

ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ 'ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ' ಎಂಬ ಸೂಪರ್ ಹಿಟ್ ಚಿತ್ರದ ನಾಯಕ. ಆದರೆ ರಕ್ಷಿತ್ ತಮ್ಮನ್ನು ತಾವು ಬೇರೆಯದ್ದೇ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಇವರ ನಿರ್ದೇಶನದ ಹೊಸ ಚಿತ್ರ 'ಉಳಿದವರು ಕಂಡಂತೆ'. ಸಾಮಾನ್ಯವಾಗಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯಂಥ ಹಿಟ್ ಚಿತ್ರ ಸಿಕ್ಕಮೇಲೆ ಬೇರೆ ಯಾರೇ ನಾಯಕರಾಗಿದ್ದರೂ ಆರಾಮಾಗಿ ಒಂದು ನಾಲ್ಕೈದು ಚಿತ್ರಗಳಿಗಾದರೂ ಸಹಿ ಹಾಕಿ ಕೋಟಿಗಟ್ಟಲೆ ಹಣ ಬಾಚಿಕೊಂಡು ನಿಟ್ಟುಸಿರುಬಿಡುತ್ತಿದ್ದರು. ಆದರೆ, ಚಿತ್ರದ ಹೆಸರಿಗೆ ತಕ್ಕಂತೆ ರಕ್ಷಿತ್ ತಮಗೆ ಸಿಕ್ಕ ಯಶಸ್ಸನ್ನು ತೀರಾ ಸಿಂಪಲ್ ಆಗಿ ತೆಗೆದುಕೊಂಡವರು. ಹಾಗೆ ನೋಡಿದರೆ ರಕ್ಷಿತ್ ಚಿತ್ರರಂಗಕ್ಕೆ ತೀರಾ ಹೊಸಬರೇನಲ್ಲ. ಇದಕ್ಕೂ ಮುಂಚೆ 'ನಮ್ ಏರಿಯಾದಲ್ಲೊಂದ್ ದಿನ', 'ತುಗ್ಲಕ್' ಚಿತ್ರಗಳಲ್ಲಿ ಅಭಿನಯಿಸಿದ್ದರೂ ಆ ಚಿತ್ರಗಳು ದೊಡ್ಡ ಯಶಸ್ಸು ಕಾಣಲಿಲ್ಲ. ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ ಬಂದಮೇಲೆ ಈ ಹುಡುಗನ ಸಹಜ ಮತ್ತು ವಿಭಿನ್ನ ಎನಿಸುವ ಅಭಿನಯ ಎಲ್ಲರಿಗೂ ಇಷ್ಟವಾಯಿತು. ಮಾರ್ನಿಂಗ್ ಶೋನಲ್ಲೇ ರಕ್ಷಿತ್ ಸ್ಟಾರ್ ಎನಿಸಿಕೊಂಡರು. ಆದರೆ ನಾಯಕನಾಗಿ ಯಶಸ್ಸು ಕಂಡರೂ ಚಿತ್ರರಂಗದಲ್ಲಿ ತಮ್ಮ ಮುಂದಿನ ಭವಿಷ್ಯವನ್ನು ರಕ್ಷಿತ್ ಆಗಲೇ ಕಂಡುಕೊಂಡಿದ್ದರು ಎಂಬುದಕ್ಕೆ ಉದಾಹರಣೆ ಉಳಿದವರು ಕಂಡಂತೆ ಚಿತ್ರ. ನಾನು ನಿರ್ದೇಶಕನಾಗಬೇಕೆಂದೇ ಆಸೆ ಇಟ್ಟುಕೊಂಡವನು. ಇಷ್ಟು ದಿನ ನನಗೆ ಹೆಸರಿರಲಿಲ್ಲ. ಈಗ ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ ಚಿತ್ರದಿಂದ ನನ್ನನ್ನು ಜನ ಗುರುತಿಸಲಾರಂಭಿಸಿದ್ದಾರೆ. ಹಾಗಾಗಿ ನಿರ್ದೇಶನ ಮಾಡುವ ಧೈರ್ಯ ಬಂದಿದೆ, ಇದಾದ ಮೇಲೆ ಮತ್ತೆ ಹೀರೋ ಆಗುತ್ತೇನೆ ಎನ್ನುವ ರಕ್ಷಿತ್ ಸದ್ಯಕ್ಕೆ ತಮ್ಮ ನಿರ್ದೇಶನದ ಮೊದಲ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.
- ಹರಿ
- ಆರ್. ಕೇಶವಮೂರ್ತಿ