬಂದಿದೆ' ಎಂದರು ನಿರ್ದೇಶಕ ಸಂತು.

ಬಾಲಿವುಡ್‌ನಿಂದ ಬಂದ ಸಲ್ಮಾನ್ ಯೂಸುಫ್ ಖಾನ್ ಅವರ ಡ್ಯಾನ್ಸ್ ತುಂಬಾ ಚೆನ್ನಾಗಿತ್ತು. ಖಾನ್ ಒಳ್ಳೆಯ ಡ್ಯಾನ್ಸರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರಿಗೆ ಕೊಡುವ ಸೌಲಭ್ಯಗಳು ನಮ್ಮವರಿಗೆ ಕೊಟ್ಟರೆ ಇನ್ನು ಚೆನ್ನಾಗಿ ಡ್ಯಾನ್ಸ್ ಮಾಡಿಸುತ್ತಾರೆ. ಪ್ರತಿ ಚಿತ್ರದಲ್ಲೂ ಏನಾದರೂ ಹೊಸತನ ಇರಬೇಕು ಅಂತ ಬಯಸುತ್ತೇವೆ. ಇಲ್ಲೂ ಕೂಡ ಹೊಸತನಗಳನ್ನು ತೋರಿಸುವ ಪ್ರಯತ್ನ ಪಟ್ಟಿದ್ದೇವೆ. ಚಿತ್ರೀಕರಣದಲ್ಲಿ ಕಾಲಿಗೆ ಪೆಟ್ಟಾದರೂ ಹಿಂದೆ ಸರಿಯದೆ ಚಿತ್ರೀಕರಣ ಮುಗಿಸಿದ್ದೇವೆ. ನನ್ನ ಒಬ್ಬನ ಚಿತ್ರವಲ್ಲ ಇದು. ತಂಡದ ಸಿನಿಮಾ ಎಂಬುದು ನಟ ಯೋಗೀಶ್‌ರ ಮಾತು.

ಮಲೆಯಾಳಿ ಬೆಡಗಿ ಮುಕ್ತಾ ಚಿತ್ರದ ನಾಯಕಿ. ಇವರು ಪೂರ್ಣಿಮಾ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ನಂತರ ಕನ್ನಡದಲ್ಲಿ ಒಳ್ಳೆಯ ಪಾತ್ರಗಳು ಸಿಗಬಹುದು ಎನ್ನುವ ನಿರೀಕ್ಷೆ ಅವರದ್ದು. ಈ ಚಿತ್ರದ ಮೂಲಕ ಸಂಭಾಷಣೆಕಾರ ಮಂಜು ಮಾಂಡವ್ಯ ಒಂದು ರೀತಿಯಲ್ಲಿ ಆನ್‌ಲೈನ್ ಡೈಲಾಗ್ ರೈಟರ್ ಆಗಿದ್ದಾರೆ. ಚಿತ್ರತಂಡ ಕೇರಳದಲ್ಲಿ ಬೀಡು ಬಿಟ್ಟಿದ್ದಾಗ ವಾಟ್ಸ್ ಅಪ್‌ನಲ್ಲಿ ಸಂಭಾಷಣೆ ಬರೆದು ಕಳಿಸುತ್ತಿದ್ದರಂತೆ. ಇನ್ನು ನಟ ಆದಿಲೋಕೇಶ್ ನೆಗೆಟಿವ್ ಅಲ್ಲದ, ಪಾಸಿಟಿವ್ ಕೂಡ ಅಲ್ಲದ ಪಾತ್ರ ಮಾಡಿದ್ದಾರಂತೆ. ಒಂಚೂರು ಕಾಮಿಕ್ ಆಗಿರುತ್ತದೆ ಅವರ ಪಾತ್ರ. ವಿಶೇಷ ಎಂದರೆ ಆದಿಲೋಕೇಶ್‌ರಿಗೆ ತಾಯಿಯಾಗಿ ಮಾರಿಮುತ್ತು ಕಾಣಿಸಿಕೊಂಡಿದ್ದಾರೆ.

'ನನ್ನ ಪಾತ್ರ ಗಂಭೀರವಾಗಿರುತ್ತದೆ. ಆದರೆ ನೋಡುವ ಪ್ರೇಕ್ಷಕರಿಗೆ ಅದು ಕಾಮಿಡಿಯಾಗಿ ಕಾಣಿಸುತ್ತದೆ' ಎಂದರು ಆದಿಲೋಕೇಶ್. ಮಾಸ್ ಮಾದ, ನೃತ್ಯ ನಿರ್ದೇಶಕ ಕಳೈ, ಮಂಜು ಮಾಂಡವ್ಯ ಮತ್ತಿತರರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

- ಕೇಶವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com