ಕೃಷ್ಣನ ಜಾಲಿ ರೈಡು

'ಹುಡುಗರು' ಚಿತ್ರದ ಮೂಲಕ ಸಣ್ಣಪಾತ್ರದಲ್ಲೇ ಗಮನ ಸೆಳೆದ ನಟ ಕೃಷ್ಣ.
ಕೃಷ್ಣನ ಜಾಲಿ ರೈಡು
Updated on: 

'ಹುಡುಗರು' ಚಿತ್ರದ ಮೂಲಕ ಸಣ್ಣಪಾತ್ರದಲ್ಲೇ ಗಮನ ಸೆಳೆದ ನಟ ಕೃಷ್ಣ. 'ಸಿನಿಮಾ ಜಗದಲ್ಲಿರೋ ಹುಡುಗರಲಿ ನಾನೂ ಒಬ್ಬ' ಎನ್ನುತ್ತಿದ್ದ ಕೃಷ್ಣ ಈಗ ಮತ್ತೊಮ್ಮೆ ಹುಡುಗರ ಸಂಗಡದಲ್ಲಿ ಸುದ್ದಿಯಲ್ಲಿದ್ದಾರೆ. ಅದು ಪ್ರೀತಂ ಗುಬ್ಬಿ ನಿರ್ದೇಶನದ 'ನಮ್ ದುನಿಯಾ ನಮ್ ಸ್ಟೈಲ್‌' ಚಿತ್ರದ ಮೂಲಕ. 'ಮದರಂಗಿ' ಚಿತ್ರದ ಮೂಲಕ ಸೋಲೋ ಹೀರೋ ಆಗಿ ತಕ್ಕಮಟ್ಟಿಗೆ ಗೆಲುವು ಕಂಡಿರುವ ಕೃಷ್ಣ ಈ ವಾರ ತಮ್ ದುನಿಯಾ ತಮ್ ಸ್ಟೈಲ್ ತೋರಿಸಲು ರೆಡಿಯಾಗಿದ್ದಾರೆ. ಮೂರು ಜನ ನಾಯಕರಿದ್ದ ಮಾತ್ರಕ್ಕೆ ಇದನ್ನು ಮಲ್ಟಿಸ್ಟಾರರ್ ಸಿನಿಮಾ ಎನ್ನಲಿಕ್ಕಾಗುವುದಿಲ್ಲವಾದರೂ ಈ ಚಿತ್ರದಿಂದ ಸ್ಟಾರ್ ಆಗಬೇಕು ಎಂದು ಕನಸು ಕಾಣುತ್ತಿರುವ ಮೂವರು ಹುಡುಗರಲ್ಲಿ ಕೃಷ್ಣ ಕೂಡ ಒಬ್ಬರು. ತಮ್ಮ ನಾಯಕತ್ವದ ಎರಡನೇ ಚಿತ್ರದ ಬಿಡುಗಡೆಯ ಹೊಸ್ತಿಲಲ್ಲಿ ಕೃಷ್ಣ ಅವರದ್ದೇ ಸ್ಟೈಲ್‌ನಲ್ಲೇ ಅವರ ಫಿಲ್ಮೀ ದುನಿಯಾದ ಬಗ್ಗೆ ಒಂದೆರಡು ಮಾತುಗಳು.

ನಿಮ್ಮನ್ನ ಸುನಿಲ್ ನಾಗಪ್ಪ ಅಂತ ಕರೀಬೇಕಾ ಅಥವಾ ಕೃಷ್ಣ ಅಂತ ಕರೀಬೇಕಾ?
ಇಲ್ಲ ನನ್ನ ಸಿನಿಮಾ ಹೆಸರು ಕೃಷ್ಣ ಅಂತಲೇ. ಹಾಗೇ ಕರೀರಿ. ಸಿಕ್ಕಿರುವ ಅಲ್ಪ ಸ್ವಲ್ಪ ಹೆಸರು ಎರಡೆರಡು ಹೆಸರುಗಳಿಗೆ ಹಂಚಿ ಹೋಗೋದು ಬೇಡ.

ಮದರಂಗಿಯ ಯಶಸ್ಸು ಎಷ್ಟರಮಟ್ಟಿಗೆ ನಿಮಗೆ ಸಹಾಯ ಮಾಡಿದೆ?
ಒಂದು ಐಡೆಂಟಿಟಿ ಸಿಕ್ಕಿದೆ. ಒಬ್ಬ ಒಳ್ಳೆಯ ಹೀರೋ ಸಿಕ್ಕಂಗಾಯ್ತು ಅಂತ ಹಲವರು ಹೇಳಿದ್ದನ್ನು ಕೇಳಿದ್ದೇನೆ. ಖುಷಿ ಇದೆ, ಜವಾಬ್ದಾರಿಯೂ ಹೆಚ್ಚಾಗಿದೆ.

'ನಮ್ ದುನಿಯಾ ನಮ್ ಸ್ಟೈಲ್‌'ನಲ್ಲಿ ನಿಮ್ ರೋಲ್ ಏನು?
ನನ್ನದು ಸ್ಲಮ್ ಹುಡುಗನ ರೋಲ್. ಮಾತು ಜಾಸ್ತಿ. ಆದರೆ ಅಮಾಯಕತೆಯೂ ಇರುವ ಹುಡುಗನ ಪಾತ್ರ. ಇಂಗ್ಲಿಷ್ ಬಾರದಿದ್ದರೂ ಬಟ್ಲರ್ ಇಂಗ್ಲಿಷ್ ಮಾತನಾಡುವ ಹುಚ್ಚು. 'ಮದರಂಗಿ' ಹೀರೋ ಇವನೇನಾ ಅಂತ ಆಶ್ಚರ್ಯ ಆಗುವಷ್ಟು ವಿಭಿನ್ನ ಪಾತ್ರ.

ಸೋಲೋ ಹೀರೋ ಆದ ತಕ್ಷಣ ಮತ್ತೆ ಮೂರು ಜನ ನಾಯಕರ ಸಿನಿಮಾ ಮಾಡಿದ್ದೀರಾ. ರಿಸ್ಕ್ ಅನಿಸಲಿಲ್ವಾ?
ಹಾಗೇನಿಲ್ಲ. ಒಂದು ಒಳ್ಳೆಯ ಸಿನಿಮಾದಲ್ಲಿ ನಾನಿರಬೇಕು ಎಂಬುದಷ್ಟೇ ನನ್ನ ಆಸೆ. ಎಷ್ಟು ಜನ ಹೀರೋಗಳಿದ್ದರೂ ಓಕೆ. ನನಗೆ ನನ್ನ ಪಾತ್ರ ಖುಷಿ ಕೊಟ್ಟರೆ ಸಾಕು. ಹಾಗಾಗಿಯೇ 'ಮದರಂಗಿ'ಯ ನಂತರ ಸುಮಾರು 40 ಸೋಲೋ ಹೀರೋ ಕಥೆಗಳನ್ನು ರಿಜೆಕ್ಟ್ ಮಾಡಿದ್ದೇನೆ.

'ಮದರಂಗಿ' ನಿರ್ದೇಶಕರಿಗೂ, 'ನಮ್ ದುನಿಯಾ ನಮ್ ಸ್ಟೈಲ್‌' ನಿರ್ದೇಶಕರಿಗೂ ಏನು ವ್ಯತ್ಯಾಸ ಕಂಡುಕೊಂಡಿರಿ?
ಅವರು ಹೊಸಬರು, ಇವರು ಈಗಾಗಲೇ ಪ್ರೂವ್ ಆಗಿರುವ ನಿರ್ದೇಶಕ. ಆದರೆ, ಪ್ರೀತಂ ಗುಬ್ಬಿ ತುಂಬಾ ಫ್ರೆಂಡ್ಲೀ ಆಗಿರ್ತಾರೆ. ಕಲಾವಿದರಿಗೆ ತುಂಬಾ ಕಂಫರ್ಟಬಲ್. ಅಲ್ಲದೆ ಅವರೇ ಅಭಿನಯ ಮಾಡಿ ತೋರಿಸ್ತಾರೆ. ಸ್ಪಾಟ್‌ನಲ್ಲಿ ಬದಲಾವಣೆಗಳಿಗೆ ಅವಕಾಶ ಕೊಡ್ತಾರೆ.

-ನಾಯಕನಟನಾಗಿ ಬೆಳೆಯಲು ನಿಮಗೆ ಸಹಾಯ ಮಾಡುವಂಥ ಯಾವ ಅಂಶಗಳಿವೆ 'ನಮ್ ದುನಿಯಾ ನಮ್ ಸ್ಟೈಲ್‌'ನಲ್ಲಿ?
ಇಲ್ಲಿ ಹ್ಯೂಮರ್ ಎಲಿಮೆಂಟ್ ಇದೆ. ಜೊತೆಗೆ ರೊಮ್ಯಾಂಟಿಕ್ ಪಾತ್ರ. 'ಮದರಂಗಿ'ಯಲ್ಲಿ ಫೈಟ್ ಮತ್ತು ಡೈಲಾಗ್‌ಗೆ ಪ್ರಾಮುಖ್ಯತೆ ಇತ್ತು. ಅಲ್ಲಿ ಸಿಗದೇ ಇದ್ದುದೆಲ್ಲಾ ಇಲ್ಲಿ ಸಿಕ್ಕು ಒಳ್ಳೆಯ ನಟನಾಗಲು ತುಂಬಾ ಸಹಾಯ ಆಗಿದೆ.

ಯಾವುದಾದ್ರೂ ಹೊಸ ಸಿನಿಮಾ ಒಪ್ಪಿಕೊಂಡಿದ್ದೀರಾ?
ಸದ್ಯಕ್ಕಿಲ್ಲ. ಆಗಸ್ಟ್ ಸೆಪ್ಟೆಂಬರ್ ಹೊತ್ತಿಗೆ ಡಿಸೈಡ್ ಆಗಬಹುದು.

ಯಾವ ರೀತಿಯ ಚಿತ್ರಗಳನ್ನು ಎದುರು ನೋಡುತ್ತಿದ್ದೀರಾ?
ಕಥೆ ಇಷ್ಟ ಆಗಬೇಕು. ಹೊಸ ನಿರ್ದೇಶಕ, ನಿರ್ಮಾಪಕರಾದ್ರೂ ಪರವಾಗಿಲ್ಲ. ಆದರೆ ಈಗ ಒಬ್ಬ ದೊಡ್ಡ ನಿರ್ದೇಶಕರ ಸಿನಿಮಾ ಶುರುವಾಗುವ ಸಾಧ್ಯತೆಗಳಿವೆ.

-ಹ್ಯಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com