

ಹೇಳಿ ಕೇಳಿ ಇದು ಟ್ರೈಲರ್ಗಳ ಜಮಾನಾ. ಅದರಲ್ಲೂ ಹೊಸ ಜಮಾನಾದ ಹುಡುಗರು ಮೈದಾನದಲ್ಲಿ ಮಿಂಚುತ್ತಿರುವ ಹೊತ್ತಲ್ಲಿ ಸಿನಿಮಾಗಳು ಬಿಡುಗಡೆಗೆ ಮುನ್ನವೇ ಟ್ರೈಲರ್ಗಳ ಮೂಲಕವೇ ಸದ್ದು ಮಾಡುತ್ತಿರುವುದು ಈಗ ಹೊಸ ಟ್ರೆಂಡ್. ಸದ್ಯದ ಅಂಥ ಎರಡು ಟ್ರೈಲರ್ಮೇಡ್ ಚಿತ್ರಗಳೆಂದರೆ ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಮತ್ತು ಶ್ರೀಮುರಳಿ ಅಭಿನಯದ 'ಉಗ್ರಂ'.
ಕಂಡಾಬಟ್ಟೆ ಹಿಟ್ ಆಯ್ತು
ಒಂದೊಂದು ಹಿಟ್ ಸಿನಿಮಾ ಒಂದೊಂದು ರೀತಿಯ ಟ್ರೆಂಡ್ ಸೃಷ್ಠಿಸುತ್ತದೆ. ಈಗ ಉಳಿದವರು ಕಂಡಂತೆ ಚಿತ್ರ ಸೃಷ್ಠಿಸಿರುವ ಟ್ರೆಂಡ್ ಎಂದರೆ ಸಿನಿಮಾಸಕ್ತ ಪ್ರೇಕ್ಷಕರು ಈಗೀಗ ಏನ್ ಮಾತನಾಡಿದರೂ ಅದರ ಕೊನೆಗೆ 'ಶೂಟ್ ಮಾಡ್ಬೇಕಾ?' ಎಂಬ ವಾಕ್ಯ ಸೇರಿಸುತ್ತಿರುವುದು. ಇದು ಉಳಿದವರು ಕಂಡಂತೆ ಚಿತ್ರದ ಟ್ರೈಲರ್ ಮಾಡಿರುವ ಮ್ಯಾಜಿಕ್. ಲೋಕಲ್ ಚುಲ್ಬುಲ್ ಪಾಂಡೆಯಂತೆ ಕಾಣುವ ರಕ್ಷಿತ್ ಶೆಟ್ಟಿ 'ಏನ್ ಬೋ...ಮಗನೆ ನಗ್ತೀಯಾ, ಶೂಟ್ ಮಾಡ್ಬೇಕಾ?' ಎನ್ನುವ ಡೈಲಾಗ್ ಈಗ ಎಲ್ಲಡೆ ವೈರಲ್ ಆಗ್ತಿದೆ. ಈ ಚಿತ್ರದ ಟ್ರೈಲರ್ ನೋಡಿದ ಎಲ್ಲರಿಗೂ ಈಗಾಗಲೇ ರಕ್ಷಿತ್ ಶೆಟ್ಟಿ ಅವರೊಳಗಿನ ನಿರ್ದೇಶಕ ಎದ್ದು ಕಾಣಿಸುತ್ತಿದ್ದಾನೆ. ಲೋಕಲ್ ಪ್ರೇಕ್ಷಕ ಕೂಡ 'ಇದೊಳ್ಳೆ ಫಾರಿನ್ ಲ್ಯಾಂಗ್ವೇಜ್ ಸಿನಿಮಾ ಇದ್ದಂಗಿದೆ ಗುರೂ' ಎಂಬ ಉದ್ಗಾರ ತೆಗೆಯುತ್ತಿದ್ದಾನೆ. ಕುಂದಾಪುರ ಭಾಷೆಯ ಕನ್ನಡ ಭಾಷೆ, ರಕ್ಷಿತ್ ಶೆಟ್ಟಿ ಅವತಾರ, ರಿಶಬ್ ಶೆಟ್ಟಿ ಅವರ ಗತ್ತು, ಗೌರೀಶ್ ಅಕ್ಕಿ, ಶೀತಲ್ ಶೆಟ್ಟಿ ಎಂಬ ಆ್ಯಡೆಡ್ ಅಟ್ರಾಕ್ಷನ್ಗಳು, ಕರಮ್ ಚಾವ್ಲಾ ಅವರ ಕ್ಯಾಮೆರಾ ಕಮಾಲ್ ಎಲ್ಲವೂ ಈಗಾಗಲೇ ಕಂಡಾಬಟ್ಟೆ ಹಿಟ್ ಆಗಿದೆ. ಅಂತೂ ಒಂದು ಕ್ರೈಂ ಸ್ಟೋರಿಯ ಬೆನ್ನು ಹತ್ತಿ ಉಳಿದವರು ಕಂಡಂತೆ ಅದು ಹೇಗೆ ಕಾಣಿಸುತ್ತದೆ ಎಂದು ತೋರಿಸಲು ಹೊರಟಿರುವ ರಕ್ಷಿತ್ ಶೆಟ್ಟಿ ಅವರ ಮೊದಲ ನಿರ್ದೇಶನದ ಪ್ರಯತ್ನಕ್ಕೆ ಆರಂಭದಲ್ಲೇ ದೊಡ್ಡ ಜಯ ದೊರೆತಿದೆ. ಉಳಿದವರು ಕಂಡಂತೆ ಎಂಬ ಶೀರ್ಷಿಕೆಗೆ ಆ್ಯಸ್ ಸೀನ್ ಬೈ ದ ರೆಸ್ಟ್ ಎಂಬ ತರ್ಜುಮೆ ಮಾಡಿರುವ ರಕ್ಷಿತ್ ಅವರಿಗೆ ಪ್ರೇಕ್ಷಕರಂತೂ ಬಿಡುಗಡೆಗೆ ಮುನ್ನ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಉಗ್ರಂ ವಾದ
ಮೊದಲು 'ನಂದೇ' ಎಂಬ ಹೆಸರಿಟ್ಟುಕೊಂಡು ಶುರುವಾದ ಮುರುಳಿ ಅಭಿನಯದ ಈ ಚಿತ್ರ ಈ ಉಗ್ರಂ ರೂಪ ತಾಳಿದೆ. ಬಹಳ ದಿನಗಳಿಂದ ಯಶಸ್ಸು ಅರಸುತ್ತಿರುವ ಮುರಳಿ ಅವರಿಗೆ ಉಗ್ರಂ ಒಂದು ಬ್ರೇಕ್ ನೀಡುತ್ತದೆ ಎಂದೇ ಗಾಂಧಿನಗರ ಮಾತನಾಡುತ್ತಿದೆ. ಅದಕ್ಕೆ ಪುರಾವೆ ಎಂಬಂತೆ ಸುದ್ದಿ ಮಾಡುತ್ತಿರುವುದು ಉಗ್ರಂ ಚಿತ್ರದ ಟ್ರೈಲರ್. ಯೂಟ್ಯೂಬ್ನಲ್ಲಿ ಈ ಟ್ರೈಲರ್ ಕಾಣಿಸಿಕೊಂಡ ದಿನವೇ ಹಲವು ಸ್ಟಾರ್ ನಟರು, ನಿರ್ದೇಶಕರು ಈ ಟ್ರೈಲರ್ ಬಗ್ಗೆ ಭರವಸೆಯ ಮಾತನ್ನಾಡಿದ್ದಾರೆ. ಅಬ್ಬಾ ಇದು ಕನ್ನಡ ಸಿನಿಮಾನಾ ಎಂದವರು ಎಷ್ಟೋ ಜನ. ಈಗಾಗಲೇ ತಮ್ಮ ಚಿತ್ರವನ್ನು ತೆರೆಕಾಣಿಸಿ ಯಶಸ್ಸು ಕಂಡಿರುವ ನಟ, ನಿರ್ದೇಶಕರು, ಫೇಸ್ಬುಕ್ನಲ್ಲಿ ಸದ್ಯ ನಮ್ಮ ಚಿತ್ರದ ಎದುರಿಗೆ ಉಗ್ರಂ ಬರಲಿಲ್ಲವಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಮೊನ್ನೆ ಉಳಿದವರು ಕಂಡಂತೆ ಚಿತ್ರದ ಟ್ರೈಲರ್ ಬಿಡುಗಡೆಗಾಗಿ ಬಂದಿದ್ದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಂದಿನ ಸಮಾರಂಭದಲ್ಲಿ ಉಗ್ರಂ ಚಿತ್ರದ ಬಗೆಗೂ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ಈ ಟ್ರೈಲರ್ ನೋಡಿದವರು ಒಂದು ಕ್ಷಣ ಥ್ರಿಲ್ ಆಗುವುದು ಖಚಿತ. ಕನ್ನಡಕ್ಕೆ ವಿಭಿನ್ನ ಎನಿಸುವ ಶಾಟ್ಸ್ಗಳು, ಕೇವಲ ಹೀರೋಯಿಂಸಂ ಅನ್ನು ವೈಭವೀಕರಿಸಿದೆ ಕಮರ್ಷಿಯಲ್ ಸಿನಿಮಾವನ್ನೂ ಆರ್ಟಿಸ್ಟಿಕ್ ಆಗಿ ತೋರಿಸುವ ಪ್ರಯತ್ನ ಮಾಡಿರುವ ಉಗ್ರಂ ತಂಡಕ್ಕೆ ಇಂಟರ್ನೆಟ್ ಪ್ರೇಕ್ಷಕರಿಂದವಂತೂ ಮೆಚ್ಚುಗೆಯ ಸುರಿಮಳೆಯೇ ಸಿಕ್ಕಿದೆ. ಇನ್ನುಳಿದಿರುವುದು ಚಿತ್ರಮಂದಿರದಲ್ಲಿ ಮುರಳಿ ಅಂಡ್ ಟೀಮ್ ಯಾವ ಕಮಾಲ್ ತೋರಿಸಲಿದೆ ಎಂಬ ಕುತೂಹಲ ಮಾತ್ರ.
- ಹರಿ