

ಈ ವಾರ ನಟ ಸೃಜನ್ ಆನೆ ಪಟಾಕಿ ಹಚ್ಚಲು ತಯಾರಾಗಿದ್ದಾರೆ. ಅಂದಹಾಗೆ ಇದು ಕಾಮಿಡಿ ಪಟಾಕಿ. ಹಾಸ್ಯದ ಸಬ್ಜೆಕ್ಟ್ ಇರುವ ಸಿನಿಮಾ, ಅದಕ್ಕೆ ಸೃಜನ್ ಲೋಕೇಶ್ ಹೀರೋ ಎಂದಮೇಲೆ ಅಲ್ಲಿ ಮನರಂಜನೆಗೆ ಬರವಿಲ್ಲ ಎಂಬುದು ಸೃಜಾ ಜೊತೆಗಿನ ಮಜಾದ ಅನುಭವವಿರುವವರ ಅನಿಸಿಕೆ. ಅನೇಕ ರಿಯಾಲಿಟಿ ಶೋಗಳಲ್ಲಿ ಸ್ಟಾರ್ ಆಗಿ ಮೆರೆದಿರುವ ಸೃಜನ್ ಈಗ ಮಂಡ್ಯ ಗೌಡನಾಗಿ ಆನೆಪಟಾಕಿಯ ಮೂಲಕ ಹಿರಿತೆರೆಯ ಮೇಲೆ ಮತ್ತೊಮ್ಮೆ ನಾಯಕನಾಗಿ ರಿಯಾಲಿಟಿ ಚೆಕ್ ಮಾಡಿಕೊಳ್ಳುತ್ತಿದ್ದಾರೆ.
'ನೀಲ ಮೇಘ ಶ್ಯಾಮ' ಚಿತ್ರದ ಮೂಲಕ ರಾಧಿಕಾ ಅವರೊಂದಿಗೆ ಬೆಳ್ಳಿತೆರೆಯ ಮೇಲೆ ನಾಯಕನಾಗಿ ಕಾಣಿಸಿಕೊಂಡ ಸೃಜನ್ ಆ ನಂತರ ಎಫ್‌ಎಂ ರೇಡಿಯೋ, ಟಿವಿ ಶೋಗಳ ಮೂಲಕ ಮನೆಮಾತಾಗಿದ್ದಾರೆ. ಹಿರಿಯ ನಟ ಲೋಕೇಶ್‌ರ ಪುತ್ರ ಎಂಬ ಕಾರಣವೂ ಸೇರಿ ಕನ್ನಡಿಗರು ಸೃಜನ್ ಅವರನ್ನು ಮನೆಮಗನಂತೆ ನೋಡುತ್ತಾರೆ ಎಂಬುದೂ ನಿಜ. ಅನೇಕ ಸಿನಿಮಾಗಳಲ್ಲಿ ಹಲವು ಹೀರೋಗಳ ಮಧ್ಯೆ ಕಾಣಿಸಿಕೊಂಡರೂ ತಮ್ಮದೇ ಆದ ಚರಿಷ್ಮಾ ಉಳಿಸಿಕೊಂಡಿರುವ ಸೃಜನ್ ಈಗ ಆನೆ ಪಟಾಕಿಗೆ ಬೆಂಕಿ ಇಟ್ಟು ತಮಾಷೆ ನೋಡುತ್ತಿದ್ದಾರೆ. ಈ ತಮಾಷೆಯನ್ನು ಪ್ರೇಕ್ಷಕರೂ ನೋಡುತ್ತಾರೆ ಎಂಬ ವಿಶ್ವಾಸ ಅವರದ್ದು.
ಈ ಚಿತ್ರದ ವಿಷಯದಲ್ಲಿ ಆರಂಭದಿಂದಲೇ ನಾನು ಗೆಲ್ಲುವ ಹೀರೋ ಎನ್ನುತ್ತಿರುವ ಸೃಜನ್ ನಾಯಕತ್ವದ ಆನೆಪಟಾಕಿ ಇತ್ತೀಚೆಗೆ ಕೊನೆಯ ಫಾರ್ಮಾಲಿಟಿ ಎಂಬಂತೆ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡಿಕೊಂಡಿದೆ. ಮಾರ್ಕೆಟ್‌ನಲ್ಲಿ ಈಗಾಗಲೇ ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ. ತೆರೆಯ ಮೇಲೆ ಈ ವಾರ ಪಟಾಕಿಯೂ ಸದ್ದು ಮಾಡಲಿದೆ. ಈ ಪಟಾಕಿಯ ಬೆಂಕಿ, ಯಾವ ರೀತಿಯ ಬಿರುಗಾಳಿ ಎಬ್ಬಿಸಲಿದೆ ಎಂಬ ಕುತೂಹಲ ಮಾತ್ರ ಬಾಕಿ. ಈ ದಿನದ ಮಾರ್ನಿಂಗ್ ಶೋ ಸಮಯದಲ್ಲಿ ಫಾರ್ ಎ ಚೇಂಜ್ ನಿಜವಾದ ಆನೆ ಪಟಾಕಿಯ ಸದ್ದು.
ಸೃಜನಶೀಲ ಮಾತುಕತೆ
ಈ ವಾರ ಸಿನಿಮಾ ಬಿಡುಗಡೆ ಆಗ್ತಾ ಇದೆ. ಈಗ್ಲಾದ್ರೂ ನಿಜ ಹೇಳ್ರಿ, ಈ ಸಿನಿಮಾದ ನಾಯಕ ನಾಯಕಿ ಪ್ರೇಮ್ ಮತ್ತು ರಕ್ಷಿತಾ ಅಂತೆ ಹೌದಾ?
ಹೌದು. ನಂಗೂ ಯಾರೋ ಹೇಳಿದ್ರು. ನಿಜನಾ? ನಂಗೊತ್ತಿಲ್ಲ. ನಾನು ಮತ್ತು ಪಾರ್ವತಿ ನಿರ್ಭನ್ ಈ ಸಿನಿಮಾದ ಹೀರೋ ಹೀರೋಯಿನ್ ಅಂತಷ್ಟೇ ಗೊತ್ತು ನಂಗೆ.
ನಾನ್ ಕೇಳಿದ್ದು, ಪ್ರೇಮ್ ರಕ್ಷಿತ್ ಅವರದ್ದು ಆನೆ ಪಟಾಕಿ ಚಿತ್ರದ ಕಥೆಯಲ್ಲಿ 'ಗೆಸ್ಟ್ ಅಪಿಯರೆನ್ಸ್' ಅಂತೆ ಹೌದಾ?
ಅವರ ಬಗ್ಗೆ ಗೊತ್ತಿಲ್ಲ. ಆದ್ರೆ ನಮ್ಮಿಬ್ರದ್ದು ಮಾತ್ರ 'ಬೆಸ್ಟ್ ಅಪಿಯರೆನ್ಸ್' ಅಂತ ಮಾತ್ರ ಹೇಳಬಹುದು.
ಸಿನಿಮಾ ಸಿಕ್ಕಾಪಟ್ಟೆ ಡಿಫರೆಂಟ್ ಆಗಿದೆಯಂತೆ?
ಖಂಡಿತಾ ಇಲ್ಲ. ಬರೀ ಚೆನ್ನಾಗಿದೆ ಅಷ್ಟೆ.
ಬಹಳ ದಿನಗಳ ನಂತರ ಫುಲ್ ಲೆಂಗ್ತ್ ಹೀರೋ ಪಾತ್ರ ಸಿಕ್ಕಿದೆ. ಗೆದ್ದರೆ ಆನೆ ನಡೆದಿದ್ದೇ ಹಾದಿ, ಸೋತ್ರೆ ಠುಸ್ ಪಟಾಕಿ?
ನಾನು 'ಸೋಲೋ' ಹೀರೋ ಆದ್ರೂ 'ಸೋಲೋ' ಹೀರೋ ಅಲ್ಲ ಅಂತ ಎಷ್ಟೋ ಸಲ ಈಗಾಗ್ಲೇ ಹೇಳಿದೀನಿ.
ಗೆಲುವಿನ ಬಗ್ಗೆ ಅಂಥ ಗ್ಯಾರಂಟಿ ಕೊಡೋ ಸ್ವಾರಸ್ಯ ಏನಿದೆ ಈ ಚಿತ್ರದ ನಿಮ್ಮ ಪಾತ್ರದಲ್ಲಿ?
ನಾನು ಗೆಲ್ತೀನಿ, ಅದು ಬೇರೆ ವಿಷಯ. ಆದ್ರೆ, ಆನೆಪಟಾಕಿಯಲ್ಲಿ ನಾನು ಒಂಥರಾ 'ಗಿಲ್ಲೋ' ಹೀರೋ ಕೂಡ. ನಾನು ಇನ್ನೊಬ್ರನ್ನ ಗಿಲ್ತೀನಿ, ಐ ಮೀನ್, ನನಗೇ ಗೊತ್ತಿಲ್ಲದಂತೆ ಇನ್ನೊಬ್ರಿಗೆ ಕಷ್ಟ ಕೊಡ್ತೀನಿ. ಅದನ್ನ ನೋಡಿ ಜನ ನಗ್ತಾರೆ.
ಅಲ್ರೀ, ಇನ್ನೊಬ್ರ ಕಷ್ಟ ನೋಡಿ ನಗೋದು ತಪ್ಪಲ್ವೇನ್ರೀ?
ಸಾರಿ, ಇದು ನೀವು ಪ್ರೇಕ್ಷಕರಿಗೆ ಕೇಳಬೇಕಾದ ಪ್ರಶ್ನೆ.
-ಹ್ಯಾರಿ