ಆನುದೇವ ಒಳಗಣವನು...

ಯಾವ ರೀತಿ ಸಿನಿಮಾ ಮಾಡಬೇಕು, ಯಾವ ಹೆಸರು, ಕಥೆ ಇಟ್ಟುಕೊಳ್ಳಬೇಕು ಎಂಬುದು...
ಆನುದೇವ ಒಳಗಣವನು...
Updated on: 

ನಾನು ಮಾಡುತ್ತಿರುವುದು ಸಿನಿಮಾ. ಯಾರೋ ಮಹಾಪುರುಷನ ಜೀವನ ಚರಿತ್ರೆಯನ್ನೋ ಸಮುದಾಯ, ಜಾತಿ, ಧರ್ಮದ ಮೇಲೆ ಡಾಕ್ಯುಮೆಂಟರಿಯನ್ನೋ ಮಾಡುತ್ತಿಲ್ಲ. ಯಾವ ರೀತಿ ಸಿನಿಮಾ ಮಾಡಬೇಕು, ಯಾವ ಹೆಸರು, ಕಥೆ ಇಟ್ಟುಕೊಳ್ಳಬೇಕು ಎಂಬುದು ನಿರ್ದೇಶಕನ ವಿವೇಚನೆ. ಹೀಗಾಗಿ ಯಾರೋ ವಿರೋಧ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ನಾನ್ಯಾಕೆ ಹಿಂಜರಿಯಬೇಕು? ನನ್ನ ಚಿತ್ರದ ಶೀರ್ಷಿಕೆಯನ್ನೇಕೆ ಬದಲಾಯಿಸಬೇಕು?
-ಹೀಗೆ ಒಂದೇ ಉಸಿರಿನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆ ಉದುರಿಸಿದವರು ತೆಲುಗು ಮೂಲದ ಕನ್ನಡ ಸಿನಿಮಾ ನಿರ್ದೇಶಕ ಶ್ರೀನಿವಾಸ ರಾಜು. ಯಾರೀತ ಎಂಬುದಕ್ಕೆ 'ದಂಡುಪಾಳ್ಯ' ಚಿತ್ರವನ್ನು ನೆನಪಿಸಿಕೊಳ್ಳಬೇಕು. ಹೌದು, ಅದರ ನಿರ್ದೇಶಕರೇ ಇವರು ಹಾಗೂ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಅಭಿನಯಿಸುತ್ತಿರುವ ಆ ಚಿತ್ರದ ಶೀಷಿಕೆ 'ಬಸವಣ್ಣ'. ಚಿತ್ರ ಈಗಲೇ ಒಂದಿಷ್ಟು ರಾಡಿ ಎಬ್ಬಿಸಿದೆ. ಕೇವಲ ಚಿತ್ರಕ್ಕೆ 'ಬಸವಣ್ಣ' ಎಂಬ ಹೆಸರಿಟ್ಟಿದ್ದರೆ ಯಾರೂ ಗಮನಿಸುತ್ತಿರಲ್ಲವೆನೋ? ಆದರೆ ರುದ್ರಾಕ್ಷಿ, ವಿಭೂತಿ, ಅದರ ಮಧ್ಯೆ ಕೆಂಪು ನಾಮ (ಶಿವನ ಮೂರನೇ ಕಣ್ಣು), ಪಕ್ಕದಲ್ಲೇ ಹೊಸ ಪಿಸ್ತೂಲು, ಹಸ್ತಮುದ್ರಿಕೆ... ಇವುಗಳನ್ನೊಳಗೊಂಡ 'ಪೋಸ್ಟರ್‌' ವಿವಾದಕ್ಕೆ ಒಳಗಾಗಿರುವುದು ಸಹಜ.
ಆದರೆ ಶ್ರೀನಿವಾಸು ರಾಜು ಹೇಳುವುದೇ ಬೇರೆ. 'ಅಲ್ಲಾ, ಬಸಣ್ಣ ಎಂದ ಕೂಡಲೇ ಒಂದು ಜಾತಿ, ಸಮುದಾಯ, ಧರ್ಮಕ್ಕೆ ಮಾತ್ರ ಯಾಕೆ ಸೀಮಿತ ಮಾಡುತ್ತೀರಿ. ಬಸವಣ್ಣ ಯಾರ ಖಾಸಗಿ ಆಸ್ತಿಯೂ ಅಲ್ಲ. ಇಷ್ಟಕ್ಕೂ ನಾನು ಆ ಬಸವಣ್ಣನ ಮೇಲೆ ಸಿನಿಮಾ ಮಾಡುತ್ತಿಲ್ಲ. ಚಿತ್ರದಲ್ಲಿ ನಾಯಕನ ಹೆಸರು ಬಸವಣ್ಣ.
ನನ್ನ ಕಥೆಯ ಪ್ರಕಾರ ಬಸವಣ್ಣ ಅಂದರೆ ಶಿವನ ಮುಂದಿರುವ ವಾಹನ. ಬಸವಣ್ಣ ಎಂದಾಕ್ಷಣ ಕೆಲವರು ಮಾನವತವಾದಿ ಬಸವೇಶ್ವರರನ್ನು ಎಳೆದು ತಂದರೆ ನಾನೇನೂ ಮಾಡಕ್ಕಾಗಲ್ಲ'. ಅಷ್ಟಕ್ಕೆ ಅವರ ಸಮರ್ಥನೆ ಮುಗಿಯುವುದಿಲ್ಲ. 'ಮಹಾಪುರುಷರನ್ನು ಹೋಲುವ ಅಥವಾ ಅವರನ್ನು ಸೂಚಿಸುವ ಹೆಸರುಗಳನ್ನಿಡಬಾರದು ಎಂದರೆ ಶಿವ, ಗೋವಿದಾಯನಮಃ, ರಾಮ, ಶ್ರೀಮಾರ, ಓಂ...  ಮುಂತಾದ ಶೀರ್ಷಿಕೆಗಳಲ್ಲಿ ಸಿನಿಮಾಗಳು ಬಂದಿಲ್ಲವೇ? 'ಓಂ' ಹೆಸರಿಗೂ ಮಚ್ಚು ಮತ್ತು ಲಾಂಗಿಗೂ ಏನ್ ಸಂಬಂಧ ೆಂದು ಯಾರೂ ಕೇಳಲಿಲ್ಲ ಯಾಕೆ?' ಎಂಬುದು ನಿರ್ದೇಶಕರ ಮತ್ತೊಂದು ಪ್ರಶ್ನೆ.
ಅಂದಹಾಗೆ ಕನ್ನಡದವರೇ ಆದ ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಈ ಚಿತ್ರ ತೆಲುಗು ಹಾಗೂ ಕನ್ನಡದಲ್ಲಿ ಮೂಡಿ ಬರಲಿದೆ. ತೆಲುಗಿನಲ್ಲಿ ಗೋಪಿಚಂದ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂನ್‌ನಲ್ಲಿ ಚಿತ್ರ ಸೆಟ್ಟೇರಲಿದ್ದು, ನಿರ್ದೇಶಕರು ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. 'ಕೋಟಿ ಕೋಟಿ ವೆಚ್ಚ ಮಾಡಿ ಸಿನಿಮಾ ಮಾಡುತ್ತಿದ್ದೇನೆ. ಸಿನಿಮಾ ತಯಾರಿಸುವುದು ಎಷ್ಟು ಮುಖ್ಯವೋ ಅದನ್ನು ಜನಕ್ಕೆ ತಲುಪಿಸುವುದು ಕೂಡ ಅಷ್ಟೇ ಮುಖ್ಯ. ಪ್ರೇಕ್ಷಕರಲ್ಲಿ ಒಂದಿಷ್ಟು ಕುತೂಹಲ ಮೂಡಲಿ ಎನ್ನುವ ಕಾರಣಕ್ಕೆ ಚಿತ್ರದ ಪೋಸ್ಟರ್‌ಗಳನ್ನು ಹೀಗೆ ವಿನ್ಯಾಸ ಮಾಡಿಸಿದ್ದೇನೆ' ಎನ್ನುವ ಶ್ರೀನಿವಾಸ ರಾಜುಗೆ ಕುತೂಹಲ ಮೂಡಿಸಲು ವಿಭೂತಿ, ರುದ್ರಾಕ್ಷಿಯ ಗಿಮಿಕ್ ಬೇಕಾ? ಎಂದರೆ ಸುಮ್ಮನಾಗುತ್ತಾರೆ. ಬಸವಣ್ಣ ಕುರಿತಾಗಲಿ, ಬಸವಣ್ಣರನ್ನು ಪೇಟೆಂಟ್ ಮಾಡಿಕೊಂಡಿರುವ ಜಾತಿಯ ಕುರಿತಾಗಲೀ ಒಂದೇ ಒಂದು ಸಂಭಾಷಣೆ ಚಿತ್ರದಲ್ಲಿಲ್ಲ ಎಂದು ಹೇಳುತ್ತಲೇ ಧರ್ಮ ಮತ್ತು ಸಮುದಾಯವೊಂದರ ಚಿತ್ರ ಇದು ಎಂದು ಸ್ವತಃ ನಿರ್ದೇಶಕರೇ ಹೇಳಿಕೊಳ್ಳುತ್ತಾರೆ. ಜೊತೆಗೆ ಶೀರ್ಷಿಕೆಗಳ ಬಗ್ಗೆ ವಿರೋಧ ಮಾಡಬೇಡಿ, ಬಸವಣ್ಣ ಲಿಂಗಾಯುತರ ಆಸ್ತಿ ಅಲ್ಲ ಎಂದೂ ಪಾಠ ಮಾಡುತ್ತಾರೆ. ದಂಡುಪಾಳ್ಯದಂಥ ಕ್ರೈಮ್ ವಿಷಯವನ್ನು ನೀಟಾಗಿ ಸಿನಿಮಾ ಮಾಡಿರುವ ನಾನು 'ಬಸವಣ್ಣ' ಶೀರ್ಷಿಕೆಯ ಚಿತ್ರವನ್ನು ಕೆಟ್ಟದಾಗಿ ಚಿತ್ರೀಸುವುದಕ್ಕೆ ಹೋಗುತ್ತೇನೆಯೇ? ಎಂಬುದು ನಿರ್ದೇಶಕರ ಪಾಟಿ ಸವಾಲು.
ಒಟ್ಟಿನಲ್ಲಿ ಈ ಚಿತ್ರದ ಮೂಲಕ ಇಲ್ಲಿಯವರೆಗೆ ನೋಡಿದ ಉಪೇಂದ್ರರೇ ಬೇರೆ, 'ಬಸವಣ್ಣ' ಚಿತ್ರದಲ್ಲಿ ಕಾಣುವ ಉಪೇಂದ್ರ ಬೇರೆ ಎಂಬ ಕಸರತ್ತಿಗೆ ಶ್ರೀನಿವಾಸ ರಾಜು ಮುಂದಾಗಿದ್ದಾರೆ. ಬಸವಣ್ಣ ಮತ್ತೆ ವಿವಾದದ ಬೀದಿಗೆ ಬರಲಿದ್ದಾರೆಯೇ?

ಬಸವಣ್ಣ ಚಿತ್ರಕ್ಕೆ ವಿರೋಧ ಮಾಡುವವರು ಶಿವ, ಗೋವಿದಾಯನಮಃ, ಓಂ, ಶ್ರೀರಾಮ ಚಿತ್ರಗಳ ಶೀರ್ಷಿಕೆಗಳ ಬಗ್ಗೆ ಯಾಕೆ ಮಾತನಾಡಲ್ಲ? ಸಿನಿಮಾವನ್ನು ಸಿನಿಮಾ ಆಗಿಯೇ ನೋಡಿ. ರಾಜಕೀಯ, ಜಾತಿ, ಧರ್ಮದ ಬಣ್ಣ ತರಬೇಡಿ.
- ಶ್ರೀನಿವಾಸ ರಾಜು

-  ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com