

ಈ ವಾರ ಎರಡು ಚಿತ್ರಗಳು ಪ್ರೇಕ್ಷಕರ ವಿಷಲ್ ಸದ್ದು ಕೇಳಿ ಯಶಸ್ಸಿನ ಅಲೆಯ ಮೇಲೆ ತೇಲಲು ಕಾಯುತ್ತಿವೆ. ತಮಿಳಿನ ಪಿಜ್ಜಾ ಅನ್ನು ಕನ್ನಡದಲ್ಲಿ ಡೆಲಿವರಿ ಮಾಡುತ್ತಿರುವ ಲವ್ಗುರು ಬಾಯ್ ಪ್ರಶಾಂತ್ ರಾಜ್ ಮೇಲೆ ಸಿನಿರಸಿಕರಿಗೆ ದೊಡ್ಡ ನಿರೀಕ್ಷೆ ಇದೆ. ಹಾಗಾಗಿ ಮೊದಲ ದಿನ ಚಿತ್ರಮಂದಿರದಲ್ಲಿ ಪ್ರಶಾಂತ ವಾತಾವರಣ ಇರುವುದಂತೂ ಸಾಧ್ಯವಿಲ್ಲ. ಅದಕ್ಕೆ ಕಾರಣ ಬಿಸಿ ಏರಿರುವ ಚಿತ್ರದ ಪ್ರಚಾರ ವಾತಾವರಣ. ಪ್ರಶಾಂತ್ರ ಹಿಂದಿನ ಚಿತ್ರಗಳಿಗೆ ಕಾಯಂ ಪ್ರೇಕ್ಷಕರಾಗಿದ್ದ ಕಾಲೇಜು ಹುಡುಗ, ಹುಡುಗಿಯರು ಚಿತ್ರಮಂದಿರದ ಗೇಟಲ್ಲೇ ಬೋಲ್ಡ್ ಆಗಿ ಬಂದವರ ಕಾಪಾಡು ಪರಮಾತ್ಮ ಎನ್ನುತ್ತಿದ್ದಾರೆ. ವರದನಾಯಕನ ತಮ್ಮನಾಗಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದ ಚಿರಂಜೀವಿ ಸರ್ಜಾ ಈಗ ಸೀಟಿ ಹೊಡೆಯುತ್ತಾ ಮತ್ತೆ ಪ್ರೇಕ್ಷಕರನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದಾರೆ. ಅವರ ಜೊತೆಗೆ ಸದ್ಯದ ಹಾಟ್ ಹುಡುಗಿ ಪ್ರಣಿತಾ. ಇನ್ನು ಮೊದಲ ಅಲೆಗಾಗಿ ಕಾದು ಕುಳಿತಿರುವುದು 'ಅಲೆ' ಚಿತ್ರದ ನಿರ್ದೇಶಕ ಗೋಪಿಕಿರಣ್. ನಾಯಕ ತನುಷ್ ಹೊಸಬರಾದರೂ ನಾಯಕಿ ಹರ್ಷಿಕಾ ಪೂಣಚ್ಛ ಪ್ರಚಾರಕ್ಕೆ ಬಾರದೆ ಚಿತ್ರಕ್ಕೆ ಭರ್ಜರಿ ಪ್ರಚಾರವನ್ನೇ ನೀಡುತ್ತಿದ್ದಾರೆ. ಮನೋಮೂರ್ತಿ ಸಂಗೀತದ ಅಲೆಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ವಿಶಾಲ ಹೃದಯದ ಕನ್ನಡಿಗರು ವಿಷಲ್ ಚಿತ್ರವನ್ನು ಖಂಡಿತ ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ವ್ಯಕ್ತಪಡಿಸುವ ಪ್ರಶಾಂತ್ರಾಜ್ ಮತ್ತು ಸಂಗೀತದ ಅಲೆಗಳ ಮೇಲೆ ಪ್ರೀತಿಯ ಮೆರವಣಿಗೆ ಹೊರಟಿರುವ ಗೋಪಿಕಿರಣ್ ಅವರೊಂದಿಗೆ ಒಂದು ಮಾತುಕತೆ.
ಪ್ರಶಾಂತ್ ರಾಜ್- ವಿಜಲ್
ನಾನು ಸಿನಿಮಾ ಮಾಡದೆ ಮನೇಲಿ ಬೇಕಿದ್ರೂ ಕೂತಿರ್ತೀನಿ. ಸಿನಿಮಾ ಮಾಡಿ ಎಂದು ಯಾರೂ ನನ್ನ ಮನೆಯ ಬಳಿ ಬಂದು ಗಲಾಟೆ ಮಾಡುವಷ್ಟು ನಾನು ದೊಡ್ಡವನಲ್ಲ. ಆದರೆ ನನಗಿಷ್ಟವಿಲ್ಲದೆ ಕಾಟಾಚಾರಕ್ಕಾಗಿ ಸಿನಿಮಾ ಮಾಡುವುದಿಲ್ಲ. ನಾನು ದುಡ್ಡಿಗಾಗಿ ಸಿನಿಮಾ ಮಾಡೋದಿಲ್ಲ. ನಾನು ಸಿನಿಮಾ ಮೇಕಿಂಗ್ನಲ್ಲಿ ಇನ್ನೊಬ್ಬರಿಗೆ ರೋಲ್ ಮಾಡೆಲ್ ಆಗಬೇಕು ಎನ್ನುವ ಆಸೆ ಉಳ್ಳವನು. ಅದರಂತೇ ಸಿನಿಮಾ ಮಾಡುತ್ತೇನೆ. ಅದಕ್ಕೆ ನನ್ನ ವಿಜಲ್ ಚಿತ್ರ ಒಂದು ಉತ್ತಮ ಉದಾಹರಣೆ.