

ರ್ಯಾಂಬೋ ನಂತರ ಶರಣ್ ಮತ್ತೊಂದು ಗೆಲುವಿನ ಸನಿಹದಲ್ಲಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿರುವ ಅವರ ವಿಕ್ಟರಿ ಚಿತ್ರ ಬಿಡುಗಡೆ ಮುಂಚಿನ ಸಂಕೇತ ಎಂಬಂತೆ ಇತ್ತೀಚೆಗೆ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಿಸಿಕೊಂಡಿದೆ. ಕಡ್ಡಿ ಪುಡಿ ಚಿತ್ರದ ಆಡಿಯೋ ಬಿಡುಗಡೆಯ ಪ್ರಭಾವವೋ ಏನೋ ಎಂಬಂತೆ ವಿಕ್ಟರಿಯ ಸಮಾರಂಭ ಕೂಡ ವೇದಿಕೆಯ ಮೇಲೆ ಕುಳಿತವರ ಮಾತುಗಳಿಗೆ ಸೀಮಿತವಾಗದೆ ಚಿತ್ರದ ಹಾಡುಗಳಿಗೆ ಮರ್ಯಾದೆ ಕೊಡುವ ಮೂಲಕ ಅರ್ಥಪೂರ್ಣ ಎನಿಸಿಕೊಂಡಿದ್ದು ವಿಶೇಷ.
ಆದರೆ ಹಾಡಿನ ಸಮಾರಂಭಕ್ಕೆ ಯೋಗರಾಜಭಟ್ಟರು ಬಂದಮೇಲೆ ಮಾತಿನ ಕಳೆ ಕಟ್ಟಲೇ ಬೇಕು. ಅದರ ಜೊತೆ ವಿಕ್ಟರಿ ಚಿತ್ರದ ಐಟಂ ಸಾಂಗಿನಲ್ಲಿ ಕುಣಿದಿರುವ ರಾಗಿಣಿ ಅವರ ಹುಟ್ಟುಹಬ್ಬ ಕೂಡಾ ಆಚರಿಸಿಕೊಂಡಿದ್ದು ಅಂದಿನ ಸಮಾರಂಭದ ಎಕ್ಟ್ರ್ಸಾ ಐಟಂ ಆಗಿತ್ತು.
ಚಿತ್ರದ ನಿರ್ದೇಶಕ ನಂದಕಿಶೋರ್, ನಿರ್ಮಾಪಕರಾದ ಆನಂದ್ ಆಡಿಯೋದ ಮೋಹನ್ ಮತ್ತು ಶ್ಯಾಮ್, ನಾಯಕ ಶರಣ್, ನಾಯಕಿ ಅಸ್ಮಿತಾ ಸೂದ್, ನಟ ಕೀರ್ತಿರಾಜ್, ಹಿರಿಯ ನಟಿ ಗಿರಿಜಾ ಲೋಕೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಾಹಿತಿ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕಲ್ಯಾಣ್, ಕವಿರಾಜ್, ಗೌಸ್ಪೀರ್, ಶಿವು ಬೇರಗಿ, ಗಾಯಕ ವಿಜಯ್ಪ್ರಕಾಶ್, ಗಾಯಕಿ ಅನುರಾಧಾ ಭಟ್ ಎಲ್ಲರೂ ಅಂದು ಒಬ್ಬೊಬ್ಬರಾಗಿ ಸರದಿಯಲ್ಲಿ ಬಂದು ವೇದಿಕೆ ತುಂಬಿಕೊಳ್ಳುತ್ತಿದ್ದರು.
ಸಮಾರಂಭಕ್ಕೆ ಬರುವಾಗ ರಾಗಿಣಿ ಎದುರಾದರು. ಹಾಗಾಗಿ ಮಾತನಾಡಬೇಕು ಎಂದುಕೊಂಡಿದ್ದೆಲ್ಲಾ ಮರೆತುಹೋಯಿತು ಎನ್ನುತ್ತಾ, ಲಿಫ್ಟ್ನಲ್ಲಿ ಕಂಡ ಮುಖ ರಾಗಿಣಿ ಬಗ್ಗೆ ಹೇಳಿದ ಯೋಗರಾಜ್ ಭಟ್ ಎಲ್ಲರೂ ಒಮ್ಮೆ ಕಣ್ತುಂಬಿಸಿಕೊಳ್ಳಿ ಎನ್ನುತ್ತಾ ರಾಗಿಣಿ ಅವರನ್ನು ವೇದಿಕೆಗೆ ಕರೆದು ಸೌಂದರ್ಯ ಸಮರದ ಮೂಡಿಗೆ ಜಾರಿದರು.
ಅದಕ್ಕೂ ಮುಂಚೆ ಚಿತ್ರದ ಒಂದೊಂದೇ ಹಾಡುಗಳನ್ನು ಪ್ಲೇ ಮಾಡಿ ಅದಕ್ಕೆ ಸಂಬಂಧಪಟ್ಟ ಗಾಯಕ, ಸಾಹಿತಿಗಳನ್ನು ಕರೆದು ಮಾತನಾಡಿಸಲಾಯಿತು. ಅಲ್ಲಿ ಕಲ್ಯಾಣ್, ಕವಿರಾಜ್ರ ಜೊತೆಗೆ ಗೌಸ್ಪೀರ್ ಮತ್ತು ಚಿತ್ರರಂಗಕ್ಕೆ ಕಾಲಿಟ್ಟಿರುವ ಶಿವು ಬೇರಗಿ ಕೂಡ ದನಿಯಾದರು. ಎಂದಿನಂತೆ ಜಯಂತ್ ಕಾಯ್ಕಿಣಿ ಮತ್ತು ಯೋಗರಾಜ್ಭಟ್ಟರ ಕಾಂಬಿನೇಶನ್ ಕೂಡ ಮಾತಿನ ಮೋಡಿ ಮಾಡಿತು. ಚಿತ್ರದ ಅಷ್ಟೂ ಹಾಡುಗಳಲ್ಲಿ ಜಯಂತ್ ಬರೆದ ಕಣ್ಣ ಮಿಂಚೆ ಜಾಹಿರಾತು ಮತ್ತು ಭಟ್ಟರು ಬರೆದ ಕ್ವಾಟ್ರು ಬಾಟ್ಲು ಹಾಡುಗಳು ಹೆಚ್ಚಿನ ಚರ್ಚೆಗೆ ಕಾರಣವಾದವು. ಅದರ ಜೊತೆಗೆ 'ಅಕ್ಕಾ ನಿನ್ ಮಗಳು ನಂಗೆ ಚಿಕ್ಕವಳಾಗಲ್ವಾ' ಎಂಬ ಶಿವು ಬೇರಗಿ ಅವರ ಹಾಡೂ ಕೂಡ, ನಾನು ಯಾರ್ಗೂ ಕಮ್ಮಿ ಇಲ್ಲ ಎನ್ನುತ್ತಿತ್ತು.
ಇವೆಲ್ಲದರ ಮಧ್ಯೆ ನಾಯಕಿಗೆ ಮುತ್ತು ಕೊಡಲು ನಾಚಿಕೊಂಡ ಶರಣ್, ನಿಮ್ ಫಿಲ್ಮ್ನಲ್ಲಿ ಐಟಂ ಸಾಂಗ್ ಮಾಡಿದ್ದೇನೆ ಮುಂದೆ ನಂಗೋಸ್ಕರ ಒಂದ್ ಸಿನಿಮಾ ಪ್ರೊಡ್ಯೂಸ್ ಮಾಡ್ಬೇಕು ಎಂದ ರಾಗಿಣಿ ಅವರ ಮಾತುಗಳೂ ತಮ್ಮ ಪಾಲಿನ ಶೇರ್ ಹಂಚಿಕೊಂಡವು.