

ನಿರ್ದೇಶಕ ಎಸ್. ಮಹೇಂದರ್ ಒಂದು ವರ್ಷದ ಗ್ಯಾಪ್ನ ನಂತರ ತಿರುಗಿ ಬಂದಿದ್ದಾರೆ. ಎಂದಿನಂತೆ ಅವರ ಜೊತೆ ಅವರ ರೆಗ್ಯುಲರ್ ಚಿತ್ರಕಥೆ, ಸಂಭಾಷಣಾಕಾರ ಬಿ.ಎ.ಮಧು ಕೂಡ ಇದ್ದಾರೆ. ಹೊಸದಾಗಿ ಸೇರ್ಪಡೆಯಾಗಿರುವುದು ಐಎಎಸ್ ಅಧಿಕಾರಿ ಕಮ್ ನಟ ಕೆ. ಶಿವರಾಮ್.
'ಈ ಹೃದಯ' ಎಂಬ ಮಾಮೂಲಿ ಹೆಸರಿದ್ದರೂ ಒಂದು ವಿಶೇಷವಾದ ಕಥೆಯೊಂದಿಗೆ ಈ ಚಿತ್ರ ಶುರುಮಾಡಿದ್ದೇವೆ ಎಂದು ಮಾತು ಶುರುಮಾಡುತ್ತಾರೆ ಮಹೇಂದರ್. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದ ನಂತರ ಮಹೇಂದರ್, ನಿರ್ಮಾಪಕರಾದ ಎಚ್.ಪಿ.ಕುಮಾರ್, ನಾಯಕ ಶಿವರಾಮ್, ನಾಯಕಿ ದಿಲ್ಶಾದ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಹಾಗೆ ನೋಡಿದರೆ ಇದು ನಿರ್ದೇಶಕರು ಹುಡುಕಿದ ಕಥೆಯಲ್ಲ. ಚಿತ್ರದ ನಾಯಕ ನಟ ಹೇಳಿದ ಕಥೆ. ಅಂದರೆ ಹುಡುಕಿದ ಕಥೆ. ಅಥವಾ ಅವರು ಕಂಡ ಕಥೆ ಎಂದರೆ ಇನ್ನೂ ಸೂಕ್ತ. ತಮ್ಮ ಅಧಿಕಾರ ಅವಧಿಯಲ್ಲಿ ನಡೆದ ಒಂದು ಅಪರೂಪದ ಘಟನೆಯನ್ನು ಶಿವರಾಮ್ ಬಿ.ಎ.ಮಧು ಅವರಿಗೆ ಹೇಳಿದರಂತೆ. ಅದು ಮಧು ಪಾಕದಲ್ಲಿ ಚಿತ್ರಕಥೆ, ಸಂಭಾಷಣೆಯ ರೂಪ ಪಡೆದು ಈಗ ಮಹೇಂದರ್ ನಿರ್ದೇಶನದಲ್ಲಿ ಸಿನಿಮಾ ಆಗುತ್ತಿದೆ.
ಮುಸ್ಲಿಂ ಹುಡುಗಿಯೊಬ್ಬಳು ಪಾಸ್ಪೋರ್ಟ್ ಪಡೆಯುವ ಸಂದರ್ಭದಲ್ಲಿ ಎದುರಾಗುವ ತೊಡಕುಗಳೇ ಚಿತ್ರದ ಕಥೆಯ ಆಸ್ತಿ. ಇಂಗ್ಲೆಂಡಿಗೆ ಹೋಗಬಯಸುವ ಮುಸ್ಲಿಂ ಹುಡುಗಿಯೊಬ್ಬಳಿಗೆ ಯಾರೂ ಸಹಾಯ ಮಾಡದೇ ಇದ್ದಾಗ ಶಿವರಾಮ್ ತಾವೇ ಮುಂದೆ ನಿಂತು ಸಹಾಯ ಮಾಡಿದ ತಮ್ಮ ಅನುಭವವನ್ನು ಆಧರಿಸಿ ಈಗ ಮುಂದೆ ನಿಂತು ಸಿನಿಮಾ ಮಾಡಿಸುತ್ತಿದ್ದಾರೆ. ಹಾಗಂತ ಇಲ್ಲಿ ಹಿಂದೂ ಮುಸ್ಲಿಂ ದ್ವೇಷದ ಕಥೆ ಇಲ್ಲ. ಪ್ರೇಮಕಥೆಯೂ ಅಲ್ಲ. ಅದರ ಬದಲಾಗಿ ಇಲ್ಲಿ ಮಾನವೀಯತೆಯ ಟಚ್ ಇದೆ. ಪ್ರತಿಯೊಬ್ಬ ಹಿಂದೂ ಮತ್ತು ಪ್ರತಿಯೊಬ್ಬ ಮುಸ್ಲಿಂ ಕೂಡ ಸಿನಿಮಾ ನೋಡಿದರೆ ಖುಷಿಪಡುತ್ತಾನೆ ಎನ್ನುತ್ತಾರೆ ಮಹೇಂದರ್. ಚಿತ್ರದಲ್ಲಿ ಹೀರೋ ಇದ್ದರೂ ಹೀರೋಯಿಸಂ ಇಲ್ಲ, ಸದ್ಯಕ್ಕೆ ಫೈಟ್ಗಳನ್ನು ಹಾಕುವ ಯೋಜನೆಯೂ ಇಲ್ಲ. ಆದರೆ ಹಾಡುಗಳಿವೆ ಕಥೆಯಲ್ಲಿ ನಾಯಕಿ ಇಂಗ್ಲೆಂಡಿಗೆ ಹೋಗಬಯಸಿದರೂ ಇಲ್ಲಿ ಫಾರಿನ್ ಶೂಟಿಂಗ್ ಇಲ್ಲ ಎನ್ನುತ್ತದೆ ಚಿತ್ರತಂಡ.
ನಾಯಕಿಯ ಪಾತ್ರಕ್ಕೆ ಹೊಸ ಹುಡುಗಿ ಮತ್ತು ಪಾತ್ರಕ್ಕೊಪ್ಪುವ ಹುಡುಗಿ ಬೇಕು ಎಂಬ ಕಾರಣಕ್ಕೆ ಗದಗ್ನ ಹೊಸ ಮುಖ ದಿಲ್ಶಾದ್ ಶೋಧ ಚಿತ್ರತಂಡದಿಂದ ಆಗಿದೆ. ಹಾಗಾಗಿ ಈಗ ತಾನೇ ಎಂಜಿನಿಯರಿಂಗ್ ಮುಗಿಸಿರುವ ದಿಲ್ಶಾದ್ ಈಗ ಸಿನಿಮಾ ಕಾಮಗಾರಿಯತ್ತ ಮುಖ ಮಾಡಿದ್ದಾರೆ.
- ಹ್ಯಾರಿ