

ನಟಿ ಶ್ರವ್ಯ ಬೆಳ್ಳಿತೆರೆಗೆ ಪ್ರವೇಶವಾದಾಗಲೇ ಈಕೆ ಪೋಷಕ ನಟಿ ರೇಖಾ ದಾಸ್ರ ಮಗಳು ಅಂತ ಗೊತ್ತಾಯಿತು. ಅದಕ್ಕಿಂತ ಮುಖ್ಯವಾಗಿ ನಿರ್ದೇಶಕ ಓಂ ಪ್ರಕಾಶ್ರಾವ್ರಿಗೆ ಇಷ್ಟು ದೊಡ್ಡ ಮಗಳಿದ್ದಾಳೆ ಅಂತ ಗೊತ್ತಾಗಿದ್ದೂ ಆಗಲೇ. ಹೀಗಾಗಿ ನಟನೆ ಈಕೆಗೆ ರಕ್ತಗತ. ಕಿರುತೆರೆಯಲ್ಲಿ ನಟಿಸುತ್ತಿದ್ದ ಶ್ರವ್ಯಳನ್ನು ಹಿರಿತೆರೆಗೆ ಕರೆದುಕೊಂಡು ಬಂದಿದ್ದು 'ಲೂಜ್ಗಳು' ಚಿತ್ರ. ಶೀರ್ಷಿಕೆಗೆ ತಕ್ಕಂತೆ ಶ್ರವ್ಯಳ ಅಭಿನಯದ ಲೂಜ್ ಲೂಜ್ ಆಗಿರಲಿಲ್ಲ ಎಂಬುದು ಖರೆ. ಮೊದಲ ಚಿತ್ರದಲ್ಲೇ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಪ್ರೇಕ್ಷಕನ ಹೃದಯ ಗೆದ್ದ ಈ ನಟಿ, ವಾಣಿ ಹರಿಕೃಷ್ಣರ ಸಂಗೀತ ಸಂಯೋಜನೆಯಲ್ಲಿ ಬಂದ 'ರಬ್ಬಾ ರಬ್ಬಾ ಮೇರಿ...' ಶ್ರವ್ಯಳಿಗೆ ಹೊಸ ಮೆರುಗು ನೀಡಿತು. ಮೊದಲ ಚಿತ್ರಕ್ಕೆ ನಿರೀಕ್ಷಿತ ಗೆಲುವು ಸಿಗದಿದ್ದರೂ ಶ್ರವ್ಯ ಮಾತ್ರ ಗಾಂಧಿನಗರದಲ್ಲಿ ನೆಲೆಯೂರುವ ಭರವಸೆ ಮೂಡಿಸಿದಳು. ಮುದ್ದು ಮುಖ, ಹೋಮ್ಲಿ ಲುಕ್ನ ಶ್ರಾವ್ಯ ಸದ್ಯಕ್ಕೆ ನಟ ಅಜಯ್ ರಾವ್ ಜೊತೆ 'ರೋಸ್'ನಲ್ಲಿ ಅಭಿನಯಿಸುತ್ತಿದ್ದಾಳೆ. ಅಮ್ಮನ ನೆರಳು, ಅಪ್ಪನ ಧೈರ್ಯ ಇದು ಶ್ರವ್ಯಳಿಗೆ ಸಿನಿಮಾ ಪಯಣದಲ್ಲಿ ಬೆನ್ನೆಲುಬಾಗಿದ್ದರೂ ಈಕೆ ಮಾತ್ರ ತನ್ನ ನಟನೆಯಿಂದಲೇ ಇಲ್ಲಿ ನೆಲೆ ನಿಲ್ಲಬೇಕು ಎನ್ನುವ ಕನಸಿನ ಹುಡುಗಿ.
- ಹರಿ
- ಆರ್. ಕೇಶವಮೂರ್ತಿ