

ಹೃಷಿಕೇಶ್ ಮುಖರ್ಜಿ ನಿರ್ದೇಶನದ 'ಆನಂದ್' ಚಿತ್ರದ ಕ್ಲೈಮ್ಯಾಕ್ಸ್. ಮರಣಶಯ್ಯೆಯಲ್ಲಿ ಮಲಗಿರುವ ರಾಜೇಶ್ ಖನ್ನಾ ತಾವೇ ಹಿಂದೆ ಯಾವಾಗಲೋ ಮಾತನಾಡಿದ ಒಂದು ರೆಕಾರ್ಡ್ ಕೇಳುತ್ತಾ ಸದ್ದಿಲ್ಲದೆ ಕೊನೆಯುಸಿರೆಳೆಯುತ್ತಾರೆ. ಜೊತೆಗಿರುವ ಅಮಿತಾಭ್ ಬಚ್ಚನ್ 'ಆನಂದ್' ಎಂದು ಚೀರಿ ರಾಜೇಶ್ ಖನ್ನಾರ ಎದೆಯ ಮೇಲೆ ಒರಗುತ್ತಾರೆ. 'ಇಷ್ಟು ದಿನ ವಟ ವಟ ಮಾತನಾಡಿ ನನ್ನ ತಲೆ ತಿಂದಿದ್ದೀಯಾ, ಈಗ್ಯಾಕೆ ಮಾತಾಡೊಲ್ಲ' ಎಂದು ಕೂಗಾಡಿ ಮೌನಕ್ಕೆ ಶರಣಾಗುತ್ತಾರೆ. ಇದ್ದಕ್ಕಿದ್ದಂತೆ 'ಬಾಬು ಮುಷಾಯ್' ಎಂಬ ಮಾತು ಕೇಳಿಸುತ್ತದೆ. ಗ್ರಾಮಾಫೋನ್ನಲ್ಲಿ ರೆಕಾರ್ಡ್ ಆಗಿದ್ದ ರಾಜೇಶ್ ಖನ್ನಾರ ಮಾತುಗಳ ನಡುವೆ ಇದ್ದ ಸೈಲೆನ್ಸ್ ಆ ಸಂದರ್ಭದಲ್ಲಿ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಈ ದೃಶ್ಯದ ಸ್ಪೆಷಾಲಿಟಿ. ಮಾತು ಮತ್ತು ಮೌನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡ ಕೆಲವೇ ಚಿತ್ರಗಳಲ್ಲಿ 'ಆನಂದ್' ಕೂಡ ಒಂದು. ಈ ತಂತ್ರ ಕೇವಲ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಮಾತ್ರ ಅಲ್ಲದೆ, ಇಡೀ ಚಿತ್ರವನ್ನು ಆವರಿಸಿಕೊಂಡಿತ್ತು.
ಕನ್ನಡ ಚಿತ್ರರಂಗದ ಇತ್ತೀಚಿನ ಮಾತನಾಡುವ ಟ್ರೆಂಡ್ ನೋಡಿದಾಗ 'ಆನಂದ್' ಚಿತ್ರ ಮತ್ತೆ ಮತ್ತೆ ನೆನಪಾಗುತ್ತದೆ. ಅದರ ಜೊತೆಗೆ, ಮಾತಿಲ್ಲದೆ ಸಿನಿಪ್ರಿಯರನ್ನು ರೋಮಾಂಚನಗೊಳಿಸಿದ ಕಮಲ್ಹಾಸನ್ರ 'ಪುಷ್ಪಕ ವಿಮಾನ' ಕೂಡ.
ಕನ್ನಡದ ಇತ್ತೀಚಿನ 'ಸಿಂಪಲ್ಲಾಗೊಂದ್ ಲವ್ಸ್ಟೋರಿ' ಸೇರಿದಂತೆ, ಯೋಗರಾಜಭಟ್ಟರ 'ಪಂಚರಂಗಿ'ಯಂಥ ಮಾತನಾಡುವ ಚಿತ್ರಗಳು, ಮಠ ಗುರುಪ್ರಸಾದ್ರ ಮೂರು ಚಿತ್ರಗಳು, ಮಾತನ್ನೇ ನಂಬಿಕೊಂಡಂಥವು. ಇಂಥ ಚಿತ್ರಗಳ ಬಗ್ಗೆ ಮೊದಲಿನಿಂದಲೂ ಕೊಂಕು ಮಾತುಗಳು ಕೇಳುತ್ತಲೇ ಬಂದಿವೆ. ಈಗ 'ಡೈರೆಕ್ಟರ್ ಸ್ಪೆಷಲ್' ಸಿನಿಮಾ ಬಿಡುಗಡೆಯಾದ ನಂತರ ಸಿನಿಮಾಗಳಲ್ಲಿ ಮಾತು ಎಷ್ಟಿರಬೇಕು ಎಂಬ ಬಗ್ಗೆ ಸಿನಿಮಾಪ್ರಿಯರಿಂದ ಮತ್ತೆ ಕ್ಯಾಲ್ಕುಲೇಟೆಡ್ ಮಾತುಗಳು ಕೇಳಿಬರುತ್ತಿವೆ. ಗುರು ಮಾತು ಅತಿಯಾಯ್ತು, ಸಿನಿಮಾ ಎಂದರೆ ಬರಿಮಾತು ಬರಿಮಾತು ಅಷ್ಟೇನಾ? ಎಂಬ ವಾಯ್ಸ್ ಓವರ್ಗಳು ಮತ್ತೆ ಉದ್ಭವವಾಗಿವೆ.
ಅದಕ್ಕೆ ಉತ್ತರವಾಗಿ ಅದು ಗುರುಪ್ರಸಾದ್ರ ಟೇಸ್ಟ್ ಮತ್ತು ಸ್ಟ್ರೆಂಥ್. ಅಲ್ಲದೆ, ಸಂಭಾಷಣೆ ಎನ್ನುವುದು ಗುರು ಚಿತ್ರಗಳ 'ವಾಯ್ಸ್' . ಹಾಗಾಗಿ, ಅದೇ ಸರಿ ಎನ್ನುವವರೂ ಇದ್ದಾರೆ. ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮಾ ಎಂಬುದರ ಬಗ್ಗೆ ದೂಸ್ರಾ ಮಾತಿಲ್ಲ ನಿಜ. ಆದರೆ, ಗುರುಪ್ರಸಾದ್ರ ಚಿತ್ರದಲ್ಲಿ ಡಬಲ್ ಮೀನಿಂಗ್, ಸಂಭಾಷಣೆಗಳು, ಮಾತಿನ ಹಾಹಾಕಾರ ಇರುತ್ತದೆ ಎಂಬುದು ಈಗಾಗಲೇ ಎಲ್ಲರೂ ಒಪ್ಪಿಕೊಂಡ ವಿಷಯ. ಅವರ ಮೂರನೇ ಚಿತ್ರ ಬಿಡುಗಡೆಯಾದ ಮೇಲೂ ಅದನ್ನೇ ಹೇಳುವುದರಿಂದ ಪ್ರಯೋಜನವೇನು? ಅದು ಅವರಿಗೆ ರುಚಿಸುವುದೂ ಇಲ್ಲ. ಹೆಚ್ಚೆಂದರೆ, 'ನೀವೆಲ್ಲ ಸೇರ್ಕೊಂಡು ನನ್ನ ಸಿನಿಮಾನ ಹಾಳು ಮಾಡ್ತಾ ಇದೀರಾ' ಎಂದು ರೇಗಬಹುದು ಅಷ್ಟೆ. ಅದರ ಬದಲು 'ಆನಂದ್' ಚಿತ್ರದ ಉದಾಹರಣೆ ಕೊಟ್ಟು ಅಲ್ಲೂ ಸಿಕ್ಕಾಪಟ್ಟೆ ಮಾತಿದೆ. ಆದರೆ ಅದರ ಜೊತೆಗೆ ಅದನ್ನು ಮೀರಿಸುವಂಥ ಸೈಲೆನ್ಸ್ ಇದೆ ಎಂಬ ವಾದ ಮುಂದಿಟ್ಟರೆ ಸರಿಯೇನೋ. ಅದು ಬಿಟ್ಟು ಗುರು ಮಾತನ್ನೇ ಬಿಡಬೇಕು ಎಂದರೆ ಅವರ ಪ್ರಮುಖ ಶಕ್ತಿಯನ್ನೇ ಕಸಿದುಕೊಂಡಂತಾಗುವುದಿಲ್ಲವೇ? ಎನ್ನುವುದು ಈ ವಾದ.
ಬಾಲಿವುಡ್ನ ಹಿರಿಯ ತಲೆ ಎನಿಸಿದ ಹೃಷಿಕೇಶ್ ಮುಖರ್ಜಿ ಮಿಡ್ಲ್ ಕ್ಲಾಸ್ ಕುಟುಂಬಗಳ ಚಿತ್ರಗಳಿಗೆ ಹೆಸರಾಗಿದ್ದರೂ ಅವರ ಚಿತ್ರಗಳ ಕ್ವಾಲಿಟಿ ಮಾತ್ರ ಹೈ ಕ್ಲಾಸ್ ಎಂಬುದು ಎಲ್ಲರಿಗೂ ಗೊತ್ತು. ಹಾಗಂತ ನೀವೇಕೆ ಬೇರೆ ರೀತಿಯ ಚಿತ್ರಗಳನ್ನು ಮಾಡಬಾರದು ಎಂದು ಮುಖರ್ಜಿ ಅವರನ್ನು ಕೇಳಲಾಗುತ್ತದೆಯೇ? ತಮಿಳು ನಿರ್ದೇಶಕ ಶಂಕರ್ ಅವರನ್ನ ನೀವೇಕೆ ಕೇವಲ ಭ್ರಷ್ಟಾಚಾರದ ಸಿನಿಮಾಗಳನ್ನೇ ಮಾಡ್ತೀರಿ ಎಂದು ಕೇಳಬೇಕು ಎಂದು ಯಾರಿಗೂ ಅನಿಸುವುದಿಲ್ಲ? ವಿಶುಯಲ್ ಟ್ರೀಟ್ ಎಂದು ಬಣ್ಣಿಸಲಾಗುವ ಅನೇಕ ದೃಶ್ಯಕಾವ್ಯಗಳನ್ನೂ ಕೂಡ 'ಅದೇ ಭೂಮಿ ಅದೇ ಬಾನು' ಎಂದು ಹೀಗಳೆದರೆ ಹೇಗಿರುತ್ತದೆ? ಹಾಗಾಗಿ, ಯಾವ ರೀತಿಯ ಸಿನಿಮಾ ಮಾಡಬೇಕು ಎಂಬುದು ನಿರ್ದೇಶಕನಿಗೆ ಬಿಟ್ಟಿದ್ದು. ಅದನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹೊರಟರೆ ಅದು ಅವನ ಶಕ್ತಿ ಕುಂದಿಸಿದಂತೆ ಎಂಬುದು ಗುರುಪ್ರಸಾದ್ರಂಥ ನಿರ್ದೇಶಕರ ಪರವಾಗಿ ನಿಲ್ಲುವವರ ವಾದ.
ಅಂತೂ ಗಾಂಧಿನಗರದಲ್ಲಿ ಸದ್ಯಕ್ಕೆ ಮಾತಿನ ಭರಾಟೆ ಜೋರಾಗಿದೆ. ಆದರೆ, ಮಾತು ಬಿದ್ದು ಹೋದರೆ ಸಿನಿಮಾ ಕೂಡ ಬಿದ್ದು ಹೋಗುತ್ತದೆ ಎಂದು ನಂಬಿದವರಲ್ಲಿ ಗುರುಪ್ರಸಾದ್ ಕೂಡ ಒಬ್ಬರು. ಈಗ, ನಾಲ್ಕು ಜನ ಮಾತಾಡ್ಕೋತಾರೆ ಎಂಬ ಕಾರಣಕ್ಕೆ ಮುಂದೆ ಅವರು ಮಾತಿಲ್ಲದ ಚಿತ್ರ ಮಾಡ್ತಾರಾ? ಅಥವಾ ಈ ಮಾತುಗಳನ್ನೆಲ್ಲಾ ಹಾಗೇ ತೇಲಿಸಿಬಿಡ್ತಾರಾ ಎಂಬುದು ಮುಂದಿನ ಕುತೂಹಲ.
- ಹರಿ