ಅಲ್ಟಿಮೇಟ್ ಆಕ್ಷನ್ ಚಿತ್ರ ಅಂಬರ

ಅಲ್ಟಿಮೇಟ್ ಆಕ್ಷನ್ ಚಿತ್ರ ಅಂಬರ
Updated on: 

ಒಂದು ಸಿನಿಮಾದ ಬಗ್ಗೆ ಎಲ್ಲ ಸರಿಯಾಗಿ ಗೊತ್ತಿದ್ದೂ ಥಿಯೇಟ್ರಿಗೆ ಬರೋ ನಮ್ ಜನರನ್ನು ಖುಷಿಪಡ್ಸೋದು ಕಷ್ಟ. ಅಂಥಾದ್ರಲ್ಲಿ ಮಿಸ್‌ಗೈಡ್ ಮಾಡಿ ಕರ್‌ಕೊಂಡ್ ಬಂದ್ರೆ ಏನಾಗ್‌ಬೋದು ಅನ್ನೋದಕ್ಕೆ ಇದೊಂದು ಉದಾಹರಣೆ. ಕಳೆದ ವಾರ ಯೋಗೀಶ್ ಅಭಿನಯದ 'ಅಂಬರ' ಚಿತ್ರ ಬಿಡುಗಡೆ ಆಗಿತ್ತು. ಹೇಳಿ ಕೇಳಿ ಹೆಸರೇ ಹೇಳುವಂತೆ ಅದೊಂದು ಪಕ್ಕಾ ಲವ್‌ಸ್ಟೋರಿ. ಇಂಥಾ ಲವ್‌ಸ್ಟೋರಿ ಮಾಡಿದ ಚಿತ್ರತಂಡ ಪತ್ರಿಕೆ, ಟಿವಿ ಜಾಹೀರಾತುಗಳಲ್ಲಿ ಮತ್ತು ಚಿತ್ರಮಂದಿರದಗಳ ಹೊರಗಿದ್ದ ಪೋಸ್ಟರ್‌ಗಳಲ್ಲಿ ಹಾಕಿದ ಆ್ಯಡ್ ಲೈನ್ 'ದಿ ಅಲ್ಟಿಮೇಟ್ ಆ್ಯಕ್ಷನ್ ಎಂಟರ್‌ಟೈನರ್‌'!!. ಸಿನಿಮಾ ಮಂದಿರದ ಹೊರಗಿದ್ದ ಪ್ರೇಕ್ಷಕರು, ಯಾಕೋ ಹೆಸರಿಗೂ ಈ ಲೈನಿಗೂ ಮ್ಯಾಚೇ ಆಗ್ತಿಲ್‌ವಲ್ಲ ಎಂದುಕೊಳ್ಳುತ್ತಿರುವಾಗಲೇ ಪೋಸ್ಟರ್‌ನಲ್ಲೇ ಅಂಬರದಲ್ಲಿ ತೇಲಾಡುತ್ತಿದ್ದ ಒಂದೆರಡು ಟಾಟಾ ಸುಮೋಗಳನ್ನು ನೋಡಿ ಅವರಿಗೆ ಒಂದಿಷ್ಟು ನಂಬಿಕೆ ಬಂತು. ಅದರ ಜೊತೆಗೆ,
ಯಾರಿಗ್ಗೊತ್ತು, ಈ ಸಿನಿಮಾದವರು ಲವ್‌ಸ್ಟೋರಿ ಅಂದ್ಕೊಂಡವರಿಗೆ ಆ್ಯಕ್ಷನ್ ಸಿನಿಮಾ ಕೊಟ್ಟು ಸಸ್ಪೆನ್ಸ್ ಸಿನಿಮಾ ತೋರಿಸುವ ಥ್ರಿಲ್ ಅನುಭವಿಸುತ್ತಿರಬೇಕು ಎಂಬ ಅನುಮಾನವೂ ಇದ್ದದರಿಂದ ಯಾವುದಕ್ಕೂ ಒಂದ್ಸಲ ಒಳಗೋಗಿ ನೋಡ್ಕಂಬರೋಣ ಎಂದು ಥಿಯೇಟರ್ ಒಳಕ್ಕೆ ಹೋದ ಆ್ಯಕ್ಷನ್ ಪ್ರಿಯರಿಗೆ ಚಿತ್ರದಲ್ಲಿ ಎಷ್ಟು  ಹುಡುಕಿದರೂ ಸಿಕ್ಕಿದ್ದು ಕೇವಲ ಒಂದೂವರೆ ಫೈಟು. ಅವರು ಸಿನಿಮಾ ನೋಡಿ ಹೊರಬಂದ ಆ ಪ್ರಶಸ್ತವಾದ ಟೈಮಲ್ಲಿ ಅಂಬರ ಸಿನಿಮಾ ತಂಡವರ್ಯಾದರೂ ಸಿಕ್ಕಿದ್ದರೆ, ಆಗ ಬೇಕಿದ್ದರೆ ಅಲ್ಲಿ ಅಲ್ಟಿಮೇಟ್ ಆ್ಯಕ್ಷನ್ ಸೀನ್‌ಗಳನ್ನು ನಿರೀಕ್ಷಿಸಬಹುದಿತ್ತೇನೋ. ಅಂತೂ, ಅಂಗೈಯಲ್ಲೇ ಅಂಬರ ತೋರಿಸೋದು ಅಂದ್ರೆ ಇದೇನಾ ಎನ್ನುತ್ತಿದ್ದ ಗಾಂಧಿನಗರದ ಗಾಂಧಿಕ್ಲಾಸಿನ ಪ್ರೇಕ್ಷಕರ ಮಾತು ಮಾತ್ರ ಇಂಟರೆಸ್ಟಿಂಗ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com