

ಶ್ರೀರಕ್ಷಾ ಪ್ರಿಯರಾಮ್...
ಕೊಂಚ ಅಪರಿಚಿತ ಹೆಸರು ಅನಿಸಿದರೂ ಕನ್ನಡದ ಅಪ್ಪಟ ಕ್ಲಾಸಿಕಲ್ ಗಾಯಕಿ. ಮೆಲೋಡಿ ಧ್ವನಿ. ಅರವಿಂದ್ ಹಾಗೂ ಡಾ. ಜಯಶ್ರೀ ಅರವಿಂದ್ರ ಪುತ್ರಿ. ಅಪ್ಪ ಸೌಂಡ್ ಎಂಜಿನಿಯರ್ ಆಗಿ ಫೇಮಸ್. ಅಮ್ಮ ಸಂಗೀತದ ಕಣಜ. ಸ್ಟುಡಿಯೋ, ಸೌಂಡು, ಹಾಡು, ಸಂಗೀತ ಇದರ ನಡುವೆಯೇ ಬೆಳೆದ ಶ್ರೀರಕ್ಷಾ, ಅತ್ಯುತ್ತಮ ಗಾಯಕಿ ಎನ್ನುವ ಪಟ್ಟವನ್ನು ಏರಿದ್ದಾರೆ. ಮೊನ್ನೆಯಷ್ಟೆ ರಾಜ್ಯ ಪ್ರಶಸ್ತಿ ಪ್ರಕಟವಾದಾಗ ಶ್ರೀರಕ್ಷಾರಿಗೆ ಮಾತ್ರವಲ್ಲ, ಅವರ ಕುಟುಂಬಕ್ಕೆ ಸಂಭ್ರಮದ ಸುದ್ದಿ. ಕಾರಣ 'ಒಂದೂರಲ್ಲಿ' ಚಿತ್ರಕ್ಕಾಗಿ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನು ಶ್ರೀರಕ್ಷಾ ಪಡೆದುಕೊಂಡರೆ, ಅದೇ ಚಿತ್ರಕ್ಕಾಗಿ ಇವರ ತಾಯಿ ಡಾ. ಜಯಶ್ರೀ ಅರವಿಂದ್ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಒಂದೇ ಚಿತ್ರಕ್ಕೆ, ಒಂದೇ ವೇದಿಕೆಯಲ್ಲಿ ಒಂದೇ ವರ್ಷ ಅಮ್ಮ, ಮಗಳು ಇಬ್ಬರೂ ರಾಜ್ಯ ಪ್ರಶಸ್ತಿ ಪಡೆದ ಅಪರೂಪದ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೂ 'ಅರೇ, ಯಾರು ಈ ಶ್ರೀರಕ್ಷಾ?' ಅಂದವರು ಒಮ್ಮೆ 'ದುನಿಯಾ' ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯಾ' ಚಿತ್ರದ 'ಒಂದೊಂದೇ ಬಚ್ಚಿಟ್ಟ ಮಾತು' ಹಾಡನ್ನು ನೆನಪಿಸಿಕೊಳ್ಳಿ. ತುಂಬಾ ಮೆಲೋಡಿಯಾಗಿ ಸಾಗುತ್ತಲೇ ನಮ್ಮ ಕಿವಿಗಳನ್ನು ತನ್ನತ್ತ ಸೆಳೆಯುವ ಆ ಧ್ವನಿಯೇ ಈ ಶ್ರೀರಕ್ಷಾ. ರಾಜ್ಯ ಪ್ರಶಸ್ತಿಯ ಸಂಭ್ರದಲ್ಲಿರುವ ಶ್ರೀರಕ್ಷಾ ಅವರೊಂದಿಗೆ ಮಾತುಕತೆ.
ನಿಮ್ಮ ಹಾಡಿನ ಪಯಣ ಶುರುವಾಗಿದ್ದು ಹೇಗೆ?
ತೀರಾ ಚಿಕ್ಕ ವಯಸ್ಸಿಗೆ ಸಂಗೀತ ಕ್ಷೇತ್ರಕ್ಕೆ ಬಂದೆ. ನಾನು ಸ್ಟುಡಿಯೋದಲ್ಲಿ ನಿಂತು ಹಾಡುವಾಗ ನನ್ನ ವಯಸ್ಸು 6 ವರ್ಷ. ಆಗ 'ಜಂಗಲ್ ಬುಕ್' ಎನ್ನುವ ಇಂಗ್ಲಿಷ್ ಕಾರ್ಟೂನ್ ಕನ್ನಡಕ್ಕೆ ಬಂದಾಗ ಅದಕ್ಕೆ ಎಲ್ಲ ಹಾಡುಗಳನ್ನು ನಾನೇ ಹಾಡಿದ್ದು. ಅಲ್ಲಿಂದ ಶುರುವಾಯಿತು. ನಂತರ ಡಿಡಿ1ನಲ್ಲಿ ಪ್ರಸಾರಗುವಾತ್ತಿದ್ದ 'ಕಂದನ ಕಾವ್ಯ' ಎನ್ನುವ ಮಕ್ಕಳ ಕಾರ್ಯಕ್ರಮದ ಎಲ್ಲ ಹಾಡುಗಳನ್ನು ಹಾಡುವ ಜೊತೆಗೆ ಅದರಲ್ಲಿ ನಟಿಸಿದ್ದೇನೆ ಕೂಡ. ಈ ಕಾರ್ಯಕ್ರಮದಲ್ಲಿ ಈಗಿನ ಬಹು ಭಾಷಾ ನಟ ಪ್ರಕಾಶ್ ರೈ, ನಟ ಶ್ರೀನಗರ ಕಿಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಇದರ ನಿರ್ದೇಶನ ಬಿ.ಸುರೇಶ್ ಅವರದ್ದು.
ಬಾಲ ನಟಿ, ಬಾಲ ಗಾಯಕಿ ಆಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಪಯಣದ ಮತ್ತಷ್ಟು ವಿವರಣೆ?
ಸಾಕಷ್ಟು ಮಕ್ಕಳ ಕಾರ್ಯಕ್ರಮಗಳಿಗೆ, ಧಾರಾವಾಹಿಗಳಿಗೆ ಹಾಡಿದ್ದೇನೆ. ಶೀರ್ಷಿಕೆ ಹಾಡಿನಿಂದ ಹಿಡಿದು ಎಲ್ಲದಕ್ಕೂ ಧ್ವನಿ ಕೊಟ್ಟಿದ್ದೇನೆ. ಸ್ಟೇಜ್ ಕಾರ್ಯಕ್ರಮಗಳಲ್ಲೂ ಮೈಕ್ ಮುಂದೆ ನಿಂತಿದ್ದೇನೆ. ಪಂಡಿತ್ ಪರಮೇಶ್ವರ್ ಹೆಗಡೆ ಹಾಗೂ ಪುಟ್ಟರಾಜ ಗವಾಯಿಗಳ ಶಿಷ್ಯ ಕಾಶಿನಾಥ್ ಪಟ್ಟರ್ರ ಬಳಿ ಹಿಂದೂಸ್ಥಾನಿ ಮತ್ತು ಶಾಸ್ತ್ರೀಯ ಸಂಗೀತ ಕಲಿತೆ. ಇದಕ್ಕೂ ಮೊದಲು ನನ್ನ ಅಮ್ಮನಿಂದ ಕರ್ನಾಟಕ ಸಂಗೀತ ಕಲಿತಿದ್ದೇನೆ. ಅಮ್ಮನೇ ನನ್ನ ಮೊದಲ ಗುರು. ನಾನೇ ಹಲವು ಕ್ಯಾಸೆಟ್ಗಳನ್ನು ತಂದಿದ್ದೇನೆ. ಜಾನಪದ, ಮಕ್ಕಳ ಹಾಡುಗಳು, ಭಕ್ತಿಗೀತೆಗಳು ಹಾಗೂ ಕ್ಲಾಸಿಕ್ ಗೀತೆಗಳನ್ನು ಒಳಗೊಂಡ 450ಕ್ಕೂ ಹೆಚ್ಚು ಕ್ಯಾಸೆಟ್ಗಳನ್ನು ಹೊರ ತಂದಿದ್ದೇನೆ. ಕನ್ನಡದ ಗಜಲ್ಗಳನ್ನೂ ಹಾಡಿದ್ದೇನೆ. ಹಿಂದಿ, ಉರ್ದು, ತುಳು, ಕೊಂಕಣಿ, ಮರಾಠಿ ಸೇರಿದಂತೆ 16 ಭಾಷೆಗಳಲ್ಲಿ ಹಾಡಿದ್ದೇನೆ. ಸದ್ಯದಲ್ಲೇ ಮರಾಠಿಯಲ್ಲಿ ಒಂದು ಆಲ್ಬಂ ಬಿಡುಗಡೆ ಮಾಡುತ್ತಿದ್ದೇನೆ. ಹೊಸದಾಗಿ ಪಾಶ್ಚಿಮಾತ್ಯ ಸಂಗೀತವನ್ನೂ ಕಲಿಯುತ್ತಿದ್ದು, 5ನೇ ಗ್ರೇಡ್ ಪಾಸು ಮಾಡಿದ್ದೇನೆ.
ನಿಮ್ಮ ಕುಟುಂಬದ ಹಿನ್ನೆಲೆ ಏನು?
ನಾನು ಚಿಕ್ಕ ವಯಸ್ಸಿಗೆ ಗಾಯಕಿಯಾಗಲು ಕಾರಣ ನಮ್ಮ ಮನೆ ವಾತಾವರಣ. ಚಿತ್ರರಂಗದ ಆರಂಭದ ದಿನಗಳಲ್ಲೇ ದೊಡ್ಡ ಸ್ಟುಡಿಯೋ ಕಟ್ಟುವ ಮೂಲಕ ಸಂಗೀತ ಸೇರಿದಂತೆ ಉದ್ಯಮದ ತಾಂತ್ರಿಕ ವಿಭಾಗದ ನಂಟು ಬೆಳೆಸಿಕೊಂಡವರು ನಮ್ಮ ತಂದೆ. ಅರವಿಂದ್ ಸ್ಟುಡಿಯೋ ಮಾಲೀಕ ಅರವಿಂದ್ ಅಂದರೆ ಗೊತ್ತಿಲ್ಲ ಎನ್ನುವವರು ಕಡಿಮೆ. ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡು ಕೊಳಲು ನುಡಿಸಿದವರು. ಸ್ಟುಡಿಯೋ ಕಟ್ಟಿದ ಮೇಲೆ ಸೌಂಡ್ ಎಂಜಿನಿಯರ್ ಆದರು. 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು' ಸೇರಿದಂತೆ ಹತ್ತಾರು ಚಿತ್ರಗಳಿಗೆ ಹಿನ್ನೆಲೆ ಧ್ವನಿ ಸಂಯೋಜನೆ ಮಾಡಿದ್ದಾರೆ. ಅಮ್ಮ ಜಯಶ್ರೀದೇವಿ ಸಂಗೀತ ಪ್ರೇಮಿ. ತುಂಬಾ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮನೆ ವಾತಾರಣ ಸಂಗೀತಮಯವಾಗಿತ್ತು. ಎಸ್.ಪಿ.ಬಿ ಸಾರ್ ಹಾಗೂ ಎಸ್. ಜಾನಕಿ ಅವರನ್ನು ಚಿಕ್ಕಂದಿನಲ್ಲೇ ನೋಡಿದ್ದೆ. ಇದು ನಮ್ಮ ಮನೆ ಹಿನ್ನೆಲೆ.
ಸರಿ, ಚಿತ್ರರಂಗದ ಹೊರತಾಗಿರುವ ನೀವು ಗಾಂಧಿನಗರಕ್ಕೆ ಬಂದಿದ್ದು ಹೇಗೆ?
ಈಗ ಅತ್ಯುತ್ತಮ ಗಾಯಕಿ ಪ್ರಶಸ್ತಿ ಬಂದಿದೆ. ಆದರೆ, ಸಿನಿಮಾಗಳಲ್ಲಿ ಹಾಡಲು ಶುರುಮಾಡಿದ್ದು ತುಂಬಾ ಹಿಂದೆ. ಅದು ಜಿ.ವಿ. ಅಯ್ಯರ್ ನಿರ್ದೇಶನದ 'ಕೃಷ್ಣಲೀಲೆ' ಚಿತ್ರ. ಹಿರಿಯ ನಟಿ ಪಂಢರಿಬಾಯಿ ಅವರ ಪತಿ ರಾಮ್ರಾವ್ ನಿರ್ಮಾಣ. ಈ ಚಿತ್ರ ಕನ್ನಡ, ಮಲೆಯಾಳಂ, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ತಯಾರಾಗಿತ್ತು. ನಮ್ಮ ತಾಯಿ ಅವರೇ ಚಿತ್ರದ ಸಂಗೀತ ನಿರ್ದೇಶಕರು. ಇದರ ಕೃಷ್ಣನ ಪಾತ್ರದ ಎಲ್ಲ ಹಾಡುಗಳನ್ನೂ ನಾನೇ ಹಾಡಿದ್ದು. ಹಂಸಲೇಖ ಅವರ ಶಿಷ್ಯ ಗಿಟಾರಿಸ್ಟ್ ಗೋಪಿ ಅವರ ಜೊತೆಗೆ ಹಾಗೂ ಮೈಸೂರು ಮೋಹನ್ರ ಚಿತ್ರಗಳಿಗೆ ಹಾಡಿದ್ದೇನೆ. ಕುಮಾರ್ ಗೋವಿಂದ್ರ 'ಸತ್ಯ' ಚಿತ್ರದ ಫೀಮೇಲ್ ಹಾಡುಗಳಿಗೆ ನನ್ನದೇ ಧ್ವನಿ. 'ವಸುಂದರ', 'ಜಿಂದಗಿ', 'ಶುಕ್ರ', 'ಗಂಗೆ ಬಾರೆ ತುಂಗೆ ಬಾರೆ' ಹೀಗೆ ಹಲವು ಚಿತ್ರಗಳಲ್ಲಿ ಹಾಡಿದ್ದೇನೆ.
ನಿಮ್ಮ ಬಯೋಡೇಟಾ ನೋಡಿದರೆ, ಸಿನಿಮಾಗಳಲ್ಲಿ ನಿಮ್ಮ ಹಾಡಿನ ಸಂಖ್ಯೆ ಕಡಿಮೆ ಅನಿಸಲ್ಲವೇ?
ಸಂಖ್ಯೆಯಲ್ಲಿ ಕಡಿಮೆ ಇದೆ ನಿಜ. ಆದರೆ, ಏನ್ ಮಾಡೋದು? ಮೆಲೋಡಿ ಹಾಗೂ ಕ್ಲಾಸಿಕ್ ಹಾಡುಗಳು ಅಂದಾಕ್ಷಣ ನಮ್ಮವರಿಗೆ ನೆನಪಾಗುವುದು ಸೋನು ನಿಗಮ್ ಮತ್ತು ಶ್ರೇಯಾ ಘೋಶಾಲ್. ಮೆಲೋಡಿ ಅಥವಾ ಕ್ಲಾಸಿಕ್ ಹಾಡುಗಳನ್ನು ಹಾಡಬಲ್ಲವರು ಕನ್ನಡದಲ್ಲೂ ಇದ್ದಾರೆ ಎಂದುಕೊಂಡರೆ ನನ್ನಂಥ ಗಾಯಕಿಯರು ಚಿತ್ರರಂಗಕ್ಕೆ ಹೆಚ್ಚು ನೆನಪಾಗುತ್ತಾರೆ. ಅಲ್ಲದೆ ನಾನು ಹಾಡುವ ಹಾಡುಗಳ ಸಾಹಿತ್ಯ ಹಿಗೇ ಇರಬೇಕು ಅಂತ ನಿರ್ಧರಿಸಿದ್ದೇನೆ. ಮುಖ್ಯವಾಗಿ ವಲ್ಗಾರಟಿ ಇರಬಾರದು. ಅದಕ್ಕಾಗೆ ಕಡಿಮೆ ಹಾಡುಗಳು ನನ್ನ ಖಾತೆಯಲ್ಲಿವೆ.
ನೋಡಕ್ಕೆ ಬೇರೆ ಚೆನ್ನಾಗಿದ್ದೀರಿ. ಆನ್ ಸ್ಕ್ರೀನ್ನಲ್ಲೂ ಕಾಣಿಸಿಕೊಳ್ಳುವ ಯೋಚನೆ ಏನಾದ್ರು ಇದೆಯೇ?
ಸದ್ಯ ಮೈಕ್ ಮುಂದೆ ಆ್ಯಕ್ಟ್ ಮಾಡುತ್ತಿದ್ದೇನೆ. ಕ್ಯಾಮೆರಾ ಮುಂದೆ ಬಣ್ಣ ಹಚ್ಚುವ ಯೋಚನೆ ಇಲ್ಲ. ಬ್ಯಾಕ್ ಸಪೋರ್ಟ್ ಇದೆ ಅಂತ ಹತ್ತಾರು ದಾರಿಗಳಲ್ಲಿ ಹೋಗಬಾರದು. ಕೊನೆಗೆ ಯಾವುದು ಸರಿಯಾಗಿ ಮಾಡಕ್ಕಾಗಲ್ಲ. ಹೀಗಾಗಿ ಸಂಗೀತ, ಗಾಯನ ಈ ಎರಡು ಸಾಕು.
ಈಗ ಒಲಿದಿರುವ ರಾಜ್ಯ ಪ್ರಶಸ್ತಿ ಸಂಭ್ರಮದ ಕುರಿತು?
'ಒಂದೂರಲ್ಲಿ' ಚಿತ್ರಕ್ಕಾಗಿ ಅತ್ಯುತ್ತಮ ಗಾಯಕಿ ಪ್ರಶಸ್ತಿ ಬಂದಿದೆ. ಸಾಹಿತಿ ಎಚ್.ಎಸ್. ವೆಂಕಟೇಶ್ಮೂರ್ತಿ ಬರೆದಿರುವ ಹಾಡು ಅದು. ಸಾಹಿತ್ಯ ತುಂಬಾ ಚೆನ್ನಾಗಿದೆ. ಅನುಭವಿಸಿ ಹಾಡಿದ್ದೇನೆ. ಇಂಥ ಹಾಡುಗಳು ಬಂದರೆ ಖಂಡಿತ ಹಾಡುತ್ತೇನೆ. ಆಗ ಹಾಡಿದವರಿಗೂ, ಕೇಳಿದವರಿಗೂ ಇಬ್ಬರಿಗೂ ಖುಷಿಯಾಗುತ್ತದೆ.
- ಆರ್. ಕೇಶವಮೂರ್ತಿ