

ಒಂದು ಕಡೆ ಮಾಲ್ ನೆರಳಲ್ಲಿ ಮಾಯವಾಗುತ್ತಿರುವ ಚಿತ್ರಮಂದಿರಗಳು, ಮತ್ತೊಂದು ಕಡೆ ನೋಡಲೇ ಬೇಕಾದ ಚಿತ್ರಗಳನ್ನು ಮೂಲೆಗುಂಪು ಮಾಡುತ್ತಿರುವ ಈಗಿನ ವ್ಯವಸ್ಥೆ. ಇದರಿಂದ ಜನರಿಗೆ ನಿಜಕ್ಕೂ ಸಿನಿಮಾಗಳನ್ನು ತಲುಪಿಸುವುದು ಹೇಗೆ? ಸಾಮಾನ್ಯನಿಂದ ಅಸಾಮಾನ್ಯನವರೆಗೂ ಆಕರ್ಷಿಸುವ ಹಾಗೂ ಕಲೆಯನ್ನೇ ಕರಗತ ಮಾಡಿಕೊಂಡಿರುವ ಸಾಂಸ್ಕೃತಿಕ ಅಭಿರುಚಿ ಮೂಡಿಸುವ ಚಿತ್ರಗಳನ್ನು ಜನ ನೋಡುವುದಾದರೂ ಹೇಗೆ? ಎನ್ನುವ ಪ್ರಶ್ನೆ ಇಂದು, ನಿನ್ನೆಯದ್ದಲ್ಲ.
ಕಲಾತ್ಮಕ ಸಿನಿಮಾಗಳು ಕೇವಲ 'ಪ್ರಶಸ್ತಿ ಗಳಿಸಿಕೊಳ್ಳುವ ಕಲೆಗೆ ಮಾತ್ರ ಸೀಮಿತ' ಎನ್ನುವ ಸಿನಿಮಾಸಕ್ತರ ಬೇಸರದ ಮಾತುಗಳ ನಡುವೆ ಅವು ಪ್ರಶಸ್ತಿಯೊಂದಿಗೆ ಪ್ರಸಾರ ಪಯಣ ಹೊರಟಿವೆ. ಉತ್ತಮ ಹಾಗೂ ಸದಭಿರುಚಿ ಚಿತ್ರಗಳಿಗೆ ವಾಣಿಜ್ಯ ಪ್ರಧಾನ ಸಿನಿಮಾ ಮಾಧ್ಯಮ ಅವಕಾಶ ಕೊಡದಿದ್ದರೇನಂತೆ 'ಹಳ್ಳಿಗೆ ಹೋಗೋಣ ಬಾರೋ' ಎನ್ನುತ್ತಿವೆ ಅವು. ಇಂಥ ಟೂರಿಂಗ್ ಚಿತ್ರಗಳಿಗೆ 'ಮಿಡಿಯಾ ಹೌಸ್' ಟಾಕೀಸ್ ಕೊಡುವ ಭರವಸೆ ನೀಡುತ್ತಿದೆ.
ನಿರ್ದೇಶಕ, ನಟ, ನಿರ್ಮಾಪಕ ಹಾಗೂ ಕಥೆಗಾರ ಬಿ. ಸುರೇಶ್ ಸಾರಥ್ಯದ 'ಮೀಡಿಯಾ ಹೌಸ್' ಬ್ಯಾನರ್ನಡಿ 'ಸ್ಟುಡಿಯೊ ಟೂರಿಂಗ್ ಟಾಕೀಸ್' ಆರಂಭಗೊಂಡಿದ್ದು, ಇನ್ನು ಮುಂದೆ ನೆಚ್ಚಿನ ಚಿತ್ರಗಳು ಹಳ್ಳಿಗಳಿಗೂ ಪಯಣಿಸಲಿವೆ. ಹೀಗಾಗಿ ನಮ್ಮೂರಲ್ಲಿ ದೊಡ್ಡ ಪರದೆ ಮೇಲೆ ಸಿನಿಮಾ ನೋಡುವ 'ಆ ಕಾಲ ಹೋಯಿತು' ಎಂದು ಬೇಸರಿಸಬೇಕಿಲ್ಲ. ಸಿನಿಮಾ ಪ್ಯಾಡಿಸೋ ಮಂದಿಗೆ ಹಳ್ಳಿಯಲ್ಲೇ ಕೂತು ಉತ್ತಮ ಸಿನಿಮಾಗಳನ್ನು ನೋಡುವ ಭಾಗ್ಯ ಮತ್ತೆ ದೊರೆಯಲಿದೆ. 'ನಿಮ್ಮ ನೆಚ್ಚಿನ ಸಿನಿಮಾಗಳನ್ನು ತಪ್ಪದೇ ಚಿತ್ರಮಂದಿರದಲ್ಲೇ ನೋಡಿ' ಎನ್ನುವ ಬದಲು 'ನಿಮ್ಮ ಸಿನಿಮಾಗಳನ್ನು ನಿಮ್ಮೂರಿನಲ್ಲೇ ನೋಡಿ' ಎನ್ನುವ ವಾಣಿಯೊಂದಿಗೆ ಹೊರಟಿರುವ 'ಟೂರಿಂಗ್ ಟಾಕೀಸ್'ಗೆ ಬೆನ್ನೆಲುಬಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ, ಅಭಯ್ ಸಿಂಹ ಮತ್ತಿತರರು ಜೊತೆಗೂಡಿದ್ದಾರೆ.
ಈಗಾಗಲೇ ಮಂಡ್ಯ, ಮೈಸೂರು, ಹಾಸನ, ಚಾಮರಾಜ ನಗರ ಮುಂತಾದ ಜಿಲ್ಲೆಗಳಲ್ಲಿ ಒಂದಿಷ್ಟು ಚಿತ್ರಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಿಂದ 2013ರ ಏಪ್ರಿಲ್ವರೆಗೆ ನಾಲ್ಕು ಜಿಲ್ಲೆಗಳ ಶಾಲೆ, ಕಾಲೇಜು, ಹಳ್ಳಿ ಸೇರಿದಂತೆ ಒಟ್ಟು 125 ಕಡೆ 'ಪುಟ್ಟಕ್ಕನ ಹೈವೇ' ಹಾಗೂ 'ಗುಬ್ಬಚ್ಚಿಗಳು' ಮುಂತಾದ ಚಿತ್ರಗಳು ಪ್ರದರ್ಶನಗೊಂಡಿವೆ. ಅಲ್ಲಿನ ಪ್ರೇಕ್ಷಕರ ಉತ್ಸಾಹ ನೋಡಿ ಈ ಸಿನಿಮಾ ಪಯಣವನ್ನು ವಿಸ್ತರಿಸಲು ನಿರ್ಧರಿಸಿದ್ದು, 'ಟೂರಿಂಗ್ ಟಾಕೀಸ್'ಗೆ ಮತ್ತಷ್ಟು ವೃತ್ತಿಪರತೆಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಯೋಜನೆಯ ಉದ್ದೇಶ ಹೇಳಿಕೊಳ್ಳಲು ಬಿ. ಸುರೇಶ್ ಆಂಡ್ ಟೀಮ್ ಮಾಧ್ಯಮಗಳ ಇತ್ತೀಚೆಗೆ ಮುಂದೆ ಪ್ರತ್ಯೇಕ್ಷವಾಗಿತ್ತು. ಎಲ್ಲರದ್ದು ಒಂದೇ ಮಾತು, 'ಕಲಾತ್ಮಕ ಸಿನಿಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಚಿತ್ರಮಂದಿರಗಳು. ಒಂದು ವೇಳೆ ಚಿತ್ರಮಂದಿರಗಳು ಸಿಕ್ಕರೂ ಅದಕ್ಕೆ ಬಾಡಿಗೆ ಕಟ್ಟಿ ಇಂಥ ಚಿತ್ರಗಳನ್ನು ಪ್ರದರ್ಶನ ಮಾಡುವ ಶಕ್ತಿ ಇಲ್ಲ. ಹೀಗಾಗಿ ನಮ್ಮ ಸಿನಿಮಾಗಳನ್ನು ನಾವೇ ಜನರ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಟೂರಿಂಗ್ ಟಾಕೀಸ್ ಹುಟ್ಟಿಕೊಂಡಿದೆ' ಎಂಬುದು. ಮುಂದೆ 'ಗುಲಾಬಿ ಟಾಕೀಸ್', 'ನಾಯಿನೆರಳು', 'ಬೇರು', 'ಬೆಟ್ಟದ ಜೀವ' ಹಾಗೂ ಬಹುಭಾಷಾ ನಟ ಪ್ರಕಾಶ್ ರೈ ನಿರ್ದೇಶಿಸಿ, ಅಭಿನಯಿಸಿರುವ 'ದೋನಿ' ಚಿತ್ರಗಳು ಟೂರಿಂಗ್ಗೆ ಕೈ ಜೋಡಿಸಿದ್ದು, ರಾಜ್ಯಾದ್ಯಂತ ಸಿನಿಮಾ ಜರ್ನಿಯನ್ನು ಆರಂಭಿಸಲಾಗುದು.
ಈ ಸಿನಿಮಾ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳು, ಸಿನಿಮಾ ಕ್ಲಬ್ಗಳು ಸಹ ಸಹಭಾಗಿತ್ವ ಪಡೆಯಬಹುದು. ಅಲ್ಲದೆ ನಿರ್ಮಾಪಕರು ಟೂರಿಂಗ್ ಟಾಕೀಸ್ಗೆ ತಮ್ಮ ಚಿತ್ರಗಳನ್ನು ನೀಡಬಹುದು. ಆಯೋಜಕರ ವೆಚ್ಚವನ್ನು ತೆಗೆದುಕೊಂಡು ಪ್ರತಿ ಪ್ರದರ್ಶನಕ್ಕೆ ನಿಗಧಿತ ಹಣವನ್ನು ನಿರ್ಮಾಪಕರಿಗೆ ನೀಡುವ ಯೋಜನೆ ಟೂರಿಂಗ್ ಟಾಕೀಸ್ಗಿದೆ. ಮಾಹಿತಿಗೆ ಎಂ.ಜಿ. ವಿನಯ್ಕುಮಾರ್, ಮೊ. ಸಂ. 9972391577 ಇಲ್ಲಿಗೆ ಸಂಪರ್ಕಿಸಬಹುದು.
- ಕೇಶು