ಕಣ್ಣಿಗೆ ಬಿದ್ದ ಕಾಜಲ್

ಕಣ್ಣಿಗೆ ಬಿದ್ದ ಕಾಜಲ್
Updated on: 

ಕನ್ನಡಕ್ಕೆ ಟಾಲಿವುಡ್ ಬೆಡಗಿ ಕಾಜಲ್ ಬರುತ್ತಾಳೆಂದು ಟಾಮ್ ಟಾಮ್ ಹೊಡೆದುಕೊಂಡು ಒಂದಿಬ್ಬರು ನಿರ್ದೇಶಕರು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಹೀಗೆ ಕಾಜಲ್ ಅಭಿನಯಿಸುತ್ತಾರೆಂದು ಪ್ರಚಾರವಾಗಿದ್ದ ಚಿತ್ರಗಳ ಪೈಕಿ ಒಂದು ಬಿಡುಗಡೆಯಾಯಿತು. ಮತ್ತೊಂದು ಚಿತ್ರೀಕರಣದಲ್ಲಿದೆ. ಆದರೂ ಕಾಜಲ್ ಕಣ್ಣಿಗೆ ಕಾಣಲಿಲ್ಲ! ಕೊನೆಪಕ್ಷ ಆ ಹೆಸರಿನ ಚಿತ್ರವಾದರೂ ಕನ್ನಡದಲ್ಲಿ ಶುರುವಾಗಿದೆಯಲ್ಲ ಅಂತ ಸಮಾಧಾನ. ಈಗಾಗಲೇ 'ಕಾಜಲ್ 5' ಹೆಸರಿನ ಚಿತ್ರಕ್ಕೆ ಮುಹೂರ್ತ ಆಗಿದೆ. ಪ್ರೇಮಿಗಳ ದಿನ ಶುರುವಾದ ಮಾತ್ರಕ್ಕೆ ಇದು ಪ್ರೇಮಿಗಳಿಗೆ ಸಂಬಂಧಿಸಿದ್ದಲ್ಲ. ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದ ಸ್ಫೂರ್ತಿಗೊಂಡು ಸೆಟ್ಟೇರಿರುವುದಂತೆ.
  ವಿ.ಕೃಷ್ಣ ಚಿತ್ರದ ನಿರ್ದೇಶಕರು. ತೆಲುಗಿನ 'ಲೈಫ್ ಈಸ್ ಬ್ಯೂಟಿಫುಲ್‌' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದ ಮೋಹನ್ ಇದರ ನಾಯಕ. ಹಿರಿಯ ನಟಿ ಸರೋಜಮ್ಮ ಅವರ ಪುತ್ರಿ ನವ್ಯಾ ನಾಯಕಿ. 15 ಮಂದಿ ಸ್ನೇಹಿತರ ಬಳಗ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಪೋಷಕ ಪಾತ್ರಗಳ ಹೊರತಾಗಿ ಮಿಕ್ಕೆಲ್ಲರೂ ಹೊಸಬರೇ. ವಿಶೇಷ ಎಂದರೆ ಈ ಚಿತ್ರಕ್ಕೆ ಹಾರರ್ ದೃಶ್ಯಗಳನ್ನು 35 ದಿನಗಳ ಕಾಲ ಚಿತ್ರೀಕರಿಸುವ ಯೋಚನೆ ನಿರ್ದೇಶಕರದ್ದು. ನೈಜ ಘಟನೆಗಳು, ಪ್ರೇಮ ಕಥೆ ಮತ್ತು ಪ್ರೇತಾತ್ಮದ ಸೇಡು.. ಹೀಗೆ ಮಲ್ಟಿಪಲ್ ಅಂಶಗಳಿರುವ ಸಿನಿಮಾ ಇದು ಎಂಬುದು ವಿ.ಕೃಷ್ಣರ ವಿವರಣೆ. ಚಿತ್ರಕ್ಕೆ ಇವರದ್ದೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣಕ್ಕೆ ಯೋಜಿಸಲಾಗಿದೆ.
 ಐದು ಹಾಡುಗಳಿದ್ದು, ಎಂ.ಸಂಜೀವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ಕೃಷ್ಣ ಹಾಗೂ ಹರಿಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಶೋಭರಾಜ್, ದೊಡ್ಡಣ್ಣ, ಸುಧಾ ಬೆಳವಾಡಿ, ಶಿವರಾಂ, ಪದ್ಮಜಾರಾವ್, ಲಕ್ಷ್ಮಿದೇವಮ್ಮ ಮುಂತಾದವರು ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಜಿಟಲ್ ಪ್ರಸನ್ನರ ಛಾಯಾಗ್ರಹಣ ಇದೆ. 'ಪ್ರಸ್ತುತ ವಿದ್ಯಾಮಾನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಹೊಸಬರಾದರೂ ನಾಯಕ, ನಾಯಕಿ ಚಿತ್ರಕ್ಕೆ ನ್ಯಾಯ ಒದಗಿಸುತ್ತಾರೆಂಬ ನಂಬಿಕೆ ಇದೆ' ಎಂಬುದು ನಿರ್ದೇಶಕರ ಭರವಸೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com