

ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಬಿಗ್ಬಾಸ್ ಆಗಿದ್ದ ನಟ ವಿಜಯ ರಾಘವೇಂದ್ರ ಈಗ ಸಿನಿಮಾರಂಗದಲ್ಲೂ ಬಿಗ್ ಬಾಸ್ ಆಗುತ್ತಿದ್ದಾರೆ. ನಿರ್ದೇಶಕ ಎಂದರೆ ಕ್ಯಾಪ್ಟನ್ ಆಫ್ ದಿ ಶಿಪ್ ಎಂಬ ಮಾತಿನಂತೆ. ಪ್ರತಿಭೆಗೆ ತಕ್ಕ ಮನ್ನಣೆ ಪಡೆಯದ ಹಲವು ಅಪ್ರತಿಮ ಕಲಾವಿದರಲ್ಲಿ ವಿಜಯ್ ಕೂಡ ಒಬ್ಬರು. ತಮ್ಮ ಚಿತ್ರಗಳ ಸೋಲಿಗೆ ಇನ್ನೊಬ್ಬರನ್ನು ದೂಷಿಸುವುದು ಬೇಡ ಎನ್ನುವ ಸಜ್ಜನಿಕೆಯ ವಿಜಯ್ ಈಗ ಮೂಲತಃ ತಮಿಳಿನ ಚಿತ್ರವೊಂದರ ಕನ್ನಡ ರಿಮೇಕ್ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಹಾಗಾಗಿ, ತಮಿಳಿನ 'ನೇರಂ' ಈಗ ಕನ್ನಡಕ್ಕೆ ಬರುತ್ತಿದೆ. ಈ ಚಿತ್ರದಲ್ಲಿ ವಿಜಯ್ ನಾಯಕನಾಗಿ ಅಭಿನಯಿಸಿ ನಿರ್ದೇಶನವನ್ನೂ ಮಾಡುತ್ತಿದ್ದಾರೆ ವಿಜಯ್. ಅಂದಹಾಗೆ ತಮಿಳಿನಲ್ಲಿ ನೇರಂ ಎಂದರೆ ಹಣೆಬರಹ ಎಂಬ ಅರ್ಥವಿದೆ. ಹಾಗಾಗಿ ವಿಜಯ್ ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳಲು ತಯಾರಾಗಿದ್ದಾರೆ ಎನ್ನಬಹುದು. ತಮ್ಮ ಮೊದಲ ಪ್ರಯತ್ನಕ್ಕೆ ಅವರಿಟ್ಟುಕೊಂಡಿರುವ ಹೆಸರು 'ಕಿಸ್ಮತ್'. ಮೊದಲ ನಿರ್ದೇಶನದಲ್ಲಿ ಸ್ಟ್ರೈಟ್ ಸಬ್ಜೆಕ್ಟ್ ಮಾಡಬಹುದಿತ್ತು, ನೇರಂ ಎಂಬ ಹೆಸರಿನ ರಿಮೇಕ್ ಚಿತ್ರ ಬೇಕಿತ್ತೇ ಎಂಬ ಪ್ರಶ್ನೆಗೆ ವಿಜಯ್ ಇಲ್ಲಿ ಆಸಕ್ತಿಕರ ಉತ್ತರ ನೀಡಿದ್ದಾರೆ. ಅದೇನೇ ಇದ್ದರೂ, ಈ ಚಿತ್ರದಿಂದ ತಮ್ಮ ಕಿಸ್ಮತ್ ಬದಲಾಗುತ್ತದೆ ಎಂಬ ನಂಬಿಕೆ ಅವರದು. ವಿಜಯ್ ಖಂಡಿತವಾಗಿಯೂ ಒಂದು ಒಳ್ಳೆಯ ಸಿನಿಮಾ ಕೊಡುತ್ತಾರೆ ಎಂಬ ನಂಬಿಕೆ ಅವರ ಪ್ರತಿಭೆಯ ಅರಿವಿರುವ ಕನ್ನಡ ಪ್ರೇಕ್ಷಕರದ್ದು.
ನೀವು ಹಲವಾರು ಕೆಟಗರಿಯ ಚಿತ್ರಗಳಲ್ಲಿ ಅಭಿನಯಿಸಿದ್ದೀರಿ, ಮೊದಲ ನಿರ್ದೇಶನಕ್ಕೆ ಆಯ್ಕೆ ಮಾಡಿಕೊಂಡಿರುವ ಕಥೆ ಯಾವ ಕೆಟಗರಿಯದ್ದು?
ಇದೊಂಥರಾ ಮಾನವೀಯ ಸಂಬಂಧಗಳ ಬಗ್ಗೆ ಮಾತನಾಡುವ ಚಿತ್ರ. ಚಿತ್ರದ ನಾಯಕ ಮತ್ತೆ ಮತ್ತೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಳ್ಳುತ್ತಾನೆ. ಆ ಹಿನ್ನೆಲೆಯಲ್ಲಿ ಅವನ ಮನಸ್ಥಿತಿ, ಅದರಿಂದ ಹೊರಬರಲು ಅವನು ನಡೆಸುವ ಪ್ರಯತ್ನಗಳು, ಅವನಿಗೆ ಜೊತೆಯಾಗುವ ನಾಯಕಿ, ಈ ದಿಕ್ಕಿನಲ್ಲಿ ಕಥೆ ಸಾಗುತ್ತದೆ.
ನಾಯಕಿ ಯಾರು?
ಒಂದು ತಾಜಾ ಮುಖವನ್ನು ಹುಡುಕುತ್ತಿದ್ದೇವೆ. ನಾಯಕಿ ಇನ್ನೂ ನಿರ್ಧಾರವಾಗಿಲ್ಲ.
- ಬಿಗ್ಬಾಸ್ ಯಶಸ್ಸಿನ ನಂತರ ನಟನಾಗಿ ನಿಮಗೆ ಸಾಕಷ್ಟು ಅವಕಾಶಗಳು ಬಂದಿರಬೇಕಲ್ವಾ?
ಅವಕಾಶಗಳೇನೋ ಬಂದವು. ಆದರೆ ನಾನು ಬೆಳೆಯುವಂಥ ಅವಕಾಶಗಳು ಯಾವೂ ಬರಲಿಲ್ಲ. ನನ್ನದೇ ಹಲವು ಹಿಂದಿನ ಚಿತ್ರಗಳನ್ನು ಹೋಲುವ ಸ್ಕ್ರಿಪ್ಟ್ಗಳು ಸಿಕ್ಕವು. ಅವುಗಳಿಂದ ನಾನು ಬೆಳೆಯುತ್ತೇನೆ ಎಂಬ ನಂಬಿಕೆ ಬರಲಿಲ್ಲ.
- ನಿರ್ದೇಶನ ಮಾಡಬೇಕು ಅಂತ ಯಾಕನ್ನಿಸಿತು?
ಕನ್ನಡದ ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಮಾಡುತ್ತಿರುವ ಪ್ರಯತ್ನ ಇದು. ಹಲವು ಬಾರಿ ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಿದೆ. ಆರಂಭದಲ್ಲಿ ಎಲ್ಲವೂ ಆಶಾದಾಯಕವಾಗಿಯೇ ಇರುತ್ತದೆ. ಆದರೆ ಅಂತಿಮ ಫಲಿತಾಂಶ ಮಾತ್ರ ಸಮಾಧಾನಕರವಾಗಿಲ್ಲ. ಹಾಗಂತ ನಾನು ಯಾರನ್ನೂ ದೂರುವುದಿಲ್ಲ. ಹಾಗಾಗಿ ನಾನೇ ಮುಂದೆ ನಿಂತು ನನ್ನ ಸಿನಿಮಾ ಮಾಡೋಣ ಎಂದು ಯೋಚಿಸಿದೆ. ಹಾಗಂತ ನಾನು ಅವರೆಲ್ಲರಿಗಿಂತ ಚೆನ್ನಾಗಿ ಮಾಡುತ್ತೇನೆ ಎಂಬ ಅಹಂಕಾರ ನನಗಿಲ್ಲ. ಇದೊಂದು ಪ್ರಯತ್ನ ಅಷ್ಟೆ.
- ಮೊದಲ ಪ್ರಯತ್ನದಲ್ಲೇ ರಿಮೇಕ್ ಮಾಡುವ ಅಗತ್ಯವಿತ್ತೇ?
ನನ್ನ ಕೆರಿಯರ್ನಲ್ಲಿ ನಾನು ನೆನಪಿಡುವಂಥ, ನನಗೆ ಹೆಸರು ತಂದುಕೊಟ್ಟ ಎರಡು ಮುಖ್ಯ ಚಿತ್ರಗಳೆಂದರೆ
'ಚಿನ್ನಾರಿ ಮುತ್ತ' ಮತ್ತು 'ನಿನಗಾಗಿ'. ಈ ಎರಡೂ ಚಿತ್ರಗಳು ನನ್ನ ಐಡೆಂಟಿಟಿ ಕಾರ್ಡ್ ಇದ್ದ ಹಾಗೆ. ಈಗಲೂ ಎಷ್ಟೋ ಜನ ನನ್ನನ್ನು ಚಿನ್ನಾರಿ ಮುತ್ತ ಎಂದೇ ಗುರುತಿಸುತ್ತಾರೆ. ಅದಕ್ಕೆ ನಾನು ನಿರ್ದೇಶಕ ನಾಗಾಭರಣ ಅವರಿಗೆ ಅಭಾರಿ. ಇನ್ನೊಂದು ನಾನು ಪ್ರೀತಿಯಿಂದ ಮಾಡಿದ 'ನಿನಗಾಗಿ' ಎಂಬ ರಿಮೇಕ್ ಚಿತ್ರ. ನಾನು ಎರಡನ್ನೂ ಸಮವಾಗಿಯೇ ಗೌರವಿಸುತ್ತೇನೆ. 'ನುವ್ವೇ ಕಾವಾಲಿ' ಚಿತ್ರವನ್ನು ಎಷ್ಟು ಪ್ರೀತಿಯಿಂದ ಒಪ್ಪಿಕೊಂಡಿದ್ದೆನೋ ಈಗ ಅಷ್ಟೇ ಪ್ರೀತಿಯಿಂದ 'ನೇರಂ' ಚಿತ್ರವನ್ನು ರಿಮೇಕ್ ಮಾಡುತ್ತಿದ್ದೇನೆ. ಸಿನಿಮಾ ಎಂದರೆ ಮನರಂಜನೆ ಎಂದಷ್ಟೇ ಯೋಚಿಸಿ ಭಾಷಾ ಭೇದ ಮರೆತು ನಿರ್ದೇಶನವನ್ನು ಕೈಗೆತ್ತಿಕೊಂಡಿದ್ದೇನೆ.
- ಕಿಸ್ಮತ್ ಚಿತ್ರದ ಬಗೆಗಿನ ಇತರ ವಿವರಗಳು?
ಚಿತ್ರದಲ್ಲಿ ಸಾಯಿಕುಮಾರ್ ಅಂಕಲ್ ಒಂದು ಸ್ಪೆಷಲ್ ರೋಲ್ ಮಾಡುತ್ತಿದ್ದಾರೆ. ರಾಜೇಶ್ ಮುರುಗನ್ ಮೂಲ ಚಿತ್ರಕ್ಕೆ ಸಂಗೀತ ನೀಡಿದವರು. ಆ ಚಿತ್ರದಲ್ಲಿ ಅವರು ಕೊಟ್ಟಿರುವ ಟ್ಯೂನ್ಗಳಷ್ಟೇ ಅಲ್ಲದೆ, ಅವರ ಸಂಗೀತದಿಂದ ಆ ಚಿತ್ರಕ್ಕೆ ಒಂದು ವಿಶೇಷ ಕಳೆ ಪ್ರಾಪ್ತವಾಗಿದೆ ಎನ್ನಿಸಿತು. ಹಾಗಾಗಿ ನನ್ನ ಚಿತ್ರಕ್ಕೂ ಅವರನ್ನೇ ಆಯ್ಕೆ ಮಾಡಿಕೊಂಡಿದ್ದೇನೆ.
- ಹರಿ