ಏಳಕ್ಕೇರಿದ ಶೇಷಾದ್ರಿ

ಏಳಕ್ಕೇರಿದ ಶೇಷಾದ್ರಿ
Updated on: 

60ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲಿ 'ಅತ್ಯುತ್ತಮ ಪ್ರಾದೇಶಿಕ ಚಿತ್ರ' ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವ 'ಭಾರತ್ ಸ್ಟೋರ್ಸ್' ಚಿತ್ರದ ಜತೆಗೆ ಇದರಲ್ಲಿನ ಅಭಿನಯಕ್ಕಾಗಿ ಚಿತ್ರದಲ್ಲಿ ಗೋವಿಂದ ಶೆಟ್ಟಿಯ ಪಾತ್ರಧಾರಿ ಹೆಚ್.ಜಿ. ದತ್ತಾತೇಯ (ದತ್ತಣ್ಣ) ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ಈ ಗೌರವ ದತ್ತಣ್ಣರವರಿಗೆ 3 ನೇ ಬಾರಿ ಸಿಕ್ಕಿದೆ. ಮೊದಲ ಪ್ರಶಸ್ತಿ ಕೂಡ ಪಿ.ಶೇಷಾದ್ರಿಯವರ 'ಮುನ್ನುಡಿ' ಚಿತ್ರದಲ್ಲಿನ ನಟನೆಗೆ ಮತ್ತು ಎರಡನೆಯ 'ಮೌನಿ' ಚಿತ್ರದ ಅಭಿನಯಕ್ಕೆ ಸಂದಿತ್ತು.


ಅರವತ್ತನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಅತ್ಯುತ್ತಮ ಪ್ರಾದೇಶಿಕ ಚಿತ್ರವಾಗಿ 'ಭಾರತ್ ಸ್ಟೋರ್ಸ್' ಪ್ರಶಸ್ತಿ ಗಳಿಸಿದೆ. ಪಿ. ಶೇಷಾದ್ರಿಯವರ ಇದು, 7ನೇ ಚಿತ್ರವಾಗಿದ್ದು, ಮೊದಲ 6 ಚಿತ್ರಗಳೂ ರಾಷ್ಟ್ರ ಪ್ರಶಸ್ತಿ ಪಡೆದಿದೆ. ಇದು ಅವರ ನಿರ್ದೇಶನಕ್ಕೆ ಮತ್ತೊಂದು ಗರಿಯಾಗಿದೆ. ವಿಶೇಷವೆಂದರೆ ಭಾರತ
    ಚಲನಚಿತ್ರರಂಗದಲ್ಲಿ ನಿರ್ದೇಶನದ ಎಲ್ಲ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಚಿತ್ರನಿರ್ದೇಶಕರೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇವರ ಈ ಚಿತ್ರದ ಕಥಾ ಹಂದರ ಸಮಾಜದ ಮೇಲೆ ಜಾಗತೀಕರಣದ ಪ್ರಹಾರ ಹಾಗೂ ಮಾಲ್ ಸಂಸ್ಕೃತಿಗಳಿಂದ ಮುಳುಗಡೆಯಾಗುತ್ತಿರುವ ಚಿಲ್ಲರೆ ಕಿರಾಣಿ ಅಂಗಡಿಗಳ ಪರಿಸ್ಥಿತಿ.

ಈ ಹಿನ್ನೆಲೆಯಲ್ಲಿ ಚಿತ್ರಪ್ರಭದ ಜತೆ ಪಿ. ಶೇಷಾದ್ರಿ ಅವರು ಮಾತನಾಡಿದ್ದು...

'ಮುನ್ನುಡಿ'ಯಿಂದ ಇಲ್ಲಿಯವರೆಗೆ 7 ರಾಷ್ಟ್ರಪ್ರಶಸ್ತಿ ಪಡೆದ ನಿಮ್ಮಲ್ಲಿನ ನಿರ್ದೇಶಕ ಬದಲಾವಣೆ ಕಂಡಿದ್ದಾನೆಯೆ?
ಮೊದಲ ಚಿತ್ರ ಮಾಡುವಾಗ ಇದ್ದ ಆಸಕ್ತಿ, ನಿಷ್ಠೆ, ಪ್ರಾಮಾಣಿಕತೆ, ಶಿಸ್ತು ಈಗಲೂ ಇದೆ. ಅಲ್ಲದೆ ಒಬ್ಬ ವಿದ್ಯಾರ್ಥಿ ಚೆನ್ನಾಗಿ ತಯಾರಾಗಿದ್ದರೂ ಪರೀಕ್ಷೆ ಎದುರಿಸುವಾಗ ಪಡುವ ಭಯ, ಪ್ರೇಕ್ಷಕರು ಒಪ್ಪುವಂಥ ಚಿತ್ರ ಕೂಡುವ ಕಳಕಳಿ ಈಗಲೂ ಇದೆ. ಇದು ಮುಂದೆಯೂ ಇರುತ್ತದೆ. ನನ್ನಲ್ಲಿ ಬದಲಾವಣೆಯಾಗಿದ್ದಲ್ಲಿ ಪ್ರೇಕ್ಷಕ ಗುರುತಿಸಬೇಕು, ಅದು ನನಗಿಂತ ಪ್ರೇಕ್ಷಕರಿಗೆ ತಿಳಿಯುತ್ತದೆ.

ದತ್ತಣ್ಣನವರಿಗೆ ಈ ಚಿತ್ರದಲ್ಲಿ ಪಾತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಬಂದಿದೆ. ನಿಮ್ಮ 6 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ನಿಮ್ಮಿಬ್ಬರ ಕಾಂಬಿನೇಷನ್ ಹೇಗೆ?
ದತ್ತಣ್ಣನಿಗೆ ಇದು ಮೂರನೇ ರಾಷ್ಟ್ರ ಪ್ರಶಸ್ತಿ. ಅವರು ನನ್ನ 6 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನನ್ನ ನೆಚ್ಚಿನ ನಟ ಕೂಡ. ಕಾರಣ ಅವರಲ್ಲಿನ ತೊಡಗಿಸಿಕೊಳ್ಳುವಿಕೆ, ಚರ್ಚೆ ಮಾಡಿ ಪಾತ್ರದ ಬಗ್ಗೆ ಅರಿತು ಅದರ ಗುಣ-ಧರ್ಮಗಳನ್ನು ಅಳೆದು ನಿರ್ದೇಶಕನಿಗೆ ಏನು ಬೇಕೆಂದು ತಿಳಿದು ಪ್ರತಿ ಹೆಜ್ಜೆಯನ್ನು ಗಮನಿಸಿ ನಟಿಸುವ ಗುಣ-ಧರ್ಮ, ಅದು ನನಗೆ ಇಷ್ಟವಾಗುತ್ತದೆ. ಹಾಗಾಗಿ ನಮ್ಮ ನಡುವೆ ಒಂದು ಹೊಂದಾಣಿಕೆ ಏರ್ಪಟ್ಟಿದೆ.

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನ ಕೊರತೆ ಎದುರಿಸುತ್ತಿರುವ ನಿರ್ದೇಶಕರಿದ್ದಾರೆ. ಆದರೆ ನಿಮಗೆ ಬಸಂತ ಕುಮಾರ್ ಪಾಟೀಲ್ ಸಿಕ್ಕಿದ್ದಾರೆ, ಇವರ ಬಗ್ಗೆ?
ಪ್ರಾರಂಭದ ದಿನಗಳಲ್ಲಿ ನಾನು ಕೂಡ ಈ ಸಮಸ್ಯೆ ಎದುರಿಸಿದ್ದೆ. ಇಂತಹ ನಿರ್ಮಾಪಕರ ಅವಶ್ಯಕತೆ ಕನ್ನಡ ಚಿತ್ರರಂಗಕ್ಕೆ ಇದೆ, ಕಾರಣ ಇವರು ನಿರ್ದೇಶಕನಿಗೆ ನೀಡುವ ಸ್ವಾತಂತ್ರ್ಯ. ನಂಬಿಕೆ ಇಟ್ಟು ನಿರ್ಮಾಣ ಮಾಡುವುದಲ್ಲದೆ ಯಾವುದೇ ತರಹದ ಒತ್ತಡ ತರದೇ ಸಹಕರಿಸುವ ರೀತಿ. ಇದು ಒಂದು ರೀತಿಯಲ್ಲಿ ನಿರ್ದೇಶಕನ ಜವಾಬ್ದಾರಿಯನ್ನು ಹೆಚ್ಚಿಸುತ್ತೆ.

'ಭಾರತ್ ಸ್ಟೋರ್ಸ್' ಹೆಸರಿನ ಬಗ್ಗೆ?
ಇದು ಒಂದು ಹೆಸರಷ್ಟೆ ಅಲ್ಲ ಇದರ ಹಿಂದೆ ಬೇರೆ ಬೇರೆ ಆಯಾಮಗಳಿವೆ. ಶೀರ್ಷಿಕೆಗೆ ಸಾಕಷ್ಟು ಒಳ ಅರ್ಥಗಳಿವೆ.

ಈ ಚಿತ್ರದಲ್ಲಿ ಬರುವ ಹುಂಡಿ ಡಬ್ಬಿಯ ದೃಶ್ಯ ಮತ್ತು ಮನೆಯಲ್ಲಿ ಹೊಟ್ಟೆ ತುಂಬಾ ಊಟ ಹಾಕಿ ಕೆಲಸದಿಂದ ತೆಗೆಯುವ ದೃಶ್ಯಗಳು ನಿಮಗೆ ಎಲ್ಲಿಂದ ಸ್ಫೂರ್ತಿಯಾಯಿತು?
ಯಾವುದೇ ನಿರ್ದೇಶಕ, ಕಥೆಗಾರ ತನ್ನ ಅನುಭವ, ಕಾಣಸಿಗುವ ಪಾತ್ರಗಳು, ಕಂಡಿದ್ದು, ಪಾತ್ರಗಳ ಪೋಷಣೆಯಲ್ಲಿ ಅಭಿವ್ಯಕ್ತಿಸುವುದು ಸಹಜ. ಹಾಗೆಯೇ ನಾನು ಎಲ್ಲೊ ಓದಿದ್ದೊ ಕೇಳಿದ್ದನ್ನು ಸಿನಿಮಾದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಬಳಸಿದ್ದೇನೆ.



ಏಳು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ನಿಮಗೆ ಪ್ರಶಸ್ತಿಯ ಮೌಲ್ಯದ ಬಗ್ಗೆ ಏನನಿಸುತ್ತದೆ?
ಪ್ರಶಸ್ತಿಗಳು ತೂಕ ಮಾಡುವಂಥದಲ್ಲ, ನಿಜವಾಗಿ ನನಗೆ ರಾಷ್ಟ್ರ ಪ್ರಶಸ್ತಿಗಳು ಬರುತ್ತದೆ, ಅದಕ್ಕಾಗಿ ಸಿನಿಮಾ ಮಾಡಬೇಕೆಂದು ಹೊರಟವನಲ್ಲ. ನಾನು ಒಂದು ಚಿಕ್ಕ ಹಳ್ಳಿಯಿಂದ ಸಿನಿಮಾಗಳನ್ನು ನೋಡುವ ಸಾಮಾನ್ಯನಾಗಿ, ಹೀರೋ ಎಂದರೆ ಡಾ॥ ರಾಜ್ಕುಮಾರ್, ವಿಲನ್ ಎಂದರೆ ವಜ್ರಮುನಿ ಹೀಗಿದ್ದವನು. ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿರುವುದಕ್ಕೆ ಶ್ರಮ, ಕಲಿಯುವಿಕೆ, ಪ್ರಾಮಾಣಿಕತೆ ಶಿಸ್ತಲ್ಲದೆ ಮತ್ತೇನು ಇರಲಾರದು. ನಾನು ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ, ಈ ಕೆಲಸದಲ್ಲಿ ಖುಷಿ ಇದೆ.

ನೀವು ನೋಡಿದ ಮೊದಲ ಸಿನಿಮಾ?
ಬಹುಶಃ ಸತ್ಯ ಹರಿಶ್ಚಂದ್ರ ಇರಬಹುದು.

ಸಿನಿಮಾಗಳಿಗೆ ರಾಜ್ಯ-ರಾಷ್ಟ್ರ ಪ್ರಶಸ್ತಿಗಳು ಸಿಗುತ್ತವೆ ಎಂಬ ಬಗ್ಗೆ ತಿಳಿದದ್ದು, ಅಂಥ ಚಿತ್ರಗಳನ್ನು ನೋಡಿದ್ದು?
 ಸ್ವಲ್ಪ ಮಟ್ಟಿಗೆ ಸಿನಿಮಾಗಳ ಬಗ್ಗೆ ತಿಳಿಯುವ ಹೊತ್ತಿಗೆ ಗಿರೀಶ್ ಕಾಸರವಳ್ಳಿಯವರ ಬಗ್ಗೆ, ಅವರ ಚಿತ್ರಗಳನ್ನು ನೋಡಿದ ಮೇಲೆ, ಅವುಗಳ ಬಗ್ಗೆ ಓದಿದ ಮೇಲೆ.

ನಿಮ್ಮದೇ ಕಥೆ-ಚಿತ್ರಕಥೆ ಇರುವ ಚಿತ್ರಗಳ ಜೊತೆಗೆ ಕಾದಂಬರಿಗಳ ಆಧಾರಿತ ಚಿತ್ರ ನಿರ್ದೇಶಿಸುವ ಹಂಬಲ?
ನನ್ನ ಈ ಹಿಂದಿನ ಚಿತ್ರ 'ಬೆಟ್ಟದ ಜೀವ' ಡಾ॥ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ. ಮೊದಲ ಚಿತ್ರ 'ಮುನ್ನುಡಿ' ಕಥೆಯನ್ನು ಆಧರಿಸಿದ ಚಿತ್ರ. ನಾನು ಸುಮಾರು ಕಾದಂಬರಿಗಳನ್ನು ಓದಿದ್ದು ಸಿನಿಮಾ ಅಳವಡಿಸುವ ನಿಟ್ಟಿನಲ್ಲಿ ಇದ್ದೀನಿ, ನೋಡೋಣಾ...


ನಿಮ್ಮ ಚಿತ್ರಗಳು ಪ್ರೇಕ್ಷಕರಿಗೆ ಮುಟ್ಟುತ್ತಿಲ್ಲ ಮಾಲ್ಗಳಿಗೆ ಸೀಮಿತ ಎಂಬ ಮಾತಿಗೆ ನಿಮ್ಮ ಅಭಿಪ್ರಾಯವೇನು?
ಈ ತರಹದ ಮಾತು ಪಲಾಯನವಾದವಾದೀತು. ನಿಜಕ್ಕೂ ಚಿತ್ರ ನೋಡುವ ಜನ ಎಲ್ಲಿದ್ದರೂ ನೋಡುತ್ತಾರೆ. ಅಲ್ಲದೇ ನಾವೂ ಕೂಡಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ಅದು ಅಲ್ಲಿ ಓಡದೆ ನಂತರ ಮಾಲ್ಗೆ ವರ್ಗಾಯಿಸಬೇಕಾದ ಪರಿಸ್ಥಿತಿಯು ಬೆಟ್ಟದ ಜೀವ ಸಮಯದಲ್ಲಿ ನಡೆದಿದೆ.

ಈಗಿನ ಕಂಪ್ಯೂಟರ್ ಯುಗದಲ್ಲಿ ಸಿನಿಮಾಮಗಳನ್ನು ಚಿತ್ರಮಂದಿರಕ್ಕೆ ಬರದೇ ಇಂಟರ್ನೆಟ್ನಲ್ಲಿ ನೋಡುವವರ ಬಗ್ಗೆ?
ಅವರೂ ಪ್ರೇಕ್ಷಕರೇ, ಅಲ್ಲಿಯೇ ನೋಡಲಿ, ಅವರು ಯಾವ ರೀತಿ ನೋಡುತ್ತಾರೆ ಎನ್ನುವುದು ಮುಖ್ಯವಲ್ಲ, ನಾವು ಉತ್ತಮ ಅಭಿರುಚಿಯ ಚಿತ್ರಗಳು ನೀಡಿದರೆ ಸಾಕು. ಅದು ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರ ತಂಡದ ಉದ್ದೇಶ.  

'ಭಾರತ್ ಸ್ಟೋರ್ಸ್' ಪಾತ್ರವೇ ವಿಭಿನ್ನವಾಗಿದೆ. ಇದರಲ್ಲಿನ ಮೂರು ಹಂತಗಳ ನಿರೂಪಣೆಯೇ ಪಾತ್ರಕ್ಕೇ ಪೂರಕ. ಮೊದಲ ಭಾಗದಲ್ಲಿ ಪ್ರಾಮಾಣಿಕ ವರ್ತಕನಾಗಿ ವ್ಯಕ್ತಿ ಮತ್ತು ಸಮಾಜದ ನಡುವಿನ ಕೊಂಡಿಯಾಗಿದ್ದು ದಿನ ಕಳೆದಂತೆ ಮಾಲ್ ಸಂಸ್ಕೃತಿಗೆ ತತ್ತರಿಸಿ ತನ್ನ ಗಿರಾಕಿಗಳನ್ನು ಕಳೆದುಕೊಂಡು ಕಷ್ಟ ಅನುಭವಿಸುವ ಪಾತ್ರ, ಚಿತ್ರದ ಕೊನೆಯ ಹಂತದಲ್ಲಿ ಮಾನಸಿಕ ರೋಗಿಯಾಗಿ ಕೋಮಾದಲ್ಲಿರುವ ನಿರ್ಜೀವ ಸ್ಥಿತಿಯಲ್ಲಿನ ಪಾತ್ರ ಇದಾಗಿದೆ. ಪಿ. ಶೇಷಾದ್ರಿ ಅವರಲ್ಲಿ, ಕಥೆಯನ್ನು ಹುಡುಕುವ ಗುಣ ಮತ್ತು ಅದನ್ನು ಸಿನಿಮಾಗೆ ಅಳವಡಿಸುವ ರೀತಿಯಲ್ಲದೇ ಶ್ರಮ-ಶ್ರದ್ಧೆಯಿಂದ ಚಿತ್ರ ನಿರ್ದೇಶಿಸುವ ಕಲೆಯಿದೆ. ಅದೇ ಅವರನ್ನು ಈ ಮಟ್ಟದ ಎತ್ತರಕ್ಕೆ ಬೆಳೆಸಿದೆ.
- ದತ್ತಣ್ಣ


ಇದು ನನಗೆ 6ನೇ ಪ್ರಶಸ್ತಿ. ನನ್ನ ನಿರ್ಮಾಣದ ಚಿತ್ರಕ್ಕೆ ಬೇರೆ ಬೇರೆ ವಿಭಾಗಕ್ಕೆ ಬಂದ 10 ನೇ ಪ್ರಶಸ್ತಿಯಾಗಿದೆ. ಪಿ ಶೇಷಾದ್ರಿರವರ ಶ್ರಮಕ್ಕೆ ಸಿಕ್ಕ ಫಲ ಇದು. ಈ ಚಿತ್ರದ ವಾಲ್ಮಾರ್ಟ್ ವಿಷಯ ಮತ್ತು ನಿರೂಪಣಾ ಶೈಲಿಯೇ ಈ ಚಿತ್ರಕ್ಕೆ ಪ್ರಶಸ್ತಿ ಬರಲು ಅನುವು ಮಾಡಿದೆ. ಇದೊಂದು ವ್ಯಾಲ್ಯೂ ಬೇಸ್ಡ್ ಚಿತ್ರ ಎಂದು ಹೇಳುತ್ತಿದ್ದಾರೆ. ಇದೇ ಚಿತ್ರದ ಅಭಿನಯಕ್ಕೆ ಹೆಚ್.ಜಿ. ದತ್ತಾತೇಯ ಅವರಿಗೂ ಪ್ರಶಸ್ತಿ ಸಿಕ್ಕಿರುವುದು ಖುಷಿ ಹೆಚ್ಚಿಸಿದೆ.ಪಿ.ಶೇಷಾದ್ರಿ, ಗಿರೀಶ್ ಕಾಸರವಳ್ಳಿಯವರಂಥ ನಿರ್ದೇಶಕರು ಎಷ್ಟು ಚಿತ್ರ ನಿರ್ದೇಶಿಸಿದರೂ ನಿರ್ಮಾಣ ಮಾಡಲು ನಾನು ಸಿದ್ಧ.  ಬೇರೆ ಭಾಷೆಗಳ ಚಿತ್ರಗಳಿಗೆ ಸತತ ರಾಷ್ಟ್ರ ಪ್ರಶಸ್ತಿಗಳು ಬರುತ್ತಿರುವಾಗ ನಮ್ಮ ಕನ್ನಡದಲ್ಲೂ ಉತ್ತಮ ನಿರ್ದೇಶಕರಿದ್ದಾರೆ, ನಮಗೂ ಪ್ರಶಸ್ತಿಗಳು ಬರಲಿ ಎಂದು ನಾನು ಚಿತ್ರ ನಿರ್ಮಾಣದಲ್ಲಿ ತೊಡಗಿದ್ದೇನೆ.
-ಬಸಂತ್ ಕುಮಾರ್ ಪಾಟೀಲ್, ನಿರ್ಮಾಪಕ


-ಸಂಕೇತ್ ಗುರುದತ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com