

ನಿರ್ಮಾಪಕ ಅಣಜಿ ನಾಗರಾಜ್ ಸಿನಿಮಾ ಕಾರ್ಖಾನೆ ತೆಗೆದು ತುಂಬಾ ದಿನಗಳೇ ಆದವು. ಅವರ ಫ್ಯಾಕ್ಟರಿಯಲ್ಲಿ ಒಂದು ಚಿತ್ರ ಮುಹೂರ್ತ ಮಾಡಿಕೊಂಡರೆ, ಮತ್ತೊಂದು ಚಿತ್ರೀಕರಣದ ಫೀಲ್ಡ್ಗಿಳಿದಿರುತ್ತದೆ. ಮತ್ತೊಂದು ಚಿತ್ರ ಹೆಸರು ಇಟ್ಟಿಕೊಂಡಿರುತ್ತದೆ. ಹೆಸರು ಅಂತಿಮಗೊಂಡ ಕೂಡಲೇ ಮತ್ತೊಂದಕ್ಕೆ ಕಥೆ ಉತ್ಪಾದನೆ ನಡೆಯುತ್ತಿರುತ್ತದೆ. ಇವುಗಳ ಪೈಕಿ ಯಾವುದು ಮೊದಲು ಬಿಡುಗಡೆಯಾಗುತ್ತದೋ ಗೊತ್ತಿಲ್ಲ. ಈ ನಡುವೆ ಅಣಜಿ ನಾಮ ಬಲದಿಂದ ಒಂದೆರಡು ಸಿನಿಮಾಗಳು ಶುರುವಾಗುತ್ತವೆ. ಕನ್ನಡದ ಮಟ್ಟಿಗೆ ಅಣಜಿಯ ಸಿನಿಮಾ ಪಂದ್ಯ ಎಲ್ಲೂ ನಿಲ್ಲಲ್ಲ. ಸದ್ಯ ಅಣಜಿ ಕಾರ್ಖಾನೆಯಲ್ಲಿ ನಾಲ್ಕೈದು ಚಿತ್ರಗಳಿವೆ. ಅವುಗಳ ಪೈಕಿ 'ಗಲ್ಬಸ್ಕಿ' ಹಾಗೂ 'ದಾಸ್ವಾಳ' ಚಿತ್ರಗಳು ಸದ್ದು ಮಾಡುತ್ತಿವೆ.
ಮೊನ್ನೆ ಅಣಜಿ 'ದಾಸ್ವಾಳ' ಹೂವಿನೊಂದಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು. ಅದು ಆ ಚಿತ್ರದ ಪತ್ರಿಕಾಗೋಷ್ಠಿ. ಬದಾಮಿಯಂಥ ಕಲ್ಲು ಬಂಡೆಗಳ ನಾಡಿನಲ್ಲಿ ಸುಖಕರವಾಗಿ ಚಿತ್ರೀಕರಣ ಮಾಡಿಕೊಂಡು ಬಂದಿರುವುದನ್ನು ಹೇಳಿಕೊಳ್ಳುವುದು ಉದ್ದೇಶ. ಪವರ್ಫುಲ್ ಡೈಲಾಗ್ಗಳಿಗೆ ಹೆಸರಾಗಿರುವ ಎಂ. ಎಸ್. ರಮೇಶ್, ಗುರುಕಿರಣ್, ಪ್ರೇಮ್, ಅವಿನಾಶ್, ಹೇಮಾ ಚೌದರಿ, ರಂಗಾಯಣ ರಘು, ಶೋಭರಾಜ್ ಹೀಗೆ ಘಟಾನುಘಟಿಗಳೇ 'ದಾಸ್ವಾಳ' ಹಿಡಿದಿದ್ದಾರೆ. ಇವರ ನಡುವೆ ಈಗಷ್ಟೆ ಚಿತ್ರರಂಗಕ್ಕೆ ಕಾಲಿಟ್ಟಿರುವ ಭರವಸೆಯ ಪ್ರತಿಭೆ ನಿನಾಸಂ ವಿಜಯ್ ಹಿರಿಯ ಕಲಾವಿದರ ಮೆಚ್ಚುಗೆಯ ಮಾತುಗಳಿಂದ ಎಲ್ಲರ ಗಮನ ಸೆಳೆದರು. ಬದಾಮಿಯಲ್ಲಿ 39 ದಿನಗಳ ಕಾಲ ಚಿತ್ರೀಕರಣ ಮುಗಿಸಿರುವ ಚಿತ್ರಕ್ಕೆ 3 ಹಾಡುಗಳು ಮಾತ್ರ ಬಾಕಿ ಉಳಿದಿವೆಯಂತೆ. 'ನೀನು ಜೀವನದಲ್ಲಿ ಚೆನ್ನಾಗಿರಬೇಕೆಂದರೆ ನಾಲ್ಕು ಜನರನ್ನು ಚೆನ್ನಾಗಿಟ್ಟುಕೊಂಡಿರಬೇಕು' ಎನ್ನುವ ದೊಡ್ಡವರ ಮಾತು ಚಿತ್ರದ ಒಂದು ಸಾಲಿನ ಕಥೆ. ಇಲ್ಲಿ ಈ ನಾಲ್ಕು ಮಂದಿ ಯಾರು? ನಮ್ಮ ಲೈಫ್ನ್ನು ಡಿಸೈಡ್ ಮಾಡಲಿಕ್ಕೆ ಅವರಿಗೆ ಯಾವ ಅಧಿಕಾರವಿದೆ? ಎಂದು ಆ 4 ಮಂದಿಯನ್ನು ಹುಡುಕುತ್ತ ನಾಯಕ ಮತ್ತು ಆತನ ಮಾವ ಹೋಗುತ್ತಾರೆ. ಅವರು ಸಿಗ್ತಾರಾ, ಸಿಕ್ಕರೆ ಏನಾಗುತ್ತದೆ? ಎಂಬುದು ಚಿತ್ರದ ತಿರುಳು. ಪಾತ್ರಗಳು ನೈಜವಾಗಿ ಮೂಡಿಬಂದಿವೆ. ಆದರೆ ಹೇಮಾ ಚೌಧರಿಯದ್ದು ಗ್ಲಾಮರ್ ರೋಲ್. ನಾಯಕನಾಗಿ ಪ್ರೇಮ್, ಮಾವನ ಪಾತ್ರಧಾರಿ ರಂಗಾಯಣ ರಘು ಕಾಂಬಿನೇಷನ್ ಹಿಟ್ ಆಗುತ್ತದೆ. ಕಲ್ಲು ಬಂಡೆಗಳ ಊರಿನಲ್ಲಿ ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ಮಾಡಿದ್ದೇವೆ' ಎಂದರು ನಿರ್ದೇಶಕ ರಮೇಶ್.
ಚಿತ್ರದ ಗೀತೆಗಳಿಗೆ ಪುರಂದರ ದಾಸರ ಪದಗಳ ಸಾಲುಗಳನ್ನು ಬಳಸಿಕೊಂಡಿದ್ದು, ಸಂಗೀತ ನಿರ್ದೇಶಕ ಗುರುಕಿರಣ್ ತಡಮಾಡದೆ ಹೇಳಿದ ಸಮಯಕ್ಕೆ ಸರಿಯಾಗಿ ಹಾಡುಗಳನ್ನು ಕಂಪೋಸ್ ಮಾಡಿಕೊಟ್ಟಿದ್ದಾರಂತೆ. ಕಾಮಿಡಿ, ಸೆಂಟಿಮೆಂಟ್ ಈ ಎರಡೂ ಅಂಶಗಳು ಪ್ರಧಾನವಾಗಿರುವ ಚಿತ್ರದಲ್ಲಿ 'ಜೋಗಿ' ಪ್ರೇಮ್ ನಾಯಕ. 'ಈ ಚಿತ್ರದಿಂದ ಒಬ್ಬ ಸಾಮಾನ್ಯ ಕಲಾವಿದನಾಗಿ ಎಂ.ಎಸ್. ರಮೇಶ್ ಅವರಿಂದ ತುಂಬಾ ಕಲಿತೆ. ಶಿಸ್ತು, ಪ್ಲಾನಿಂಗ್, ನಿರ್ದೇಶನದ ವೈಖರಿಯನ್ನು ಕಲಿದ್ದೇನೆ. ಒಬ್ಬ ಪುಟ್ಟ ಕಲಾವಿದನಾಗಿ ನಿರ್ದೇಶಕರು ಹೇಳಿದ ಕೆಲಸ ಮಾಡಿದ್ದೇನೆ. ಅಣಜಿ ನನ್ನ ಹಾಕಿಕೊಂಡು ಸಿನಿಮಾ ಮಾಡಿದ್ದೇ ದೊಡ್ಡ ವಿಚಾರ. ಖಂಡಿತ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆಂಬ ನಂಬಿಕೆ ಇದೆ' ಎಂದರು ಪ್ರೇಮ್. ಚಿತ್ರಕ್ಕೆ ಎಸ್. ಮನೋಹರ್ ಸಂಕಲನ ಮಾಡಿದ್ದಾರೆ.
'ನಾನು ಏನೂ ಕೆಲಸ ಮಾಡದೇ ಮುಗಿಸಿದ ಚಿತ್ರವಿದು. ಕಷ್ಟದಲ್ಲಿದ್ದಾಗ ಬಂದ ಚಿತ್ರ ಇದು. ಆದರೂ ಯಾವುದಕ್ಕೂ ಹೆದರದೆ ಎಲ್ಲರನ್ನು ನಂಬಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಯಾವುದೇ ಚಿತ್ರ ಮಾಡಲು ಪ್ಲಾನ್ ಮುಖ್ಯ ಎಂಬುದು ರಮೇಶ್ ಅವರಿಂದ ಕಲಿತೆ. ಇನ್ಮುಂದೆ ಪ್ಲಾನ್ ಇಲ್ಲದೆ ಯಾವುದೇ ಚಿತ್ರ ಅನೌನ್ಸ್ ಮಾಡಲ್ಲ' ಎಂದು ಭಾಷೆ ಕೊಟ್ಟರು ನಿರ್ಮಾಪಕ ಅಣಜಿ ನಾಗರಾಜ್. ನಾಯಕ ಹುಡುಕಿಕೊಂಡು ಹೋಗುವ ನಾಲ್ಕು ಪಾತ್ರಗಳಲ್ಲಿ ಹೇಮಾ ಚೌಧರಿ ಅವರು ಒಬ್ಬರು. ಸೆಟ್ನಲ್ಲಿ ನಾಯಕ ನಟರಿಗೆ ಕೊಟ್ಟ ಪ್ರಾಮುಖ್ಯವನ್ನು ತಮಗೂ ಕೊಟ್ಟಿದ್ದಕ್ಕೆ ಹೇಮಾ ಅವರು ಖುಷಿಯಾದರು. ಅವಿನಾಶ್ ಮತ್ತು ರಮೇಶ್ರ ನಂಟು ಈಗಿನದ್ದಲ್ಲ. ಆಗಿನಿಂದಲೂ ಭಿನ್ನ ಪಾತ್ರಗಳನ್ನೇ ಕೊಡುತ್ತ ಬಂದಿದ್ದಾರೆ. ಈಗಲೂ ಅವಿನಾಶ್ 'ದಾಸ್ವಾಳ'ದಲ್ಲಿ ಇದುವರೆಗೂ ಮಾಡಿರದ ವಿಭಿನ್ನ ಪಾತ್ರ ಮಾಡಿದ್ದಾರಂತೆ. 'ನಾವು ಮನಸಾರೆ ಎಂಜಾಯ್ ಮಾಡಿ ಸಿನಿಮಾ ಮಾಡಿದ್ದೇವೆ. ಪ್ರೇಕ್ಷಕರಿಗೂ ಅಷ್ಟೇ ಮನರಂಜನೆ ಇಲ್ಲಿ ಸಿಗಲಿದೆ' ಎಂದರು ರಂಗಾಯಣ ರಘು.
ಭಯಪಡಿಸುವ ಖಳನಾಯಕನಾಗಿ ಶೋಭರಾಜ್ ಇಲ್ಲಿ ಮಿಂಚಿದ್ದಾರೆ. 'ತುಂಬಾ ಒಳ್ಳೆಯ ತಂಡ. ಇವರ ನಡುವೆ ನಾನು ಒಂದು ಪಾತ್ರ ಮಾಡಿದ್ದೇನೆ. ರಮೇಶ್ ಸಿನಿಮಾ ಅಂದರೆ ನಮ್ಮಂಥ ಕಲಾವಿದರ ಪಾತ್ರಗಳು ಪವರ್ಫುಲ್ ಆಗಿರುತ್ತವೆ. ಎಂದಿನಂತೆ ಖಳನ ಪಾತ್ರವಾದರೂ ಹೊಸತನವಿದೆ' ಎಂದರು ಶೋಭರಾಜ್. ಈ ಚಿತ್ರದ ದೊಡ್ಡ ಕಲಾವಿದರಿಂದ ಹೊಗಳಿಸಿಕೊಂಡು, ಚಿತ್ರದಲ್ಲೂ ನಿಜವಾಗಲೂ ಭಿನ್ನ ಪಾತ್ರ ಮಾಡಿರುವ ನಟ ವಿಜಯ್. ನಿನಾಸಂನಿಂದ ಬಂದ ಈತ ಚಿತ್ರದಲ್ಲಿ ಮಾನಸಿಕ ಅಸ್ವಸ್ಥನ ಪಾತ್ರ ಮಾಡಿದ್ದಾನೆ. ಈತನ ಅಭಿನಯಕ್ಕೆ ಚಿತ್ರದ ಎಲ್ಲ ಕಲಾವಿದರು ಫಿದಾ ಆಗಿದ್ದಾರೆ ಎಂದರೆ ಕಿವಿ ಮೇಲೆ ಫ್ಲವರ್ ಎನ್ನಬೇಡಿ.
-ಕೇಶವ