

ಅಲ್ಲಿನ ವೇದಿಕೆ ಜಗಮಗಿಸುವ ಬೆಳಕಿನಿಂದ ರಂಗೇರಿತ್ತು. 'ಕುಣಿದೂ ಕುಣಿದು ಬಾರೆ' ಎನ್ನುವ ನೃತ್ಯದ ಗಮ್ಮತ್ತು ಮತ್ತೇರಿಸುತ್ತಿತ್ತು. ಅದು ವೀಣಾ ಮಹಿಮೆ. ಯಾವ ವೀಣಾ? ಅಂತ ರಾಗ ತೆಗೆಯಬೇಡಿ. ಮೊದಲು ಬೆಂಗಳೂರಿಗೆ ಬಂದಾಗ ಸೀರೆ, ಬಳೆ, ಅರಿಶಿಣ, ಕುಂಕುಮ ಕೊಟ್ಟು ಅಪ್ಪಟ ಭಾರತೀಯ ನಾಯರಿಯಂತೆ ಸ್ವಾಗತ ಪಡೆದುಕೊಂಡ ನಟಿ ವೀಣಾ ಮಲ್ಲಿಕ್. ಆದರೆ ಮೊನ್ನೆ ಮಾತ್ರ ವೇದಿಕೆ ಮೇಲೆ ಆಕೆ ಸೀರೆ, ಬಳೆಯನ್ನು ಮರೆತು ಕುಣಿಯುತ್ತಿದ್ದರೆ ನಿರ್ಮಾಪಕ ವೆಂಕಟಪ್ಪ ಫುಲ್ ಖುಷಿಯಾಗಿದ್ದರು.
'ಬೆಂಗ್ಳೂರು ಫ್ಲೈಟು ಹತ್ತಿ ಬಂದೆ ನಾನು...' ಎನ್ನುವ ಹಾಡಿನ ದಾಟಿ ವೀಣಾ ಗೆಜ್ಜೆ ದನಿಯಲ್ಲಿ ಸೇರಿಕೊಂಡು ಸದ್ದು ಮಾಡುತ್ತಿದ್ದರೆ, ಅಲ್ಲಿದ್ದವರು 'ಸಿಲ್ಕ್ ಡ್ಯಾನ್ಸ್ ಸೂಪರ್ ಮಗ' ಎಂದು ಚಪ್ಪಾಳೆ ತಟ್ಟುತ್ತಿದ್ದರು.
ಹೀಗೆ ರಂಗು ರಂಗಿನ ದುನಿಯಾದಂತೆ ಕಂಡ ಆ ಕಾರ್ಯಕ್ರಮ 'ಸಿಲ್ಕ್' ಚಿತ್ರದ ಆಡಿಯೋ ಬಿಡುಗಡೆಯದ್ದು. ತ್ರಿಶೂಲ್ ನಿರ್ದೇಶನದ. ಅಕ್ಷಯ್ ನಾಯಕನಾಗಿ ಅಭಿನಯಿಸಿರುವ, ವೆಂಕಟಪ್ಪ ನಿರ್ಮಾಣದ ಈ ಚಿತ್ರಕ್ಕೆ ವೀಣಾ ಮಲ್ಲಿಕ್ ನಾಯಕಿ ಮತ್ತು ಜೀವ ಕೂಡ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೀಗಾಗಿ ಪದೇ ಪದೇ 'ಸಿಲ್ಕ್' ಟೀಮ್ ವೀಣಾಳನ್ನು ಬೆಂಳೂರಿಗೆ ಕರೆತಂದು ಶೋ ಕೊಡುತ್ತಲಿದೆ. ಇತ್ತೀಚೆಗಷ್ಟೆ ನಡೆದ ಚಿತ್ರದ ಆಡಿಯೋ ಬಿಡುಗಡೆಗೂ ಬಂದ ವೀಣಾ ಮನಸಾರೆ ಕುಣಿದು ಕುಪ್ಪಳಿಸಿದಳು. 'ಸಖತ್ ಹಾಟ್ ಮಗ' ಎಂಬುದು ಚಿತ್ರದ ಉಪ ಶೀರ್ಷಿಕೆ.