

ಕನ್ನಡಪ್ರಭ ಬೆಂಗಳೂರು ಮೇ 10-
ಬೆಂಕಿಯ ಕೆಂಡ ಉಗುಳುವ ಕಂಗಳು... ಬೇಟೆಗಾರನ ಭರ್ಜಿ ನೆನಪು ಮಾಡುವ ನೋಟ... ಕಂಚಿನ ಕಂಠ.. ಸಾಮಾನ್ಯ ಜನ ಅವರನ್ನು ಕಂಡರೆ ಮಾರು ದೂರ ಓಡಿ ಹೋಗಿ ನಿಲ್ಲುತ್ತಿದ್ದರು.
ಹೌದು..ದಶಕಗಳ ಕಾಲ ಬೆಳ್ಳಿಪರದೆಯಲ್ಲಿ ಗುಡುಗಿದ 'ವಜ್ರ'ಕಂಠ ಅದು. ನಾಯಕನ ಎದುರು ಗರ್ಜಿಸಿ ತೊಡೆ ತಟ್ಟಿದರೆ ಇತ್ತ ಆ ನಾಯಕನ ಅಭಿಮಾನಿಗಳೇ ಥರಗುಟ್ಟುತ್ತಿದ್ದರು, ಅಂಥ ಖಳ ರೂಪ ಅದು.
ಖಳರೇ ಖತಂ ಆದಂತೆ ಕಾಣುವ ಸಿನಿಮಾಗಳನ್ನು ನೋಡಿದಾಗೆಲ್ಲ, ಹೆದರಿಕೆ ಹುಟ್ಟಿಸುವ ನಟಭೈರವ ವಜ್ರಮುನಿ ಮತ್ತೆ ಮತ್ತೆ ನೆನಪಾಗುವುದೇ ಹೀಗೆ. ಇಂದು ಅವರ ಜನ್ಮದಿನ. ಈಗ ವಜ್ರಮುನಿ ಇದ್ದಿದ್ದರೆ ನಿಜಕ್ಕೂ ಬೆಳ್ಳಿಪರದೆ ಮೇಲೆ ಗರ್ಜಿಸುತ್ತಿದ್ದರೇನೋ? ಆದರೆ ಆ ನಟಭೈರವ ನಮ್ಮೊಂದಿಗಿಲ್ಲ. ಆದರೂ ಅಭಿನಯ, ಕಂಚಿನ ಕಂಠ, ಖಳನಾಯಕ ಎಂದರೆ ಹೇಗಿರಬೇಕು ಎಂಬುದಕ್ಕೆ ಸ್ಪಷ್ಟ ನಿದರ್ಶನದಂತಿದ್ದವರು.
ತಂದೆಯೇ ಸ್ಫೂರ್ತಿ: ವಜ್ರಮುನಿ ಬೆಂಗಳೂರಿನ ಜಯನಗರದ ಕನಕನಪಾಳ್ಯದವರು. ಆರ್. ವಜ್ರಪ್ಪ ಹಾಗೂ ವರದಮ್ಮ ದಂಪತಿ ಪುತ್ರ. ತಮ್ಮ ತಂದೆಯ ಕಲಾ ಪ್ರತಿಭೆಯನ್ನೇ ಮೈಗೂಡಿಸಿಕೊಂಡಿದ್ದ ವಜ್ರಮುನಿ, 1960ರಲ್ಲಿ ರಂಗಭೂಮಿಗೆ ಕಾಲಿಟ್ಟು, 7 ವರ್ಷಗಳ ಕಾಲ ರಂಗನಟರಾಗಿ ಬಣ್ಣ ಹಚ್ಚಿದರು.
600ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಅತ್ಯಂತ ಜನಪ್ರಿಯ ನಾಯಕ ಎನ್ನಿಸಿಕೊಂಡ 'ಪ್ರಚಂಡ ರಾವಣ'ದ ರಾವಣ ಪಾತ್ರದ ಮೂಲಕ ರಾಜ್ಯದ ಮನೆ ಮನೆಗೂ ತಲುಪಿದ ಕಲಾವಿದ ವಜ್ರಮುನಿ. ಮುಂದೆ ಪುಟ್ಟಣ್ಣ ಕಣಗಾಲ್ ಅವರೇ ನಿರ್ದೇಶನ ಮಾಡಿದ 'ಸಾವಿರ ಮೆಟ್ಟಿಲು' ಚಿತ್ರದ ಮೂಲಕ ಬೆಳ್ಳಿಪರದೆಗೆ ಪ್ರವೇಶಸಿದ ವಜ್ರಮುನಿ ಹಲವಾರು ಏಳುಬೀಳುಗಳ ನಡುವೆ ಬೆಳೆದು ಬಂದು ಕಲಾಮೂರ್ತಿ. ದಾಖಲೆ ಪ್ರದರ್ಶನ ಕಂಡ 'ಬಂಗಾರದ ಮನುಷ್ಯ' ಸೇರಿದಂತೆ 'ದಾಯಾದಿ' ಚಿತ್ರದವರೆಗೂ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದವರು. ವಿಶೇಷ ಎಂದರೆ ಮೊದಲ ಚಿತ್ರವಾದ 'ಸಾವಿರ ಮೆಟ್ಟಿಲು' ಹಾಗೂ ಕೊನೆಯ ಚಿತ್ರವಾದ 'ದಾಯಾದಿ'ಯಲ್ಲಿ ನಟ ಕಲ್ಯಾಣ್ಕುಮಾರ್ ಅಭಿನಯಿಸಿದ್ದರು. ಹೀಗಾಗಿ 'ನನ್ನ ಪಾಲಿಗೆ ಆರಂಭ ಮತ್ತು ಅಂತ್ಯ ಎರಡೂ ಆ ಕಲ್ಯಾಣ್ಕುಮಾರ್ ಅವರೇ' ಎಂದು ಸ್ವತಃ ವಜ್ರಮುನಿಯವರೇ ಒಮ್ಮೆ ಹೇಳಿಕೊಂಡಿದ್ದನ್ನು ಅವರ ಪತ್ನಿ ಲಕ್ಷ್ಮಿ ವಜ್ರಮುನಿ ಈಗಲೂ ನೆನಪಿಸಿಕೊಳ್ಳುತ್ತಾರೆ.
ಕುಟುಂಬ ಈಗೆಲ್ಲಿದೆ?
ವಜ್ರಮುನಿ ಕುಟುಂಬದವರು ಬೆಂಗಳೂರಿನ ಉತ್ತರಹಳ್ಳಿಯ ಮುಖ್ಯ ರಸ್ತೆಯ ಮಾರ್ಗದಲ್ಲಿ ಬರುವ ಅಂಜನಾಪುರದ ನಂತರ ಸಿಗುವ ಅಮೃತ ನಗರದಲ್ಲಿ ನೆಲೆಸಿದ್ದಾರೆ. ವಜ್ರಮುನಿಯವರ ತಂದೆ ಆರ್. ವಜ್ರಪ್ಪ. ಅವರಿಗೆ ಮೂರು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳು. ವಜ್ರಮುನಿ ವಜ್ರಪ್ಪನವರ ಹಿರಿಯ ಮಗ. ಈಗ ಅಂಜನಾಪುರ ರಸ್ತೆಗೆ 'ಶ್ರೀಯುತ ವಜ್ರಮುನಿ ರಸ್ತೆ' ಅಂತ ಹೆಸರಿಟ್ಟಿರುವ ಸ್ಥಳೀಯ ಅಭಿಮಾನಿಗಳು ತಮ್ಮೂರಿನ ಪ್ರಮುಖ ವೃತ್ತಕ್ಕೆ 'ಶ್ರೀಯುತ ವಜ್ರಮುನಿ ವೃತ್ತ' ಎಂದು ನಾಮಕರಣ ಮಾಡಿದ್ದಾರೆ. ಮೂರು ಜನ ಮಕ್ಕಳು, ನಾಲ್ಕು ಮಂದಿ ಮೊಮ್ಮಕ್ಕಳೊಂದಿಗೆ ವಜ್ರಮುನಿಯವರೇ ಕಟ್ಟಿಸಿರುವ 'ಎಲ್' ಆಕಾರದ ಮನೆಯಲ್ಲಿ ವಜ್ರಮುನಿ ಅವರ ಪತ್ನಿ ಲಕ್ಷ್ಮಿ ವಜ್ರಮುನಿ ವಾಸವಾಗಿದ್ದಾರೆ. ಅಂದಹಾಗೆ 'ಎಲ್' ಅಂದರೆ ಲಕ್ಷ್ಮಿ ಎಂದರ್ಥ. ಮೂರು ಜನ ಮಕ್ಕಳು ಅಪ್ಪನ ಆಸಕ್ತಿಯ ಕ್ಷೇತ್ರವಾದ ಕೃಷಿ, ನರ್ಸರಿ ಫಾರಂ ಅನ್ನು ನೋಡಿಕೊಳ್ಳುತ್ತಿದ್ದಾರೆ.
ಹಿರಿಯರಿಗೆ ಆರ್ಥಿಕ ನೆರವು
ರಂಗಶ್ರೀ ಕಲಾ ಸಂಸ್ಥೆ ಹಾಗೂ ನಟಭೈರವ ಪ್ರತಿಷ್ಠಾನದ ವತಿಯಿಂದ ಶನಿವಾರ ಸಂಜೆ 6 ಗಂಟೆಗೆ ವಜ್ರಮುನಿಯ 70ನೇ ಜನ್ಮದಿನೋತ್ಸವವನ್ನು ನಡೆಯಲಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಇಬ್ಬರನ್ನು ಹಿರಿಯ ಕಲಾವಿದರನ್ನು ಸನ್ಮಾನಿಸಿ ಆರ್ಥಿಕ ನೆರವು ನೀಡಲು ವಜ್ರಮುನಿ ಕುಟುಂಬ ಹಾಗೂ ಪ್ರತಿಷ್ಠಾನ ನಿರ್ಧರಿಸಿದೆ. ನಟರಾದ ಅಶೋಕ್, ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು, ಪ್ರತಿ ವರ್ಷ ಹೀಗೆ ವಜ್ರಮುನಿ ನೆನಪಿನಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರ ಪತ್ನಿ ಲಕ್ಷ್ಮಿ ವಜ್ರಮುನಿ, ಪುತ್ರ ಜಗದೀಶ್ ವಜ್ರಮುನಿ ತಿಳಿಸಿದ್ದಾರೆ.
ಇಂತಿ ನಿಮ್ಮ ಭೀತಿಯ...
ವಜ್ರಮುನಿಯವರ ತೆರೆ ಮೇಲಿನ ಖಳನ ರೂಪ ನಿಜ ಜೀವನದಲ್ಲೂ ಹೇಗೆ ಸಾಮಾನ್ಯ ಜನರನ್ನು ಭಯ ಬೀಳಿಸುತ್ತಿತ್ತು ಎನ್ನುವುದಕ್ಕೆ ಈ ಎರಡು ಘಟನೆಗಳು ಸಾಕ್ಷಿ. ಆಗ ಕಾಂಗ್ರೆಸ್ನಿಂದ ವಜ್ರಮುನಿ ಚುನಾವಣೆಗೆ ನಿಂತಿದ್ದ ಸಂದರ್ಭ. ತನ್ನ ಪರ ವೋಟು ಕೇಳಲು ಬಸವನಗುಡಿ ಬೀದಿ ಬೀದಿಯಲ್ಲಿ ಓಡಾಡಬೇಕಾದರೆ ಮಹಿಳೆಯರು, ಚಿಕ್ಕ ಮಕ್ಕಳು ಅವರನ್ನು ನೋಡಿ ಹೆದರಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಕೊನೆಗೆ 'ಬಾ ಲಕ್ಷ್ಮಿ ಚುನಾವಣೆ ಪ್ರಚಾರಕ್ಕೆ ಹೋಗೋಣ' ಅಂತ ತಮ್ಮ ಪತ್ನಿಯನ್ನು ಕರೆದುಕೊಂಡು ಬಂದರು. ಮತ ಕೇಳಲು ಹೋದ ಲಕ್ಷ್ಮಿಯವರನ್ನು 'ಏನ್ರಿ ನೀವು ವಜ್ರಮುನಿ ಹೆಂಡತಿನಾ!? ನಿಮಗೇನು ಅವರು ತೊಂದರೆ ಕೊಡೋದಿಲ್ವಾ!?' ಅಂತ ಮಹಿಳೆಯರು ಅಚ್ಚರಿಯಿಂದ ಕೇಳುತ್ತಿದ್ದರಂತೆ. ಮತ್ತೊಂದು ಘಟನೆ. ಇದು ನಡೆದದ್ದು 'ಸಿಪಾಯಿ ರಾಮು' ಚಿತ್ರೀಕರಣ ನಡೆಯುತ್ತಿದ್ದ ಶ್ರೀರಂಗಪಟ್ಟಣದ ಬಳಿ. ಚಿತ್ರೀಕರಣದ ನಡುವೆ ಅವರು ರಾಜ್ಕುಮಾರ್ ಬಳಿ ಕೂತಿದ್ದರಂತೆ. ರಾಜ್ರನ್ನು ನೋಡಿ ಹೆಣ್ಣು ಮಕ್ಕಳು ಓಡೋಡಿ ಬಂದರಂತೆ. ಆದರೆ ಪಕ್ಕದಲ್ಲೇ ಇದ್ದ ವಜ್ರಮುನಿಯನರನ್ನು ಕಂಡು ಮಾರು ದೂರು ಓಡಿದರು. ಆಗ ರಾಜ್ಕುಮಾರ್ 'ಯಾಕ್ರಮ್ಮ... ಏನಾಯ್ತು ಆಗಲೇ ಓಡಿಬಿಟ್ಟಿರಲ್ಲ' ಅಂತ ಕೇಳಿದಾಗ ಆ ಹುಡುಗಿಯರು 'ಇಲ್ಲ ನಿಮ್ಮ ಹತ್ತಿರ ವಜ್ರಮುನಿ ಇದ್ದರಲ್ಲಾ, ಅದಕ್ಕೆ ಭಯ ಬಿದ್ದು ಓಡಿ ಹೋದ್ವಿ. ಮತ್ತೆ ನೀವು ಅವರನ್ನು ಇಲ್ಲಿಗೆ ಕರೆಸಬೇಡಿ. ಭಯ ಆಗುತ್ತದೆ' ಅಂದರಂತೆ. 'ಇಲ್ಲಮ್ಮ ಅವರು ಸಿನಿಮಾದಲ್ಲಿ ಮಾತ್ರ ಹಾಗೆ ಕೆಟ್ಟ ಮನುಷ್ಯನಾಗಿ ಅಭಿನಯ ಮಾಡ್ತಾರೆ ಅಷ್ಟೆ. ನಿಜವಾಗಲೂ ಅವರು ತುಂಬಾ ಒಳ್ಳೆಯವರು. ಹೆದರಬೇಡಿ' ಎಂದು ರಾಜ್ ಹೇಳಿದ್ದರಂತೆ. ಹೀಗೆ ಈ ಎರಡೂ ಘಟನೆಗಳನ್ನು ನೆನಪಿಸಿಕೊಂಡಿದ್ದು ಲಕ್ಷ್ಮಿ ವಜ್ರಮುನಿ.
- ಆರ್. ಕೇಶವಮೂರ್ತಿ