

ನಿರ್ದೇಶಕ ಶಿವಮಣಿ ಇತ್ತೀಚೆಗೆ ದುನಿಯಾ ವಿಜಯ್ ಅಭಿನಯದ ಸಿಂಹಾದ್ರಿ ಚಿತ್ರದ ಮೂಲಕ ಮತ್ತೆ ವಾಪಸ್ ಬರುವ ಸೂಚನೆ ನೀಡಿದ್ದರು. ಈಗ ದೀಪಾವಳಿಯಲ್ಲಿ ಪಟ ಪಟನೆ ಸಿಡಿಯುವ ಪಟಾಕಿಗಳಂತೆ ಶಿವಮಣಿ ಸಿಂಹಾದ್ರಿ ಸೇರಿ ಒಟ್ಟು ಮೂರು ಚಿತ್ರಗಳನ್ನು ಕೈಗೆತ್ತಿಕೊಂಡಿರುವ ಸುದ್ದಿ ಬಂದಿದೆ. ಅದರಲ್ಲಿ ಒಂದು ಚಿತ್ರ ಉಪೇಂದ್ರ ನಾಯಕತ್ವದ್ದು ಎಂಬುದು ವಿಶೇಷ. ಈ ಹಿಂದೆ ಉಪ್ಪಿ ಅಭಿನಯದ ಓಂಕಾರ ಚಿತ್ರ ನಿರ್ದೇಶಿಸಿದ್ದ ಶಿವಮಣಿ ಈಗ ನಿರ್ದೇಶಿಸಲಿರುವ ಹೊಸ ಚಿತ್ರದ ಹೆಸರು 'ಎ ಫಿಲ್ಮ್ ಬೈ ಉಪೇಂದ್ರ'. ಹೆಸರು ಕೇಳಿದರೆ ಇದು ಟಿಪಿಕಲ್ ಉಪ್ಪಿ ಶೈಲಿಯ ಚಿತ್ರ ಎಂಬುದು ಗೊತ್ತಾಗುತ್ತದೆ. ಆದರೆ ಚಿತ್ರದ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿರುವ ಶಿವಮಣಿ ಈ ಚಿತ್ರದ ಬಗ್ಗೆ ಹೇಳುವುದಿಷ್ಟು, 'ಉಪೇಂದ್ರ ಅವರ ಚಿಂತನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನ ತುಂಬಾ ಇದ್ದಾರೆ. ಅಲ್ಲದೆ ಉಪೇಂದ್ರ ನಿರ್ದೇಶನ ಎಂದರೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತದೆ ಎಂಬುದು ಎಲ್ಲರ ನಂಬಿಕೆ. ಅದನ್ನೇ ಆಧಾರವಾಗಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇನೆ'.
ಅಂದಹಾಗೆ ಉಪೇಂದ್ರ ಈ ಹಿಂದೆ ರಿಯಲ್ ರೌಡಿಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದರು. ಈಗ ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ರಿಯಲ್ ಟೆರರಿಸ್ಟ್ಗಳನ್ನು ಇಟ್ಕರೊಂಡು ಸಿನಿಮಾ ಮಾಡ್ತಾರಂತೆ ಎಂದು ಶಿವಮಣಿ ಹೇಳುವುದು ಕೇಳಿ ಯಾರೂ ಗಾಬರಿಯಾಗಬೇಕಿಲ್ಲ. ಏಕೆಂದರೆ 'ಎ ಫಿಲ್ಮ್ ಬೈ ಉಪೇಂದ್ರ' ಚಿತ್ರದಲ್ಲಿ ನಿರ್ದೇಶಕನಾಗಿ ಅಭಿನಯಿಸಲಿರುವ ಉಪ್ಪಿ ಚಿತ್ರದ ಆ ಕಥೆಯಲ್ಲಿ ರಿಯಲ್ ಟೆರರಿಸ್ಟ್ಗಳೊಂದಿಗೆ ಕೆಲಸ ಮಾಡಲಿದ್ದಾರಂತೆ. ಅಂತೂ ಶಿವಮಣಿ ತೆಕ್ಕೆಗೆ ಮತ್ತೆ ಉಪ್ಪಿ ಬಿದ್ದಿದ್ದಾರೆ. ಇಬ್ಬರ ವಿಶೇಷ ಆಲೋಚನೆಗಳೂ ಸೇರಿ ಒಂದು ವಿಶೇಷ ಚಿತ್ರ ಮೂಡಿಬರುವುದು ಗ್ಯಾರಂಟಿ. ಇದರ ಜೊತೆಯಲ್ಲೇ ಶೈಲೇಂದ್ರಬಾಬು ಪುತ್ರ ಸುಮಂತ್ಗಾಗಿ ಇನ್ನೊಂದು ಚಿತ್ರ ಶುರು ಮಾಡಲಿದ್ದಾರೆ ಶಿವಮಣಿ . ಇಲ್ಲೂ ಕೂಡ ಜೋಶ್ನಂತೆ ನಾಲ್ಕಾರು ಹುಡುಗರು ಇರುತ್ತಾರೆ. ಇಲ್ಲೂ ಪ್ರೀತಿ ಪ್ರೇಮವಿದೆ, ಅಪ್ಪ, ಅಮ್ಮಂದಿರಿರುತ್ತಾರೆ. ಆದರೆ ಜೋಷ್ ಸಿಲ್ಲಿ ಕಾಲೇಜು ಹುಡುಗರ ಕಥೆಯಾಗಿತ್ತು. ಆದರೆ ಈ ಚಿತ್ರ ಒಂದಿಷ್ಟು ಮೆಚ್ಯೂರ್ಡ್ ಆಗಿರುತ್ತದೆ, ಸಿನಿಮಾ ನೋಡಿದ ಇಂದಿನ ಕಾಲೇಜು ಹುಡುಗ ಹುಡುಗಿಯರಿಗೆ 'ಹೌದು ನಮ್ ಲೈಫಲ್ಲೂ ಹಿಂಗೇ ಆಗ್ತಿದೆ' ಎನಿಸುತ್ತದೆ, ಎಂಬುದು ಶಿವಮಣಿ ಕೊಡುವ ವಿವರಣೆ. ಒಟ್ಟಿನಲ್ಲಿ ಒಂದಿಷ್ಟು ಗ್ಯಾಪ್ನ ನಂತರ ಮರಳಿ ಬಂದಿರುವ ಶಿವಮಣಿ ಒಟ್ಟೊಟ್ಟಿಗೇ ಮೂರು ಸಿನಿಮಾ ಕೈಗೆತ್ತಿಕೊಂಡು ಹ್ಯಾಟ್ರಿಕ್ ಡೈರೆಕ್ಟರ್ ಆಗುತ್ತಿದ್ದಾರೆ ಎಂಬುದು ಸ್ಪೆಷಲ್ ಸುದ್ದಿ.
- ಹರಿ