

ಅದೃಷ್ಟ ಎನ್ನುವುದು ಯಾರಿಗೆ ಯಾವ ರೂಪದಲ್ಲಿ ಒಲಿಯುತ್ತದೋ ಗೊತ್ತಿಲ್ಲ. ಸದ್ಯಕ್ಕೆ ನಟ ಅರುಣ್ಗೆ ಇಬ್ಬರು ನಾಯಕಿಯರ ರೂಪದಲ್ಲಿ 'ಅದೃಷ್ಟ' ಹುಡುಕಿಕೊಂಡು ಬಂದು ಕೈ ಹಿಡಿದಿದೆ. ಒಬ್ಬರು ಶುಭಾಪೂಂಜಾ, ಮತ್ತೊಬ್ಬರು ರಮ್ಯಾ ಬಾರ್ನೆ. ಅಂದಹಾಗೆ ಚಿತ್ರದ ಹೆಸರು ಕೂಡ 'ಅದೃಷ್ಟ'ನೇ. ಇಂಥ ಅವಕಾಶದ ಅದೃಷ್ಟಕ್ಕೆ ಪಾತ್ರರಾಗಿರುವ ಮತ್ತೊಬ್ಬ ಪ್ರತಿಭಾವಂತ ಬದ್ರಿನಾಥ್. ಇವರೇ ಚಿತ್ರದ ನಿರ್ದೇಶಕರು. ಫಿಲ್ಮ್ಫೀಲ್ಡ್ನಲ್ಲಿ ಸ್ಟಿಲ್ ಫೋಟೋಗ್ರಾಫರ್ ಬದ್ರಿ ಅಂದ್ರೆ ಗೊತ್ತಿಲ್ಲ ಎನ್ನುವವರು ಕಡಿಮೆ. ಇನ್ನು ಚಿತ್ರದ ನಾಯಕನಾಗಿರುವ ಅರುಣ್ ಈ ಹಿಂದೆ 'ಗೊಂಬೆಗಳ ಲವ್' ಚಿತ್ರದ ಮೂಲಕ ಗಮನ ಸೆಳೆದ ಪ್ರತಿಭಾವಂತ. ಸಂತೋಷ್ ನಿರ್ದೇಶನದ ತನ್ನ ಮೊದಲ ಚಿತ್ರ ಮೆಚ್ಚುಗೆ ಗಳಿಸಿದರೂ 'ಅವಕಾಶಗಳ ವೀರ'ನಾಗದೆ ಸುಮ್ಮನೆ ಕುಳಿದ್ದವನಿಗೆ 'ಅದೃಷ್ಟ'ದ ರೂಪದಲ್ಲಿ ಹೊಸ ಚಿತ್ರವೊಂದು ಕೈ ಹಿಡಿದಿದೆ. 'ಯಜಮಾನ' ಚಿತ್ರದ ರೆಹಮಾನ್ ಮತ್ತವರ ಸ್ನೇಹಿತ ನಾಗರಾಜ್ ಚಿತ್ರದ ನಿರ್ಮಾಪಕರು. ಸತೀಶ್ ಛಾಯಾಗ್ರಹಣ, ಧ್ರುವ ಸಂಭಾಷಣೆ, ರಾಜೇಶ್ ರಾಮ್ನಾಥ್ ಸಂಗೀತ ಇದೆ.
ಬದ್ರಿನಾಥ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ಅದೃಷ್ಟ' ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆಯಿತು. ಅದು ನಿರ್ಮಾಪಕ ಆರ್.ಎಸ್. ಗೌಡರ ಹಳ್ಳಿಮನೆ. ನಿರ್ದೇಶನದಲ್ಲಿ ಬ್ಯುಸಿಯಾಗಿದ್ದ ಬದ್ರಿ ಆ್ಯಂಡ್ ಟೀಮ್, ಮಾಧ್ಯಮಗಳ ಮುಂದೆ ಸಾಲಾಗಿ ಹಾಜರಾಯಿತು. ಬದ್ರಿ 20 ವರ್ಷಗಳಿಂದ ಸ್ಟಿಲ್ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ಶಶಿಕುಮಾರ್ ಅಭಿನಯದ 'ವಾಂಟೆಡ್'ನಿಂದ 'ಯಾರೇ ಕೂಗಾಡಲಿ' ಚಿತ್ರದವರೆಗೂ 150ಕ್ಕೂ ಹೆಚ್ಚು ಚಿತ್ರಗಳಿಗೆ ಸ್ಟಿಲ್ ಕ್ಯಾಮೆರಾ ಫೋಕಸ್ ಮಾಡಿದವರು ಬದ್ರಿ. 'ಪೋಟೋ ತೆಗೆಯುವುದು ಸುಲಭ. ಆದರೆ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿ ನಿರ್ಮಾಪಕನ ಹಣ ವಾಪಸು ಕೊಡಿಸುವ ಜವಾಬ್ದಾರಿ ಇದೆ. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಸಿನಿಮಾ ಮಾಡುತ್ತಿದ್ದೇನೆ. ಕಥೆ ತುಂಬಾ ಸರಳ. ಪ್ರತಿಯೊಬ್ಬರೂ ಅವಕಾಶಕ್ಕಾಗಿ ಒದ್ದಾಡುತ್ತಾರೆ, ಕಾಯುತ್ತಾರೆ, ಕಷ್ಟಪಡುತ್ತಾರೆ. ಅಂಥ ಅದೃಷ್ಟಗಳ ಸರಮಾಲೆಯೊಂದಿಗೆ ಚಿತ್ರ ಸಾಗುತ್ತದೆ' ಎಂದರು ಬದ್ರಿ. ಬೆಂಗಳೂರು ಹಾಗೂ ರಾಜ್ಯದ ವಿವಿಧ ಕಡೆ ಸೇರಿದಂತೆ ಬ್ಯಾಕಾಂಕ್ನಲ್ಲೂ ಚಿತ್ರೀಕರಣ ನಡೆಯಲಿದೆ. ಹೊಸ ಹುಡುಗ ಧ್ರುವ ಸಂಭಾಷಣೆ ಬರೆದಿದ್ದು, ತುಂಬಾ ಚೆನ್ನಾಗಿದೆಯಂತೆ. ಈಗಾಗಲೇ ರಾಜೇಶ್ರ ಸಂಗೀತದಲ್ಲಿ ಹಾಡುಗಳು ರೆಡಿಯಾಗಿದ್ದು, ಕೇಳುವುದಕ್ಕೆ ತುಂಬಾ ಚೆನ್ನಾಗಿವೆ ಎಂಬುದು ತಂಡದ ರಿಪೋರ್ಟ್.
'ಚಿತ್ರದಲ್ಲಿ ಆರು ಹಾಡು ಮತ್ತು 3 ಬಿಟ್ ಸಾಂಗ್ಸ್ ಇವೆ. ನಿರ್ದೇಶಕ ಪ್ರೇಮ್ ಒಂದು ಹಾಡು ಬರೆಯುವುದರ ಜೊತೆಗೆ ಹಾಡುತ್ತಿದ್ದಾರೆ. ನನ್ನ ವೃತ್ತಿಗೆ ಹೊಸ ನೆಲೆ ಒದಗಿಸಿಕೊಟ್ಟ ನಿರ್ಮಾಪಕ ರೆಹಮಾನ್. ಅಂಥವರ ಬ್ಯಾನರ್ನಲ್ಲಿ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅದೇ ನನ್ನ ಅದೃಷ್ಟ' ಎನ್ನುತ್ತಾರೆ ರಾಜೇಶ್ ರಾಮ್ನಾಥ್. ಫೋಟೋಗ್ರಾಫರ್ ಸತೀಶ್ಗೆ ಇದು ಎರಡನೇ ಚಿತ್ರ. ಇತ್ತೀಚೆಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ಶುಭಾಪೂಂಜಾ, ಇಲ್ಲಿ ಮತ್ತೆ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಪಕ್ಕಾ ಲವ್ ಸ್ಟೋರಿ ಚಿತ್ರ. ಅರುಣ್ ಜೊತೆಗೆ ಅಭಿನಯಿಸುತ್ತಿರುವುದು ಖುಷಿ ತಂದಿದೆ. ಅವರ ಅಭಿನಯದ 'ಗೊಂಬೆಗಳ ಲವ್' ಚಿತ್ರ ನೋಡಿದೆ. ನಿಜಕ್ಕೂ ಚೆನ್ನಾಗಿತ್ತು. ಎಲ್ಲರೂ ಉತ್ಸಾಹದಿಂದ ಹೊಸ ಚಿತ್ರ ಕೊಡುವ ಕನಸು ಕಾಣುತ್ತಿದ್ದೇವೆ' ಎಂದರು ಪೂಂಜಾ. ಮತ್ತೊಬ್ಬ ನಾಯಕಿ ರಮ್ಯಾ ಬಾರ್ನೆ ಚಿತ್ರದಲ್ಲಿ ಎನ್ಆರ್ಐ ಪಾತ್ರ ಮಾಡುತ್ತಿದ್ದಾರೆ. ಎಲ್ಲರ ಅದೃಷ್ಟ ಈ ಚಿತ್ರದಿಂದ ಒಲಿಯಲಿ ಎಂಬುದು ಬಾರ್ನೆ ಅಭಿಪ್ರಾಯ. ಚಿತ್ರದ ನಾಯಕ ಅರುಣ್ ತುಂಬಾ ಖುಷಿಯಲ್ಲಿದ್ದರು. ಅವರ ಪ್ರತಿಭೆ ನೋಡಿ ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಕೊಟ್ಟಿದ್ದಾರಂತೆ.