

ಯೋಗರಾಜ್ ಭಟ್ಟರ 'ಹಳೇ ಪಾತ್ರೆ ಹಳೆ ಕಬ್ಣ' ಹಾಡಿನ ಸಾಹಿತ್ಯ ನೋಡಿ ಕೆಂಡಾಮಂಡಲವಾಗಿದ್ದ ಕನ್ನಡದ ಹಿರಿಯ ನಟರೊಬ್ಬರು ಇದೂ ಒಂದು ಸಾಹಿತ್ಯನಾ? ಇಂಥವರಿಂದ ಚಿತ್ರೋದ್ಯಮಕ್ಕೆ ಕೆಟ್ಟ ಹೆಸರು ಎಂದೆಲ್ಲಾ ಗೊಣಗಾಡಿದ್ದರು. ಆದರೆ, ಭಟ್ಟರು ಯಬಡಾ, ತಬಡಾ ಸಾಹಿತ್ಯ ಬರೆಯುವುದನ್ನೇ ಇಷ್ಟಪಡುವವರ ಸಂಖ್ಯೆ ಗೊಣಗುವವರ ಸಂಖ್ಯೆಗಿಂತ ದೊಡ್ಡದು ಎಂಬುದರಲ್ಲಿ ಎರಡು ಮಾತಿಲ್ಲ. ಇದೆಲ್ಲದರ ನಡುವೆ, ತಮ್ಮ ಸಾಹಿತ್ಯದ ಬಗೆಗಿನ ಕೊಂಕು ಮಾತುಗಳಿಗೆ ಭಟ್ಟರು ಆಗಾಗ ರಂಗಾಯಣ ರಘು ಅವರ ಭಾಷೆಯಲ್ಲಿ ಹೇಳುವುದಾದರೆ ಒಂದೊಂದು 'ಹೆಣ್ಣು ಸಾಹಿತ್ಯ'ವನ್ನೂ ಬರೆದು ಎಲ್ಲ ಟೀಕೆಗಳನ್ನೂ ತಣ್ಣಗಾಗಿಸಿಬಿಡುತ್ತಾರೆ. ಆದರೆ ಈ ಬಾರಿ ಭಟ್ಟರು ಬರೆದಿರುವ ಅಂಥಹ ಹಾಡು 'ಕಡ್ಡಿಪುಡಿ' ಚಿತ್ರದ 'ಸೌಂದರ್ಯ ಸಮರ' ಅಷ್ಟೇನೂ ತಣ್ಣನೆ ಹಾಡಲ್ಲ. ಈ ಹಾಡಿನ ಈ ಸಾಲುಗಳನ್ನು ನೋಡಿ ಇದನ್ನು ಹಾಟ್ ಎಂದರೆ ತಪ್ಪೇನಿಲ್ಲ.
ಕಾಮನೆಯ ಜೇನಿಗೆ ಕವಣೆ ಬೀಸಿದಾ ರಮಣಿ
ಮುಗಿಲ ಮಾನ ತೆಗೆದ ಕೊಬ್ಬಿ ನಿಂತ ಧರಣಿ
ರಸಿಕ ನಿಶರಾತ್ರಿಯ ಕುರುಡು ಬೀದಿ ದೀಪ
ತಾರೆ ಬೆಳಕಿಗೆ ಇವಳ ಹೊಳೆವ ಮೈಯ್ಯ ಶಾಪ
ಮೊದಲ ಬಾರಿಗೆ ಈ ಹಾಡು ಕೇಳಿದವರದು ಮತ್ತದೇ ಮಾಮೂಲು ಕಾಮೆಂಟು, ಇದು ಜಯಂತ್ ಕಾಯ್ಕಿಣಿ ಬರೆದಿದ್ದಾ ಅಂತ? ಈ ರೀತಿ, ಅದೆಷ್ಟು ಹಾಡುಗಳ ಆರಂಭದ ಕ್ರೆಡಿಟ್ ಜಯಂತ್ ಅವರಿಗೆ ಸಿಕ್ಕಿದೆಯೋ ಗೊತ್ತಿಲ್ಲ. ಯಾರಾದ್ರೂ ಒಳ್ಳೆಯ ಅಭಿರುಚಿ ಇರುವ ಹಾಡು ಬರೆದರೆ, ಜನ ಅದನ್ನು ಜಯಂತ್ ಬರೆದಿದ್ದು ಎಂದುಕೊಂಡು ಬಿಡುತ್ತಾರೆ ಎಂಬುದು ಜಯಂತ್ ಕಾಯ್ಕಿಣಿ ಅವರ ತಾಕತ್ತು. ಬಹುಷಃ ಇದೇ ಚಿತ್ರದ ಇನ್ನೊಂದು ಗೀತೆ ಬರೆದಿರುವ ಜಯಂತ್ ಕಾಯ್ಕಿಣಿ 'ಬೇರೇ ಯಾರೋ ಬರೆದಂತಿದೆ ಸಾಲನು' ಎಂದು ಬರೆದಿರುವುದು ಈ ಸಂಗತಿಯ ಕುರಿತೇ ಇರಬಹುದು.
ಆದರೆ ಯೋಗರಾಜ ಭಟ್ಟರ ಈ ಶೈಲಿ ಹೊಸದೇನೂ ಅಲ್ಲ. ಅವರು ಬರೆದ ಅನೇಕ ಸಾಫ್ಟ್ ಹಾಡುಗಳೂ ಹಿಟ್ ಆದರೂ ಭಟ್ಟರನ್ನು ಹೆಚ್ಚು ಗುರುತಿಸುವುದು ಅಂಥ ಹಾಡುಗಳಿಂದ ಅಲ್ಲ. ಈಗ ಗಾಂಧಿನಗರದಲ್ಲಿ ಟಪಾಂಗ್ ಬುರ್ಜಿ, ಜಿಂಗ್‌ಚಾಕ್ ಹಾಡುಗಳು ಎಂದೆಲ್ಲಾ ಹೇಳುವ ಅವಶ್ಯಕತೆಯಿಲ್ಲ, ಕೇವಲ ಭಟ್ಟರ ಸ್ಟೈಲ್ ಹಾಡು ಎಂದರೆ ಸಾಕು. ಅದು ಅರ್ಥವಾಗುತ್ತದೆ ಎಂಬಷ್ಟರ ಮಟ್ಟಿಗೆ ಅವರು ಗಾಂಧಿನಗರದಲ್ಲಿ ವರ್ಲ್ಡ್ ಫೇಮಸ್ಸು.
ಸದಾ ಮೈ ಟ್ವಿಸ್ಟಿಂಗ್ ಹಾಡುಗಳನ್ನೇ ಬರೆದರೂ, ಆಗಾಗ ಹಲೋ 123 ಮೈಕು ಟೆಸ್ಟಿಂಗು ಎಂದುಕೊಂಡು ಪೆನ್ನು ಸರಿಮಾಡಿಕೊಂಡು, ನುಡಿಸಲೇ ಹೊಸ ಮಾತಿನ ಪದನಿಸ ಎನ್ನುತ್ತಾ ಭಟ್ಟರು ಒಂದೊಂದೆ ಬಚ್ಚಿಟ್ಟ ಮಾತುಗಳನ್ನು ಆಗಾಗ ಹೊರಬಿಡುತ್ತಾರೆ. ಇದೂ ಕೂಡ ಅಂಥಹ ಭಟ್ಟರ ಬೆಟರ್ ಹಾಡುಗಳಲ್ಲೊಂದು.
ಈ ಒದ್ದೆ ಈ ಮುದ್ದೆ ಕೋಲ್ಮಿಂಚಿನ ಹೆಸರೇನು
ನೂರು ನರಕವಾ ಕಂಡ ಮುದ್ದು ಚತುರ ಸಖಿಯೂ
ನಟ್ಟ ನಡುಬೀದಿಯಲ್ಲಿ ಬಿರಿದ ಡೇರೆ ಹೂವು
ಸಿಕ್ಕರು ಸಿಗಳೂ ಇದ್ದರು ಇರಳೂ
ಇವಳದೆ ಹಗಲೂ, ಇವಳದೆ ಇರುಳೂ...
ಇಲ್ಲೇ ಕಳಕೊಂಡಿದ್ದು, ಕಳಕೊಂಡೇ ಕಳಕೊಂಡೇ ಎಂಬೆಲ್ಲಾ ಆಲಾಪಗಳನ್ನು ಕೇಳಿದ್ದ ಕನ್ನಡ ಚಿತ್ರಪ್ರೇಮಿಗಳಿಗೆ ಇಲ್ಲಿ ಕಳೆದುಕೊಳ್ಳುವ ಮತ್ತು ಪಡೆದುಕೊಳ್ಳುವುದರ ಬಗ್ಗೆ ಹೊಸ ತತ್ವವನ್ನೇ ಹೇಳಿಕೊಟ್ಟಿದ್ದಾರೆ ಯೋಗರಾಜ್ ಭಟ್ಟರು. ಹಾಗಂತ, ಒಮ್ಮೆ ಕೇಳಿದರೆ ಕಳಕೊಳ್ಳೋದೇನಿಲ್ಲ ಬಿಡಿ ಎಂದುಕೊಂಡು ಸೌಂದರ್ಯ ಸಮರ ಕೇಳಲು ಕುಳಿತರೆ ಕೇಳಲು ಶುರುಮಾಡಿದರೆ ಮಾತ್ರ ರಸಿಕ ನಿಶರಾತ್ರಿಯಲ್ಲಿ ನಿದ್ದೆಗೆ ಶಾಪ. ಆದರೂ ನಿದ್ದೆಗೆಟ್ಟರೂ ಪರವಾಗಿಲ್ಲ ಎಂದು ಕೇಳಿಬಿಡಿ.
ಆಮೇಲೆ ನಿಮಗೆ 'ಯಾರ್ರೀ ಅದು ಭಟ್ಟರ ಸಾಹಿತ್ಯದ ಬಗ್ಗೆ ಇಲ್ಲ ಸಲ್ಲದ ಮಾತಾಡೋರು? ಎಂಬ ಅನಿಸಿಕೆ ಮೂಡಿದರೆ,
ಸೋತವನೆ ಅಮರ...
ಸೌಂದರ್ಯ ಸಮರ, ಸೋತವನೆ ಅಮರ
ಕಳೆದುಕೊಳ್ಳಲು ಬೇರೇನೂ ಇಲ್ಲ ಇಲ್ಲಿ
ಇರುವುದನೇ ಪಡೆದು ತಿರುಗಿ ಕಳೆದುಕೊಳ್ಳಿ
ಕಳೆದು ಪಡೆದುಕೊಳ್ಳಿ.....
ಹಳೇ ಪಾತ್ರೆ, ಹಳೇ ಕಬ್ಣ ಮಾರಿ ಹೊಸ ಸಾಮಾನುಗಳನ್ನು ತೆಗೆದುಕೊಂಡಂತೆ ಆಗಾಗ ಭಟ್ಟರು ಬರೆದ 'ಭಾವ'ಗೀತೆಗಳು:
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ - ಮುಂಗಾರು ಮಳೆ
ಒಂದೇ ಸಮನೆ ನಿಟ್ಟುಸಿರು - ಗಾಳಿಪಟ
ಜಿಂಕೆ ಬೆದರಿರುವಾಗ - ಕಡ್ಡಿಪುಡಿ
ಚೆಂದುಟಿಯ ಪಕ್ಕದಲಿ - ಡ್ರಾಮಾ
ಹೆಸರು ಪೂರ್ತಿ ಹೇಳದೇ - ಪರಮಾತ್ಮ
ಎರಡು ಜಡೆಗಳನು ಎಳೆದು ಕೇಳುವೆನು - ಜಾಕಿ
ಹೃದಯ ಜಾರುತಿದೆ - ಲೈಪು ಇಷ್ಟೇನೆ
ಮೊದಲ ಬಾರಿ ನೀ ಕಂಡ ಹಾಗೆ - ಕಿಚ್ಚ ಹುಚ್ಚ
ನುಡಿಸಲೇ ಹೊಸ ಮಾತಿನ ಪದನಿಸ - ಕಿಚ್ಚ ಹುಚ್ಚ
ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ - ಮನಸಾರೆ
ದೂರ ಸ್ವಲ್ಪ ದೂರ ಬಂದು ನೋಡು - ದೇವ್ರು
ವಿದಾಯದ ವೇಳೆಯಲ್ಲಿ - ಮಳೆ ಬರಲಿ ಮಂಜು ಇರಲಿ
ನಾ ನಗುವ ಮೊದಲೇನೆ - ಮನಸಾರೆ
ಹೂ ಕನಸ ಜೋಕಾಲಿ - ಇಂತಿ ನಿನ್ನ ಪ್ರೀತಿಯ
ಒಂದೊಂದೆ ಬಚ್ಚಿಟ್ಟ ಮಾತು - ಇಂತಿ ನಿನ್ನ ಪ್ರೀತಿಯ
ಎಂದೂ ಎಂದೂ ಮುಗಿಯದ - ಇಂತಿ ನಿನ್ನ ಪ್ರೀತಿಯ
ನಧೀಂ ಧೀಂ ತನ - ಗಾಳಿಪಟ
ಪ್ರಮುಖ ಪತ್ರಿಕೆಯೊಂದರಲ್ಲಿ ದೊಡ್ಡ ಸಾಹಿತಿಯೊಬ್ಬರು, ಮುಂಗಾರು ಮಳೆಯೇ ಹಾಡಿನ ಬಗ್ಗೆ ಬರೆಯುತ್ತ 'ಆಹಾ ಎಂಥಹ ಸಾಹಿತ್ಯ, ಇದನ್ನು ಬರೆದ ಜಯಂತ್ ಕಾಯ್ಕಿಣಿ ಅವರಿಗೆ ಧನ್ಯವಾದಗಳು' ಎಂದು ಬರೆದುಬಿಟ್ಟಿದ್ದರು. ಅವರು ಅದನ್ನು ಜಯಂತ್ ಅವರಿಗೂ ಹೇಳಿದಾಗ ಜಯಂತ್ 'ಅದನ್ನು ಬರೆದಿದ್ದು ನಾನಲ್ಲ ಯೋಗರಾಜ ಭಟ್ಟರು' ಎಂದರಂತೆ. ಆಗ ಆ ಸಾಹಿತಿಗಳಿಗೆ ಕಸಿವಿಸಿಯಾಗಿ ನನಗೆ ಕಾಲ್ ಮಾಡಿದರು. ಅದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ದಿನ. ನಾನು ಫ್ಲೈಟ್‌ನಲ್ಲಿದ್ದೆ. ಆ ಸಾಹಿತಿಗಳು ಪೋನ್ ಮಾಡಿದವರೇ 'ದಯವಿಟ್ಟು ಕ್ಷಮಿಸಿ, ನನಗೆ ಗೊತ್ತಾಗಲಿಲ್ಲ, ನೀವು ಸಿಟ್ಟು ಮಾಡಿಕೊಂಡಿದ್ದೀರಿ ಎನಿಸುತ್ತದೆ' ಎಂದು ಮಾತು ಶುರುಮಾಡಿದರು. ಇಲ್ಲಿ ಪ್ಲೈಟ್‌ನಲ್ಲಿದ್ದ ಗಗನ ಸಖಿ 'ಪೋನ್ ಇಡ್ರೀ' ಅಂತ ಕಾಡ್ತಿದ್ಳು. ಆದ್ರೆ ಅವ್ರು ಬಿಡಂಗಿಲ್ಲ. ಬೇಗ ಮಾತು ಮುಗಿಸಲು ನಾನು ಹೇಳಿದೆ 'ಇರಲಿ ಬಿಡಿ. ನೀವು ಬರೆದಿದ್ದು ಜಯಂತ್ ಅವರ ಹೆಸರು ತಾನೇ? ಅದು ನನಗೆ ಖುಷಿ ಕೊಡುವ ಮತ್ತು ಹೆಮ್ಮೆ ಪಡುವ ಸಂಗತಿ, ನೀವು ಯಡಿಯೂರಪ್ಪ ಅಂತೇನೂ ಬರೆದಿಲ್ಲವಲ್ಲ' ಎಂದು ಕಾಲ್ ಕಟ್ ಮಾಡಿದೆ. ಪಾಪ ಅವರು ನನ್ನ ಸಿಟ್ಟು ಇನ್ನೂ ಜಾಸ್ತಿ ಆಗಿದೆ ಅಂದ್ಕೊಂಡಿರಬೇಕು. ಆ ನಂತರವೂ ನಾನು ಫ್ಲೈಟ್‌ನಿಂದ ಇಳಿಯುವವರೆಗೂ ಅವರು ನನಗೆ ಕೊಟ್ಟ ಮಿಸ್ ಕಾಲ್‌ಗಳ ಸಂಖ್ಯೆ ನೋಡಿ ಹಾಗನ್ನಿಸಿತು. ನನ್ನ ಹಾಸ್ಯಪ್ರಜ್ಞೆ ಕೆಲವರಿಗೆ ಅರ್ಥವಾಗೊಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. -ಯೋಗರಾಜ ಭಟ್
-ಹರಿ