ಪಗಡೆ ಆಟ

ಪಗಡೆ ಆಟ
Updated on: 

ಗಾಂಧಿನಗರದಲ್ಲಿ ಮತ್ತೊಂದು ಗಲಾಟೆ ವರದಿಯಾಗಿದೆ. ಈ ಗಲಾಟೆಯ ಕೇಂದ್ರಬಿಂದು 'ಪಗಡೆ' ಚಿತ್ರ; ನಿರ್ಮಾಪಕ, ನಿರ್ದೇಶಕ ಹಾಗೂ ರಾಜೇಶ್ ರಾಮ್‌ನಾಥ್ ನಡುವಿನದ್ದು. ಅಂದುಕೊಂಡಂತೆ ಚಿತ್ರ ಈ ವಾರ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರಕ್ಕೆ ಡಿಟಿಎಸ್ ಕೆಲಸ ಮಾಡಿಕೊಡದೆ ನಾಲ್ಕು ತಿಂಗಳಿಂದ ಸತಾಯಿಸಿದ ಪರಿಣಾಮ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಇದರಿಂದ ಆದ ನಷ್ಟವನ್ನು ರಾಜೇಶ್ ರಾಮ್‌ನಾಥ್ ತುಂಬಿಸಿಕೊಡಬೇಕು ಎಂಬುದು ನಿರ್ಮಾಪಕ ಎಚ್. ವಿ. ಅಣ್ಣಪ್ಪ ಅವರ ಒತ್ತಾಯ. ಚಿತ್ರದ ನಾಯಕ ವಿಶ್ವಾಸ್ ಭಾರದ್ವಾಜ್, ನಿರ್ದೇಶಕ ಪುರುಷೋತ್ತಮ್. ಚಿತ್ರಕ್ಕೆ ಡಿಟಿಎಸ್ ಮಿಕ್ಸಿಂಗ್ ಜವಾಬ್ದಾರಿ ರಾಜೇಶ್ ರಾಮ್‌ನಾಥ್ ಅವರದ್ದು.

ಕಳೆದ ವಾರವೇ 'ಪಗಡೆ' ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಪ್ರಕಟಿಸಿದ್ದರು. ಈ ಸಿದ್ಧತೆಗಾಗಿ ಈಗಾಗಲೇ ನಿರ್ಮಾಪಕರು 15 ಲಕ್ಷ ರು. ವೆಚ್ಚ ಮಾಡಿದ್ದಾರಂತೆ. ಇದರಲ್ಲಿ 10 ಲಕ್ಷವನ್ನು ವಿತರಕರಿಗೆ ಮುಂಗಡವಾಗಿ ಕೊಟ್ಟಿದ್ದು, 5 ಲಕ್ಷ ಪತ್ರಿಕಾ ಜಾಹೀರಾತನ್ನೂ ನೀಡಿದ್ದಾರಂತೆ. ಅಂದುಕೊಂಡ ದಿನ ಸಿನಿಮಾ ಬಿಡುಗಡೆ ಆಗದಿದ್ದರೆ ಕೊಟ್ಟಿರುವ ಮುಂಗಡ ಹಣವನ್ನು ವಿತರಕರು ಹಿಂತಿರುಗಿಸುವುದಿಲ್ಲ. ಹೀಗಾಗಿ 10 ಲಕ್ಷ ನಷ್ಟವಾಗುತ್ತದೆ. ಇದಕ್ಕೆ ನೇರ ಕಾರಣ ರಾಜೇಶ್ ರಾಮ್‌ನಾಥ್ ಅವರೇ. ಈ ನಷ್ಟದ ಹಣವನ್ನು ರಾಜೇಶ್ ರಾಮ್‌ನಾಥ್ ಅವರು ತುಂಬಿಕೊಂಡಬೇಕು. ಇಲ್ಲದಿದ್ದರೆ ಕಾನೂನು ಮೊರೆ ಹೋಗುತ್ತೇನೆಂದು ಅಣ್ಣಪ್ಪ ಹೇಳಿದ್ದಾರೆ. ಈಗಾಗಲೇ ನಿರ್ಮಾಪಕರ ಸಂಘಕ್ಕೆ, ವಾಣಿಜ್ಯ ಮಂಡಳಿಗೆ ಈ ಬಗ್ಗೆ ದೂರ ಸಲ್ಲಿದ್ದಾರಂತೆ.

'ಚಿತ್ರಕ್ಕೆ ಡಿಟಿಎಸ್ ಮಾಡಿಕೊಡುವಂತೆ ಕೇಳಿ 4 ತಿಂಗಳಾದವು. ಇಲ್ಲಿವರೆಗೂ 3 ಡಿಟಿಎಸ್ ಡಿವಿಡಿಗಳನ್ನು ಕೊಟ್ಟಿದ್ದಾರೆ. ಆದರೆ ಯಾವುದೂ ಸರಿ ಇಲ್ಲ. ಸರಿ ಮಾಡಿಕೊಡುತ್ತೇನೆ ಎಂದು ಹೇಳಿದವರು ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದರೂ ಕೆಲಸ ಮುಗಿಸಿಲ್ಲ. ಈಗ ಕೊಡುತ್ತೇನೆ, ಆಗ ಕೊಡುತ್ತೇನೆ ಎಂದು ಪ್ರತಿ ದಿನ ಅಲೆದಾಡಿಸುತ್ತಿದ್ದಾರೆ. ಹೊಸಬರು ಸಿನಿಮಾ ಮಾಡುವುದೇ ಕಷ್ಟ. ಇಂಥ ಸಂದರ್ಭದಲ್ಲಿ ತೊಂದರೆಯಾದರೆ ಹೇಗೆ?' ಎಂಬುದು ಚಿತ್ರತಂಡದ ಪ್ರಶ್ನೆ. ಆದರೆ ರಾಜೇಶ್ ರಾಮ್‌ನಾಥ್ ಈ ಅರೋಪಗಳನ್ನು ತಳ್ಳಿ ಹಾಕುತ್ತಾರೆ. ಯಾವುದು ನಿಜ, ಯಾವುದು ಸತ್ಯ ಎಂಬುದು ಮಾತ್ರ 'ಪಗಡೆ'ಯಾಟ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com