

ಉದ್ಯಮದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಭಜರಂಗಿ' ಚಿತ್ರ ಈ ವಾರ (ಡಿಸೆಂಬರ್ 12) ತೆರೆ ಕಂಡಿದೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಾಯಕನಾಗಿ, ಐಂದ್ರಿತಾ ರೇ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ ಎ.ಹರ್ಷ. ಇದು ಅವರ ಕನಸಿನ ಸಿನಿಮಾ. ಮೇಕಿಂಗ್ ಹಾಗೂ ಹಾಡುಗಳಲ್ಲಿ ಈಗಾಗಲೇ ಸದ್ದು ಮಾಡಿರುವ ಈ ಚಿತ್ರಕ್ಕೆ ರು. 9 ಕೋಟಿ ವೆಚ್ಚವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಾಂತ 180 ಚಿತ್ರಮಂದಿರಗಳಲ್ಲಿ 'ಭಜರಂಗಿ' ತೆರೆ ಕಾಣಲಿದೆ.
ವಿಶೇಷ ಅಂದರೆ, ಚಿತ್ರ ತೆರೆ ಕಂಡದಿನವಾದ ನಿನ್ನೆ (ಗುರುವಾರ) ಬೆಳಗ್ಗೆ 7 ಗಂಟೆಗೆ ವಿಶೇಷ ಪ್ರದರ್ಶನವನ್ನು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಟಿಕೆಟ್ಗಳಿಗೆ ಸಾಕಷ್ಟು ಬೇಡಿಕೆ ಇದ್ದ ಕಾರಣ, ಬ್ಲಾಕ್ ಮಾರುಕಟ್ಟೆ ಹಾವಳಿಯನ್ನು ತಡೆಗಟ್ಟಲು ಈ ವ್ಯವಸ್ಥೆ ಮಾಡಲಾಗಿತ್ತು. ಇನ್ನೊಂದು ವಿಶೇಷ ಅಂದರೆ ಹುಬ್ಬಳಿ ಪ್ರಾಂತ್ಯದಲ್ಲಿ ನಟ ಶಿವರಾಜ್ಕುಮಾರ್ ಅವರ ಅಭಿಮಾನಿಗಳೇ ಚಿತ್ರದ ವಿತರಣೆ ಹಕ್ಕುಗಳನ್ನು ತೆಗೆದುಕೊಂಡಿದ್ದಾರೆ. ಮೈಸೂರು ಭಾಗದಲ್ಲಿ ಹೊಸಬರಿಗೆ ವಿತರಣೆ ಹಕ್ಕುಗಳನ್ನು ನೀಡಲಾಗಿದೆ. ಇನ್ನು ಕೆಲವು ಕಡೆ ನಿರ್ಮಾಪಕರಾದ ಜಾಕ್ ಮಂಜು, ನಟರಾಜ್ ಅವರೇ ಸ್ವತಃ ವಿತರಣೆ ಮಾಡುತ್ತಿದ್ದಾರೆ. ಮುಂಬೈ, ಹೈದರಾಬಾದ್, ಚೆನ್ನೈನಲ್ಲಿ ಪಿವಿಆರ್ ಸಿನಿಮಾಸ್ ವತಿಯಿಂದ ವಿತರಣೆ ನಡೆಯಲಿದೆ. ತೆಲುಗು, ತಮಿಳು ಭಾಷೆಗೆ ಡಬ್ಬಿಂಗ್ ಬೇಡಿಕೆ ಬಂದಿದೆ.
ನಟ ಶಿವರಾಜ್ಕುಮಾರ್ ಸಿಕ್ಸ್ ಪ್ಯಾಕ್, ಹರ್ಷ ಅವರ ಮೇಕಿಂಗ್ ಸ್ಟೈಲ್, ಅರ್ಜುನ್ ಜನ್ಯರ ಸಂಗೀತ, ಪ್ರಖ್ಯಾತ ಭರತನಾಟ್ಯ ಪಟು ರುಕ್ಷ್ಮಿಣಿ ಅವರ ಡ್ಯಾನ್ಸ್, ಡ್ಯಾನಿ ಅವರ ಸಾಹಸ ಚಿತ್ರದ ಪ್ರಮುಖ ಹೈಲೈಟ್ಗಳು. 'ನಮ್ಮ ಬ್ಯಾನರ್ನ ಬಹುತೇಕ ಚಿತ್ರಗಳು ಗುರುವಾರವೇ ಬಿಡುಗಡೆಯಾಗಿವೆ. ಅಲ್ಲದೆ 12-12-1986ರಂದು 'ರಥಸಪ್ತಮಿ' ಬಿಡುಗಡೆಯಾಯಿತು. ಈಗ 12-12-2013ರಂಜು 'ಭಜರಂಗಿ' ತೆರೆಗೆ ಬರಲಿ ಎನ್ನುವ ಆಸೆಯಿಂದ ಶುಕ್ರವಾರಕ್ಕೆ ಬದಲಾಗಿ ಗುರುವಾರವೇ ಈ ಚಿತ್ರ ಬಿಡುಗಡೆಯಾಗುತ್ತಿದೆ' ಎಂದರು ಶಿವರಾಜ್ಕುಮಾರ್.
ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ ಮಾಡಿದ್ದಾರೆ. ಗಿರಿಜಾ ಲೋಕೇಶ್, ಶ್ರೀಧರ್, ಲೋಕೇಶ್, ಚೇತನ್ ರಾಜ್, ಮಧುಗುರುಸ್ವಾಮಿ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸೆಂಚು ಸ್ಟಾರ್ನ ಹಾವದಲ್ಲಿ ಬಿಗ್ ಬಜೆಟ್ ಸಿನಿಮಾ ಎನಿಸಿಕೊಂಡು, ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿರುವ 'ಭಜರಂಗಿ' ಅವತಾರವನ್ನು ನೋಡುವುದೊಂದೇ ಬಾಕಿ.
- ಕೇಶು