

ಇತ್ತೀಚೆಗೆ ಸಿನಿಮಾಗಳ ಶೀರ್ಷಿಕೆಗಳೇ ಒಂಥರಾ. ಅದು ಕೇಳಲಿಕ್ಕೆ ಹಿತವಾಗಿದ್ದರೆ, ಅಥವಾ ಪಂಚ್ ಇದ್ದರೆ ಅಥವಾ ಸ್ಪೆಷಲ್ ಸೌಂಡಿಂಗ್ ಇದ್ದರೆ ಸಾಕು ಎಂಬುದು ಸಿನಿಮಾ ಮಾಡುವವರ ಅನಿಸಿಕೆ. ಕಥೆಗೆ ಹೊಂದಿಕೊಳ್ಳಬೇಕು ಎಂದೇನೂ ಇಲ್ಲ. ಅದು ಕ್ಯಾಚಿಯಾಗಿರಬೇಕು ಎನ್ನುವುದಷ್ಟೇ ಅವಶ್ಯಕತೆ. ಅಲ್ಲದೆ, ನಿಮ್ಮ ಶೀರ್ಷಿಕೆಗೂ ಸಿನಿಮಾಕ್ಕೂ ಏನು ಸಂಬಂಧ ಎಂದು ಕೇಳಿದರೆ ಹೇಗಾದರೂ ಮಾಡಿ ಶೀರ್ಷಿಕೆಯನ್ನು ಅವರ ಕಥೆಗೆ ಹೊಂದಿಸುವ ಬುದ್ಧಿವಂತಿಕೆ ಅವರಿಗಿದ್ದೇ ಇರುತ್ತದೆ. ಇತ್ತೀಚಿನ 'ವಿಷಲ್'ನ ನಂತರ ಬಂದಿರುವ ಅಂಥ ಇನ್ನೊಂದು ಶೀರ್ಷಿಕೆ ಪವನ್ ಒಡೆಯರ್ ನಿರ್ದೇಶನದ 'ಗೂಗ್ಲಿ'. ಈ ವಾರ ಬಿಡುಗಡೆಯಾಗುತ್ತಿರುವ 'ಗೂಗ್ಲಿ' ಚಿತ್ರದ ಶೀರ್ಷಿಕೆಯ ಬಗ್ಗೆ ನಿರ್ದೇಶಕ ಪವನ್ ಹೇಳುವ ಪಾಯಿಂಟ್ ಕೂಡ ಅದೇ. ದೂಸ್ರಾ ಮಾತಿಲ್ಲದೆ, ಇಂಥಹ ಶೀರ್ಷಿಕೆ ಇಟ್ಟಿರುವುದೇ ನಮಗೆ ಪ್ಲಸ್ ಪಾಯಿಂಟ್ ಆಗುತ್ತದೆ ಎಂಬ ಕೇರಂ ಬಾಲ್ ಹಾಕುತ್ತಾರೆ ಪವನ್.
ಗೂಗ್ಲಿ ಅನ್ನೋ ಶೀರ್ಷಿಕೆ ನಿಮ್ಮ ಚಿತ್ರಕ್ಕೆ ಹೇಗೆ ಹೊಂದುತ್ತದೆ? ಇದು ಕೇವಲ ಫ್ಯಾನ್ಸಿ ಟೈಟಲ್ಲಾ?
ಇಲ್ಲ ನಮ್ಮ ಸಿನಿಮಾದಲ್ಲಿ ಅದಕ್ಕೆ ಸಮರ್ಥನೆ ಇದೆ. ನಮ್ಮ ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ಗಳಿವೆ.
ಬಹುತೇಕ ಎಲ್ಲ ಸಿನಿಮಾಗಳಲ್ಲೂ ಟ್ವಿಸ್ಟ್, ಟರ್ನ್ ಇದ್ದೇ ಇರುತ್ವೆ. ಹಾಗಾದ್ರೆ ಗೂಗ್ಲಿ ಅಂತ ಯಾವ ಸಿನಿಮಾಕ್ಕೆ ಬೇಕಾದ್ರೂ ಹೆಸರಿಡಬಹುದಲ್ವಾ?
ಇಡಬಹುದು, ಆದ್ರೆ ಯಾರೂ ಇಲ್ಲಿಯವರೆಗೂ ಇಟ್ಟಿರಲಿಲ್ಲ, ಹಂಗಾಗಿ ನಂಗೆ ಛಾನ್ಸ್ಸಿಕ್ತು ಅನ್ಸತ್ತೆ. ಸೀರಿಯಸ್ಸಾಗಿ ಹೇಳಬೇಕಾಂದ್ರೆ ನಮ್ಮ ಚಿತ್ರದಲ್ಲಿ ಅನಿರೀಕ್ಷಿತ ತಿರುವುಗಳಿವೆ. ಹಾಗಾಗಿ ಶೀರ್ಷಿಕೆ ಕಥೆಗೆ ಪೂರಕವಾಗಿದೆ.
ಅದರ ಜೊತೆಗೆ ಗೋವಿಂದಾಯನಮಃ ಗೆಲ್ತು ಅಂತ 'ಗ'ಕಾರ ಪ್ರಿಯರಾದ್ರಾ? ನಿಮ್ಮ ಮುಂದಿನ ಸಿನಿಮಾ ಕೂಡ 'ಗ'ಕಾರ ದಿಂದಲೇ ಶುರುವಾಗುತ್ತ?
ಇದ್ರೂ ಇರಬಹುದು. ಆದ್ರೆ ಅದು ಒಂದು ಕಾರಣ, ಅಷ್ಟೇ, ಅದೇ ಕಾರಣ ಅಲ್ಲ. ಮುಂದಿನ ಚಿತ್ರದ ಗಕಾರದ ಬಗ್ಗೆ ಸದ್ಯಕ್ಕೆ ಚಕಾರ ಎತ್ತೋದಿಲ್ಲ.
ಸರಿ, ನಿಮ್ಮ ಗೂಗ್ಲಿದೇನ್ ಕತೆ? ಕಾಮಿಡಿ, ಆ್ಯಕ್ಷನ್, ಸಾಂಗ್ಸ್, ಸೆಂಟಿಮೆಂಟ್ ಎಲ್ಲಾ ಇರೋ ಟೋಟಲ್ ಕಮರ್ಷಿಯಲ್ ಸಿನಿಮಾ ಅನ್ನೋದು ಬಿಟ್ಟು?
ಗೋವಿಂದಾಯನಮಃ ಚಿತ್ರದಲ್ಲಿ ಲೋ ಬಜೆಟ್ ಇಟ್ಕೊಂಡು ಕಾಮಿಡಿ ಸಬ್ಜೆಕ್ಟ್ ಮಾಡಿದ್ದೆ. ಅದು ನಾನು ನಿರ್ದೇಶಕ ಆಗಿ ಗುರುತಿಸಿಕೊಳ್ಳೋಕೆ ಸಹಾಯ ಆಯ್ತು. ಈಗ ನನಗೆ ಬರೀ ಕಾಮಿಡಿ ಅಷ್ಟೇ ಅಲ್ಲ. ಲವ್ಸ್ಟೋರಿನೂ ಮಾಡೋಕೆ ಬರುತ್ತೆ ಅಂತ ತೋರಿಸೋಕೆ ಗೂಗ್ಲಿ ಹಾಕಿದೀನಿ. ಇದು ಅಪ್ಪಟ ಪ್ರೇಮಕಥೆ. ಅದಕ್ಕೆ ನನ್ನಲ್ಲಿರುವ
ತರಲೆ ಬುದ್ಧಿ ಸೇರಿಸಿ ಚಿತ್ರಕಥೆ, ಸಂಭಾಷಣೆ ಮಾಡಿದೀನಿ. ಈ ನನಗೆ ಬಾರಿ 'ಯುಎ' ನಿಂದ 'ಯು' ಗೆ ಪ್ರಮೋಷನ್ ಸಿಕ್ಕಿರೋದು ಖುಷಿಯ ವಿಷಯ.
-ಎಲ್ಲಾ ಸಿನಿಮಾಗಳಲ್ಲೂ ಲವ್ ಇದ್ದೇ ಇರುತ್ತೆ. ನಿಮ್ದು ಯಾವ ಥರಾ ಲವ್? ಬರೀ ತರಲೆ ಲವ್ವಾ ಅಥವಾ ಸೀರಿಯಸ್ ಲವ್ವೂ ಇದೆಯಾ?
ಖಂಡಿತ ಇದೆ. ಇಡೀ ಚಿತ್ರದಲ್ಲಿ ಬಹುತೇಕ ನಾಯಕ, ನಾಯಕಿ, ಇಬ್ಬರೇ ಇರ್ತಾರೆ. ಹಾಗಾಗಿ ಸೀರಿಯಸ್ನೆಸ್ ಇರ್ಲೇಬೇಕು. ಲವ್ನ ಬರೀ ಎಂಟರ್ಟೈನ್ಮೆಂಟ್ ಥರಾ ನೋಡೋದು ಸರಿ ಅಲ್ಲ.
-ಮೊದಲ ಚಿತ್ರಕ್ಕೆ ಗುರುಕಿರಣ್ ಹಾಡುಗಳಿಂದ ತುಂಬಾ ಸಹಾಯ ಆಗಿತ್ತು. ಆದ್ರೂ ಅವರನ್ನ ಬಿಟ್ಟು ಈಗ ಜೋಶ್ವಾ ಶ್ರೀಧರ್ ಅವರನ್ನ ಸಂಗೀತ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು? ಹಾಡುಗಳಿಗೆ ರೆಸ್ಪಾನ್ಸ್ ಹೇಗಿದೆ?
ಇದು ಬೇರೆನೇ ಸ್ಟೈಲ್ ಸಿನಿಮಾ. ಬೇರೆ ಥರದ್ದೇ ಸಂಗೀತ ಬೇಕು ಅನ್ನಿಸ್ತು. ಹಾಡುಗಳು ಮತ್ತು ಅದರ ಚಿತ್ರೀಕರಣದ ಬಗ್ಗೆ ಎಲ್ಲರೂ ಇದು ಬಾಲಿವುಡ್ ಸ್ಟೈಲ್ನಲ್ಲಿದೆ ಅಂತಿದ್ದಾರೆ.
- ಗೂಗ್ಲಿ ಚಿತ್ರದ ನಿಮಗಿಷ್ಟವಾದ ಒಂದು ಸೀನ್ ಹೇಳಿ?
ಲವ್ ಫೇಲ್ಯೂರ್ ಆಗಿ ಯಶ್ ಬೀಚ್ ಹತ್ರ ಕೂತ್ಕೊಂಡು ಒಂದು ಡೈಲಾಗ್ ಹೇಳೋ ದೃಶ್ಯ ನನ್ನ ಫೇವರೆಟ್.
- ಏನು, 'ಮುಂಗಾರು ಮಳೆ'ಯ ಪರ ಪರ ಡೈಲಾಗ್ ಥರಾನಾ?
ಹಾಗಲ್ಲ, ನನಗೆ ಲವ್ ಫೈಲ್ಯೂರ್ ಆದಾಗ ನಂಗೆ ಏನನ್ನಿಸುತ್ತೋ ಅದನ್ನೇ ಡೈಲಾಗ್ ಮಾಡಿದೀನಿ. ಅದು ಎಲ್ಲರನ್ನೂ ಕಾಡೋ ಸೀನ್ ಆಗುತ್ತೆ ಅಂತ ನನ್ನ ಅನಿಸಿಕೆ.
- ನೀವು ಹೀರೋ ಆಗ್ತಿದೀರಂತೆ?
ನಿಜ. ಆದ್ರೆ ಅದು ಹೀರೋ ಅಂತಲ್ಲ. ಆ ಚಿತ್ರದ ಪ್ರಮುಖ ಪಾತ್ರ ಎನ್ನಬಹುದು ಅಷ್ಟೆ. ಸದ್ಯಕ್ಕೆ ಮಾತುಕತೆ ನಡೀತಿದೆ. ಚಿತ್ರ ಇನ್ನೂ ಶುರುವಾಗಿಲ್ಲ.
- ಸರಿ, ಗೂಗ್ಲಿ ಸಿನಿಮಾ ಬಿಡುಗಡೆಯ ವಿವರಗಳು?
ಇವತ್ತು ನಮ್ಮ ಸಿನಿಮಾ ಬಿಡುಗಡೆ. ಸುಮಾರು 125 ಕೇಂದ್ರಗಳಲ್ಲಿ ತೆರೆಕಾಣ್ತಿದೆ. ನನ್ನ ಫೇವರೆಟ್ ಸಂತೋಷ್ ಚಿತ್ರಮಂದಿರದಲ್ಲಿ ಕೂಡ ಬಿಡುಗಡೆ ಆಗ್ತಿದೆ. ಇಷ್ಟು ದಿನ ನಾವು ಏನು ಹೇಳ್ಕೊಂಡ್ವಿ ಅನ್ನೋದಲ್ಲ, ಈಗ ಜನ ಏನ್ ಹೇಳ್ತಾರೆ ಅನ್ನೋದು ಮುಖ್ಯ. ಹಾಗಾಗಿ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ರೆಡಿಯಾಗಿ ಕಿವಿ ಕ್ಲೀನ್ ಮಾಡ್ಕೊಂಡ್ ಕಾಯ್ತಾ ಇದೀನಿ.
-ಹರಿ