

ಮದನ್ ಪಟೇಲ್ ಖುಷಿಯಲ್ಲಿದ್ದರು. ಅದು ಗೆಲುವಿನ ಖುಷಿ. ಸುದೀರ್ಘ ಹೋರಾಟದಲ್ಲಿ ಗೆದ್ದ ಖುಷಿ. ಬಹಿರಂಗ ಪರೀಕ್ಷೆಯಲ್ಲಿ ಗೆದ್ದ ಖುಷಿ. ಆ ಖುಷಿ ಹಂಚಿಕೊಳ್ಳಲೆಂದೇ ಪತ್ರಿಕಾಗೋಷ್ಠಿ ಕರೆದಿದ್ದರು ಅವರು.
ಹಿಂದಿನ ದಿನವಷ್ಟೇ ಅವರ ನಿರ್ಮಾಣ, ನಿರ್ದೇಶನದ 'ಯಾರಿವನು...?' ತೆರೆ ಕಂಡಿತ್ತು. 'ಒಂದಲ್ಲ, ಎರಡಲ್ಲ... ಮೂರು ಸಲ ಸ್ವಾಮಿ ನಿತ್ಯಾನಂದ ಈ ಚಿತ್ರದ ಬಿಡುಗಡೆಯನ್ನು ತಡೆಯಲು ಪ್ರಯತ್ನಿಸಿದ. ಆದರೆ ಆ ದೇವರೂ ಅವರ ನೆರವಿಗೆ ಬರಲಿಲ್ಲ. ಭಗವಂತ ನನ್ನ ಕೈ ಹಿಡಿದ. ಚಿತ್ರ ಬಿಡುಗಡೆಗೆ ನ್ಯಾಯಾಲಯ ಅನುಮತಿ ನೀಡಿತು. ಪ್ರೇಕ್ಷಕರೂ ಕೈ ಬಿಡಲಿಲ್ಲ. ಎಲ್ಲಾ ಕಡೆ ಒಳ್ಳೆಯ ವರದಿ ಬರುತ್ತಿದೆ' ಎಂದು ಹೇಳಿಕೊಂಡರು ಮದನ್.
ಕಾನೂನು ಹೋರಾಟದಲ್ಲಿ 40 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಹಾಗೆ ಮಾಡದಿದ್ದರೆ ಇನ್ನೂ ದೊಡ್ಡಮಟ್ಟದ ಯಶಸ್ಸು ಸಿಗುತ್ತಿತ್ತು ಎನ್ನುವುದು ಅವರ ಅಭಿಪ್ರಾಯ. ಮೊದಲು 'ಸತ್ಯಾನಂದ' ಎಂದು ಇದ್ದಿದ್ದ ಚಿತ್ರದ ಶೀರ್ಷಿಕೆ ಆ ಬಳಿಕ ನೀವೇ ಹೇಳಿ' ಎನ್ನುವ ಅಡಿಶೀರ್ಷಿಕೆಯೊಂದಿಗೆ 'ಯಾರಿವನು...?' ಎಂದು ಬದಲಾಯಿತು. ಆಂಧ್ರಪ್ರದೇಶದಲ್ಲಿ 'ಸ್ವಾಮಿ ಸತ್ಯಾನಂದ' ಹೆಸರಿನಲ್ಲಿಯೇ ತೆರೆ ಕಂಡಿದ್ದು, ಅಲ್ಲೂ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಕತ್ತರಿ ಪ್ರಯೋಗಕ್ಕೆ ತುತ್ತಾಗಿರುವ ದೃಶ್ಯಗಳನ್ನು ಹಿಂದಿ ಅವತರಣಿಕೆಯಲ್ಲಿ ಸೇರಿಸುವ ಉಮೇದು ಮದನ್ ಅವರದ್ದು.
'ಒಬ್ಬ ರಾಜಕಾರಣಿ ತಪ್ಪು ಮಾಡಿದರೆ ಜನ ಪಾಠ ಕಲಿಸುತ್ತಾರೆ. ಆದರೆ ಒಬ್ಬ ಸ್ವಾಮೀಜಿ ತಪ್ಪು ಮಾಡಿದರೆ ಆತನನ್ನು ಶಿಕ್ಷಿಸುವವರೇ ಇಲ್ಲವೆ' ಎಂದು ಕೇಳಿದ ಮದನ್, ತಮ್ಮ ನಿರ್ಮಾಣದ ಸಿನಿಮಾದಲ್ಲೂ ಇದೇ ಪ್ರಶ್ನೆ ಎತ್ತಿರುವುದಾಗಿ ಹೇಳಿದರು.
ರಾಜ್ಯದ 80 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕೆಲವು ಕಡೆ ಬಾಡಿಗೆ ಆಧಾರದಲ್ಲಿ ಚಿತ್ರ ನೀಡದೆ ಗಳಿಕೆಯಲ್ಲಿನ ಪಾಲು (ಶೇರಿಂಗ್ ಸಿಸ್ಟಮ್) ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. ಗಳಿಕೆ ಹೀಗೆಯೇ ಇದ್ದರೆ ಮೂರ್ನಾಲ್ಕು ವಾರಗಳಲ್ಲಿ ಮದನ್ ಪಟೇಲ್ ಅವರಿಗೆ ಹಣ ಮರಳುವುದು ನಿಶ್ಚಿತ ಎಂದವರು ವಿತರಕ ತಿಮ್ಮೇಗೌಡ. ನಿತ್ಯಾನಂದನ ಆಶ್ರಮ ಇರುವ ಬಿಡದಿಯಲ್ಲೂ ಈ ವಾರ ಚಿತ್ರ ತೆರೆ ಕಾಣಲಿದೆ ಎಂದರು ಅವರು.
ನಾಯಕ ರವಿಚೇತನ್ ತನಗೆ ಸಿಕ್ಕಿರುವ ಮೊದಲ ದೊಡ್ಡ ಯಶಸ್ಸು ಇದು ಎಂದು ಖುಷಿಪಟ್ಟುಕೊಂಡರು. ಥೇಟ್ ವಿವಾದಿತ ಸ್ವಾಮಿ ಥರವೇ ಕಾಣಿಸಿಕೊಂಡಿದ್ದಾರೆ ಅವರು. ಹೋದಲ್ಲೆಲ್ಲ ಜನ ಅವರನ್ನು 'ಚೇತನ್ ಸ್ವಾಮೀಜಿ' ಎಂದು ಕರೆಯುತ್ತಿದ್ದಾರಂತೆ. ಅವರ ಕಾಲಿಗೆ ಬೀಳುವವರು, ಅಪ್ಪಿಕೊಳ್ಳುವವರೂ ಇದ್ದಾರಂತೆ. 'ಜನ ಮೊದಲ ಸಲ ನನ್ನನ್ನು ನನ್ನ ಪಾತ್ರದೊಂದಿಗೆ ಗುರುತಿಸುತ್ತಿದ್ದಾರೆ. ಇದಕ್ಕಿಂತ ದೊಡ್ಡ ಸಂತಸ ಬೇರೇನಿದೆ' ಎಂದರು ರವಿಚೇತನ್.