

ಅದು ಸಂಜಯ್ ನಿರ್ದೇಶನದ 'ಪರಿಚಯ' ಚಿತ್ರ. ಪತ್ರಕರ್ತರ ಮುಂದೆ ಕೂತಿದ್ದ ಚಿತ್ರತಂಡದ ನಡುವೆ ರಪ್ ಅಂತ ಗಮನ ಸೆಳೆದ ಆ ಹುಡುಗಿಯ ಮಾತು, ವರ್ತನೆ ಕಂಡವರಿಗೆ ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರಿದ ಅರಗಿಣಿ ಈಕೆ ಎನ್ನುವ ಭರವಸೆ ಹುಟ್ಟುಹಾಕಿದಳು. ಮೆದು ಮಾತು, ಒಂಚೂರು ಸಂಕೋಚ, ತನ್ನ ಬಗ್ಗೆಗಿಂತ ತಾನು ಅಭಿನಯಿಸುವ ಚಿತ್ರ, ಕಥೆ, ಪಾತ್ರಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವ ಮಾತಿನ ಮಲ್ಲಿ. ಮಾತಿನ ನಡುನಡುವೆ ತುಂಟ ನಗು. ನೋಡಿದಾಕ್ಷಣ 'ಪಕ್ಕದ್ಮನೆ ಪಾರು' ಎನಿಸಿಬಿಡುವ ಈ ಹುಡುಗಿಗೆ ಇಷ್ಟು ಸಾಕಿತ್ತು, ಗಾಂಧಿನಗರದಲ್ಲಿ ನೆಲೆಯೂರಲು. ಹೊಸಬರೊಂದಿಗೆ ಬಂದರೂ 'ನಾನು ಹೀಗೆ ಬಂದು ಹಾಗೆ ಹೋಗುವ ನಟಿ' ಅಲ್ಲವೆಂದು ಆರಂಭದಲ್ಲೇ ತೋರಿಸಿಕೊಟ್ಟ ಆ ನಟಿ ಸಿಂಧು ಲೋಕನಾಥ್. ಗಾಂಧಿನಗರದ ಬಹುತೇಕ ನಟರ ಜೊತೆಗೆ ನಿಲ್ಲಬಲ್ಲ ಎತ್ತರ ಅಲ್ಲದಿದ್ದರೂ ಯಾವುದೇ ಪಾತ್ರಕ್ಕೂ ಒಗ್ಗಿಬಿಡುವ ಚತುರೆ ಅಂತೂ ಹೌದು. 'ಪರಿಚಯ'ದಿಂದ ಆರಂಭವಾದ ಈಕೆಯ ಸಿನಿ ಪಯಣ 'ಲವ್ ಇನ್ ಮಂಡ್ಯ' ತನಕ ಬಂದು ತಲುಪಿದೆ.
ಚಿತ್ರದಲ್ಲಿ ಒಂದೂ ಸಂಭಾಷಣೆ ಇಲ್ಲದ 'ಪುಷ್ಪಕ ವಿಮಾನ' ಪಾತ್ರ ಕೊಟ್ಟರೂ ತಾನೇನು ಅಂತ ಆಕೆ ತೋರಿಸಿದ್ದು 'ಡ್ರಾಮಾ'ದಲ್ಲಿ. ಸಿಕ್ಕ ಅವಕಾಶಗಳಲ್ಲಿ ಉತ್ತಮ ಅಭಿನಯದ ಛಾಪು ಮೂಡಿಸಿದ ಸಿಂಧುವಿಗೆ 'ಲೈಫು ಇಷ್ಟೇನೆ', 'ಯಾರೇ ಕೂಗಾಡಲಿ', 'ಕೇಸ್ ನಂ. 18/9' ಮತ್ತಷ್ಟು ಹೆಸರು ತಂದುಕೊಟ್ಟವು. 'ಜೈ ಭಜರಂಗಬಲಿ', 'ನನ್ ಲೈಫ್ನಲ್ಲಿ', 'ಕಾಫಿ ವಿತ್ ಮೈ ವೈಫ್' ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. 'ಲವ್ ಇನ್ ಮಂಡ್ಯ' ಚಿತ್ರ ಇತ್ತೀಚೆಗಷ್ಟೆ ಚಿತ್ರೀಕರಣ ಶುರುವಾಗಿದೆ. ಗ್ಲಾಮರ್ ಮತ್ತು ಗ್ರಾಮರ್ ಎರಡರ ಮಿಶ್ರಣ ಸಿಂಧು. ನಿರ್ದೇಶಕನ ಕಲ್ಪನೆಗೆ ತಕ್ಕಂತೆ ಸಂಭಾಷಣೆ ಒಪ್ಪಿಸುವ ಶೈಲಿ ಮೆಚ್ಚುಗೆಯಾಗುತ್ತದೆ. 'ದಿ ಬೆಸ್ಟ್ ಸಪೋರ್ಟಿಂಗ್' ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದಿರುವ ಸಿಂಧು, ಸದ್ಯ ಚಂದನವನದ ಭರವಸೆಯ ಪ್ರತಿಭೆ.
- ಹರಿ
- ಆರ್. ಕೇಶವಮೂರ್ತಿ