

ಇತ್ತೀಚೆಗೆ ಶಿವಾಜಿನಗರ ಹನುಮಂತನಗರಕ್ಕೆ ಶಿಫ್ಟ್ ಆಗಿತ್ತು. ಅದಕ್ಕೆ ಕಾರಣರಾದವರು ನಿರ್ಮಾಪಕ ಕೋಟಿ ರಾಮು, ನಟ ದುನಿಯಾ ವಿಜಯ್ ಮತ್ತು ನಿರ್ದೇಶಕ ಪಿ.ಎನ್.ಸತ್ಯ. ಕೆಲವು ವರ್ಷಗಳ ಹಿಂದೆ 'ಕಲಾಸಿಪಾಳ್ಯ'ದಲ್ಲಿದ್ದ ರಾಮು ಈಗ 'ಶಿವಾಜಿನಗರ'ಕ್ಕೆ ಕೈಹಾಕಿದ್ದಾರೆ ಎಂಬುದು ಹೊಸ ಸುದ್ದಿ.
ಈ ಮೂರೂ ಜನ ಒಟ್ಟಾಗಿ ಹನುಮಂತನಗರದಲ್ಲಿ ಸೇರಿದ್ದುದು ರಾಮು ಬ್ಯಾನರ್ನ ಹೊಸ ಚಿತ್ರ 'ಶಿವಾಜಿನಗರ'ದ ಮುಹೂರ್ತಕ್ಕಾಗಿ. ಅಂದು ಮುಹೂರ್ತದ ಸ್ಥಳದಲ್ಲಿ ವಿಜಯ್, ರಾಮು, ಸತ್ಯ ಅವರ ಜೊತೆ, ಅವಿನಾಶ್, ಹಿರಿಯ ನಟಿ ತ್ರಿವೇಣಿ, ಸುಮಿತ್ರಾ, ಹಂಸ ಮುಂತಾದ ಕಲಾವಿದರೂ ಪಾಲ್ಗೊಂಡಿದ್ದರು. ಮಾಧ್ಯಮದೊಂದಿಗೆ ಮಾತನಾಡುತ್ತಾ ಶಿವಾಜಿನಗರದ ಸ್ಪೆಷಾಲಿಟಿ ಬಗ್ಗೆ ಮಾತನಾಡಿತು ಚಿತ್ರತಂಡ.
ಬಸವನಗುಡಿ ಅಂತ ಹೆಸರಿಟ್ಟರೆ ಅದರಲ್ಲಿ ಫೋರ್ಸ್ ಇರಲ್ಲ. ಹಾಗಾಗಿ ಹೆಸರಲ್ಲೇ ಖದರ್ ಇರುವ ಶಿವಾಜಿನಗರಕ್ಕೆ ಗುಳೆ ಹೋದೆವು ಎನ್ನುವ ಚಿತ್ರತಂಡ ಬಸವನಗುಡಿ ಮತ್ತು ಶಿವಾಜಿನಗರದ ನಡುವಿನ ಅಂತರದ ಬಗ್ಗೆ ತನ್ನದೇ ಆದ ವಿವರಣೆ ನೀಡುತ್ತದೆ. ಹಾಗಾಗಿ ದುನಿಯಾ ವಿಜಯ್ ತಮ್ಮ ಪಾತ್ರದ ಮೂಲಕ 'ಬದ್ಕಕ್ ಧಮ್ ಇರ್ಬೇಕು' ಎಂಬ ಅಡಿಬರಹವನ್ನು ಒತ್ತಿ ಹೇಳಲಿದ್ದಾರಂತೆ. ವಿಜಯ್ ಪಾತ್ರದ ಹೆಸರು ರಾಮ್ ಆದರೂ ಅವರ ವೇಷ ರಹೀಮನದು ಎಂಬುದು ಶಿವಾಜಿನಗರದ ಸ್ಪೆಷಾಸಿಟಿ. ಹೈದರಾಬಾದ್ ಕುಮಾರ್ ಅವರು ಈ ಕಥೆ ಹೇಳಿದ ತಕ್ಷಣ ನಿರ್ದೇಶಕ ಪಿ.ಎನ್.ಸತ್ಯ ಒಮ್ಮೆಲೇ ಕಾರ್ಯಪ್ರವೃತ್ತರಾದರಂತೆ. ದುನಿಯಾ ವಿಜಿ ಕೂಡ ಶಿವಾಜಿನಗರಕ್ಕೆ ಕಾಲಿಡಲು ಒಪ್ಪಿಗೆ ಕೊಟ್ಟಿದ್ದೇ ತಡ ಶೂಟಿಂಗ್ ಶುರುವಾಗಿದೆ. ಚಿತ್ರದ ನಿರೂಪಣೆಯೇ ಚಿತ್ರದ ಹೈಲೈಟ್ ಎಂಬುದು ನಿರ್ದೇಶಕರ ಮಾತು.
ರಾಮು ಚಿತ್ರ ಎಂದಮೇಲೆ ಅಲ್ಲಿ ಆ್ಯಕ್ಷನ್ಗೆ ಹೆಚ್ಚು ಒತ್ತು. ಹಾಗಾಗಿ, ಇದೊಂದು ಆ್ಯಕ್ಷನ್ ಪ್ರಧಾನ ಚಿತ್ರ ಎಂದು ಊಹಿಸಲು ಅದೆಷ್ಟು ಹೊತ್ತು? ತಮ್ಮ ಖ್ಯಾತಿಗೆ ಧಕ್ಕೆ ಬಾರದಂತೆ 'ಶಿವಾಜಿನಗರ' ಚಿತ್ರದಲ್ಲೂ ಒಟ್ಟು 6 ಫೈಟ್ಗಳನ್ನಿಟ್ಟಿದ್ದು ಮೇಕಿಂಗ್ ಕೂಡ ರಾಮು ಬ್ಯಾನರ್ಗೆ ತಕ್ಕಂತೆ ಮೂಡಿಬರಲಿದೆ ಎಂಬುದು ಚಿತ್ರತಂಡ ನೀಡುವ ಎಂದಿನ ಮಾಹಿತಿ. ಅದರಲ್ಲಿ ಒಂದು ಫೈರ್ ಫೈಟ್ ಕೂಡ ಇರಲಿದೆ ಎಂಬುದು ಮಾತ್ರ ವಿಶೇಷ ಮಾಹಿತಿ. ಉಳಿದಂತೆ ಚಿತ್ರದ ಶೇಕಡಾ 40ರಷ್ಟು ಬಜೆಟ್ ಆ್ಯಕ್ಷನ್ ದೃಶ್ಯಗಳಿಗೇ ಮೀಸಲಂತೆ.
ಅದರಷ್ಟೇ ವಿಶೇಷವಾದ ಇನ್ನೊಂದು ಮಾಹಿತಿ ಎಂದರೆ ಫಾರ್ ಎ ಛೇಂಜ್, ತಾಯಿ ಸೆಂಟಿಮೆಂಟ್ ಬಿಟ್ಟು ತಂದೆ ಸೆಂಟಿಮೆಂಟ್ಗೆ ಹೆಚ್ಚು ಪ್ರಾಶಸ್ತ್ಯ ಇರಲಿದ್ದು, ವಿಜಯ್ರ ತಂದೆ ಪಾತ್ರದಲ್ಲಿ ಅವಿನಾಶ್ ಕಾಣಿಸಿಕೊಂಡಿದ್ದಾರೆ. ಮುಹೂರ್ತ ಹನುಮಂತನಗರದಲ್ಲಿ ನಡೆದರೂ ಚಿತ್ರದ ಹೆಚ್ಚಿನ ಚಿತ್ರೀಕರಣ ಶಿವಾಜಿನಗರ ಮತ್ತು ಮಿನರ್ವ ಮಿಲ್ನಲ್ಲಿ ನಡೆಯಲಿದೆಯಂತೆ. ಜೆಸ್ಸಿಗಿಪ್ಟ್ ಸಂಗೀತದಲ್ಲಿ ಐದು ಹಾಡುಗಳು ತಯಾರಾಗುತ್ತಿವೆ. ಆದರೆ ಅವು ಶಿವಾಜಿನಗರ್ ಸ್ಟೈಲ್ನಲ್ಲಿಯೇ ಇರುತ್ತವಾ ಎಂಬುದರ ಬಗ್ಗೆ ಮಾತ್ರ ಯಾವ ಮಾಹಿತಿ ಇಲ್ಲ. ವಿಜಯ್ಗೆ ನಾಯಕಿಯಾಗಿ ಪರೂಲ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ.
- ಹ್ಯಾರಿ