ದೇಹವೆ ದೇಗುಲ

ದೇಹವೆ ದೇಗುಲ
Updated on: 

'ಇವರು ಲವರ್ ಬಾಯ್ ಅಲ್ಲ, ಆ್ಯಕ್ಷನ್ ಸ್ಟಾರ್...' ಎಲ್ಲರದ್ದು ಅದೇ ಮಾತು. ಅದು 'ನೆನಪಿರಲಿ' ಪ್ರೇಮ್ ಇಮೇಜ್ ಬದಲಾಗಿದೆ ಎನ್ನುವ ಅರ್ಥ ನೀಡುವ ಮಾತು. ಸೆಕ್ಸಿ ಲುಕ್ ಜೊತೆಗೆ ಸಿಕ್ಸ್ ಪ್ಯಾಕ್. ಸಾಲದ್ದಕ್ಕೆ ಸಿಕ್ಕಾಪಟ್ಟೆ ಆ್ಯಕ್ಷನ್ ಮಾಡಿದ್ದಾರೆ. ಹೀಗಾಗಿ ಪ್ರೇಮ್ ಇನ್ನು ಮುಂದೆ ಲವ್ಲಿ ಸ್ಟಾರ್ ಅಲ್ಲ, ಆ್ಯಕ್ಷನ್ ಸ್ಟಾರ್. ಅದಕ್ಕೆ ತಕ್ಕಂತೆ 'ನಾನು ಸಾಪ್ಟ್ ಪಾತ್ರಗಳಿಗೆ ಸೀಮಿತ ಎಂದುಕೊಂಡಿದ್ದರು. ಆದರೆ ಹಾರ್ಡ್‌ವೇರ್ ಪಾತ್ರಗಳನ್ನೂ ಮಾಡಬಲ್ಲೆ ಅಂತ ತೋರಿಸಿದ್ದೇನೆ' ಎಂದು ಘೋಷಿಸಿದರು ಪ್ರೇಮ್. ಹೀಗೆ ಕನ್ನಡಕ್ಕೆ ಒಬ್ಬ ಆ್ಯಕ್ಷನ್ ಸ್ಟಾರ್ ಹುಟ್ಟಿಕೊಂಡಿದ್ದಾನೆ ಎನ್ನುವ ದಾಟಿಯಲ್ಲಿ ಪ್ರೇಮ್ ಕುರಿತು ಮಾತು ಕೇಳಿ ಬಂದಿದ್ದು, 'ಶತ್ರು' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ. ತುಂಬಾ ಹಿಂದೆ ಶುರುವಾಗಿದ್ದ ಈ ಚಿತ್ರ ಬಾಕ್ಸ್‌ನಲ್ಲಿ ಮಲಗಿತ್ತು. ಸದ್ಯ ಅದಕ್ಕೆ ಬಿಡುಗಡೆಯ ಭಾಗ್ಯ ಕಲ್ಪಿಸಲು ನಿರ್ಮಾಪಕರ ತಂಡ ಹೊರಟಿದೆ.
'ದೇಹವೆ ದೇಗುಲ' ಎನ್ನುವಂತೆ ಅಭಿನಯಕ್ಕಾಗಿ ಸಾಹಸ ದೃಶ್ಯಗಳಲ್ಲಿ ಮಿಂಚಲು ಪ್ರೇಮ್ ತಮ್ಮ ದೇಹವನ್ನು ಸಿಕ್ಕಾಪಟ್ಟೆ ಒರಟು ಮಾಡಿಕೊಂಡು ತುಂಬಾ ಕಷ್ಟಪಟ್ಟು ಸಿಕ್ಸ್‌ಪ್ಯಾಕ್ ಮಾಡಿದ್ದಾರಂತೆ. 'ಶತ್ರು' ಚಿತ್ರದ ನಿರ್ದೇಶಕರು ಜೆ.ಕೆ., ಎಂ.ಡಿ. ಪ್ರಕಾಶ್, ಬಿ.ಎಸ್.ಆನಂದ್, ಅರುಣ್‌ದೇವಸ್ಯಾ ನಿರ್ಮಾಪಕರು. ಸುಜಿತ್ ಶೆಟ್ಟಿ ಸಂಗೀತ ಇದೆ. ಮ್ಯಾಥೂ ಅವರ ಛಾಯಾಗ್ರಹಣವಿದೆ. ನಿರ್ಮಾಪಕರ ಪುತ್ರಿ ಜೀವಿತಾ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಬಿ.ಎನ್. ಗಂಗಾಧರ್ ಚಿತ್ರತಂಡಕ್ಕೆ ಶುಭ ಕೋರಿದರು. ಅಲ್ಲದೆ ಗಂಗಾಧರ್ ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿದ್ದಾರಂತೆ. ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. 'ಶತ್ರು' ಚಿತ್ರಕ್ಕೆ ಮಿತ್ರರ ಕಾಟವಿಲ್ಲ. ಆದರೂ ಚಿತ್ರ ತಡವಾಗಿ ಬಿಡುಗಡೆಗೆ ಸಜ್ಜಾಗುತ್ತಿದೆ. ನಿರ್ದೇಶಕ ಜೆ.ಕೆ. ಅವರಿಗೆ ಇದು ಮೊದಲ ಚಿತ್ರ. 'ಚಿತ್ರೀಕರಣ ಮುಗಿದು ತುಂಬಾ ದಿನ ಆಯ್ತು. ತಡವಾಗಿ ಬರುತ್ತಿದ್ದೇವೆ ಎನ್ನುವ ಬೇಸರವಿಲ್ಲ. ಯಾಕೆಂದರೆ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಇಲ್ಲಿವರೆಗೂ ಪ್ರೇಮ್ ಅವರಲ್ಲಿ ಲವರ್ ಇಮೇಜ್ ಮಾತ್ರ  ನೋಡಿದ್ದೀರಿ. ಇಲ್ಲಿ ಆವರ ಆ್ಯಕ್ಷನ್ ಮುಖ ನೋಡುತ್ತೀರಿ. ಸಿಕ್ಸ್ ಪ್ಯಾಕ್ ಮಾಡುವುದು ಅಷ್ಟು ಸುಲಭವಲ್ಲ. ದೇಹ ದಂಡಿಸಲಿಕ್ಕೆ ಪ್ರೇಮ್ ತುಂಬಾ ಶ್ರಮ ಹಾಕಿದ್ದಾರೆ. ಅದ್ದೂರಿಯಾಗಿ ಸಾಹಸ ದೃಶ್ಯಗಳನ್ನು ಮೇಕಿಂಗ್ ಮಾಡಿದ್ದೇವೆ. ನಿಜಕ್ಕೂ ಒಳ್ಳೆಯ ಸಿನಿಮಾ ಆಗುತ್ತದೆ' ಎಂದರು ನಿರ್ದೇಶಕರು.
ನಟ ಪ್ರೇಮ್ ಆರಂಭದಿಂದಲೂ ಪ್ರೇಮ ಕಥೆಯ ಚಿತ್ರಗಳಲ್ಲಿ ಸಾಪ್ಟ್ ಆಗಿಯೇ ಕಾಣಿಸಿಕೊಂಡವರು. 'ಪಲ್ಲಕ್ಕಿ' ಚಿತ್ರದಲ್ಲಿ ರೈಲ್ವೆ ಹಳಿ ದಾಟಲು ಆಗದವರು 'ಶತ್ರು' ಚಿತ್ರದಲ್ಲಿ ಖಾಕಿ ತೊಟ್ಟ ಗರ್ಜಿಸಿದ್ದಾರಂತೆ. ಸಾಹಸ ದೃಶ್ಯಗಳಲ್ಲಂತೂ ಸೂಪರ್ ಎಂಬುದು ಚಿತ್ರತಂಡದ ನಂಬಿಕೆ. 'ನನ್ನ ನಟನೆ ಸಾಪ್ಟ್ ಪಾತ್ರಗಳಿಗೆ  ಸೀಮಿತ ಎಂದುಕೊಂಡಿದ್ದರು. ಆದರೆ ಇಲ್ಲಿ ನನ್ನ ಮತ್ತೊಂದು ಮುಖವನ್ನು ತೋರಿಸಿದ್ದಾರೆ. ನನ್ನ ಮಟ್ಟಿಗೆ ಇದು ಪೂರ್ಣ ಪ್ರಮಾಣದ ಸಾಹಸ ಚಿತ್ರ. ನಿರ್ಮಾಣದಲ್ಲಿ ರಾಜಿಯಾಗಿಲ್ಲ. ಒಂದು ವರ್ಷ ಈ ಚಿತ್ರಕ್ಕಾಗಿ ಮೀಸಲಿಟ್ಟೆ. ಮೊದಲ ಪ್ರತಿ ನೋಡಿದ್ದೇನೆ. ಚಿತ್ರ ಚೆನ್ನಾಗಿದೆ. ಚಿತ್ರ ನೋಡಿದಾಗ ನಾನೇನಾ? ಎನ್ನುವ ಪ್ರಶ್ನೆ ಕಾಡಿತು' ಎಂದರು ಪ್ರೇಮ್. ಮೊದಲ ಬಾರಿಗೆ ಚಿತ್ರದಲ್ಲಿ ಖಾಕಿ ಬಟ್ಟೆ ಧರಿಸುತ್ತಿದ್ದರಿಂದ ಕಾಸ್ಟೂಮ್ ತೆಗೆದುಕೊಂಡು ಸೀದಾ ಮನೆಗೆ ಹೋಗಿ ಅಲ್ಲಿ ಪೂಜೆ ಮಾಡಿ ಮನೆಯವರ ಆಶಿರ್ವಾದ ತೆಗೆದುಕೊಂಡ ನಂತರ ಹಾಕಿಕೊಂಡಿದ್ದನ್ನು ಪ್ರೇಮ್ ಹೇಳಿಕೊಂಡರು. ಪ್ರಕಾಶ್ ಚಿತ್ರದ ಪ್ರಧಾನ ನಿರ್ಮಾಪಕರು. ತಡವಾಗಿದೆ ಎನ್ನುವುದು ಬಿಟ್ಟರೆ ಚಿತ್ರದಲ್ಲಿ ಏನೂ ಕೊರತೆ ಇಲ್ಲ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಪ್ರೇಮ್ ತೆರೆ ಮೇಲೆ ಆ್ಯಕ್ಷನ್ ಹುಲಿ ಎಂಬುದು ಪ್ರಕಾಶ್‌ರ ಮಾತು. ಮಲೆಯಾಳಂನಲ್ಲಿ ಕೆಲ ಚಿತ್ರಗಳನ್ನು ನಿರ್ಮಾಣ ಮಾಡಿರುವ ಅರುಣ್ ದೇವಸ್ಯಾ ಈ ಚಿತ್ರದ ಮೂಲಕ ಕನ್ನಡದಲ್ಲೂ ನಿರ್ಮಾಪಕರಾಗಿ ಪರಿಚಯವಾಗುತ್ತಿದ್ದಾರೆ.

-ಕೇಶು


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com