ನಿರಂಜನ ಪ್ರಿಯ

ನಿರಂಜನ ಪ್ರಿಯ
Updated on: 

ಚಿತ್ರರಂಗದ ಮಟ್ಟಿಗೆ ಇವರು ಹೊಸ 'ಕೇಸ್ ನಂ.' ಅಲ್ಲದಿದ್ದರೂ ಪ್ರೇಕ್ಷಕರ ದೃಷ್ಟಿಯಲ್ಲಿ ಈಗಷ್ಟೆ ಬೆಳಕು ಕಾಣುತ್ತಿರುವ ನಟ ನಿರಂಜನ್ ಶೆಟ್ಟಿ. 'ಕೇಸ್ ನಂ. 18/9' ಎಂಬ ಎಮೋಷನಲ್ ದುನಿಯಾದ ಮಾಸಿದ ಬದುಕಿನ ಪ್ರತಿರೂಪದಂತೆ ಕಂಡ ನಿರಂಜನ್ ಶೆಟ್ಟಿಯನ್ನು ಮರೆಯಲುಂಟೆ? ಈ ಚಿತ್ರದಿಂದಲೇ ಪ್ರೇಕ್ಷಕರ ಹೃದಯ ಗೆದ್ದ ನಿರಂಜನ್, ಗಾಂಧಿನಗರಕ್ಕೆ ತುಂಬಾ ವರ್ಷಗಳ ಹಿಂದೆಯೇ ಬಂದವರು. 'ಸ್ಪರ್ಶ', 'ಆನಂದ್‌', 'ಯುವರಾಜ', 'ಆಕಾಶ್‌', 'ಚಿತ್ರ', 'ತುಂಟಾಟ', 'ನಮ್ಮ ಬಸವ', 'ಮಿಲನ' ಮುಂತಾದ ಚಿತ್ರಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸಿದರೂ 'ಜಾಲಿಡೇಸ್‌' ಚಿತ್ರ ನಟನಾಗುವ ಕನಸಿಗೆ ತುಸು ಹೆಚ್ಚೇ ಭರವಸೆ ನೀಡಿತು.  ಮೂಲತಃ ಉಡುಪಿಯವರಾದ ನಿರಂಜನ್‌ಗೆ ಚಿತ್ರಕಲೆಯ ಗೀಳು ಬಾಲ್ಯದಲ್ಲೇ ಅಂಟಿಕೊಂಡಿತು. ಚಿತ್ರ ಬಿಡಿಸುವ ಹವ್ಯಾಸವೇ ನಿರಂಜನ್‌ರ ಬದುಕಿನ ದಿಕ್ಕು ಬದಲಿಸಿತು. ತಂದೆಯ ಆತ್ಮೀಯರಾಗಿದ್ದ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಭಾವಚಿತ್ರ ಬಿಡಿಸಿ ಅವರಿಗೆ ಕಾಣಿಕೆಯಾಗಿ ಕೊಟ್ಟರು. ಖುಷಿಯಾದ ಹೆಗ್ಡೆ, ನಿರಂಜನ್‌ರಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ವ್ಯಾಸಂಗಕ್ಕೆ ಸೀಟು ಕೊಡಿಸಿದರು. ಕಲೆಯನ್ನು ಜೊತೆ ಮಾಡಿಕೊಂಡೇ ಉಡುಪಿಯಿಂದ ಬಂದ ನಿರಂಜನ್, ಮುಂದೆ ರಂಗಭೂಮಿಯತ್ತ ಮುಖ ಮಾಡಿದರು. ಕಲೆ, ಸಾಹಿತ್ಯದ ಸಹವಾಸ ಇದ್ದವರಿಗೆ ರಂಗಭೂಮಿಯ ನಂಟು ಬೆಳೆಸಿಕೊಳ್ಳುವುದಕ್ಕೆ ಅಷ್ಟೆನೂ ಕಷ್ಟವಲ್ಲ. 'ಹಲಗಲಿಯ ಬೇಡರ ದಂಗೆ', 'ಮ್ಯಾಕ್‌ಬೆತ್‌', 'ಕಾಕನಕೋಟೆ', 'ಅಗ್ನಿ ಮತ್ತು ಮಳೆ' ಮುಂತಾದ ನಾಟಕಗಳಲ್ಲಿ ನಟಿಸಿದ ನಿರಂಜನ್, ಕಿರುತೆರೆಯಲ್ಲೂ ಬಣ್ಣ ಹಚ್ಚಿದವರು. ರಂಗಮಂದಿರದ ಮೆಟ್ಟಿಲು ಬೆಳ್ಳಿತೆರೆಯನ್ನೂ ತೋರಿಸಿಕೊಟ್ಟಿತು. ನಟನೆಗೆ ಬೇಕಾದ ಪೂರ್ವ ತರಬೇತಿ ಮಾಡಿಕೊಂಡರು.
ಬದುಕಲಿಕ್ಕೆ ಕೈಯಲ್ಲಿ ಉದ್ಯೋಗವಿತ್ತು. ಮತ್ತೊಬ್ಬರ ಮುಂದೆ ನಿಂತು ಕೈಚಾಚುವ ಅಗತ್ಯ ನಿರಂಜನ್‌ರಿಗೆ ಇರಲಿಲ್ಲ. ನಟನೆಯ ಕನಸು ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟ ಇವರಿಗೆ ಆರಂಭದಲ್ಲಿ ಅಷ್ಟಾಗಿ ಬೆಂಬಲ ಸಿಗಲಿಲ್ಲ. ಅಲ್ಲಿ ಇಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರನ್ನು ತಮಿಳು ನಿರ್ದೇಶಕರೊಬ್ಬರು, 'ನಿಮಗಾಗಿ ಒಂದು ಕಥೆ ಮಾಡಿದ್ದೇನೆ. ಬನ್ನಿ' ಎಂದಿದ್ದೇ ತಡ ಸೀದಾ ಚೆನ್ನೈಗೆ ಹೋದ ನಿರಂಜನ್ ಕಥೆ ಕೇಳುವ ಜೊತೆಗೆ ಅಲ್ಲೇ ಆಕಸ್ಮಿಕವಾಗಿ ಕಂಡ 'ವಜಿಕ್ಕು ಎನ್ 18/9' ಎಂಬ ತಮಿಳು ಚಿತ್ರ ತೆಗೆದುಕೊಂಡು ಬೆಂಗಳೂರಿಗೆ ಬಂದರು. ಆಸ್ಕರ್ ಅಂಗಳದಲ್ಲಿ ಅತ್ಯುತ್ತಮ ವಿದೇಶಿ ಚಿತ್ರಗಳ ವಿಭಾಗದಲ್ಲಿ ಸ್ಪರ್ಧಿಸಿದ ಈ ಚಿತ್ರವನ್ನು ತಾನು ನೋಡುವ ಜೊತೆಗೆ ಆಪ್ತರಿಗೂ ತೋರಿಸಿದರು. ಅದರ ಪರಿಣಾಮ ಮುಂದೆ ಇದೇ ಚಿತ್ರ ಕನ್ನಡದಲ್ಲಿ 'ಕೇಸ್ ನಂ.18/9' ಆಯಿತು. ಚಿತ್ರರಂಗಕ್ಕೆ ನಿರಂಜನ್ ಹೊಸ ನಾಯಕನಾಗಿ ಪರಿಚಿತರಾದರು. ಕನ್ನಡದಲ್ಲೇ 10ಕ್ಕೂ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬಂದಿವೆ. ಅದರಲ್ಲಿ 4 ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇದರಲ್ಲಿ 2 ಚಿತ್ರಗಳು ಸದ್ಯದಲ್ಲೇ ಸೆಟ್ಟೇರಲಿವೆ. ತಮಿಳಿನಲ್ಲಿ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಮೊದಲ ಚಿತ್ರವಾದ 'ಸ್ಪರ್ಶ'ದಲ್ಲಿ ಸುದೀಪ್ ಮುಂದೆ ನಿಂತು 'ಇದು ಓಕೆನಾ' ಎಂದು ಡೈಲಾಗ್ ಹೊಡೆದ ನಿರಂಜನ್ ಶೆಟ್ಟಿ, ಕನ್ನಡ ಸಿನಿ ಪ್ರಿಯರಿಗಂತೂ ಓಕೆ ಆಗಿದ್ದಾರೆ.

- ಹರಿ
- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com