ಶಿವ- ದಿ ಪವರ್ ಮ್ಯಾನ್

'ಕನಿಷ್ಠ ಈ ವಯಸ್ಸಿನಲ್ಲಾದರೂ ಬಾಡಿ ಶೋ ಮಾಡಲಿಕ್ಕೆ ಅವಕಾಶ ಸಿಕ್ತಲ್ಲ, ಅದೇ ನನ್ನ ಅದೃಷ್ಟ' ಸೆಂಚುರಿ ಸ್ಟಾರ್ ಕೊಂಚ ಮುಜುಗರದಿಂದಲೇ...
ಶಿವ- ದಿ ಪವರ್ ಮ್ಯಾನ್
Updated on: 

'ಕನಿಷ್ಠ ಈ ವಯಸ್ಸಿನಲ್ಲಾದರೂ ಬಾಡಿ ಶೋ ಮಾಡಲಿಕ್ಕೆ ಅವಕಾಶ ಸಿಕ್ತಲ್ಲ, ಅದೇ ನನ್ನ ಅದೃಷ್ಟ'
 ಸೆಂಚುರಿ ಸ್ಟಾರ್ ಕೊಂಚ ಮುಜುಗರದಿಂದಲೇ ಹೀಗೆ ಹೇಳಿಕೊಂಡಿದ್ದು 'ಭಜರಂಗಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. ಹ್ಯಾಟ್ರಿಕ್‌ನಿಂದ ಸೆಂಚುರಿ ಸ್ಟಾರ್ ಆದ ನಟ ಶಿವರಾಜ್‌ಕುಮಾರ್ ಅವರ ವಯಸ್ಸು  ಐವತ್ತು ದಾಟಿದೆ. ದೇಹಕ್ಕೆ ಅರ್ಧ ಸೆಂಚುರಿ, ವೃತ್ತಿಯಲ್ಲಿ ಸೆಂಚುರಿ ಪೂರೈಸಿರುವ ಶಿವರಾಜ್‌ಕುಮಾರ್ ಅವರ ಪಾಲಿಗೆ 'ಭಜರಂಗಿ' ಸಿನಿಮಾ ಬೇರೆಯದ್ದೇ ಇಮೇಜಿನ ಕಥೆ ಎಂಬ ನಂಬಿಕೆ ಮತ್ತು ವಿಶ್ವಾಸ. ಅದೆಲ್ಲಕ್ಕಿಂತ ಮುಖ್ಯವಾಗಿ 105 ಚಿತ್ರಗಳನ್ನು ಮುಗಿಸಿರುವ, ಐವತ್ತು ವರ್ಷದ ಶಿವರಾಜ್‌ಕುಮಾರ್ ಅವರಿಗೆ 'ಭಜರಂಗಿ' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಶೋ ಮಾಡಿದ್ದು ತುಂಬಾ ವಿಶೇಷ, ಅಚ್ಚರಿ ಮತ್ತು ಸಾಹಸವಾಗಿ ಕಾಣುತ್ತಿದೆ. ಈ  ವಿಷಯವನ್ನು ಸಂಕೋಚದಿಂದಲೇ ಶಿವಣ್ಣ ಹೇಳಿಕೊಂಡರು.
 ಐವತ್ತರಲ್ಲೂ ಹತ್ತು ವರ್ಷದ ಹುಡುಗನಂತೆ ಎನರ್ಜಿಟಿಕ್ ಆಗಿ ಕುಣಿಯುವ, ಲಾಂಗ್ ಹಿಡಿದರೆ ಚಿಗುರು ಮೀಸೆ ಹುಡುಗರನ್ನೂ ನಾಚಿಸುವಷ್ಟು ಸ್ಟೈಲ್ ಆಂಡ್ ಪವರ್ ತೋರಿಸುವ ಶಿವರಾಜ್‌ಕುಮಾರ್, ದೇಹ ದಂಡನೆಗೆ ಅಂತಲೇ ಪ್ರತ್ಯೇಕವಾಗಿ ಗಮನ ಕೊಟ್ಟವರಲ್ಲ. ಯಾವ ಜಿಮ್‌ಗೂ ಅವರು ಹೋಗಲಿಲ್ಲ, ಡಯೆಟ್, ಪಥ್ಯ ಯಾವುದನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದ ನಟ. ಆದರೂ ಅವರ ದೇಹ ಜಿಮ್, ಜಿಮ್ಮಾಯಾ ಎನ್ನುತ್ತದೆ. 'ನಾನು ಚಿತ್ರರಂಗಕ್ಕೆ ಬಂದು ಇಷ್ಟು ವರ್ಷವಾದರೂ ಪಾತ್ರಕ್ಕಾಗಿ, ಫೈಟ್ಸ್‌ಗಳಿಗಾಗಿ ಬಾಡಿ ಕರಸತ್ತು ಮಾಡಿದವನಲ್ಲ. ಎಂದೂ ಜಿಮ್ ಬಾಗಿಲು ತಟ್ಟದವನನ್ನು ಪ್ರತಿ ದಿನ ಜಿಮ್‌ಗೆ ಹೋಗಿ ವರ್ಕ್ ಔಟ್ ಮಾಡುವಂತೆ ಮಾಡಿದ್ದು ನಿರ್ದೇಶಕ ಹರ್ಷ. ಈ ವಯಸ್ಸಿನ ಎಲ್ಲ ವಿದ್ಯೆಗಳ ಜೊತೆಗೆ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿದೆ. ಸಿಕ್ಸ್ ಪ್ಯಾಕ್ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ. ಪ್ರತಿ ದಿನ ಅದಕ್ಕೆ ಕಷ್ಟ ಪಡಬೇಕು. ನನ್ನಿಂದ ಆ ಕೆಲಸ ಮಾಡಿಸಿದ್ದಾರೆ ನಿರ್ದೇಶಕರು. ಪೋಸ್ಟರ್‌ಗಳನ್ನು ನೋಡುತ್ತಿದ್ದರೆ ನನಗೆ ಖುಷಿಯಾಗುತ್ತದೆ. ಎಷ್ಟು ಫಿಟ್ ಆಗಿ ಕಾಣುತ್ತಿದ್ದೇನೆ?  

ಅಂತ ನಾನೇ ಅಚ್ಚರಿಗೆ ಒಳಗಾಗಿದ್ದೇನೆ' ಎನ್ನುತ್ತಾರೆ ನಟ ಶಿವರಾಜ್ ಕುಮಾರ್.
ಅಂದಹಾಗೆ ಚಿತ್ರದಲ್ಲಿ ಕುದುರೆ ಸವಾರಿ ಹಾಗೂ ಕತ್ತಿ ವರಸೆ ತುಂಬಾ ರೋಚಕವಾಗಿ ಮೂಡಿ ಬಂದಿದೆಯಂತೆ. 'ಕುದುರೆ ಸವಾರಿ ತುಂಬಾ ಅದ್ಭುತವಾಗಿದೆ. ಕತ್ತಿ ವರಸೆ ಕೂಡ ಸೂಪರ್. ಆದರೆ, ಇದೇನು ನನಗೆ ಹೊಸದಲ್ಲ' ಎನ್ನುವ ಶಿವರಾಜ್‌ಕುಮಾರ್ ಅವರಿಗೆ 'ಭಜರಂಗಿ' ಚಿತ್ರದಲ್ಲಿ ವಿಶೇಷ ಎನಿಸಿರುವುದು, ಸಿಕ್ಸ್ ಪ್ಯಾಕ್ ಮತ್ತು ಚಿತ್ರದ ಮೇಕಿಂಗ್. ಒಂದು ಮುಕ್ಕಾಲು ಚಿತ್ರ ಮಾಡದಿದ್ದರೂ ಎಲ್ಲೋ ಹೋಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಬಂದು ಅದೇ ಒಂದು ದೊಡ್ಡ ಸಾಹಸ, ತಮ್ಮ ಕೆರಿಯರ್ ಅಂತ ಪ್ರಚಾರ ಪಡೆಯುವ ಈಗಿನ ಕೆಲ ನಟರ ನಡುವೆ ಐವತ್ತರಲ್ಲೂ ಇಪ್ಪತ್ತರ ಯಂಗ್ ಸ್ಟಾರ್‌ನಂತೆ ಫಿಟ್‌ನೆಸ್ ಮೇಂಟೈನ್ ಮಾಡಿ ಸಿಕ್ಸ್ ಪ್ಯಾಕ್ ಬಿಲ್ಡ್ ಮಾಡಿರುವ ಶಿವರಾಜ್‌ಕುಮಾರ್ ವಿಶೇಷವಾಗಿ ಕಾಣುವುದು ಈ ಕಾರಣಕ್ಕೆ. 'ಶಿವ ದಿ ಪವರ್ ಮ್ಯಾನ್‌' ಎನ್ನುವಂತೆ 'ಭಜರಂಗಿ'ಯಲ್ಲಿ ಮಿಂಚಿರುವ ಸೆಂಚುರಿಸ್ಟಾರ್‌ನ ಅಬ್ಬರ ನೋಡಲು ಈ ತಿಂಗಳು ಕಾಯಬೇಕು.

ಆಡಿಯೋ ಮಾತು...
ಹರ್ಷ ನಿರ್ದೇಶನದ ಬಹು ನಿರೀಕ್ಷೆಯ ಸಿನಿಮಾ 'ಭಜರಂಗಿ' ಹಾಡುಗಳು ಆಡಿಯೋ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತವೆ ಎಂಬುದು ಆನಂದ್ ಆಡಿಯೋ ಮಾಲೀಕ ಮೋಹನ್‌ರ ನಂಬಿಕೆ. ಹೀಗಾಗಿ ಚಿತ್ರದ ಆಡಿಯೋ ಮಾರುಕಟ್ಟೆ ಹಕ್ಕುಗಳನ್ನು ಮೋಹನ್ ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ 5 ಹಾಡುಗಳು ಇವೆ. ಅರ್ಜುನ್ ಜನ್ಯರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳಲ್ಲಿ ಸಖತ್ ಪವರ್ ಇದೆ ಎಂಬುದು ಚಿತ್ರತಂಡದ ಅಭಿಪ್ರಾಯ. 'ಮೊದಲ ಹಾಡು ಕೇಳಿದಾಗಲೇ ಇದರಲ್ಲಿ ಏನೋ ಇದೆ ಅಂತ ಅನಿಸಿತು. 'ಅಣ್ಣ ತಂಗಿ' ಚಿತ್ರದಂತೆ 'ಭಜರಂಗಿ' ಸಿನಿಮಾದ ಹಾಡುಗಳು ಕೂಡ ಸೌಂಡು ಮಾಡುತ್ತವೆ' ಎಂದರು ಮೋಹನ್. ಇನ್ನು ಚಿತ್ರದ ನಿರ್ಮಾಪಕರು ಜಾಕ್ ಮಂಜು ಹಾಗೂ ನಟರಾಜ್ ಗೌಡ. ಇಬ್ಬರೂ ಸಂಬಂಧಿಕರು ಒಟ್ಟಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಜಾಕ್ ಮಂಜುಗೆ ನಿರ್ಮಾಣ ಅನುಭವ ಇದೆ. ಆದರೆ, ನಟರಾಜ್ ಗೌಡರಿಗೆ ಇದು ಮೊದಲ ಚಿತ್ರ. 'ನಾನು ಶಿವಣ್ಣರ ಅಭಿಮಾನಿ. ಅವರ ಜೊತೆಗೆ ಒಂದು ಚಿತ್ರ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದು ಈಗ ಈಡೇರಿದೆ. ತುಂಬಾ ಚೆನ್ನಾಗಿ ಮೂಡಿಬಂದಿದೆ' ಎಂದರು ನಟರಾಜ್ ಗೌಡ.
ಮಧುಗುರುಸ್ವಾಮಿ, ಲೋಕೇಶ್, ಚೇತನ್ ರಾಜ್ ಈ ಮೂವರು ಚಿತ್ರದ ಖಳ ನಾಯಕರು. ಇಲ್ಲಿವರೆಗೂ ಇವರು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ, 'ಭಜರಂಗಿ' ಚಿತ್ರದಲ್ಲಿ ಸೆಂಚುರಿಸ್ಟಾರ್ ಮುಂದೆ ಘರ್ಜಿಸಿದ್ದಾರಂತೆ. ಇವರ ಅಭಿನಯವನ್ನು ಶಿವಣ್ಣ ಮೆಚ್ಚಿಕೊಂಡಿದ್ದಾರೆ ಎನ್ನುವುದು ಈ ಹೊಸ ನಟರ ಸಂಭ್ರಮಕ್ಕೆ ಕಾರಣ. 'ಸಿನಿಮಾ ಶುರುವಿನಿಂದಲೂ ಮಳೆ ಕಾಟ ಕೊಡುತ್ತಲೇ ಬಂತು. ರಾಜಸ್ಥಾನದಲ್ಲೂ ನಾವು ಅಲ್ಲಿಗೆ ಹೋದ ಕೂಡಲೇ ಮಳೆ ಶುರುವಾಯಿತು. ಆಗ ತೊಂದರೆ ಅಂದುಕೊಂಡಿದ್ವಿ. ಆದ್ರೆ ಈಗ ಅದೇ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರಕ್ಕಾಗಿ ತುಂಬಾ ಸೆಟ್‌ಗಳನ್ನು ಹಾಕಿದ್ದೇವೆ. ಹಳ್ಳಿ ಸೆಟ್ ಸೇರಿದಂತೆ ರಾಮನಗರದ ಬೆಟ್ಟದ ಮೇಲೆ, ಫಾರೆಸ್ಟ್ ಹೀಗೆ ಮೂರು ಸೆಟ್‌ಗಳನ್ನು ಕಲಾ ನಿರ್ದೇಶಕ ರವಿ ತುಂಬಾ ಚೆನ್ನಾಗಿ ನಿರ್ಮಿಸಿಕೊಟ್ಟರು. ಶಿವಣ್ಣ ಅವರ ನಟನೆ ಬಗ್ಗೆ ಮಾತನಾಡುವಂತಿಲ್ಲ. ಎಲ್ಲರ ಸಹಕಾರದಿಂದ ಅಂದುಕೊಂಡಂತೆ ನಾನು ಈ ಚಿತ್ರ ಮಾಡಲು ಸಾಧ್ಯವಾಯಿತು' ಎಂದರು ಹರ್ಷ. ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ ಮಾಡಿದ್ದಾರೆ. 'ಕಥೆ ಕೇಳಿದಾಗಲೇ ಚಿತ್ರಕ್ಕೆ ಬಜೆಟ್ ಹೆಚ್ಚಾಗುತ್ತದೆ ಅಂತ ನಿರೀಕ್ಷೆ ಮಾಡಿದ್ದೆ. ಹೀಗಾಗಿ ನಾನು ಈ ಚಿತ್ರಕ್ಕೆ ಪಾಲುದಾರನಾದೆ. ಲೈಟ್ ಬಾಯ್‌ನಿಂದ ಹಿಡಿದು ಎಲ್ಲರೂ ಈ ಚಿತ್ರಕ್ಕೆ ಶ್ರಮ ಹಾಕಿದ್ದಾರೆ' ಎಂದರು ಜಾಕ್ ಮಂಜು. 'ಭಜರಂಗಿ' ಚಿತ್ರ ಈ ತಿಂಗಳ ಕೊನೆಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com