ಮರೆತಾರೆಗಳು

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ತ್ರೀ ಸ್ಟಾರ್ ಕಾಣುತ್ತಿಲ್ಲ. ಆದರೆ ಇದು ಕ್ವಾಲಿಟಿಯ ವಿಚಾರ ಅಲ್ಲ. ಕಾಣದಾದ ನಾಯಕರ ವಿಷಯ.
ಮರೆತಾರೆಗಳು
Updated on: 

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ತ್ರೀ ಸ್ಟಾರ್ ಕಾಣುತ್ತಿಲ್ಲ. ಆದರೆ ಇದು ಕ್ವಾಲಿಟಿಯ ವಿಚಾರ ಅಲ್ಲ. ಕಾಣದಾದ ನಾಯಕರ ವಿಷಯ. ಹಾಗಂತ ನಾಪತ್ತೆ ಕೇಸು ಎಲ್ಲೂ ದಾಖಲಾಗಿಲ್ಲ. ಆದರೂ ಈ ಸ್ಟಾರ್‌ಗಳು ಅಭಿಮಾನಿಗಳಿಗೆ ಮತ್ತು ಗಾಂಧಿನಗರದ ಪಾಲಿಗೆ 'ಮರೆ'ತಾರೆಗಳಾಗಿದ್ದಾರೆ. ಹಾಗೆ ನೋಡಿದರೆ ಈ ಮೂವರು ಸ್ಟಾರ್‌ಗಳು ಚಂದನವನದ ಮುದ್ದು ಮುಖಗಳೇ. ನೋಡಲು ಸುಂದರವಾಗಿಯೇ ಇದ್ದಾರೆ. ಪಕ್ಕಾ ಫೆಮಿಲಿಯರ್ ಫೇಸ್‌ಗಳು. ಆರಂಭದಲ್ಲಿ ದೊಡ್ಡ ಸಕ್ಸಸ್ ಕೊಟ್ಟವರು. ಒಂದೇ ಗೆಲುವಿನಲ್ಲಿ ಹತ್ತಾರು ಚಿತ್ರಗಳನ್ನು ಬಾಚಿಕೊಂಡವರು. ಆದರೆ ಯಾಕೋ ಇದ್ದಕ್ಕಿದ್ದ ಹಾಗೆ ಸ್ಟಾರ್ ಬೆಲೆ ಕಳೆದುಕೊಳ್ಳುತ್ತ ಬಂದರು. ಈಗ ಹೆಚ್ಚೂಕಮ್ಮಿ ನಾಪತ್ತೆಯೇ ಆಗಿದ್ದಾರೆ ಎಂಬುದು ಗಾಂಧಿನಗರದ ಗಲ್ಲಿ ಗಂಗಣ್ಣನ ಅಂಬೋಣ.

ಅಂದಹಾಗೆ ಆ ಸ್ಟಾರ್‌ಗಳು ಬೇರ್ಯಾರೂ ಅಲ್ಲ. ಒಂದು ಗೋಲ್ಡನ್ ಸ್ಟಾರ್, ಮತ್ತೊಂದು ರಾಯಲ್ ಸ್ಟಾರ್, ಮಗದೊಂದು ದೂದ್ ಪೇಡ. ಹೌದು, ನಟರಾದ ಗಣೇಶ್, ಅಜಯ್ ರಾವ್, ದಿಗಂತ್ ಸದ್ಯ ಕನ್ನಡ ಚಿತ್ರರಂಗದ ಹೊಸ 'ಮರೆ'ತಾರೆಗಳು. ಸದ್ದು ಮಾಡದ ಈ ತಾರೆಗಳು ಮೂಲೆಗುಂಪಾಗಿದ್ದಾರೆಯೇ? ಎನ್ನುವ ಕೆಟ್ಟ ಗುಮಾನಿಗಳು ಈಗ ಪ್ರೇಕ್ಷಕನ ಬೆನ್ನಿಗೆ ಗುಮ್ಮುತ್ತಿವೆ. ಈ ಅನುಮಾನಗಳ ಸುಳಿಯಲ್ಲಿ ಸಿಕ್ಕಿಕೊಂಡಿರುವ ಅವರವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಳನ್ನು ಹುಡುಕುತ್ತಿದ್ದಾರೆ ಎಂದರೆ ವ್ಯಂಗ್ಯ ಎಂದುಕೊಳ್ಳಬಾರದು.

ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಚಿತ್ರದ ನಂತರ ನಟ ಗಣೇಶ್ ಚಿತ್ರರಂಗದಲ್ಲಿ ಸ್ಟಾರ್ ಎನ್ನಿಸಿಕೊಂಡರು. ಅಲ್ಲಿಂದ ಭಟ್ಟರ ವಿದ್ಯಾರ್ಥಿಯೆಂದೇ ಗುರುತಿಸಿಕೊಂಡರು. 'ಮಳೆ' ನಂತರ ಗಣೇಶ್‌ರ ಪಾಲಿಗೆ ಸಿನಿಮಾ ವ್ಯವಸಾಯ ಚೆನ್ನಾಗಿಯೇ ಆಯ್ತು. ಒಂದರ ಹಿಂದೆ ಒಂದರಂತೆ ಚಿತ್ರಗಳು ಗಣೇಶ್‌ರ ಬೆನ್ನಿಗೇರಿದವು. 'ಗೋಲ್ಡನ್ ಸ್ಟಾರ್‌' ಪಟ್ಟವನ್ನೂ ಅಲಂಕರಿಸಿದರು. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಬಹುದೆನೋ ಆದರೆ ಚಿತ್ರರಂಗದ ಈ 'ಗೋಲ್ಡ'ನ್ ಸ್ಟಾರ್ ಬೆಲೆ ಎಂದೂ ಕಡಿಮೆಯಾಗಲ್ಲ ಎಂದುಕೊಂಡರು. ಆದರೆ 'ಮಳೆ ನಿಂತು ಹೋದ ಮೇಲೆ' ಬರಗಾಲ ಸಹ ತನ್ನ ಇರುವಿಕೆಯನ್ನು ತೋರಿಸ ಬೇಕಲ್ಲವೇ? ಅದು ಪ್ರಕೃತಿಯ ನಿಯಮ ಮಾತ್ರವಲ್ಲ, 'ಸಿನಿಮಾ ಕೃಷಿ'ಯ ಸೂತ್ರವೂ ಹೌದು ಎನ್ನಲು ಗಣೇಶ್ ಸಾಕ್ಷಿ.

ವಿಶೇಷ ಎಂದರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿ ಜನಸಾಮಾನ್ಯರು ಕೂಡ 'ಅಯ್ಯೋ ನನ್ ಚಿನ್ನಾ' ಎಂದು ಬಂಗಾರದಂಗಡಿಗಳ ಬಾಗಿಲು ತಟ್ಟುತ್ತಿದ್ದರೆ, ಇತ್ತ ಗೋಲ್ಡನ್ ಸ್ಟಾರ್ ಸದ್ದು ಮಾಡದೆ 'ಮರೆ'ತಾರೆಯ ಪಟ್ಟಿಯಲ್ಲಿ ಸೇರುವ ಅಪಾಯಗಳು ಕಾಣುತ್ತಿವೆ.

'ಮಿ. 420' ಚಿತ್ರದ ನಂತರ ಗಣೇಶ್ ಚಿತ್ರಗಳು ಬಿಡುಗಡೆಯಾಗಿಲ್ಲ. 'ಆಟೋ ರಾಜ' ಮತ್ತು 'ಸಕ್ಕರೆ' ಚಿತ್ರಗಳು ಬಿಡುಗಡೆಯಾಗಬೇಕಿದೆ. ಸಕ್ಸಸ್ ಲೈನ್‌ನಲ್ಲಿರುವ ತಾರೆಗಳ ಚಿತ್ರಗಳು ಬಿಡುಗಡೆಯಾಗದಿದ್ದರೂ ಸುದ್ದಿಯಲ್ಲಿರುತ್ತಾರೆ. ಗಣೇಶ್ ಈ ವಿಚಾರದಲ್ಲಿ ಉಲ್ಟಾ. ಇದಕ್ಕೆ ತಕ್ಕಂತೆ ಬಿಡುಗಡೆಯಾಗುತ್ತಿರುವ ಚಿತ್ರಗಳು ಕೂಡ ಅವರ ಕೈ ಹಿಡಿಯುತ್ತಿಲ್ಲ. ಈಗ ಗಣೇಶ್‌ರ 'ಗೋಲ್ಡನ್‌' ಪಟ್ಟದ ಮುಂದಿನ ರೇಟು 'ಸಕ್ಕರೆ', 'ಆಟೋ ಚಿತ್ರ'ದ ಮೇಲೆ ನಿಂತಿದೆ.
ಇದೇ ಪಟ್ಟಿಯಲ್ಲಿ ಕಾಣುವ ಮತ್ತೊಂದು ಫೆಮಿಲಿಯರ್ ಫೇಸ್ ನಟ ಅಜಯ್ ರಾವ್. ಚಿತ್ರರಂಗದಲ್ಲಿ ಗೆಲುವಿನ 'ತಾಜ್‌ಮಹಾಲ್‌' ಕಟ್ಟಿಸಿಕೊಂಡ ಮೇಲೆ 'ಪ್ರೇಮ್ ಕಹಾನಿ' 'ಲವ್ ಸ್ಟೋರಿ', 'ಮ್ಯಾರೇಜ್ ಸ್ಟೋರಿ'ಗಳ ಹಿಂದೆ ಬಿದ್ದು 'ಬ್ರೇಕಿಂಗ್ ನ್ಯೂಸ್‌' ಆದರು. ಸದ್ಯ ಗೆಲುವಿನ ಬ್ರೇಕ್ ಫೇಲ್ಯೂರ್ ಆಗಿದೆ ಎನ್ನುವ ಸುದ್ದಿ ಇದೆ. ನಾಲ್ಕೈದು ಚಿತ್ರಗಳ ಹೊರತಾಗಿ ಅಜಯ್‌ಗೆ ಬೇರೆ ಯಾವುದೇ ಚಿತ್ರಗಳು ಕೈ ಹಿಡಿಯಲಿಲ್ಲ. ಹೀಗಾಗಿ ನಾಗತಿಹಳ್ಳಿ ಚಂದ್ರಶೇಖರ್‌ರ 'ಬೇಕಿಂಗ್ ನ್ಯೂಸ್‌'ನ ಬಳಿಕ ಯಾವುದೇ ನ್ಯೂಸ್ ಇಲ್ಲದೆ ಅಜಯ್ ರಾವ್ ಸೈಲೆಂಟ್ ಆಗಿದ್ದಾರೆ. ಎರಡು ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ ಅಷ್ಟೇ. 'ತಾಜ್‌ಮಹಾಲ್‌' ಮೂಲಕ ಗಾಂಧಿನಗರದಲ್ಲಿ ಭರವಸೆ ಮೂಡಿಸಿದ ನಟ ಅಜಯ್ ರಾವ್. ಕನ್ನಡಕ್ಕೆ ಮತ್ತೊಬ್ಬ ಯುವ ಸ್ಟಾರ್ ಸಿಕ್ಕಂತಾಯಿತು ಎನ್ನುವ ಸಂಭ್ರಮದಲ್ಲಿರುವಾಗಲೇ ಅಜಯ್, ಅಜ್ಞಾತ! ಹಾಗೆ ನೋಡಿದರೆ ಅಜಯ್‌ರ ಮೊದಲ ಚಿತ್ರ 'ಎಕ್ಸ್‌ಕ್ಯೂಸ್ ಮಿ' ಸಹ ಗೆಲುವು ಕೊಟ್ಟಿತು. ಆ ನಂತರ ಯಾವ ಚಿತ್ರವೂ ಅವರಿಗೆ ನೆಲೆ ಒದಗಿಸಲಿಲ್ಲ. ನಿರ್ದೇಶಕ ಆರ್. ಚಂದ್ರುರ 'ತಾಜ್‌ಮಹಲ್‌'ನಲ್ಲಿ ಗೆಲುವಿನ ನಗೆ ಬೀರಿ, ಸ್ಟಾರ್ ಆಗಿ ಹೊರ ಹೊಮ್ಮಿದರು. ಅಲ್ಲದೆ ಅಜಯ್ ಸಿಕ್ಕಾಪಟ್ಟೆ ಡಿಮ್ಯಾಂಡ್ ಮಾಡ್ತಾರೆ, ಪ್ಯಾಕೇಜ್ ಕೇಳ್ತಾರೆ ಎನ್ನುವ ಅರೋಪಗಳೂ ಅವರ ಮೇಲಿವೆ.

'ಅದ್ವೈತ' ಹಾಗೂ 'ಕೃಷ್ಣ ಸನ್ ಆಫ್ ಸಿಎಂ' ಚಿತ್ರಗಳು ಅಜಯ್‌ರನ್ನು ಮತ್ತೆ ಗೆಲುವಿನಡೆಗೆ ನಡೆಸಬೇಕಿದೆ. ಇಲ್ಲದಿದ್ದರೆ ಅಜಯ್ ಕೂಡ ನಾಪತ್ತೆ ಸ್ಟಾರ್.

 ಸದ್ಯ ಸುದ್ದಿ ಇಲ್ಲದೆ ನಾಪತ್ತೆಯ ಪ್ರಕರಣದಲ್ಲಿರುವ ಮತ್ತೊಬ್ಬ ನಟ ದಿಗಂತ್. ಪ್ರೇಕ್ಷಕರಿಂದ ದೂದ್ ಪೇಡ ಎಂದು ಕರೆಸಿಕೊಂಡರೂ ದಿಗಂತ್‌ಗೆ ಹೇಳಿಕೊಳ್ಳುವಂಥ ದೊಡ್ಡ ಸಕ್ಸಸ್ ಏನೂ ಸಿಕ್ಕಿಲ್ಲ. ಆದರೆ ಯೋಗರಾಜ್ ಭಟ್ಟರ ಪಾಕ ಶಾಲೆಯ ವಿದ್ಯಾರ್ಥಿ ಎನ್ನುವ ಬ್ರಾಂಡ್ ಮಾತ್ರ ಇದೆ. ಅಲ್ಲದೆ, 'ಮನಸಾರೆ' ಹಾಗೂ 'ಲೈಫು ಇಷ್ಟೇನೆ' ಚಿತ್ರಗಳು ನಿರ್ಮಾಪಕರಿಗೆ ಕಾಸು ಮಾಡಿಕೊಟ್ಟಿವೆ. 'ಪಂಚರಂಗಿ' ಚಿತ್ರವೂ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿತು. ಆದರೆ 'ಪಾರಿಜಾತ' ಹಾಗೂ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರಗಳ ನಂತರ ದಿಗಂತ್ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಎರಡ್ಮೂರು ಚಿತ್ರಗಳ ಹೊರತಾಗಿ ದಿಗಂತ್ ಅಭಿನಯದ ಯಾವುದೇ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಭಟ್ಟರ ಬನ್ನೂರು ಕುರಿ ಎಂಬ ಅಪವಾದ ದಿಗಂತ್ ಮೇಲಿದೆ.
ಇನ್ನು ಶೇಖರ್ ನಿರ್ದೇಶನದ 'ಬರ್ಫಿ' ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರ ದಿಗಂತ್‌ಗೆ ಲೈಫ್ ಕೊಡಬೇಕಿದೆ. ಇಲ್ಲದಿದ್ದರೆ ಅವರ ಸಿನಿಮಾ ಲೈಫು ಇಷ್ಟೇನೆ! ಒಟ್ಟಿನಲ್ಲಿ ಕನ್ನಡದ ಮೂರು ತಾರೆಗಳ ದುರದೃಷ್ಟವೋ ಏನೋ, ಆರಂಭದಲ್ಲಿ ಅಬ್ಬರಿಸಿದ ಮಲಗಿಬಿಟ್ಟಿವೆ. ಕಾಲ ಅಷ್ಟು ಬೇಗ ಬದಲಾಯಿತೇ?

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com