

ಈಗಿನ ಕಾಲದಲ್ಲಿ ಅಪ್ಪ ಅಮ್ಮನ್ನ ನೆನಪಿಸಿಕೊಳ್ಳೋ ಮಕ್ಕಳೇ ಕಡಿಮೆ. ಅಂಥದ್ರಲ್ಲಿ ಇವರಿಬ್ಬರೂ ಮಕ್ಕಳು ತಮ್ಮ ತಂದೆಯನ್ನು ನೆನಪಿಸಿಕೊಂಡು, ಅವರು ಸದಾ ಕಾಲ ಎಲ್ಲರ ನೆನಪಲ್ಲಿ ಇರಲಿ ಎಂಬ ಆಶಯದಿಂದ ಅವರ ಹೆಸರುಳಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದು ಅಂದಿನ ಪತ್ರಿಕಾಗೋಷ್ಠಿಯಲ್ಲಿ ಬಹುತೇಕ ಎಲ್ಲ ಗಣ್ಯರೂ ಹೇಳಿದ ಮಾತಿನ ಒಟ್ಟು ಸಾರಾಂಶ. ಆ ಇಬ್ಬರು ಮಕ್ಕಳ ಹೆಸರು ಗುರುದತ್ ಮತ್ತು ಜಯಸಿಂಹ. ಮತ್ತು ಆ ತಂದೆಯ ಹೆಸರು ನಟ ಚಾಣಕ್ಯ ಮುಸುರಿ ಕೃಷ್ಣಮೂರ್ತಿ.
ಮೊನ್ನೆ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಸುರಿ ಕೃಷ್ಣಮೂರ್ತಿ ಅವರ ಇಬ್ಬರು ಮಕ್ಕಳು ತಮ್ಮ ತಂದೆಯ ನೆನಪಿಗಾಗಿ ಒಂದು ವೆಬ್ಸೈಟ್ ಪ್ರಾರಂಭಸಿರುವ ಸಿಹಿಸುದ್ದಿಯನ್ನು ಹೇಳಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಎಚ್.ಡಿ.ಗಂಗರಾಜು ಅವರ ಕೈಯಿಂದ ಈ ವೆಬ್ಸೈಟ್ನ ಅಧಿಕೃತ ಬಿಡುಗಡೆ ಸಮಾರಂಭವೂ ಅಂದು ನೆರವೇರಿತು. ಈ ಕಾರ್ಯಕ್ರಮಕ್ಕೆ ಇತರ ಅತಿಥಿಗಳಾಗಿ ಆಗಮಿಸಿದ್ದವರು ಹಿರಿಯ ನಿರ್ಮಾಪಕರಾದ ಕೆಸಿಎನ್.ಚಂದ್ರಶೇಖರ್, ಸಾ.ರಾ.ಗೋವಿಂದು, ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ವಿಜಯ್ಕುಮಾರ್ ಮತ್ತು ಎ. ಗಣೇಶ್. ಮುಸುರಿ ಅವರ ಈ ಇಬ್ಬರು ಮಕ್ಕಳ ಪ್ರಯತ್ನದ ಫಲವಾಗಿ ಈಗ ಕೆ.ಎಂ.ವೀರೇಶ್ ಅವರ ಚಿತ್ರಲೋಕ ಡಾಟ್ಕಾಮ್ ವೆಬ್ಸೈಟ್ನಲ್ಲಿ ಮುಸುರಿ ಕೃಷ್ಣಮೂರ್ತಿ ಅವರಿಗಾಗಿಯೇ ಒಂದು ಪ್ರತ್ಯೇಕ ಲಿಂಕ್ಸೃಷ್ಟಿಯಾಗಿದೆ. ಮುಸುರಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡ ಕೆ.ಸಿಎನ್. ಚಂದ್ರಶೇಖರ್ ಮೈಸೂರು ಮಹಾರಾಜರ ಆಸ್ಥಾನದಲ್ಲಿ ಹಾಡಿದ ಬಾಲಕ ಕೃಷ್ಣಮೂರ್ತಿ, ಮುಸುರಿ ಕೃಷ್ಣಮೂರ್ತಿ ಆದ ಬಗೆಯನ್ನು ನೆನಪಿಸಿಕೊಂಡರೆ, ಅವರ ಜೊತೆ ಹೆಚ್ಚು ಸಿನಿಮಾ ಮಾಡಿಲ್ಲ, ನನ್ನ ಅವರ ಒಡನಾಟ ಒಂದು ಚಿತ್ರಕ್ಕೆ ಸೀಮಿತವಾಗಿತ್ತು. ಆದರೆ ರಾಜ್ಕುಮಾರ್ ಅಭಿಮಾನಿ ಸಂಘದ ಅನೇಕ ಕಾರ್ಯಕ್ರಮಗಳಿಗೆ ನನ್ನೊಂದಿಗೆ ಮುಸುರಿ ಅವರನ್ನು ಕರೆದೊಯ್ಯುತ್ತಿದ್ದೆ ಎಂದಿದ್ದು ಸಾ.ರಾ. ಗೋವಿಂದು. ವೆಬ್ಸೈಟ್ನ ರೂಪುರೇಷೆಗಳನ್ನು ವಿವರಿಸಿದ ಕೆ.ಎಂ.ವೀರೇಶ್ ಸದ್ಯಕ್ಕೆ ನಮಗೆ ಲಭ್ಯವಿರುವ ಮುಸುರಿ ಅವರ ಚಿತ್ರಗಳನ್ನು ಹಾಕಿದ್ದೇವೆ. ಅದರ ಜೊತೆಗೆ ಮುಸುರಿ ಅವರ ಬಗ್ಗೆ, ಅವರ ಚಿತ್ರಗಳ ಬಗ್ಗೆ ಇಲ್ಲಿ ಸಮಗ್ರವಾದ ವಿವರಗಳಿವೆ. ಕಾಲಕಾಲಕ್ಕೆ ವೆಬ್ಸೈಟ್ ಅನ್ನು ಅಪ್ಡೇಟ್ ಮಾಡುತ್ತೇವೆ ಎಂದರು. ಮುಸುರಿ ಕೃಷ್ಣಮೂರ್ತಿ ಅವರ ಬಗೆಗಿನ ವಿವರಗಳನ್ನು ನೋಡಲು ಈ ಲಿಂಕ್ ಅನ್ನು ಸಂಪರ್ಕಿಸಿ. http://www.chitraloka.com/musuri/