ದಾಖಲೆ ದೊಡ್ಡದು

ದಾಖಲೆ ದೊಡ್ಡದು
Updated on: 

ವಯಸ್ಸು ಚಿಕ್ಕದು, ದಾಖಲೆ ದೊಡ್ಡದು ಎನ್ನುವ ಹೆಗ್ಗಳಿಕೆ 'ಟೀನೇಜ್‌' ಚಿತ್ರದ್ದು. ಆರಂಭದಿಂದಲೂ ಈ ಚಿತ್ರ ಒಂದಲ್ಲ ಒಂದು ದಾಖಲೆ ಮಾಡಿ ಸುದ್ದಿಯಾಗುತ್ತಲೇ ಇದೆ. ಗಿನ್ನೆಸ್ ರೆಕಾರ್ಡ್‌ನಿಂದ ಹಿಡಿದು ಒಂದಿಷ್ಟು ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಿದ್ದ ಈ ಚಿತ್ರ ಒಂದು ಹಂತದಲ್ಲಿ 'ದಾಖಲೆಗಾಗಿಯೇ ಮಾಡುತ್ತಿರುವ ಚಿತ್ರವೇ?' ಎನ್ನುವ ಅನುಮಾನ. ಆದರೆ ಈ ಅನುಮಾನ ಗಟ್ಟಿಯಾಗುವುದರೊಳಗೆ ಮತ್ತೆ 'ಟೀನೇಜ್‌' ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಯಿತು.

ಈ ಚಿತ್ರದ ನಾಯಕ 'ಕೇರಾಫ್ ಫುಟ್‌ಪಾತ್‌' ಖ್ಯಾತಿಯ ಮಾ. ಕಿಶನ್, ನಿರ್ದೇಶಕ ಶ್ರೀಕಾಂತ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ಚಿತ್ರಕ್ಕೆ ಮೂವರು ನಾಯಕಿಯರು. ಎಲ್ಲರೂ ಹೊರನಾಡಿನ ತಳಿಗಳು. 'ನಮ್ಮ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಮಾಡಿದೆ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ತೆರೆಕಾಣುವ ದಿನವೇ ಬೇರೆ ಬೇರೆ ದೇಶಗಳಲ್ಲೂ ಆನ್‌ಲೈನ್ ಮೂಲಕ ಈ ಚಿತ್ರವನ್ನು ವೀಕ್ಷಿಸಬಹುದು. ಇದು ಟೀನೇಜ್ ಚಿತ್ರದ ಮತ್ತೊಂದು ದಾಖಲೆ' ಎಂದರು ನಿರ್ದೇಶಕ ಶ್ರೀಕಾಂತ್. ನೀರಿನೊಳಗೆ ಹಾಡಿನ ಚಿತ್ರೀಕರಣ ಮಾಡಿದ್ದು, ಸಾವಿರಾರು ಶಾಲಾ ಮಕ್ಕಳನ್ನು ಒಂದೇ ಹಾಡಿನಲ್ಲಿ ಬಳಸಿಕೊಂಡಿದ್ದು, ತಾಂತ್ರಿಕ ಕೆಲಸಗಳು ದಿ ಬೆಸ್ಟ್ ಎನ್ನುವಂತೆ ಮೂಡಿ ಬಂದಿರುವುದು ಹೀಗೆ ತಮ್ಮ ಚಿತ್ರದ ದಾಖಲೆಗಳನ್ನು ಹೇಳಿಕೊಂಡ ಶ್ರೀಕಾಂತ್, ಇಲ್ಲಿವರೆಗೂ ಮಾತಿನಲ್ಲಿ ಹೇಳುತ್ತಿರುವುದನ್ನು ದೃಶ್ಯ ರೂಪದಲ್ಲಿ ತೋರಿಸುವ ಸಲುವಾಗಿ ಚಿತ್ರದ ಹಾಡುಗಳು ಮತ್ತು ಪ್ರೊಮೋಗಳನ್ನು ಪ್ರದರ್ಶನ ಮಾಡಿದರು.

ಅಂದಹಾಗೆ ಚಿತ್ರ ಮುಂದಿನ ತಿಂಗಳು 12 ಅಥವಾ 19ರಂದು ಬಿಡುಗಡೆಯಾಗಲಿದೆ. 'ಮೇಕಿಂಗ್ ಮತ್ತು ಕ್ವಾಲಿಟಿಗಾಗಿ ಚಿತ್ರ ತೆರೆಕಾಣುತ್ತಿರುವುದು ತಡವಾಗುತ್ತಿದೆ. ಅಲ್ಲದೆ ದೊಡ್ಡ ದೊಡ್ಡ ಸಿನಿಮಾಗಳ ನಡುವೆ ನಾವು ಯಾಕೆ ಬರುವುದು? ಅಂತ ಇಷ್ಟು ದಿನ ಕಾದಿದ್ದಾಯಿತು. ಆದರೆ ಇನ್ನು ಕಾಯಲ್ಲ. ಲೇಟಾದರೂ ಲೇಟೆಸ್ಟ್ ಆಗಿ ಬರುತ್ತೇವೆ ಎನ್ನುವ ನಂಬಿಕೆ ಇದೆ. ಹೀಗಾಗಿ ವಿತರಕರ ಮಾತಿನಂತೆ ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರಲು ನಿರ್ಧರಿಸಿದ್ದೇವೆ' ಎನ್ನುವುದು ಶ್ರೀಕಾಂತ್‌ರ ವಿವರಣೆ. ಪೋಷಕರು ಮತ್ತು ಮಕ್ಕಳ ನಡುವೆ ಅಂತರ ಹೆಚ್ಚುತ್ತಿರುವಾಗ 'ಟೀನೇಜ್‌'ನಂಥ ಚಿತ್ರಗಳು ಪ್ರಸ್ತುತ ಎನ್ನಿಸುತ್ತವೆ. ಇಂಥ ಚಿತ್ರಗಳು ವಿದೇಶಗಳಲ್ಲಿ ಹೆಚ್ಚು. ಆದರೆ ನಮ್ಮಲ್ಲಿ ಹುಡುಗು ಬುದ್ಧಿಯ ವಯಸ್ಸಿನ ಮಕ್ಕಳ ಕಥೆಗಳು ಸಿನಿಮಾ ಆಗುವುದು ಕಡಿಮೆ. ಹೀಗಾಗಿ 'ಟೀನೇಜ್‌' ಈಗಿನ ಹದಿಹರೆಯದ ಮಕ್ಕಳ ಅಂತರಂಗದ ಚಿತ್ರಪಟ. ಹೀಗೆಂದು ನಿರ್ದೇಶಕ ಶ್ರೀಕಾಂತ್ ಪ್ರತಿಪಾದಿಸಿದರು.
ಮೊದಲ ಚಿತ್ರ 'ಫುಟ್‌ಪಾತ್‌' ಮೂಲಕ ಗಿನ್ನೆಸ್ ದಾಖಲೆಗೆ ಸೇರಿದ ಮಾ.ಕಿಶನ್, ಇಲ್ಲಿ ನಾಯಕನಾಗಿ ಮುಖ್ಯರಸ್ತೆಗೆ ಬಂದಿದ್ದಾರೆ. ಜೊತೆಗೆ ಚಿತ್ರಕ್ಕೆ ತಾವೇ ಸಂಕಲನವನ್ನೂ ಮಾಡಿದ್ದಾರೆ. ನೃತ್ಯ, ಸಾಹಸ, ರೋಮ್ಯಾಟಿಕ್ ದೃಶ್ಯಗಳಲ್ಲಿ ಕಿಶನ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಎಂಬುದು ಶ್ರೀಕಾಂತ್‌ರ  ಮೆಚ್ಚುಗೆ ಮಾತು. ಚಿತ್ರವನ್ನು ಆನ್‌ಲೈನ್ ಮೂಲಕ ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆ ಮಾಡಲು ಡಿಜಿಟಲ್ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಮಯೂರ್ ಮುಂದೆ ಬಂದಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ವಿತರಣೆ ಮಾಡಲು ಪಿವಿಎಲ್ ಶೆಟ್ಟಿ ಇದ್ದಾರೆ. ಶೆಟ್ಟಿ ಪ್ರಕಾರ ಈಗಾಗಲೇ 'ಟೀನೇಜ್‌' ಚಿತ್ರಕ್ಕೆ ಥಿಯೇಟರ್ ಕೊಡಲು ಉತ್ಸುಕರಾಗಿ ಮುಂದೆ ಬರುತ್ತಿದ್ದಾರಂತೆ. ಚಿತ್ರಮಂದಿರದ ಸಮಸ್ಯೆಯೇ ಇಲ್ಲವಂತೆ.
'ನಮ್ಮಲ್ಲಿ ಪೋಷಕರು ಮತ್ತು ಮಕ್ಕಳ ನಡುವೆ ಮುಕ್ತತೆ ಇಲ್ಲ. ಎಲ್ಲವನ್ನೂ ಬಚ್ಚಿಡುತ್ತೇವೆ. ಮಕ್ಕಳು ಅಷ್ಟೇ, ಮನಸ್ಸಿನ ಮಾತುಗಳನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಇಂಥ ಮಕ್ಕಳ ಮುಂದೆ ಹತ್ತಾರು ದಾರಿಗಳು ತೆರೆದುಕೊಳ್ಳುತ್ತವೆ. ಯಾವ ದಾರಿಯಲ್ಲಿ ಹೋಗಬೇಕೆಂಬ ಗೊಂದಲ ಶುರುವಾಗುತ್ತದೆ. ಈ ಪರಿಸ್ಥಿತಿ ಬದಲಾಗಬೇಕು ಎಂಬುದು ನಮ್ಮ ಚಿತ್ರದ ಆಶಯ' ಎಂದರು ಮಾ. ಕಿಶನ್. ಅಪ್ಪ ನಿರ್ದೇಶಕನಾಗಿ, ಮಗ ನಾಯಕನಾಗಿದ್ದರಿಂದ ಸೆಟ್‌ನಲ್ಲಿ ಆಗಾಗ ಶ್ರೀಕಾಂತ್ ಮತ್ತು ಕಿಶನ್ ನಡುವೆ ಕೋಲ್ಡ್ ವಾರ್ ನಡೆಯುತ್ತಿತ್ತು ಎಂದು ಕಿಶನ್ ಹೇಳಿಕೊಂಡರು. ಮಗನ ಮಾತಿನ ನಡುವೆ ಮೈಕ್ ಶ್ರೀಕಾಂತ್ ಕೈಗೆ ಬಂತು. 'ಇದು ಲವ್ ಸ್ಟೋರಿ ಅಲ್ಲ, ಲೈಕ್ ಸ್ಟೋರಿ' ಎಂದರು.  ಅಲ್ಲಿಗೆ 'ಟೀನೇಜ್‌' ಸಮಾವೇಶ ಮುಗಿಯಿತು.

-ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com