

ಹಲವು ವರ್ಷಗಳ ನಂತರ 'ಕನ್ನಡದ ಕಿರಣ್ ಬೇಡಿ' ಚಿತ್ರ ಮೂಲಕ ರೀ ಎಂಟ್ರಿ ಕೊಟ್ಟ ನಟಿ ಮಾಲಾಶ್ರೀ ಬಣ್ಣದ ಲೋಕದಲ್ಲಿ ತಮ್ಮ ಮರು ಪ್ರವೇಶದ 'ಶಕ್ತಿ' ಪ್ರದರ್ಶಿಸಿದ್ದರು. 'ಘರ್ಷಣೆ', 'ವೀರ', 'ಎಲೆಕ್ಷನ್' ಚಿತ್ರಗಳಲ್ಲಿ ಎಂದಿನಂತೆ ತಮ್ಮ ಖದರ್ ತೋರಿಸಿದ ಮಾಲಾಶ್ರೀ ಈಗ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ವೀರ'ವನಿತೆಯಾಗಿ.
'ನನ್ ಸಿನಿಮಾಗಳ ಬಗ್ಗೆ ಮಾತನಾಡುವಾಗ ಒಂದು ಸಾಲಿನಲ್ಲಿ ಕಥೆ ಹೇಳಕ್ಕೆ ಆಗಲ್ಲ ನೋಡಿ...' ಎಂದರು ನಟಿ ಮಾಲಾಶ್ರೀ. ಅದು ನಿಜ ಕೂಡ. ಮಾಲಾಶ್ರೀ ಎಂದ ಮೇಲೆ ಅಲ್ಲಿ ರೌಡಿ ರಾಣಿಯೂ ಇರ್ತಾಳೆ, ಹಳ್ಳಿ ಗೌರಮ್ಮನೂ ಹಾಜರಿರುತ್ತಾಳೆ. ಇದರ ನಡುವೆ ಸಿಕ್ಕಾಪಟ್ಟೆ ಫೈಟು, ಚಿಂದಿಯಾಗುವ ವಾಹನಗಳು, ಪೊಲೀಸು, ರಾಜಕೀಯ, ಮಾಫಿಯಾ, ಭ್ರಷ್ಟಾಚಾರ. ಕೊನೆಯಲ್ಲಿ ಎಲ್ಲವನ್ನೂ ಸಂಹಾರ ಮಾಡುವಂತೆ ಕಾಣುವ ನಾಯಕಿಯ ಆದಿಪರಾಶಕ್ತಿಯ ಅವತಾರ. ಇಷ್ಟೆಲ್ಲ ತಿರುವುಗಳು, ಟ್ವಿಸ್ಟ್ಗಳು ಇದ್ದಾಗ ಕಥೆಯನ್ನು ಒಂದು ಸಾಲಿನಲ್ಲಿ ಹೇಳಲಾಗದು ಎಂಬುದು ಮಾಲಾಶ್ರೀ ಅಭಿಪ್ರಾಯ. ಸದ್ಯ ಅವರು ಹೀಗೆ ಮಾತನಾಡುತ್ತಿರುವುದು 'ವೀರ' ಚಿತ್ರದ ಬಗ್ಗೆ. ಮುಂದಿನ ವಾರ ಈ ಚಿತ್ರ ಬಿಡುಗಡೆಯಾಗುತ್ತಿದೆ.
ತೆಲುಗಿನ ಅಯ್ಯಪ್ಪ ಶರ್ಮಾ ನಿರ್ದೇಶನದ 'ವೀರ'ದ ನಿರ್ಮಾಪಕರು ರಾಮು. ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿರುವ ಚಿತ್ರದ ಶೇ.80 ಭಾಗ ಚಿತ್ರೀಕರಣವನ್ನು ವಿದೇಶಗಳಲ್ಲೇ ಮಾಡಲಾಗಿದೆ. 'ನನ್ನ ಮಟ್ಟಿಗೆ ವಿಭಿನ್ನವಾಗಿದೆ. ಮೊದಲ ಬಾರಿಗೆ ಏಳು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಕಾಮಿಡಿ ಮತ್ತು ಡಾನ್ ಪಾತ್ರ ಮಾಡಿದ್ದೇನೆ. ಆಶಿಷ್ ವಿದ್ಯಾರ್ಥಿ, ಮುಕುಲ್ ದೇವ್, ರಾಹುಲ್ ದೇವ್, ಸಯ್ಯಾಜಿ ಶಿಂದೆ, ಕೋಮಲ್, ಸಿ.ಆರ್.ಸಿಂಹ ಮುಂತಾದ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಅಭಿನಯದ ವಿಚಾರದಲ್ಲಿ ಸಾಕಷ್ಟು ಸವಾಲು ಒಡ್ಡಿದ ಚಿತ್ರ ಇದು. ಪಕ್ಕಾ ಆ್ಯಕ್ಷನ್ ಸಿನಿಮಾ ಆದರೂ ಮಚ್ಚು, ಲಾಂಗುಗಳಿಂದ ಕೂಡಿದ ಹಿಂಸೆಯನ್ನು ವೈಭವಿಕರಿಸಿಲ್ಲ' ಎನ್ನುವ ಮಾಲಾಶ್ರೀ, ಚೈನೀಸ್ ಫೈಟರ್ಗಳೊಂದಿಗೆ ಹೊಡೆದಾಡಿದ್ದು ವಿಶೇಷವಾಗಿತ್ತಂತೆ. ಹಾಕಾಂಗ್ನಲ್ಲಿ ಐದು ದಿನ ಸಮುದ್ರದಲ್ಲಿ ಬೋಟಿಂಗ್ ಚೇಸಿಂಗ್ ಮಾಡಲಾಗಿದೆ. ಈ ಸಾಹಸ ದೃಶ್ಯಗಳಲ್ಲಿ ಅಭಿನಯಿಸುವಾಗ ಮಾಲಾಶ್ರೀ ಜೀವ ಅಂಗೈಯಲ್ಲಿಟ್ಟುಕೊಂಡು ಫೈಟ್ ಮಾಡಿದ್ದಾರಂತೆ.
'ಕನ್ನಡ ಚಿತ್ರರಂಗದ ಮಟ್ಟಿಗೆ ಹೀಗೆ ಸಮುದ್ರದಲ್ಲಿ ಫೈಟ್ ಮಾಡಿದ ನಟಿ ನಾನೇ ಇರಬೇಕು. ಇನ್ನು 24 ದಿನ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಚಿತ್ರೀಕರಣ ಮಾಡಲಾಗಿದ್ದು, 12ಕ್ಕೂ ಹೆಚ್ಚು ವಾಹನಗಳನ್ನು ಬ್ಲಾಸ್ಟ್ ಮಾಡಲಾಗಿದೆ' ಎನ್ನುತ್ತಾರೆ ಮಾಲಾಶ್ರೀ.
ಚಿತ್ರಕ್ಕೆ ಬಳಸಿರುವ ಗ್ರಾಫಿಕ್ಸ್, ಮೇಕಿಂಗ್ ಅತ್ಯಂತ ಅದ್ದೂರಿಯಾಗಿದೆ. ಹಾಕಾಂಗ್, ಪಟಾಯ, ಮಕಾವೋ, ಬ್ಯಾಂಕಾಕ್ ಮುಂತಾದ ಕಡೆ 145 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆಯಂತೆ. ಅಂದಹಾಗೆ ಸಾಹಸ ಪ್ರಧಾನ ಚಿತ್ರದಲ್ಲಿ ಮಾಲಾಶ್ರೀ ಮೊದಲ ಬಾರಿಗೆ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರಂತೆ. ಮಾಲಾಶ್ರೀ ಅವರ ಮಟ್ಟಿಗೆ ಇದು ವಿಶೇಷವಂತೆ. ನಿರ್ಮಾಪಕ ರಾಮು ಈಗಾಗಲೇ ಚಿತ್ರ ನೋಡಿ ಖುಷಿಯಾಗಿದ್ದಾರೆ.ಚಿತ್ರದಲ್ಲಿ ಮನರಂಜನೆ ಕೂಡ ಇದೆ. ಪ್ರೇಕ್ಷಕರಿಗೆ ನಿರೀಕ್ಷೆಯೇ ಇಲ್ಲದೆ ಬರುವ ಸನ್ನಿವೇಶಗಳು, ಪಾತ್ರಗಳು ಚಿತ್ರವನ್ನು ನೋಡುವಂತೆ ಕುತೂಹಲ ಮೂಡಿಸುತ್ತದೆ. ನಿರ್ದೇಶಕ ಅಯ್ಯಪ್ಪ ಪ್ರಸಾದ್ ತುಂಬಾ ಚೆನ್ನಾಗಿ ಕಥೆ ಮಾಡಿದ್ದಾರೆಂಬುದು ಮಾಲಾಶ್ರೀ ಅವರ ಮಾತು.
ಒಟ್ಟಿನಲ್ಲಿ ಸಮುದ್ರದಲ್ಲಿ ಸಾಹಸ ಮಾಡಿದ ಕನ್ನಡದ 'ವೀರ'ವನಿತೆ ಅಮ್ಮಾ'ಡಾನ್' ಆಗಿ ಪ್ರೇಕ್ಷಕರ ಮುಂದೆ ಬಂರುತ್ತಿದ್ದಾರೆ. ಹೀಗಾಗಿ ಮಾಲಾಶ್ರೀ ಜಮಾನ ಇನ್ನೂ ಮುಗಿದಿಲ್ಲ.
-ಕೇಶು