

ಕ್ರೇಜಿಸ್ಟಾರ್ ರವಿಚಂದ್ರನ್ರೊಂದಿಗೆ 'ತುಪ್ಪ ಬೇಕಾ ತುಪ್ಪಾ...' ಎಂದು ಚುಕ್ ಚುಕ್ ಚುಕ್ ಚುಕ್ ತುಪ್ಪ ಮಾರಿದ ರಾಗಿಣಿ ಈಗ ಬಿಸ್ಕೆಟ್ ಹಾಕಲು ಬರುತ್ತಿದ್ದಾಳೆ. 'ಅದು ನಾಯಿ ಬಿಸ್ಕೆಟ್ ಇರಬಹುದು ಬಿಡಿ' ಅಂತ ವ್ಯಂಗ್ಯ ಮಾಡಬೇಡಿ. ಯಾಕೆಂದರೆ ಮಂಜು ಪಕ್ಕದಲ್ಲೇ ಇದ್ದಾರೆ. ಛೇ... ಮತ್ತೆ ತಪ್ಪು ತಿಳಿಯಬೇಡ್ರಪ್ಪ. ರಾಗಿಣಿ ಚಿತ್ರಕ್ಕೆ ನಿರ್ಮಾಪಕ ಕೆ. ಮಂಜು ಹಣ ಹಾಕುತ್ತಿದ್ದಾರೆ ಅಷ್ಟೇ!
ಬಹಳ ಹಿಂದೆ 'ರಾಗಿಣಿ ಐಪಿಎಸ್' ಸೆಟ್ಟೇರಿತ್ತು. ಶೀರ್ಷಿಕೆ ನೋಡಿದರೇ ಗೊತ್ತಾಗುವಂತಿರುವ ಮಹಿಳಾ ಪ್ರಧಾನ ಈ ಚಿತ್ರಕ್ಕೆ ಆನಂದ್ ಪಿ.ರಾಜು ನಿರ್ದೇಶಕರು. ಇತ್ತೀಚೆಗೆ ಹಾಡಿನ ಚಿತ್ರೀಕರಣವಿತ್ತು. ಲಕಲಕ ಅಂತ ಹೊಳೆಯುವ ಸೆಟ್ನಲ್ಲಿ ರಾಗಿಣಿ ಮತ್ತೆ ಸೊಂಟ ಬಳಕಿಸುತ್ತ 'ಸಖತ್ತು ಸಖತ್ತು ನನ್ನ ಬ್ಯೂಟಿ ಸಖತ್ತು, ಸಖತ್ತು ಸಖತ್ತು ನನ್ನ ತುಟಿ ಬಿಸ್ಕತ್ತು ಸಖತ್ತು' ಎಂದು ಹೆಜ್ಜೆ ಹಾಕುತ್ತಿದ್ದರೆ ಅದಕ್ಕೆ ತಕ್ಕಂತೆ ನೃತ್ಯ ನಿರ್ದೇಶಕ ಇಮ್ರಾನ್ ಕುಣಿಸುತ್ತಿದ್ದರು. ಇತ್ತ ಮಂಜು ತಮ್ಮ ತುಟಿ ಕಚ್ಚಿಕೊಂಡು ನೋಡುತ್ತಿದ್ದರು.
ಈಗಾಗಲೇ ಅವರು 'ರಾಗಿಣಿ' ಸಿನಿಮಾಗೆ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಿದ್ದಾರೆ. ಹೇಗಾದರೂ ಮಾಡಿ ಈ ಐಪಿಎಸ್ ಮಿಸ್ಸಮ್ಮನನ್ನು ಮಿಸ್ ಮಾಡದೆ ಚಿತ್ರಮಂದಿರದಲ್ಲಿ ಪ್ರದರ್ಶಿಸಬೇಕು ಎಂಬುದು ಮಂಜು ಅವರ ಹಠ. ಹೀಗಾಗಿ ಕೊಂಚ ತಡವಾದರೂ ಮತ್ತೆ ಎಚ್ಚೆತ್ತುಕೊಂಡು ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಈಗ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಈಗಾಗಲೇ 'ಅಗ್ನಿ ಐಪಿಎಸ್', 'ಚೆನ್ನಮ್ಮ ಐಪಿಎಸ್' ಚಿತ್ರಗಳ ಮೂಲಕ ಐಪಿಎಸ್ ಕ್ಯಾಟಗಿರಿಯನ್ನು ಗಾಂಧಿನಗರದಲ್ಲಿ ಮೇಲ್ದರ್ಜೆಗೇರಿಸಿದ ನಿರ್ದೇಶಕ ಆನಂದ್ ಪಿ.ರಾಜು ಬಿಸ್ಕೆಟ್ ಹಾಡಿನ ಚಿತ್ರೀಕರಣದೊಂದಿಗೆ ಕುಂಬಳಕಾಯಿ ಒಡೆದಿದ್ದಾರೆ. ಇದೇ ತಿಂಗಳು 24ರಂದು ಶತಾಯಗತಾಯ ಚಿತ್ರವನ್ನು ತೆರೆಗೆ ತರುವ ಯೋಜನೆ ನಿರ್ಮಾಪಕರದ್ದು.
ಈ ಹಾಟ್ ಹಾಡಿನ ಚಿತ್ರೀಕರಣದ ನಡುವೆಯೇ ನಟಿ ರಾಗಿಣಿಯ ಹುಟ್ಟು ಹಬ್ಬ ಆಚರಿಸಲಾಯಿತು. ಕೇಕ್ ಅನ್ನು ಮಂಜು ಬಾಯಿಗಿಡಲು ರಾಗಿಣಿ ಮರೆಯಲಿಲ್ಲ. ಹಾಗೆ ಪತ್ರಕರ್ತರಿಗೂ ಕೇಕ್ ತಿನ್ನಿಸಿದಳು. 'ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಬೇಕೆಂದುಕೊಂಡೆ. ಕಾರಣಾಂತರಗಳಿಂದ ಆಗಲಿಲ್ಲ' ಎಂದು ಕಂಗ್ಲಿಷ್ನಲ್ಲಿ ನುಡಿದಳು ರಾಗಿಣಿ. ಮಹಿಳಾ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿರುವ ಈಗಿನ ಕಾಲದಲ್ಲಿ ಇಂಥ ಚಿತ್ರಗಳು ಬೇಕಿದೆ ಎಂಬುದು ನಿರ್ದೇಶಕರ ಮಾತು. 'ಒಳ್ಳೆಯ ಸಿನಿಮಾ ಮಾಡಿದ್ದೇನೆಂಬ ನಂಬಿಕೆ ನನ್ನದು. ಮೊದಲ ಬಾರಿಗೆ ರಾಗಿಣಿ ಪೊಲೀಸ್ ಡ್ರೆಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಕಾ ಸಾಹಸ ಪ್ರಧಾನ ಚಿತ್ರ' ಎಂಬುದು ಮಂಜು ವಿವರಣೆ. ಸದ್ಯ ರಾಗಿಣಿಯ ಸಾಹಸ ನೋಡಲು ಇನ್ನೂ ಕಾಯಬೇಕಿದೆ. ಹಾಡು, ಕುಣಿತ, ಬಿಸ್ಕೆಟ್, ಹುಟ್ಟು ಹಬ್ಬ... ಹೀಗೆ ರಾಗಿಣಿಯ ಚಮ್ಮಕ್ ಚಲ್ಲೋ ಸೆಟ್ನಲ್ಲಿ ಸೆಟ್ಟೇರಿತ್ತು.