ನಂ.1 ಯಾರು?

ನಂ.1 ಯಾರು?
Updated on: 

ಕನ್ನಡ ಸಿನಿಮಾಗಳು ತೆರೆಯ ಮೇಲೆ ಬದಲಾವಣೆಯ ಲಕ್ಷಣ ತೋರಿಸುತ್ತಿವೆಯೋ ಇಲ್ಲವೋ, ಆದರೆ ಇತ್ತೀಚೆಗೆ ಕನ್ನಡ ಚಿತ್ರರಂಗದ ಕೆಲವು ಸ್ಟಾರ್‌ಗಳ ಬಿರುದಿನಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತಿವೆ. ಅಭಿನಯ ಚಕ್ರವರ್ತಿ, ಬಾಕ್ಸ್ ಆಫೀಸ್ ಕ ಸುಲ್ತಾನ್, ಸ್ಯಾಂಡಲ್‌ವುಡ್ ಕಿಂಗ್ ಎಂಬ ಹೊಸತನ ಸುದೀಪ್, ದರ್ಶನ್, ಶಿವರಾಜ್‌ಕುಮಾರ್ ಮುಂತಾದವರ ಹೆಸರುಗಳಲ್ಲಿ ಕಾಣಿಸುತ್ತಿದೆ. ಮೊದಲೆಲ್ಲ ಸ್ಟಾರ್‌ಗಳ ಬಿರುದುಗಳೆಂದರೆ ಅವು ಕೇವಲ ಆಯಾ ಸ್ಟಾರ್‌ನ ಐಡೆಂಟಿಟಿಯನ್ನು ಹೇಳು ತ್ತಿದ್ದವು. ಈಗೀಗ ಅದು ಚಿತ್ರರಂಗದಲ್ಲಿ, ನಾನು ಇಲ್ಲದೆ ಯಾರಿಲ್ಲ, ನಾನಿದ್ರೆ ಎಲ್ಲ ಎನ್ನುವಂಥ ವೈಯಕ್ತಿಕ ವಿಷಯವಾದಂತಿದೆ. ಇಲ್ಲಿ ನಾನೇ ನಂ. 1 ಎಂದು ಹೇಳಿಕೊಳ್ಳುವ ಹೊಸ ರೀತಿಯ ಪ್ರಯತ್ನ ಇದು.
ಸದ್ಯದ ಪರಿಸ್ಥಿತಿಯಲ್ಲಿ ನಂ. 1 ನಾಯಕ ಯಾರು ಎಂಬ ಪ್ರಶ್ನೆ ಮೂಡಿದರೆ ನಾನೇ ಎಂದು ಕೈ ಎತ್ತಲು ಹಲವು ಹೆಸರುಗಳಿವೆ. ನಿಜ. ಆದರೆ ನಂ. 1 ಎನ್ನುವುದನ್ನು ನಿರ್ಧರಿಸಲು ಇರುವ ಅಳತೆಗೋಲು ಯಾವುದು ಎಂಬುದು ಕುತೂಹಲದ ವಿಷಯ. ಐಸಿಸಿ ರ್ಯಾಂಕಿಂಗ್‌ನಂತೆ ಇಲ್ಲಿ ಸ್ಪಷ್ಟವಾದ ನಿಯಮಾವಳಿಗಳಿಲ್ಲ. ಸಿನಿಮಾ ಬಿಡುಗಡೆಯ ಮೊದಲ ದಿನ ಚಿತ್ರಮಂದಿರದ ಮುಂದೆ ಅಭಿಮಾನಿಗಳ ಹಾವಳಿಯ ಆಧಾರದ ಮೇಲೆ ಅದು ನಿರ್ಧರಿತವಾಗುತ್ತದೆಯೇ, ಅಥವಾ ಮೊದಲ ಮೂರು ದಿನದ ಕಲೆಕ್ಷನ್ ಮೇಲೆಯೇ? ಅಥವಾ ಆ ಸ್ಟಾರ್ ನಟನ  ಸಂಭಾವನೆಯ ಮೇಲೆಯೇ? ಅಥವಾ ಅವನ ಸಿನಿಮಾ ಗಳಿಸುವ ಒಟ್ಟಾರೆ ಲಾಭದ ಮೇಲೆಯೇ? ಅಥವಾ ಅವನ ಚಿತ್ರಕ್ಕೆ ಸಿಗುವ ಟಿವಿ ಪ್ರಸಾರದ ಹಕ್ಕುಗಳ ಮೊತ್ತದ ಮೇಲೆಯೇ? ಎಲ್ಲವೂ ಹೌದು.
 ಹೇಳಿಕೊಳ್ಳಲು ನಮ್ಮಲ್ಲಿ  ಉಪೇಂದ್ರ, ಶಿವರಾಜ್‌ಕುಮಾರ್, ಪುನೀತ್, ಸುದೀಪ್, ದರ್ಶನ್ ಹೀಗೆ ಹಲವು ಸ್ಟಾರ್‌ಗಳಿದ್ದಾರೆ. ಹತ್ತು ಚಿತ್ರ ಫ್ಲಾಫ್ ಆದಾಗ ನಾನು ಕೊನೆಯ ಸ್ಥಾನದಲ್ಲಿದ್ದೇನೆ ಎಂದು ಯಾರೂ ಹೇಳಿಕೊಳ್ಳುವುದಿಲ್ಲ. ಆದರೆ ಮೂರು ಚಿತ್ರ ಗೆದ್ದರೆ ಅವರನ್ನು ಮನಿ ಮೆಶೀನ್ ಎಂದು ಕರೆಯಲಾಗುತ್ತದೆ. ಹಾಗಾದರೆ ನಂ.1 ಪಟ್ಟ ಎನ್ನುವುದು ಆ ಸ್ಟಾರ್‌ನ ಕರೆಂಟ್ ಫಾರ್ಮ್‌ನ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆಯೇ?
ಸಂಭಾವನೆಯ ವಿಷಯಕ್ಕೆ ಬಂದರೆ ಇತ್ತೀಚೆಗೆ ಕೆಲವು ಸ್ಟಾರ್‌ಗಳೇ ನಿರ್ಮಾಪಕರಾಗಿದ್ದಾರೆ. ಹಾಗಾಗಿ ಸಂಭಾವನೆ ವಿಷಯದಲ್ಲಿ ನಾನ್ ಕೊಡ್ತಾ ಇರ್ತೀನಿ, ನಾನೇ ತಗೊತಾ ಇರ್ತೀನಿ ಅಷ್ಟೆ ಎನ್ನುವ ಲಕ್ಸುರಿ ಅವರದ್ದು. ನಟನಾಗಿ ಕಲಿಕೆಯ ವಿಷಯದಲ್ಲಿ ಮುಂದುವರಿಯಲು ಮಾಡಬೇಕಿರುವ ಕೆಲಸಕ್ಕಿಂತ, ಈಗಿನ ನಟರು ತಮ್ಮ ಚಿತ್ರದ ಗಳಿಕೆಯ ವಿಷಯದ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ.
 ಗಳಿಕೆಯ ವಿಷಯದಲ್ಲಂತೂ ನಿರ್ಮಾಪಕರುಗಳ ವರ್ತನೆ ವಿಚಿತ್ರವಾಗಿರುತ್ತದೆ. ಕೆಲವರು ಮೂರೇ ದಿನದಲ್ಲಿ ಅಷ್ಟು ಕೋಟಿ ಬಂತು ಎಂದು ಹೇಳಿ ತಮ್ಮ ಚಿತ್ರದ ಸ್ಟಾರ್‌ನನ್ನು ಪ್ರಸನ್ನಗೊಳಿಸಲು ಯತ್ನಿಸುತ್ತಾರೆ. ಇನ್ನು ಕೆಲವರು ನೂರು ದಿನ ಓಡಿದ ಚಿತ್ರದ ಬಗ್ಗೆಯೂ ಅಯ್ಯೋ, ಅದರಿಂದ ನನಗೆ ಲಾಸ್ ಆಯ್ತು ಎನ್ನುತ್ತಾರೆ. ಅಧಿಕೃತವಾಗಿ ಮಾತನಾಡುವಾಗ, ಬಂದ ಲಾಭವನ್ನು ಇನ್ನೂ ಲೆಕ್ಕ ಹಾಕಿಲ್ಲ, ಎಂದವರು ಹೊರಗೆ ಸಿಕ್ಕವರ ಬಳಿ, ಹಾಕಿದ ಬಂಡವಾಳದ 50 ಪರ್ಸೆಂಟ್ ಬಂದಿದೆಯಷ್ಟೆ ಎನ್ನುತ್ತಾರೆ. ಇನ್ನು ಕೆಲವು ಚಿತ್ರಗಳನ್ನು ಹಿಟ್ ಎನ್ನಬೇಕೋ ಫ್ಲಾಫ್ ಎನ್ನಬೇಕೋ ಗೊತ್ತಾಗುವುದಿಲ್ಲ. ನಿರ್ಮಾಪಕರು ಮಾತನಾಡಿದರೆ, ಬಗ್ಗಿಸ್ಕೊಂಡ್, ಬಗ್ಗಿಸ್ಕೊಂಡ್ ಬಾರ್ಸೋ ನಮ್ ಆ್ಯಕ್ಷನ್ ಹೀರೋ ಸಿನಿಮಾ ಬಾಕ್ಸ್ ಆಫೀಸ್‌ನ ಚಿಂದಿ ಉಡಾಯಿಸಿದೆ ಎನ್ನುತ್ತಾರೆ. ಅದೇ ಚಿತ್ರಕ್ಕೆ ಸಂಭಾಷಣೆ ಬರೆದವರನ್ನು ಈಗೇನ್ ಮಾಡ್ತಿದೀರಾ ಎಂದು ಕೇಳಿದರೆ ತಲೆ ತಗ್ಗಿಸಿಕೊಂಡು, ಅಯ್ಯೋ, ಆ ಸಿನಿಮಾ ಏನಾದ್ರೂ ಚೆನ್ನಾಗ್ ಹೋಗಿದ್ದಿದ್ರೆ ಒಂದಷ್ಟು ಅವಕಾಶಗಳು ಸಿಕ್ತಾ ಇದ್ವೇನೋ, ಖಾಲಿ ಇದೀನಿ ಎನ್ನುತ್ತಾರೆ. ಇದರಲ್ಲಿ ಯಾವುದು ನಿಜ?  
ಕೆಲವು ಚಿತ್ರಗಳು ಪ್ರೇಕ್ಷಕರನ್ನು ತಲುಪುವ ಮುಂಚೆಯೇ ನಿರ್ಮಾಪಕರಿಗೆ ಹಣ ತಲುಪುವಂತೆ ಮಾಡುತ್ತವೆ ಎಂದರೆ ಅದಕ್ಕೆ ಕಾರಣ ಟಿವಿ ರೈಟ್ಸ್. ಒಂದಿಷ್ಟು ಹೈಪ್ ಮಾಡಿ, ಟಿವಿ ಚಾನೆಲ್‌ನವರನ್ನು ಯಾಮಾರಿಸಿ, ಮಧ್ಯವರ್ತಿಗಳ ಮುಖಾಂತರ ತಮ್ಮ ಚಿತ್ರವನ್ನು ಮಾರಿಸಿ  ನಾನೇ ನಂ. 1 ಎಂದು ಬೀಗುವವರೂ ಇದ್ದಾರೆ. ಹಾಗಾಗಿಯೇ, ಮೊದಲು, ಸಂಭಾವನೆಯ ಬದಲಾಗಿ ಯಾವುದೋ ಒಂದು ಏರಿಯಾದ ಹಕ್ಕುಗಳನ್ನು ಪಡೆಯುತ್ತಿದ್ದ ಹೀರೋಗಳು ಈಗೀಗ ಟಿವಿ ರೈಟ್ಸ್ ನಮ್ಮದು ಎನ್ನುತ್ತಿದ್ದಾರೆ.
ಈ ಎಲ್ಲ ಸಂಗತಿಗಳ ನಡುವೆ ನಮ್ಮನ್ನು ಕಾಡುವ ಕಟ್ಟ ಕಡೆಯ ಪ್ರಶ್ನೆ, ಚಿತ್ರರಂಗದಲ್ಲಿ ಮೊಟ್ಟ ಮೊದಲಿಗರು ಯಾರು ಎಂಬುದು. ಇಂಥವರನ್ನೇ ನಂ. 1 ಎಂದು ಹೇಳುವುದು ಕಷ್ಟ ಎಂಬ ಕಾರಣಕ್ಕೆ, ಈ ಬಗ್ಗೆ ನಂ.1 ಪಟ್ಟವನ್ನೇ ಕೇಳಿದರೆ 'ಐ ಲವ್ ಮೆನಿ' ಎನ್ನುತ್ತದೆ ಅದು. ಹಾಗಾಗಿ ನಂ.1 ಪಟ್ಟ ಈಗ ಮಲ್ಟಿಸ್ಟಾರರ್ ಆಗಿದೆ ಎನ್ನಬಹುದು.
  ಅಂದಹಾಗೆ, ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವುದಕ್ಕೆ ಕಾರಣ. ನಂ.1 ಎನಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಸದ್ಯಕ್ಕೆ ಸುದ್ದಿ ಮಾಡುತ್ತಿಲ್ಲ. ಅಣ್ಣಾಬಾಂಡ್ ಚಿತ್ರದ ಸೋಲು ಮತ್ತು ಯಾರೇ ಕೂಗಾಡಲೀ ಕೂಡ ಹೆಚ್ಚು ಸದ್ದು ಮಾಡಲಿಲ್ಲ. ಮೋಹನ್‌ಲಾಲ್ ಜೊತೆ 'ಮೈತ್ರಿ' ಮಾಡಿಕೊಂಡಿದ್ದರೂ ಅದು ಟಿಪಿಕಲ್ ಪುನೀತ್ ಚಿತ್ರ ಅಲ್ಲ. ಅವರ ನಾಯಕತ್ವದ ಹೊಸ ಚಿತ್ರ ಯಾವುದು ಎಂಬುದು ಇನ್ನೂ ಅನೌನ್ಸ್  ಆಗಿಲ್ಲ. ಅದರ ಜೊತೆಗೆ ಪುನೀತ್ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಬ್ಯುಸಿ. ಹಾಗಾಗಿ ಅವರ ಸ್ಥಾನಕ್ಕೆ ಲಗ್ಗೆ ಹಾಕಲು ಇದಕ್ಕಿಂತ ಸಮಯ ಬೇಕೆ ಎಂಬ ಧೋರಣೆಯಲ್ಲಿ ಹೊಸ ನಂ. ಸ್ಟಾರ್‌ಗಳು ಹುಟ್ಟಿಕೊಳ್ಳುತ್ತಿರಬಹುದು. ಪುನೀತ್‌ರ ಇನ್ನೊಂದು ತೆರೆಕಂಡು, ಹೊಸ ಪ್ರಾಜೆಕ್ಟ್‌ಗಳ ಘೋಷಣೆ ಆದಮೇಲೆ ಈ ಪರಿಸ್ಥಿತಿ ಹೀಗೇ ಇರುತ್ತದೆ ಎಂದು ಹೇಳುವುದು ಕಷ್ಟವೇ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com