

ಕೆಲವು ದಿನಗಳಿಂದ ಒಂದು ದೊಡ್ಡ ಹಿಟ್ ಸಿಗದೆ ನನ್ನ ಕೆರಿಯರ್ ಸರಿದಾರಿಯಲ್ಲಿ ಹೋಗುತ್ತಿದೆಯೇ ಎಂಬ ಆತಂಕದಲ್ಲಿದ್ದ ಶಿವರಾಜ್ಕುಮಾರ್ ಅವರಿಗೆ ಸೂರಿದಾರಿಯಲ್ಲಿ ಯಶಸ್ಸು ಸಿಕ್ಕಿದೆ. ಆದರೂ ಈ ಸಮಯದಲ್ಲಿ ಶಿವರಾಜ್ಕುಮಾರ್ ಯಶಸ್ಸು ಸಿಕ್ಕ ಮಾತ್ರಕ್ಕೆ ಮತ್ತೆ ಅಂಥ ಚಿತ್ರಗಳನ್ನೇ ಬೆನ್ನುಹತ್ತಿಹೋಗುವುದಿಲ್ಲ ಎನ್ನುತ್ತಾರೆ. ಅವರನ್ನ ಯಾರಾದರೂ, ಏನ್ ಕಾಮಿಡಿ ಮಾಡ್ತಿದೀರಾ ಎಂದು ಕೇಳಿದರೆ ಅದಕ್ಕೆ 'ಹೌದು' ಎಂಬ ಉತ್ತರ ನೀಡುತ್ತಾರೆ ಅವರು. ನಿಜ. ಈ ವಿಷಯದಲ್ಲಿ ಶಿವಣ್ಣ ಸೀರಿಯಸ್ ಆಗಿದ್ದಾರೆ. ಸದ್ಯಕ್ಕೆ ಮಚ್ಚು ಲಾಂಗಿನ ಚಿತ್ರಗಳನ್ನು ಬಿಟ್ಟು ಬೇರೆ ಕಡೆ ನೋಡುತ್ತಿದ್ದೇನೆ. ನನ್ನ ಒಲವು ಕಾಮಿಡಿ ಚಿತ್ರಗಳ ಕಡೆಗೆ ಎಂಬುದು ಅವರ ಖಡಕ್ ಮಾತು.
ಕಡ್ಡಿಪುಡಿಯಂಥ ಅಂಡರ್ವರ್ಲ್ಡ್ ಕಥೆಯ ಚಿತ್ರ ಹಿಟ್ ಆದ ಖುಷಿಯಲ್ಲಿ ಕಡ್ಡಿಪುಡಿ ಪಾರ್ಟ್ 2 ಮಾಡುವ ಯೋಚನೆ ಇಲ್ಲದಿದ್ದರೂ, ಸೂರಿ ನಿರ್ದೇಶನದಲ್ಲಿ ಇನ್ನೊಂದು ಸಿನಿಮಾ ಮಾಡಬೇಕು ಎಂಬುದನ್ನು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಕೊಂಡ ಶಿವಣ್ಣ ನಿರಾಳರಾಗಿದ್ದಂತೆ ಕಂಡುಬಂದರು.
ಕಡ್ಡಿಪುಡಿಯ ಬಗ್ಗೆ ಮಾತನಾಡುತ್ತಾ ಸೂರಿ ನನಗೆ ಹೆಚ್ಚು ಹೊತ್ತು ಕಥೆ ಹೇಳಲಿಲ್ಲ. ಆದರೆ ಅವರು ಹೇಳುವ ಶೈಲಿಯಲ್ಲಿ ನನಗೆ ಅವರು ಎಂಥ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬುದು ಅರ್ಥವಾಗಿತ್ತು ಎನ್ನುತ್ತಾರೆ ಶಿವಣ್ಣ.
ರೌಡಿಸಂ ಸಿನಿಮಾಗಳನ್ನು ಮಾಡಿದಾಗಲೆಲ್ಲ ನನಗೆ ಒಳ್ಳೆಯ ಪ್ರತಿಕ್ರಿಯೆಯೇ ಬರುತ್ತದೆ. ಓಂ, ಸಂತ, ಜೋಗಿ, ಕಡ್ಡಿಪುಡಿ ಹೀಗೆ. ಈ ಸಬ್ಜೆಕ್ಟ್ನ ಒಂದೆರಡು ಕೆಟ್ಟ ಸಿನಿಮಾಗಳನ್ನೂ ಮಾಡಿದ್ದೇನೆ. ಆದರೆ ಯಾರನ್ನೂ ನಾನು ದೂಷಿಸುವುದಿಲ್ಲ. ಏಕೆಂದರೆ ಅವೆಲ್ಲ ನನ್ನ ಚಿತ್ರಗಳೇ. ನಾನು ಎಲ್ಲ ಚಿತ್ರಗಳನ್ನು ಪ್ರೀತಿಯಿಂದಲೇ ಮಾಡಿರುತ್ತೇನೆ. ಕೆಲವೊಮ್ಮೆ ಗೆಲುವು, ಕೆಲವೊಮ್ಮೆ ಸೋಲು ಸಾಮಾನ್ಯ. ಆದರೆ ಒಳ್ಳೆಯ ಸಿನಿಮಾ ಮಾಡಿದಾಗಲೂ ಸೋತರೆ ನೋವಾಗುತ್ತದೆ. ಆ ಲೆಕ್ಕದಲ್ಲಿ 'ಅಂದರ್ಬಾಹರ್' ಒಳ್ಳೆಯ ಚಿತ್ರವಾಗಿತ್ತು. 'ಚಿಗುರಿದ ಕನಸು' ಕೂಡ ಇದೇ ಪಟ್ಟಿಗೆ ಬರುವಂಥದ್ದು ಎಂದು ತಮ್ಮ ಚಿತ್ರಗಳ ಸ್ವವಿಮರ್ಶೆ ಮಾಡಿಕೊಳ್ಳುತ್ತಾರೆ ಶಿವರಾಜ್ಕುಮಾರ್.
ಕಡ್ಡಿಪುಡಿಯಲ್ಲಿ ಗುಂಡು ಹಾಕುವ ದೃಶ್ಯಗಳಲ್ಲಿ ಇರುಸು ಮುರುಸಾಗಲಿಲ್ಲವೇ ಎಂದರೆ ಇಲ್ಲ 'ಓಂ' ಚಿತ್ರದಲ್ಲೂ ಅಂಥ ದೃಶ್ಯಗಳಿದ್ದವು ಎನ್ನುತ್ತಾ ಒಂದು ದೃಶ್ಯವನ್ನು ಅಲ್ಲಿಯೇ ನೆನಪಿಸಿಕೊಂಡು ಶಿವಣ್ಣ ವಿವರಿಸಿದ್ದನ್ನು ಕೇಳಿದವರಿಗೆ ಅಷ್ಟು ಹಳೆಯ ಚಿತ್ರದ ನೆನಪುಗಳು ಇನ್ನೂ ಮಾಸಿಲ್ಲವೇ ಎಂಬ ಅನುಮಾನ. ಆಫ್ಕೋರ್ಸ್ ಓಂ ಒಂದೇ ಅಲ್ಲ, ನನ್ನ ಎಲ್ಲ ಚಿತ್ರಗಳೂ ನನಗೆ ನೆನಪಿರುತ್ತವೆ, ನಾನು ಕೆಟ್ಟ ಸಿನಿಮಾಗಳನ್ನೂ ಮರೆಯೋದಿಲ್ಲ ಎಂದು ಮಾತು ಮುಂದುವರಿಸಿದ ಶಿವಣ್ಣ ಸದ್ಯಕ್ಕೆ ಯಾವ ಹೊಸ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲವಂತೆ. 'ಆರ್ಯನ್', 'ಭಜರಂಗಿ' ಜೊತೆಗೆ ರಾಧಿಕಾ ತಮ್ಮದೇ ಪ್ರೊಡಕ್ಷನ್ನಲ್ಲಿ ಮತ್ತೆ ಶಿವಣ್ಣರ ತಂಗಿಯಾಗಿ ಅಭಿನಯಿಸುವ ಇರಾದೆ ವ್ಯಕ್ತಪಡಿಸಿದ್ದರಿಂದ, ಸಾಯಿಪ್ರಕಾಶ್ ನಿರ್ದೇಶನದಲ್ಲಿ 'ಅಣ್ಣ ತಂಗಿ' ಚಿತ್ರ ಒಪ್ಪಿಕೊಂಡಿದ್ದಾರೆ. ಅದಾದ ನಂತರ ಶಿವಣ್ಣನ ಚಿತ್ತ, ಕಾಮಿಡಿ ಚಿತ್ರಗಳತ್ತ.
ಈ ಹಿಂದೆ ಶಿವಣ್ಣ ಕಾಮಿಡಿ ಚಿತ್ರ ಮಾಡಿಲ್ಲ ಎಂದಲ್ಲ. 'ಆಸೆಗೊಬ್ಬ ಮೀಸೆಗೊಬ್ಬ', 'ಮಾವನಿಗೆ ತಕ್ಕ ಅಳಿಯ', 'ಗಡಿಬಿಡಿ ಅಳಿಯ', 'ಗಡಿಬಿಡಿ ಕೃಷ್ಣ', 'ಅಮ್ಮಾವ್ರ ಗಂಡ', 'ಅಣ್ಣಾವ್ರ ಮಕ್ಕಳು', 'ಗಲಾಟೆ ಅಳಿಯಂದ್ರು', 'ಕೋದಂಡರಾಮ' ಸೇರಿದಂತೆ 'ಮುದ್ದಿನ ಕಣ್ಮಣಿ'ಯಂಥ ಸಾಂಸಾರಿಕ ಹಾಸ್ಯ ಚಿತ್ರಗಳೂ ಅವರ ಅಕೌಂಟ್ನಲ್ಲಿವೆ. ಆದರೆ ದಿನೇಶ್ಬಾಬು ನಿರ್ದೇಶನದ 'ಇನ್ಸ್ಪೆಕ್ಟರ್ ವಿಕ್ರಂ' ಚಿತ್ರಕ್ಕೆ ಶಿವಣ್ಣರ ಕಾಮಿಡಿ ಚಿತ್ರಗಳ ಪೈಕಿ ವಿಶೇಷ ಸ್ಥಾನವಿದೆ ಎಂದರೆ ತಪ್ಪಲ್ಲ. ಈಗ ಮತ್ತೆ ಕಾಮಿಡಿ ಚಿತ್ರಗಳತ್ತ ಹೊರಳಿರುವ ಶಿವಣ್ಣ, ಇನ್ಸ್ಪೆಕ್ಟರ್ ವಿಕ್ರಂ ಪಾರ್ಟ್ 2 ಮಾಡಿದರೆ ಅದು ಅಭಿಮಾನಿಗಲಿಗೆ ಹಬ್ಬವೇ. ಆದರೆ ಸದ್ಯಕ್ಕೆ ಸ್ಯಾಂಡಲ್ವುಡ್ ಕಿಂಗ್ ಕಾಮಿಡಿ ಕಿಂಗ್ ಆಗಲಿದ್ದಾರೆ ಎಂಬುದಷ್ಟೇ ಸುದ್ದಿ.
- ಹರಿ