

ಸಿಸಿಎಲ್ನಲ್ಲಿ ಎರಡು ಬಾರಿ ಕಡೆಯ ಕ್ಷಣದಲ್ಲಿ ಕೈ ಚೆಲ್ಲಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಕಡೆಗೂ ಈ ಬಾರಿ ಕಪ್ ಗೆದ್ದಿದೆ. ಅದೂ ತೆಲುಗು ವಾರಿಯರ್ಸ್ ತಂಡದ ವಿರುದ್ಧ ಫೈನಲ್ನಲ್ಲಿ ಸೆಣೆಸಿ ಗೆದ್ದ ಸುದೀಪ್ ತಂಡ ಕಪ್ ಎತ್ತಿ ಹಿಡಿದಿದೆ. ಕಳೆದ ಮೂರುವರ್ಷಗಳಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಇದ್ದರೂ, ಗಂಟಲಲ್ಲಿ ಸಿಕ್ಕಿಹಾಕಿಕೊಂಡಂಥ ವಿಚಿತ್ರ ಸಂಕಟ ಅನುಭವಿಸುತ್ತಿದ್ದ ಸುದೀಪ್ ಪಡೆಗೆ ಅಂತೂ ಇಂತೂ ಫೈನಲ್ ರಿಲೀಫ್ ಸಿಕ್ಕಿದೆ. ಕಳೆದೆರಡು ವರ್ಷ ತಂಡದ ಮಾಲೀಕ ಅಶೋಕ್ ಖೇಣಿ, 'ಅದೇನ್ ಬೇಕೋ ಮಾಡ್ಕಳಿ, ಆದ್ರೆ ಈ ವರ್ಷ ನಾವು ಕಪ್ ಗೆಲ್ಲಲೇಬೇಕು' ಎಂದು ಹೇಳಿದ್ದು ವರ್ಕ್ ಔಟ್ ಆಗಿರಲಿಲ್ಲ. ಆದರೆ, ಈ ಬಾರಿ ಅದೇ ಮಾತುಗಳನ್ನು ಸುದೀಪ್ ಅವರೇ ಅಶೋಕ್ ಖೇಣಿ ಅವರಿಗೆ ಹೇಳಿದ್ದರೇನೋ ಎಂಬಂತೆ ತಂಡದ ಸಾಂಘಿಕ ಪ್ರಯತ್ನದಿಂದ ಗೆಲುವು ಸಿಕ್ಕಿದೆ. ಫೈನಲ್ ಪಂದ್ಯದಲ್ಲಿ 'ಮುಂದೆ ನಿಂತು' ಅಲ್ಲದಿದ್ದರೂ ವಿಕೆಟ್ 'ಹಿಂದೆ ನಿಂತು' ಸುದೀಪ್ ಈ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಆದರೆ ಈ ಗೆಲುವನ್ನು ನೋಡಿದ ಕ್ರಿಕೆಟ್ ಮತ್ತು ಸಿನಿಮಾದ ಕಾಮನ್ ಪ್ರಿಯರ ಕಾಮೆಂಟ್ ಒಂದು ಹೀಗಿದೆ 'ನಮ್ಮ ತಂಡ ಅವರಿಗಿಂತ ಉತ್ತಮ ಕ್ರಿಕೆಟ್ ಆಡಿತು. ಆದರೆ ಅವರು ನಮ್ಮ ತಂಡದ ನಾಯಕನನ್ನು ಹಾಕಿಕೊಂಡು 'ಈಗ'ದಂಥ ಉತ್ತಮ ಸಿನಿಮಾ ಮಾಡುತ್ತಾರೆ. ತಂಡದ ನಾಯಕ ಸುದೀಪ್ಗೆ ಈಗಲಾದರೂ ದೊಡ್ಡ ರಿಲೀಫ್ ಸಿಕ್ಕಿದೆ. ಈ ಜಯವನ್ನು ಎಂಜಾಯ್ ಮಾಡೋಣ. ಆದರೆ ಅದರ ಜೊತೆಗೆ, ಈ ಜಯದಿಂದಾಗ 'ಈಗ' ನಮ್ಮವರಿಗೆ ಇನ್ನು ಮೇಲೆ ನಿರಾತಂಕವಾಗಿ ಉತ್ತಮ ಸಿನಿಮಾ ಮಾಡುವತ್ತ ಗಮನಕೊಡುವ ಅವಕಾಶವೂ ಸಿಕ್ಕಿದಂತಾಗಿದೆ'. ಅದು ನಿಜ ಬಿಡಿ.